ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂತ’ನ ಸಾಮ್ರಾಜ್ಯದ ಮೌಲ್ಯ ₹10 ಸಾವಿರ ಕೋಟಿ!

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತಿನ ಸಾಬರಮತಿ ನದಿ ದಡದ ಪುಟ್ಟ ಆಶ್ರಮದಲ್ಲಿ ಪ್ರವಚನ ಮಾಡುವ ಮೂಲಕ ಆಧ್ಯಾತ್ಮಲೋಕ ಪ್ರವೇಶಿಸಿದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಈಗ ₹10 ಸಾವಿರ ಕೋಟಿ ಸಾಮ್ರಾಜ್ಯದ ಒಡೆಯ. ನಾಲ್ಕೂವರೆ ದಶಕದಲ್ಲಿ ಬಾಪು ಕಟ್ಟಿ ಬೆಳೆಸಿದ ಈ ಸಾಮ್ರಾಜ್ಯ ದೇಶ, ವಿದೇಶಗಳಲ್ಲಿ 400ಕ್ಕೂ ಹೆಚ್ಚು ಆಶ್ರಮ ಮತ್ತು ಸಾವಿರಾರು ಭಕ್ತರನ್ನು ಹೊಂದಿದೆ.

ಪಾಕಿಸ್ತಾನ ಮೂಲ: ಇಂದಿನ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಬೆರಾನಿ ಎಂಬ ಕುಗ್ರಾಮದಲ್ಲಿ 1941ರಲ್ಲಿ ಜನಿಸಿದ ಅಸುಮಲ್‌ ಸಿರುಮಲಾನಿ ಎಂಬ ಬಾಲಕ ಅಸಾರಾಂ ಬಾಪು ಆಗಿ ಬೆಳೆದು ನಿಂತಿದ್ದೇ ಒಂದು ರೋಚಕ ಕಥೆ.

ದೇಶ ವಿಭಜನೆಯ ನಂತರ ಅಸುಮಲ್‌ ಕುಟುಂಬ ಭಾರತದ ಅಹಮದಾಬಾದ್‌ಗೆ ವಲಸೆ ಬಂತು. ಮಣಿನಗರದ ಶಾಲೆಯಲ್ಲಿ ಅಸುಮಲ್‌ ನಾಲ್ಕನೇ ತರಗತಿ ಓದುತ್ತಿದ್ದಾಗಲೇ ತಂದೆ ನಿಧನರಾದರು. ಹಾಗಾಗಿ ಅಸುಮಲ್‌ ಓದನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಕೆಲಕಾಲ ಕುಟುಂಬದ ಕಲ್ಲಿದ್ದಲು ಮತ್ತು ಕಟ್ಟಿಗೆಯ ವ್ಯವಹಾರವನ್ನು ಈ ಬಾಲಕ ನೋಡಿಕೊಂಡಿದ್ದ.

ಬಳಿಕ ಕುಟುಂಬ ಮಣಿನಗರದಿಂದ ಮೆಹಸನಾ ಜಿಲ್ಲೆಯ ವಿಜಾಪುರಕ್ಕೆ ವಲಸೆ ಹೋಯಿತು. ಅಲ್ಲಿ ಜೀವನೋಪಯಕ್ಕಾಗಿ ಚಿಕ್ಕಪುಟ್ಟ ಕೆಲಸ ಮಾಡಿಕೊಂಡಿದ್ದ ಅಸುಮಲ್‌ ಯೌವನಕ್ಕೆ ಕಾಲಿಡುತ್ತಿದ್ದಂತೆಯೇ ಆಧ್ಯಾತ್ಮ ಪ್ರಪಂಚದತ್ತ ಆಕರ್ಷಿತನಾದ. ಆ ಆಕರ್ಷಣೆಯಿಮದಾಗಿ ಹಲವಾರು ಬಾರಿ ಮನೆ ಬಿಟ್ಟು ಆಶ್ರಮಗಳಿಗೆ ಓಡಿಹೋಗಿದ್ದ.

ಮನೆಯಲ್ಲಿ ಮದುವೆಗಾಗಿ ಸಿದ್ಧತೆ ನಡೆದಿರುವಾಗಲೇ 15 ವರ್ಷದ ಅಸುಮಲ್‌ ಆಶ್ರಮಕ್ಕೆ ಓಡಿಹೋದ. ಆಶ್ರಮದಲ್ಲಿ ಲೀಲಾಶಹಾಜಿ ಬಾಪು ಎಂಬ ಆಧ್ಯಾತ್ಮಿಕ ಗುರುವಿನ ಪರಿಚಯವಾಯಿತು. ಆ ಪರಿಚಯ ಅಸುಮಲ್‌ ಜೀವನದ ತಿರುವಿಗೆ ಕಾರಣವಾಯಿತು. ಆಗಲೇ ಅಸುಮಲ್‌ ಸಿರುಮಲಾನಿ ‘ಸಂತ ಶ್ರೀ ಅಸಾರಾಂಜೀ ಮಹಾರಾಜ್‌’ ಆದ.

ಹೊರ ಹಾಕಿದ್ದ ಗುರು:  ಲೀಲಾಶಹಾಜಿ ಬಾಪು ತಮ್ಮ ಆಶ್ರಮದಿಂದ ಅಸಾರಾಂನನ್ನು ಹೊರ ಹಾಕಿದ್ದರು. ಆ ನಂತರ ಹಿಮಾಲಯಕ್ಕೆ ತೆರಳಿದ್ದ ಆತ 1970ರಲ್ಲಿ ಗುಜರಾತಿಗೆ ಮರಳಿದ. ಎರಡು ವರ್ಷಗಳ ಬಳಿಕ ಸಾಬರಮತಿ ನದಿ ದಡದಲ್ಲಿರುವ ಮೊಟೇರಾ ಗ್ರಾಮದಲ್ಲಿ ಮೋಕ್ಷ ಕುಟೀರ ಆಶ್ರಮ ಸ್ಥಾಪಿಸಿದ.

ಈ ನಡುವೆ ಲಕ್ಷ್ಮಿದೇವಿ ಎಂಬುವರನ್ನು ಮದುವೆಯಾದ ಅಸಾರಾಂಗೆ ನಾರಾಯಣ ಸಾಯಿ ಮತ್ತು ಭಾರತಿ ದೇವಿ ಎಂಬ ಮಕ್ಕಳು ಜನಿಸಿದರು. ದಿನಗಳದಂತೆ ಅಸಾರಾಂ ಜನಪ್ರಿಯತೆಯ ಜೊತೆಗೆ ಭಕ್ತರ ಸಂಖ್ಯೆಯೂ ಬೆಳೆಯತೊಡಗಿತ್ತು. ಪುಟ್ಟ ಆಶ್ರಮವಾಗಿದ್ದ ಮೋಕ್ಷ ಕುಟೀರ ಬಹುದೊಡ್ಡ ಶ್ರದ್ಧಾ ಕೇಂದ್ರವಾಗಿ ಬೆಳೆಯಿತು.

ಅಸಾರಾಂ ಬಾಪು ಪ್ರಸಿದ್ಧಿ ದೇಶ, ವಿದೇ ಶಗಳಿಗೂ ಪಸರಿಸಿತು. ಒಂದಾದ ಮೇಲೆ ಒಂದ ರಂತೆ 400 ಆಶ್ರಮ ಹುಟ್ಟಿಕೊಂಡವು. ಬೆರಳೆಣಿಕೆಯಷ್ಟಿದ್ದ ಅನುಯಾಯಿಗಳ ಸಂಖ್ಯೆ ಸಾವಿರಗಳ ಗಡಿ ದಾಟಿತ್ತು.

ಲೈಂಗಿಕ ಹಗರಣ, ಭೂಹಗರಣಗಳ ಸುಳಿಗೆ ಸಿಲುಕಿದ ನಂತರ ಅಸಾರಾಂ ಬಾಪು ಸಾಮ್ರಾಜ್ಯಕ್ಕೆ ಮಂಕು ಕವಿಯತೊಡಗಿತ್ತು. ತಮ್ಮ ಗುರುವಿನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಇಂದಿಗೂ ಅವರ ಅನುಯಾಯಿಗಳ ಆರೋಪಿಸುತ್ತಾರೆ.

ಎರಡು ಸಾವಿರ ಬೆದರಿಕೆ ಪತ್ರ
ಅಸಾರಾಂ ಬಾಪು ಅತ್ಯಾಚಾರ ಪ್ರಕರಣದ ತನಿಖೆಯ ಹೊಣೆ ಹೊತ್ತಿದ್ದ ಜೋಧಪುರ ಡಿಸಿಪಿ ಅಜಯ್‌ ಪಾಲ್‌ ಲಾಂಬಾ ಅವರಿಗೆ ಎರಡು ಸಾವಿರಕ್ಕೂ ಹೆಚ್ಚು ಬೆದರಿಕೆ ಪತ್ರ ಮತ್ತು ನೂರಾರು ಬೆದರಿಕೆ ಕರೆಗಳು ಬಂದಿದ್ದವು.

2013ರಲ್ಲಿ ತನಿಖೆ ಆರಂಭಿಸಿದ ಸಂದರ್ಭದಲ್ಲಿ ಅವರು ಕೆಲಕಾಲ ತಮ್ಮ ಮಗಳನ್ನು ಶಾಲೆಗೆ ಕಳಿಸಿರಲಿಲ್ಲ. ಅವರ ಪತ್ನಿ ಮನೆಯಿಂದ ಹೊರಗೆ ಕಾಲಿಟ್ಟಿರಲಿಲ್ಲ.

‘ಅಸಾರಾಂ ಬಾಪುಗೆ ಏನಾದರೂ ಹೆಚ್ಚು ಕಡಿಮೆಯಾದರೆ ಹೆಂಡತಿ, ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು’ ಎಂದು ಲಾಂಬಾ ಹೇಳಿಕೊಂಡಿದ್ದಾರೆ.

‘ಕರೆ ಮಾಡುತ್ತಿದ್ದವರು ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸುತ್ತಿದ್ದರು. ಹೀಗಾಗಿ ಅಪರಿಚಿತ ಸಂಖ್ಯೆಗಳಿಂದ ಬರುತ್ತಿದ್ದ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದೆ. ಉದಯಪುರಕ್ಕೆ ವರ್ಗವಾದ ನಂತರ ಕಿರಿಕಿರಿ ಕಡಿಮೆಯಾಯಿತು’ ಎಂದು ಅವರು ಹೇಳಿದ್ದಾರೆ.

ಉದಯಪುರದಿಂದ ಮರಳಿ ಅವರು ಜೋಧಪುರದ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಂದಿದ್ದಾರೆ.

ಕೊಲೆಯಾದ ಸಾಕ್ಷಿಯ ಕುಟುಂಬಕ್ಕೆ ಭದ್ರತೆ
ಮುಜಫ್ಫರ್‌ನಗರ (ಪಿಟಿಐ):
ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣವೊಂದರಲ್ಲಿ ಸಾಕ್ಷ್ಯ ಹೇಳಿದ್ದ ಅಖಿಲ್‌ ಗುಪ್ತಾ ಕುಟುಂಬಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಗುಪ್ತಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

2015ರ ಜನವರಿ 11ರಂದು ತಮ್ಮ ಅಂಗಡಿ ಮುಚ್ಚಿ ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದ ಗುಪ್ತಾ ಅವರ ಮೇಲೆ ಎರಡು ಬೈಕ್‌ಗಳಲ್ಲಿ ಬಂದ ಹಂತಕರು ಗುಂಡು ಹಾರಿಸಿದ್ದರು. ಅಸಾರಾಂ ಆಶ್ರಮದಲ್ಲಿ ಅಡುಗೆ ಕೆಲಸದ ಜತೆಗೆ ಅವರ ಆಪ್ತಸಹಾಯಕನಾಗಿಯೂ ಗುಪ್ತಾ ಕೆಲಸ ಮಾಡಿದ್ದರು.

ಅಸಾರಾಂ ಮತ್ತು ಅವರ ಮಗ ನಾರಾಯಣ ಸಾಯಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸೂರತ್‌ನ ಇಬ್ಬರು ಸಹೋದರಿಯರು ದೂರು ನೀಡಿದ್ದರು. ಈ ಪ್ರಕರಣದಲ್ಲಿ ಗುಪ್ತಾ ಸಾಕ್ಷಿಯಾಗಿದ್ದರು. ಗಾಂಧಿನಗರದ ನ್ಯಾಯಾಲಯದಲ್ಲಿ ಅವರು ತಮ್ಮ ಹೇಳಿಕೆಯನ್ನೂ ದಾಖಲಿಸಿದ್ದರು.

ವರ್ಷದೊಳಗೆ 2ನೇ ಪ್ರಕರಣ
ಅಸಾರಾಂ ಪ್ರಕರಣದ ತೀರ್ಪಿನೊಂದಿಗೆ ವರ್ಷವೊಂದರೊಳಗೆ ಇಬ್ಬರು ಪ್ರಭಾವಿ ಆಧ್ಯಾತ್ಮ ಗುರುಗಳು ಜೈಲು ಸೇರಿದಂತಾಗಿದೆ. ದೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಂ ಅವರ ವಿರುದ್ಧವೂ ಅತ್ಯಾಚಾರ ಪ್ರಕರಣದಲ್ಲಿ ಕಳೆದ ಆಗಸ್ಟ್‌ನಲ್ಲಿ ತೀರ್ಪು ಬಂದಿತ್ತು. ಅವರಿಗೆ 20 ವರ್ಷ ಶಿಕ್ಷೆ ನೀಡಲಾಗಿದೆ. ಈ ತೀರ್ಪು ಪ್ರಕಟವಾದ ಬಳಿಕ ಪಂಜಾಬ್‌ ಮತ್ತು ಹರಿಯಾಣಗಳಲ್ಲಿ ಭಾರಿ ಹಿಂಸಾಚಾರ ನಡೆದಿತ್ತು.

ರಾಜ್ಯಗಳಲ್ಲಿ ಕಟ್ಟೆಚ್ಚರ
ಅಸಾರಾಂ ವಿರುದ್ಧ ತೀರ್ಪು ಬಂದರೆ ಗಲಭೆ ಉಂಟಾಗಬಹುದು ಎಂಬ ಭೀತಿಯಿಂದಾಗಿ ಕಟ್ಟೆಚ್ಚರ ವಹಿಸುವಂತೆ ರಾಜಸ್ಥಾನ, ಗುಜರಾತ್‌ ಮತ್ತು ಹರಿಯಾಣ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿತ್ತು. ಈ ಮೂರೂ ರಾಜ್ಯಗಳಲ್ಲಿ ಅಸಾರಾಂ ಅವರ ಅನುಯಾಯಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ.

‘ಬಾಪು ಅತ್ಯಾಚಾರಿಯಲ್ಲ, ಬಲಿಪಶು’
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಸಾರಾಂ ಬಾಪು ಬೆಂಬಲಕ್ಕೆ ನಿಂತಿರುವ ಗುಜರಾತ್‌ ನಿವೃತ್ತ ಐಪಿಎಸ್‌ ಅಧಿಕಾರಿ ಡಿ.ಜಿ. ವಂಜಾರಾ, ‘ಬಾಪು ಅತ್ಯಾಚಾರಿ ಅಲ್ಲ, ಷಡ್ಯಂತ್ರದ ಬಲಿಪಶು’ ಎಂದು ಹೆಳಿದ್ದಾರೆ.

ಎಫ್‌ಐಆರ್‌ ಮತ್ತು ಆರೋಪಪಟ್ಟಿಯಲ್ಲಿ ಎಲ್ಲಿಯೂ ಬಾಪು ಅತ್ಯಾಚಾರ ನಡೆಸಿದ್ದಾರೆ ಎಂದು ನಮೂದಿಸಿಲ್ಲ. ಸಂತ್ರಸ್ತೆಯನ್ನು ಸ್ಪರ್ಶಿಸಲು ಯತ್ನಿಸಿದ್ದರು ಎಂದಷ್ಟೇ ಹೇಳಲಾಗಿದೆ. ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ಕೂಡ ವಿಚಾರಣೆಯ ವೇಳೆ ಹೇಳಿಲ್ಲ. ವೈದ್ಯಕೀಯ ವರದಿಗಳು ಕೂಡ ಇದನ್ನು ಪುಷ್ಟೀಕರಿಸಿವೆ ಎಂದು ಹೇಳಿದ್ದಾರೆ.

ಹಾಗಾಗಿ, ಅಸಾರಾಂ ಬಾಪು ಅವರನ್ನು ಅತ್ಯಾಚಾರಿ ಎಂದು ಕರೆಯುವುದು ಸರಿಯಲ್ಲ ಎಂದು ವಂಜಾರಾ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

ಅಸಾರಾಂ ಬಾಪು ಸ್ಪರ್ಶದಲ್ಲಿ ಕೆಟ್ಟ ಉದ್ದೇಶವಿತ್ತು ಎಂದು ಮಾತ್ರ ಸಂತ್ರಸ್ತೆ ಹೇಳಿದ್ದಾಳೆ. ಇದು ಅಪರಾಧವಾದರೂ ಬಾಪು ಆ ರೀತಿ ಮಾಡಿದ್ದರೆ ಎನ್ನುವುದು ಸಂದೇಹ ಮಾತ್ರ ಎಂದು ಅವರು ಹೇಳಿದ್ದಾರೆ.

‘ಅತ್ಯಾಚಾರದ ಆರೋಪದ ಮೇಲೆ ಬಾಪುವಿಗೆ ಶಿಕ್ಷೆಯಾಗಿಲ್ಲ. ದುರುದ್ದೇಶದ ಸ್ಪರ್ಶದ ಆರೋಪಕ್ಕಾಗಿ ಶಿಕ್ಷೆ ವಿಧಿಸಲಾಗಿದೆ. ಯಾವುದೇ ಒಂದು ನ್ಯಾಯಾಲಯ ನೀಡುವ ತೀರ್ಮಾನವೇ ಅಂತಿಮವಲ್ಲ. ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ’ ಎಂದು ಅವರು ವಾದಿಸಿದ್ದಾರೆ.

ಈ ಹಿಂದೆಯೂ ಸ್ವಯಂ ಘೋಷಿತ ದೇವಮಾನವನ ಬೆಂಬಲಕ್ಕೆ ನಿಂತಿದ್ದ ವಂಜಾರಾ, ಇಡೀ ಪ್ರಕರಣ ಸುಳ್ಳು ಆರೋಪಗಳ ಷಡ್ಯಂತ್ರ ಎಂದು ಹೇಳಿದ್ದರು. ಪೊಲೀಸ್‌ ಅಧಿಕಾರಿಯಾಗಿ ಕೆಲಸ ಮಾಡಿ ಅನುಭವ ಹೊಂದಿರುವ ತಮಗೆ ಇದೊಂದು ಸುಳ್ಳು ಪ್ರಕರಣ ಎನ್ನುವುದು ಗೊತ್ತು. ಅವರನ್ನು ಉದ್ದೇಶಪೂರ್ವಕವಾಗಿ ಇದರಲ್ಲಿ ಸಿಲುಕಿಸಿ ಬಲಿಪಶು ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಜಾಮೀನಿಗಾಗಿ 12 ಅರ್ಜಿ
ಜಾಮೀನಿಗಾಗಿ ಅಸಾರಾಂ ಬಾಪು 12 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವುಗಳ ಪೈಕಿ ಆರು ಅರ್ಜಿಗಳನ್ನು ವಿಚಾರಣಾ ನ್ಯಾಯಾಲಯ ವಜಾ ಮಾಡಿದೆ. ಮೂರು ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್‌ ಮತ್ತು ಮೂರು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದೆ.

**

2013 ಆಗಸ್ಟ್‌ 15: ಬಾಲಕಿಯ ಮೇಲೆ ಅಸಾರಾಂರಿಂದ ಅತ್ಯಾಚಾರ

2013 ಸೆಪ್ಟೆಂಬರ್‌ 1: ಅಸಾರಾಂರನ್ನು ಬಂಧಿಸಿ, ಜೋಧಪುರಕ್ಕೆ ಕರೆತರಲಾಯಿತು

2013 ಸೆಪ್ಟೆಂಬರ್‌ 2ರಿಂದ ನ್ಯಾಯಾಂಗ ಬಂಧನ

2013 ನವೆಂಬರ್‌ 6: ಅಸಾರಾಂ ವಿರುದ್ಧ ಆರೋಪಪಟ್ಟಿ ದಾಖಲು

2018 ಏಪ್ರಿಲ್‌ 7: ವಾದ, ಪ್ರತಿವಾದ ಮುಕ್ತಾಯ

2018 ಏಪ್ರಿಲ್‌ 25: ತೀರ್ಪು ಪ್ರಕಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT