ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಡ್ತಿ ನೀಡಲು ನೀತಿ ಸಂಹಿತೆ ಅಡ್ಡಿಯಾಗದು’

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಬಡ್ತಿ ಮೀಸಲಾತಿ ಕಾಯ್ದೆ ರದ್ದುಗೊಳಿಸಿ ನೀಡಲಾದ ತೀರ್ಪನ್ನು ಪಾಲಿಸಿ, ವಿವಿಧ ಇಲಾಖೆಗಳ ನೌಕರರಿಗೆ ಬಡ್ತಿ ನೀಡುವುದಕ್ಕೆ ರಾಜ್ಯ ವಿಧಾನಸಭೆ ಚುನಾವಣೆ ಅಂಗವಾಗಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ ಅಡ್ಡಿಯಾಗದು’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಅಭಿಪ್ರಾಯಪಟ್ಟಿದೆ.

‘ಸರ್ಕಾರದ ವಿವಿಧ ಇಲಾಖೆಗಳ ಸಾಮಾನ್ಯ ವರ್ಗದ ಹಾಗೂ ಇತರ ವರ್ಗದ ನೌಕರರಿಗೆ ಬಡ್ತಿ ನೀಡದಿರುವುದಕ್ಕೆ, ಮೇ 12ರಂದ ನಡೆಯುವ ಚುನಾವಣೆ ಅಂಗವಾಗಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯೇ ಕಾರಣ’ ಎಂದು ಸರ್ಕಾರದ ಪರ ವಕೀಲ ಬಸವಪ್ರಭು ಪಾಟೀಲ ನ್ಯಾಯಪೀಠಕ್ಕೆ ಅರಿಕೆ ಮಾಡಿದಾಗ, ನ್ಯಾಯಮೂರ್ತಿಗಳಾದ ಆದರ್ಶಕುಮಾರ್‌ ಗೋಯೆಲ್‌ ಹಾಗೂ ಯು.ಯು. ಲಲಿತ್‌ ಅವರನ್ನು ಒಳಗೊಂಡ ಪೀಠ ಈ ಕುರಿತು ಸ್ಪಷ್ಟನೆ ನೀಡಿತು.

‘ರಾಜ್ಯ ಸರ್ಕಾರ ನಮ್ಮ ತೀರ್ಪನ್ನು ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಯಾರೇ ಮೇಲ್ಮನವಿ ಸಲ್ಲಿಸಿದರೂ ಕರ್ನಾಟಕ ಆಡಳಿತಾತ್ಮಕತ ನ್ಯಾಯಮಂಡಳಿ (ಕೆಎಟಿ) ಹಾಗೂ ಹೈಕೋರ್ಟ್‌ಗಳು ತಡೆ ನೀಡಕೂಡದು’ ಎಂದೂ ನ್ಯಾಯಪೀಠ ಆದೇಶಿಸಿತು.

ತೀರ್ಪಿನ ಜಾರಿಗೆ ಕ್ರಮ ಕೈಗೊಂಡು ಒಂದು ತಿಂಗಳಲ್ಲಿ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು ಎಂದು ನ್ಯಾಯಪೀಠ ಮಾರ್ಚ್‌ 15ರಂದು ಸೂಚಿಸಿದ್ದರಿಂದ ಮಂಗಳವಾರ ಹೇಳಿಕೆ (ಅಫಿಡವಿಟ್‌) ನೀಡಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಕೋರ್ಟ್‌ ತೀರ್ಪನ್ನು ಜಾರಿಗೊಳಿಸಿ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದರು.

ಆದರೆ, ‘ಸರ್ಕಾರ ಸಲ್ಲಿಸಿರುವ ಈ ಹೇಳಿಕೆಯು ಸತ್ಯಕ್ಕೆ ದೂರವಾಗಿದೆ. ಎಲ್ಲ ಇಲಾಖೆಗಳ ನೌಕರರಿಗೆ ಅನ್ವಯ ಆಗುವಂತೆ ಹಿಂಬಡ್ತಿ ಮತ್ತು ಮುಂಬಡ್ತಿ ಪ್ರಕ್ರಿಯೆ ಕೈಗೊಂಡಿಲ್ಲ’ ಎಂದು ಅರ್ಜಿದಾರರ ಪರ ವಕೀಲರಾದ ಕಿರಣ್‌ ಸೂರಿ ಹಾಗೂ ಕುಮಾರ್‌ ಪರಿಮಳ್‌ ದೂರಿದರು.

ಜ್ಯೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಿದ ನಂತರ ಮುಂಬಡ್ತಿ ಹಾಗೂ ಹಿಂಬಡ್ತಿ ಪಡೆದಿರುವ ಎಲ್ಲ ನೌಕರರ ಪಟ್ಟಿಯನ್ನು ಒಳಗೊಂಡ ಮತ್ತೊಂದು ಹೇಳಿಕೆಯನ್ನು ಮೇ 1ರೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರದ ಅಡ್ವೋಕೇಟ್‌ ಜನರಲ್‌ ಮಧುಸೂದನ ನಾಯ್ಕ ಅವರಿಗೆ ನ್ಯಾಯಮೂರ್ತಿ ಗೋಯೆಲ್‌ ನಿರ್ದೇಶನ ನೀಡಿದರು.

ಸುಪ್ರೀಂ ಕೋರ್ಟ್‌ ತೀರ್ಪಿನ ಕಾರಣ ಹಿಂಬಡ್ತಿ ಪಡೆಯಲಿದ್ದ 500ಕ್ಕೂ ಅಧಿಕ ಸಿಬ್ಬಂದಿಯ ಮೇಲ್ಮನವಿ ವಿಚಾರಣೆ ನಡೆಸಿ ಕೆಎಟಿ ಹಾಗೂ ಹೈಕೋರ್ಟ್‌ಗಳು ಈಗಾಗಲೇ ಯಥಾಸ್ಥಿತಿ ಆದೇಶ ಹಾಗೂ ತಡೆಯಾಜ್ಞೆ ನೀಡಿವೆ.

ಅಲ್ಲದೆ, ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲೂ ಏಳು ವಿಶೇಷ ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ಮಾಹಿತಿ ಪಡೆದ ನ್ಯಾಯಪೀಠವು, ಕೆಎಟಿ ಹಾಗೂ ಹೈಕೋರ್ಟ್‌ಗಳು ನೀಡಿರುವ ಎಲ್ಲ ರೀತಿಯ ಆದೇಶಗಳನ್ನು ರದ್ದುಗೊಳಿಸಿತು.

ಪ್ರಕರಣದ ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿದ ಪೀಠವು, ರಾಜ್ಯ ಸರ್ಕಾರ ಸಲ್ಲಿಸಲಿರುವ ಹೇಳಿಕೆಗೆ ಸಂಬಂಧಿಸಿದ ಪ್ರತಿಕ್ರಿಯೆಯನ್ನು ಮೇ 8ರೊಳಗೆ ಸಲ್ಲಿಸಲು ಅವಕಾಶ ನೀಡಿತು.

ಬಿ.ಕೆ. ಪವಿತ್ರಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಪೀಠವು, ಬಡ್ತಿಯಲ್ಲಿ ಮೀಸಲಾತಿ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆ ರದ್ದುಪಡಿಸಿ 2017ರ ಫೆಬ್ರುವರಿ 9ರಂದು ಮಹತ್ವದ ತೀರ್ಪು ನೀಡಿತ್ತಲ್ಲದೆ, ‘ಈ ಕಾಯ್ದೆಯು ಸಂವಿಧಾನ ವಿರೋಧಿಯಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಂದಾಜು 20,000 ನೌಕರರು ಹಿಂಬಡ್ತಿ ಪಡೆಯಲಿದ್ದಾರೆ’ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT