ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಸಮಾಜ ನಿಜಕ್ಕೂ ಒಡೆದಿದೆಯೇ?

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಲಿಂಗಾಯತ- ವೀರಶೈವ ಸಮಾಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣಕ್ಕಾಗಿ ಒಡೆದಿದ್ದಾರೆ ಎಂಬ ಮಾತುಗಳಿವೆ. ಆದರೆ ಈ ಸಮಾಜ ನಿಜವಾಗಲೂ ಒಡೆದಿದೆಯೇ?

ರಾಜಧಾನಿ ಬೆಂಗಳೂರಿನಿಂದ ಹೊರಟು ತುಮಕೂರು, ಚಿತ್ರದುರ್ಗ, ದಾವಣಗೆರೆಯ ಹಾದು ಹುಬ್ಬಳ್ಳಿ- ಧಾರವಾಡ ಸೀಮೆಯಲ್ಲಿ ಕಾಲಾಡಿಸಿದರೆ, ದೊಡ್ಡ ಮಟ್ಟದ ಒಡಕಿನ ಬಿರುಕುಗಳೇನೂ ಕಾಣುವುದಿಲ್ಲ. ಆದರೆ ಕದಲಿಕೆ-ಗಲಿಬಿಲಿಯ ನಿಚ್ಚಳ ಸೂಚನೆಗಳು ಒಡೆದು ಕಾಣುವುದು ಹೌದು. ಲಿಂಗಾಯತರ ರಾಜಕೀಯ ನಿಷ್ಠೆ ಇತ್ತೀಚಿನವರೆಗೆ ಬಿಜೆಪಿ ಸಂದೂಕದಲ್ಲಿ ಭದ್ರವಾಗಿತ್ತು.

ಈ ಸಂದೂಕದ ಸಂದಿಗೊಂದುಗಳು ಜಿನುಗಿ ಸೋರತೊಡಗಿವೆ. ಸವರುವ ಬೆರಳುಗಳಿಗೆ ಹಸಿಯ ಅನುಭವ ಸ್ಪಷ್ಟ. ಇಂತಹ ಸೋರಿಕೆಯ ಪ್ರಮಾಣ ಶೇ 3ರಿಂದ ಶೇ 50 ಎಂದು ಬಣ್ಣಿಸುವವರಿದ್ದಾರೆ. ಬಿ.ಎಸ್.ಯಡಿಯೂರಪ್ಪ ಲಿಂಗಾಯತರ ಪ್ರಶ್ನಾತೀತ ನಾಯಕ ಎಂಬ ಭಾವನೆ ಆರೇಳು ವರ್ಷಗಳ ಹಿಂದಿನಷ್ಟು ಗಟ್ಟಿಯಾಗಿ ಉಳಿದಿಲ್ಲ. ಲಿಂಗಾಯತ ಪ್ರಜ್ಞಾವಂತ ವರ್ಗದಲ್ಲಿ ಹೆಚ್ಚು ನಿಚ್ಚಳವಾಗಿ ಕಾಣಬರುವ ಈ ಕದಲಿಕೆ ಜನಸಾಮಾನ್ಯರಲ್ಲಿ ಇನ್ನೂ ಅಸ್ಪಷ್ಟ.

ವಿಶಿಷ್ಟ ಬಲಿಷ್ಠ ಲಿಂಗಾಯತ ಮುಖ್ಯಮಂತ್ರಿ ಅಭ್ಯರ್ಥಿ ಅಥವಾ ಹುರಿಯಾಳುಗಳು ಕಣದಲ್ಲಿ ಇದ್ದಾಗ ಅಥವಾ ಇಲ್ಲದೇ ಇದ್ದಾಗ ಈ ಸಮಾಜ ಮಾಡಿರುವ ರಾಜಕೀಯ ಪುರಸ್ಕಾರ- ತಿರಸ್ಕಾರಗಳು ಕುತೂಹಲಕರ. ಕಾಂಗ್ರೆಸ್ ವಿರೋಧವನ್ನು ಪ್ರಕಟಿಸುತ್ತಾ ಬಂದಿದ್ದರೂ ತಮ್ಮದೇ ವಿಶಿಷ್ಟ ಬಲಿಷ್ಠ ನಾಯಕ ಕಾಂಗ್ರೆಸ್ಸಿನಲ್ಲಿದ್ದಾಗಲೂ ಮತ ನೀಡಿ ಕೈ ಹಿಡಿದಿದೆ. 1989ರಲ್ಲಿ ಜನತಾ ದಳವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಈ ಸಮಾಜ ಬೆಂಬಲಿಸಿದ್ದು ಬಹುತೇಕ ವೀರೇಂದ್ರ ಪಾಟೀಲರ ಕಾರಣಕ್ಕಾಗಿಯೇ ಎಂಬುದು ಅಲ್ಲಗಳೆಯಲಾಗದ ಸಂಗತಿ. 178 ಸೀಟುಗಳ ಅಂದಿನ ದಾಖಲೆಯ ಗೆಲುವು ಇಂದಿಗೂ ರಾಜಕೀಯ ಪಕ್ಷಗಳ ಪಾಲಿಗೆ ಬಿಸಿಲುಗುದುರೆ.

ಲಿಂಗಾಯತ ಮತ್ತು ವೀರಶೈವ ಒಂದೇ ಎಂಬುದಾಗಿ ವೀರಶೈವವು ನೂರಾರು ವರ್ಷಗಳಿಂದ ಸುಪ್ತಪ್ರಜ್ಞೆಯಲ್ಲಿ ಕಟೆದು ನಿಲ್ಲಿಸಿರುವ ಭಾವನಾತ್ಮಕ ಶಿಲೆಯನ್ನು ಸೀಳುವುದು ಸುಲಭ ಅಲ್ಲ. ಈ ವಾಸ್ತವ, ಲಿಂಗಾಯತ ಚಳವಳಿಯ ಅರಿವಿಗೆ ಬಂದಿದೆ. ಧಾರವಾಡದ ಬಸವ ಕೇಂದ್ರದ ಅಧ್ಯಕ್ಷ ಬಿ.ವಿ.ಶಿರೂರ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ. ಗ್ರಾಮೀಣ ಭಾಗದ ಲಿಂಗಾಯತರಲ್ಲಿ ಇನ್ನೂ ತಿಳಿವಳಿಕೆ ಮೂಡಿಸಬೇಕಿದೆ. ಚುನಾವಣೆಯ ಮೇಲೆ ಅದು ಹೆಚ್ಚು ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಪಕ್ಷದತ್ತ ಸರಿಯುವ ಲಿಂಗಾಯತ ಮತಗಳ ಪ್ರಮಾಣ ಶೇ 15-20ನ್ನು ಮೀರುವುದಿಲ್ಲ ಎನ್ನುತ್ತಾರೆ. ಈ ಮೊದಲು ಬಿಜೆಪಿ ಮತ್ತು ಯಡಿಯೂರಪ್ಪ ಪರ ಇದ್ದೆನೆಂದು ಹೇಳುವ ಶಿರೂರ ಈಗ ಕಾಂಗ್ರೆಸ್- ಸಿದ್ದರಾಮಯ್ಯ ತಮಗೆ ಹೆಚ್ಚು ಹತ್ತಿರವೆಂದು ಹೇಳಲು ಹಿಂಜರಿಯುವುದಿಲ್ಲ.

ಹುಟ್ಟಿನಿಂದ ಲಿಂಗಾಯತ ಅಲ್ಲದಿದ್ದರೂ ವಚನ ಸಾಹಿತ್ಯವನ್ನು ತಮ್ಮ ಪಾಲಿನ ದೊಡ್ಡ ಬೆಳಕು ಮತ್ತು ಆಸ್ತಿ ಎಂದು ನಂಬುವ ವೈದ್ಯರಾದ ಡಾ. ಸಂಜೀವ ಕುಲಕರ್ಣಿ ಅವರ ಪ್ರಕಾರ, ಲಿಂಗಾಯತ ಪ್ರತ್ಯೇಕ ಧರ್ಮದ ನಡೆಯು ಚುನಾವಣೆಯ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ. ಆದರೆ ಈ ಹಿಂದಿಗಿಂತ ಹೆಚ್ಚು ಮಂದಿ ಬಿಜೆಪಿಯಿಂದ ಕಾಂಗ್ರೆಸ್ಸಿನತ್ತ ನಡೆಯುವ ಸಾಧ್ಯತೆ ಇದೆ ವಿನಾ ಕಾಂಗ್ರೆಸ್ಸಿನಿಂದ ಬಿಜೆಪಿಯತ್ತ ಸರಿಯುವುದಿಲ್ಲ.

ಈ ಚಳವಳಿ ಎಲ್ಲ ಪ್ರಜ್ಞಾವಂತರ ಹೋರಾಟ ಆಗಬೇಕಿದ್ದು, ಶರಣ ಚಳವಳಿಯ ಆಶಯಗಳಿಗೆ ಮತ್ತೊಮ್ಮೆ ಜೀವ ತುಂಬಬೇಕಿದೆ. ಚುನಾವಣೆಯ ಆಚೆಗೂ ಸರಿದು ನಡೆಯುವ ದೂರಗಾಮಿ ತಾತ್ವಿಕ ಸಂಘರ್ಷವಿದು. ಕಾಲಕ್ರಮೇಣ ಬುದ್ಧ- ಬಸವ ಸೆಲೆಗಳನ್ನು ಕೂಡಿಸುವತ್ತ ನಡೆದಿರುವ ಹೊಸ ಜಾಗೃತಿ ಎನ್ನುತ್ತಾರೆ ಅವರು.

ದಾವಣಗೆರೆಯ ಲಿಂಗಾಯತ ಪ್ರಮುಖ ಮತ್ತು ಶಾಮನೂರು ಶಿವಶಂಕರಪ್ಪ ಅವರ ಸಮೀಪವರ್ತಿ ಅಥಣಿ ವೀರಣ್ಣ ‘ವೀರಶೈವ ಲಿಂಗಾಯತ ಎರಡೂ ಒಂದೇ’ ಎನ್ನುವವರು. ‘ವೀರಶೈವರು ಮತ್ತು ಲಿಂಗಾಯತರಿಬ್ಬರನ್ನೂ ಕರೆದು ಸಮಾಲೋಚಿಸಿ ತೀರ್ಮಾನ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಏಕಪಕ್ಷೀಯ ತೀರ್ಮಾನ ಕೈಗೊಂಡದ್ದು ಸರಿಯೇತಪ್ಪೇ ಎಂಬುದನ್ನು ಚುನಾವಣಾ ಫಲಿತಾಂಶಗಳು ಸಾರಲಿವೆ. ವೀರಶೈವರು ಬಸವ ವಿರೋಧಿಗಳು ಎಂಬ ಭಾವನೆ ಬಿತ್ತಿದ್ದು ಬಹಳ ಕೆಟ್ಟ ವಿಚಾರ. ಮನಸ್ಸಲ್ಲಿ ಇಲ್ಲದ್ದನ್ನು ಸೃಷ್ಟಿಸಿದರು. ‘ಸಿದ್ಧಾಂತ ಶಿಖಾಮಣಿ’ ಸಂಸ್ಕೃತದಲ್ಲಿರುವ ಕಾರಣ ಹೆಚ್ಚು ತಲುಪಿಲ್ಲ.

ಹೀಗಾಗಿ ವಚನಗಳೇ ನಮ್ಮ ಸೈದ್ಧಾಂತಿಕ ಆಧಾರಗಳು. ಕಾಂಗ್ರೆಸ್‌ಗೆ ವೋಟು ಕೊಡಿ ಅಂತ ಕೇಳತೊಡಗಿದ್ದಾರೆ ಕೆಲವರು. ಕೊಡಬೇಡಿ ಎಂದು ನಾವು ಎಲ್ಲಿ ಹೇಳಿದ್ದೇವೆ? 84 ಮಂದಿ ಲಿಂಗಾಯತ ಶಾಸಕರಿದ್ದ ಕಾಲವಿತ್ತು. ಅರಸು ಮುಖ್ಯಮಂತ್ರಿಯಾಗಿ, ಹಾವನೂರು ಸಮಿತಿ ವರದಿಯಿಂದ ಲಿಂಗಾಯತರನ್ನು ತುಳಿಯುವುದು ಮೊದಲಾಯಿತು. ಭೀಮಣ್ಣ ಖಂಡ್ರೆ ಅವರು ವಿಧಾನಸಭೆಯಲ್ಲಿ ಹಾವನೂರು ವರದಿಗೆ ಬೆಂಕಿ ಇಟ್ಟರು. ಹಾವನೂರು ವರದಿಯ ನಂತರ ನಮ್ಮ ಧರ್ಮಕ್ಕೆ ಆಗಿರುವ ಎರಡನೆಯ ದೊಡ್ಡ ಹಿನ್ನಡೆಯಿದು. ಆದರೆ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಲಾಭ ಆಗುವುದಿಲ್ಲ’ ಎನ್ನುತ್ತಾರೆ.

ಕ್ರಾಂತಿಕಾರಿ ಸ್ವರೂಪದಿಂದ ಆರಂಭ ಆಗಬೇಕಿದ್ದ ಈ ಚಳವಳಿ ರಾಜಕೀಯಕರಣಕ್ಕೆ ತುತ್ತಾಗಿದ್ದು ದುರದೃಷ್ಟಕರ ಎಂದು ಮರುಗುತ್ತಾರೆ ದಾವಣಗೆರೆಯ ಕಾಂಗ್ರೆಸ್ ಮುಂದಾಳು ಎಂ.ಟಿ.ಸುಭಾಷ್ ಚಂದ್ರ.

ಲಿಂಗಾಯತ ಪ್ರತ್ಯೇಕ ಧರ್ಮದ ಚಳವಳಿ ಇನ್ನೂ ಬೇರು ಮಟ್ಟಕ್ಕೆ ಇಳಿದಿಲ್ಲ, ಬುದ್ಧಿಜೀವಿಗಳು ಮತ್ತು ಹೋರಾಟಗಾರರ ಹಂತದಲ್ಲಿದೆ ಎನ್ನುತ್ತಾರೆ ಧಾರವಾಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರೊ. ಶಿವರುದ್ರ ಕಲ್ಲೋಳ್ಕರ್. ‘ಜಾತಿಯಿಂದ ನಾನು ಹೊಲೆಯ. ಆದರೆ ಬುದ್ಧಿಜೀವಿಯಾಗಿ ಈ ಆಂದೋಲನವನ್ನು ನಾನು ಬೆಂಬಲಿಸಿದ್ದೇನೆ. ನಮ್ಮಪ್ಪ ಮುಂಜಾನೆದ್ದು ಸ್ನಾನ ಮಾಡಿ ವಿಭೂತಿ ಹಚ್ಚಿಕೊಂಡು, ಕುಳಿತಾಗೊಮ್ಮೆ ಎದ್ದಾಗೊಮ್ಮೆ ಶಿವಾ, ಬಸವಾ ಅಂತಾನೆ. ಕೆಸರಿನಲ್ಲಿ ಹೂತು ಹೋದ ಲಿಂಗಾಯತ ಧರ್ಮ ಈಗಲಾದರೂ ಮೇಲೆ ಬರಬೇಕು.

ಬೌದ್ಧದಂತೆ ಲಿಂಗಾಯತ ಕೂಡ ಅತ್ಯಂತ ಉತ್ಕೃಷ್ಟ. ಬದಲಾವಣೆ ಕೆಳಗಿಂದ ಬರಬೇಕು. ಅದು ಬೆಳೆದು ಬಂದದ್ದೂ ಬೇರು ಮಟ್ಟದಿಂದಲೇ. ಹೊಲೇರು, ಮಾದರು, ಸಮಗಾರ, ಢೋರ್ ಅಸ್ಪೃಶ್ಯ ಜಾತಿಗಳು, ಸೂಳೆ ಸಂಕವ್ವೆನಂತಹವರು ಸಹಿತ ಇದ್ದರು. ಅದಕ್ಕೆ ಹಾಕಿದ್ದ ಮುಸುಕು ತೆಗೆಯುವ ಸಲುವಾಗಿ ಮೇಲಿನಿಂದ ಚಳವಳಿ ಶುರು ಆಗಿದೆ. ಕನಿಷ್ಠ ಶೇ 10 ಮತ್ತು ಗರಿಷ್ಠ ಶೇ 30ರಷ್ಟು ಲಿಂಗಾಯತ ಮತಗಳು ಕಾಂಗ್ರೆಸ್ಸಿಗೆ ಹೋಗಬಹುದು’ ಎಂಬುದು ಅವರ ಅಂದಾಜು.

‘ಲಿಂಗಾಯತ ಮತಗಳು ಸಾರಾಸಗಟಾಗಿ ಒಂದೇ ಪಕ್ಷಕ್ಕೆ ಬೀಳುತ್ತವೆ ಎನ್ನುವ ದಿನಗಳು ಹಿಂದಾದವು’ ಎಂಬುದು ಧಾರವಾಡ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನಾಂಗದ ಮುಖ್ಯಸ್ಥ ಪ್ರೊ. ಶಿವಾನಂದ ಶೆಟ್ಟರ ಅವರ ಅಭಿಮತ.

‘ಇದೊಂದು ಒಳ್ಳೆಯದಕ್ಕೆ ಆದ ವಿಭಜನೆ. ಬಸವ ಧರ್ಮ ಹಲವು ಬಗೆಗಳಲ್ಲಿ ವಿಶಿಷ್ಟ. ಎಂದೋ ಆಗಬೇಕಾಗಿದ್ದುದು ಬಹಳ ತಡವಾಗಿಯಾದರೂ ಆಗುತ್ತಿದೆ. ಕೇವಲ ಮೀಸಲಾತಿ ಪ್ರಯೋಜನಗಳಿಗಾಗಿ ಆದದ್ದಲ್ಲ ಇದು. ರಾಜಕೀಯ ಸಾಧಕ ಬಾಧಕಗಳು ಏನಾದರೂ ಇರಲಿ. ಕರ್ನಾಟಕ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಇದೊಂದು ಭಾರೀ ಜಿಗಿತ. ಈ ಸಲ ಬಸವ ಜಯಂತಿಯಲ್ಲಿ ತಾವಾಗಿ ಲಕ್ಷಾಂತರ ಮಂದಿ ಸೇರಿ ಹೋರಾಟ ಮಾಡಿದರು. ಸಿದ್ದರಾಮಯ್ಯ ವೀರಶೈವರ ಒತ್ತಡಕ್ಕೆ ಮಣಿಯುವ ಶಂಕೆ ಸುಳ್ಳಾದದ್ದು ಸಂತೋಷ’ ಎನ್ನುತ್ತಾರೆ.

ಪ್ರತ್ಯೇಕ ಧರ್ಮದ ನಡೆಯು ಲಿಂಗಾಯತರ ರಾಜಕೀಯ ಒಲವಿನಲ್ಲಿ ತುಸು ಮಟ್ಟಿನ ಬದಲಾವಣೆಯನ್ನು ತಂದಿರುವುದು ಹೌದು ಎನ್ನುವವರು, ಎಡಪಂಥೀಯ ಹೋರಾಟದಲ್ಲಿ ದಶಕಗಳಿಂದ ಸಕ್ರಿಯವಾಗಿರುವ ನಿವೃತ್ತ ಮುಖ್ಯೋಪಾಧ್ಯಾಯರಾದ ಬಸವಂತಪ್ಪ ಸಿದ್ಧಪ್ಪ ಸೊಪ್ಪಿನ್. ದಾವಣಗೆರೆ ದಾಟಿದರೆ ಲಿಂಗಾಯತರೇ ವಿನಾ ವೀರಶೈವ ಪರಿಕಲ್ಪನೆ ಇಲ್ಲ. ಶಾಲಾ ದಾಖಲೆಗಳಲ್ಲಿ ಹಿಂದೂ ಲಿಂಗಾಯತ ಎಂದೇ ದಾಖಲಾಗಿದೆ. ರಂಭಾಪುರಿ ಪಂಚಾಚಾರ್ಯ ಸ್ವಾಮೀಜಿಯವರ ಶಾಲಾ ದಾಖಲೆಯೂ ಈ ಮಾತಿಗೆ ಹೊರತಲ್ಲ ಎಂದು ವಾದಿಸುತ್ತಾರೆ.

‘ಈ ಆಂದೋಲನಕ್ಕೊಂದು ದೊಡ್ಡ ಬಲವಿರುವುದು ನಿಜ. ಅದು ಮತಗಳಾಗಿ ಹೇಗೆ ಪರಿವರ್ತನೆಯಾಗುತ್ತದೆ ಗೊತ್ತಿಲ್ಲ. ವೋಟುಗಳು ಶಿಫ್ಟ್ ಆಗುತ್ತವೆ. ಈ ಹಂತದಲ್ಲಿ, ಬದಲಾದ ಸನ್ನಿವೇಶದಲ್ಲಿ ಲಿಂಗಾಯತ ಮತಗಳು ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಶೇ 50 ಮತ್ತು ಕಾಂಗ್ರೆಸ್ಸಿಗೆ ಶೇ 50ರ ಪ್ರಮಾಣದಲ್ಲಿ ಬೀಳಲಿವೆ’ ಎಂಬುದು ಪ್ರೊ. ಅಶೋಕ ಶೆಟ್ಟರ್ ಅವರ ಅಂದಾಜು.

‘ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಇಳಿದವರಲ್ಲಿ ಶೇ 70ರಷ್ಟು ಮಂದಿ ಕಾಂಗ್ರೆಸ್ಸಿನತ್ತಒಲಿದಿದ್ದಾರೆ. ಸಕ್ರಿಯ ಹೋರಾಟಕ್ಕೆ ಇಳಿಯದೆ ಹೋರಾಟಕ್ಕೆ ಸಹಾನುಭೂತಿ ಹೊಂದಿರುವವರ ಪೈಕಿ ಶೇ 50ರಷ್ಟು ಮಂದಿ ಬಿಜೆಪಿಯಿಂದ ದೂರ ಸರಿದಿದ್ದಾರೆ. ಕಾಂಗ್ರೆಸ್ ಲಿಂಗಾಯತ ಅಭ್ಯರ್ಥಿಗಳು ಇಲ್ಲದ ಕ್ಷೇತ್ರಗಳಲ್ಲಿ ಕೂಡ ಕನಿಷ್ಠ ಶೇ 30-40ರಷ್ಟು ಲಿಂಗಾಯತ ಮತಗಳು ಇತರ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿಗಳತ್ತ ಸರಿಯಲಿವೆ. ಮುಂಬೈ ಕರ್ನಾಟಕಕ್ಕಿಂತ ಕಲಬುರ್ಗಿ ವಲಯದಲ್ಲಿ ಲಿಂಗಾಯತ ಪ್ರಜ್ಞೆ ಹೆಚ್ಚು’ ಎಂಬುದು ಹೋರಾಟಗಾರ- ಸಾಹಿತಿ- ಪ್ರಕಾಶಕ ಬಸವರಾಜ ಸೂಳಿಬಾವಿ ಅವರ ಅನಿಸಿಕೆ.

ಅಲ್ಲಿ ಮೋದಿಗೆ ಜೈ, ಇಲ್ಲಿ ಸಿದ್ದುಗೆ ಜೈ!

ದಾವಣಗೆರೆ- ಧಾರವಾಡದ ನಡುವೆ ಎಡತಾಕುವ ವ್ಯಾಪಾರಿ ಮಹಾಂತೇಶ ಅಗಡಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ನಿರ್ಧರಿಸಿರುವ ಲಿಂಗಾಯತ. ಬಹಿರಂಗವಾಗಿ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಂತಿದ್ದೇನೆ ಎನ್ನುತ್ತಾರೆ. ಕುತೂಹಲದ ಸಂಗತಿಯೆಂದರೆ, ಅಗಡಿಯವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಈಗಲೂ ಅಚ್ಚುಮೆಚ್ಚು.

2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತ ನಿಶ್ಚಿತವಾಗಿಯೂ ಮೋದಿಯವರಿಗೆ ಎಂದು ಈಗಲೇ ಸಾರಿ ಹೇಳುತ್ತಾರೆ. ಅವರ ಪ್ರಕಾರ, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಸಿದ್ದರಾಮಯ್ಯ ಅವರ ನಡೆಯು ಭಾರತ ಜಗದ್ಗುರು (ವಿಶ್ವಗುರು) ಆಗುವ ಪ್ರಧಾನಿ ಮೋದಿಯವರ ಕನಸಿಗೆ ಪೂರಕ. ರಾಜ್ಯ ಸರ್ಕಾರದ ಪ್ರಸ್ತಾವವನ್ನು ಬಿಜೆಪಿ ಎಂದೆಂದಿಗೂ ತಿರಸ್ಕರಿಸುತ್ತದೆ ಎಂಬ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆಯ ಹಿಂದೆ ರಾಜಕೀಯ ಇದೆ. ಈ ಪ್ರಸ್ತಾವ ಕಾಂಗ್ರೆಸ್ ಸರ್ಕಾರದಿಂದ ಬಂದ ಕಾರಣ ತಿರಸ್ಕಾರದ ಮಾತಾಡಿದ್ದಾರೆ.

ವಿಚಾರ ಮಾಡಿ ಹೇಳುತ್ತೇವೆ ಎಂದಿದ್ದರೆ ಅವರಿಗೆ (ಬಿಜೆಪಿ) ಇಷ್ಟು ತೊಂದರೆ ಆಗುತ್ತಿರಲಿಲ್ಲ. ಲಿಂಗಾಯತ ಅವೈದಿಕ ಆಗಿದ್ದರೂ ಜೈನ ಧರ್ಮದಂತೆಯೇ ಹಿಂದೂ ಧರ್ಮದ ಒಳಗಿರುವ ಧರ್ಮ. ತಜ್ಞರ ಸಮಿತಿ ರಚಿಸಿ ಕ್ರಮಬದ್ಧ ಹೆಜ್ಜೆಯಿರಿಸಿದ ಸಿದ್ದರಾಮಯ್ಯ ಅವರದು ಪಕ್ವ ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT