ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಲಿ ಬಂದವರಿಗೆ ನೆರಳಿಲ್ಲ!

ರಾಜರಾಜೇಶ್ವರಿ ನಗರದಲ್ಲಿ ಕಟುಕರಿಗೆ ಬಲಿಯಾದ ಮರ: ಪರಿಸರ ಪ್ರೇಮಿಗಳ ಆಕ್ರೋಶ
Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ, ಹಸಿದು ಬಂದವರಿಗೆ ಹಣ್ಣು ಇಲ್ಲ, ಕುಸುಮ ವಾಸನೆಯಿಲ್ಲ, ಕೂಡಲು ಸ್ಥಳವಿಲ್ಲ.’ ನಗರದ ರಾಜರಾಜೇಶ್ವರಿ ನಗರದಲ್ಲಿ ಬೃಹತ್ ಮರವೊಂದು ಬುಧವಾರ ಕಟುಕರ ಸಂಚಿಗೆ ಬಲಿಯಾದಾಗ, ದಾಸರಪದದ ಈ ಸಾಲುಗಳು ಅಕ್ಷರಶಃ ನಿಜವಾಯಿತು.

ರಾಜರಾಜೇಶ್ವರಿ ನಗರದ, ಐಡಿಯಲ್‌ ಹೋಮ್ಸ್‌ ಸಮೀಪ, ಪಾದಚಾರಿ ಮಾರ್ಗದಲ್ಲಿ ದಶಕಗಳಿಂದ ಲಕ್ಷಾಂತರ ಜನರಿಗೆ ನೆರಳಾಗಿದ್ದ ಮರವೊಂದು ನೋಡನೋಡುತ್ತಿದ್ದಂತೆಯೇ ತುಂಡುತುಂಡಾಯಿತು. ಮರಗಳು, ಹಸಿರಿನಿಂದ ಕಂಗೊಳಿಸುತ್ತಿದ್ದ ಆ ಪ್ರದೇಶವೀಗ ಬಟಾಬಯಲಿನಂತೆ ಗೋಚರಿಸುತ್ತಿದೆ. ಬಿಸಿಲಿನ ಝಳದಿಂದ ದಣಿವಾರಿಸಿಕೊಳ್ಳುವವರಿಗೆ ನೆರಳಾಗಿದ್ದ ಮರ, ಕಡು ಬಿಸಿಲ್ಲಲ್ಲೇ ನೆಲಸಮವಾಯಿತು.

ಆಕ್ರೋಶ:ವಿಷಯ ತಿಳಿದು, ಸ್ಥಳಕ್ಕೆ ಬಂದ ಪರಿಸರ ಪ್ರೇಮಿಗಳು ಮರ ಕಡಿಯುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪ್ರತಿಭಟನೆ ನಡೆಸಿ, ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಮರ ಕಡಿಯಲು ನಿಮಗೆ ಅನುಮತಿ ನೀಡಿದವರು ಯಾರು ಎಂದು ಪ್ರತಿಭಟನಾಕಾರರು, ಕೆಲಸಗಾರರನ್ನು ಪ್ರಶ್ನಿಸಿದರು. ಅವರಿಂದ ಸರಿಯಾದ ಉತ್ತರ ಬರದೇ ಇದ್ದಾಗ, ಪ್ರತಿಭಟನಾಕಾರರೇ, ಬಿಬಿಎಂಪಿ ರಾಜರಾಜೇಶ್ವರಿ ವಲಯದ ಜಂಟಿ ಆಯುಕ್ತರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಅವರಿಂದಲೂ ಇಲ್ಲ ಎನ್ನುವ ಉತ್ತರ ಬಂತು.

ಮರವಿದ್ದ ಪ್ರದೇಶ ರಾಜರಾಜೇಶ್ವರಿ ವಲಯದ ಬಿಬಿಎಂಪಿ ಕಚೇರಿಯ ವ್ಯಾಪ್ತಿಗೆ ಸೇರಿದೆ. ಆದರೆ, ಮರ ಕಡಿಯಲು ಅನುಮತಿ ನೀಡಿದವರು, ಬೊಮ್ಮನಹಳ್ಳಿ ವಲಯ ಕಚೇರಿಯ ಅಧಿಕಾರಿಗಳು ಎನ್ನುವ ವಿಷಯ ಪ್ರತಿಭನಾಕಾರರನ್ನು ಮತ್ತಷ್ಟು ಕೆರಳಿಸಿತು.

ವಿಷಯ ತಿಳಿದು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಅವರ ಒತ್ತಾಯಕ್ಕೆ ಜಗ್ಗದ ಪ್ರತಿಭಟನಾಕಾರರು ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಪಟ್ಟು ಹಿಡಿದರು.

ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಉಪ ವಲಯ ಅರಣ್ಯಾಧಿಕಾರಿ ಮಹೇಶ್‌, ತಪ್ಪಿಸ್ಥರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಗುರುವಾರ ಅದರ ಪ್ರತಿಯನ್ನು ನೀಡುತ್ತೇನೆ ಎಂದು ಭರವಸೆ ನೀಡಿದಾಗ ಪ್ರತಿಭಟನಾಕಾರರು ಅಲ್ಲಿಂದ ಮರಳಿದರು.

ಮರ ಒಣಗಿಸುವ ತಂತ್ರ: ಮರಗಳು ಒಣಗಿದ್ದರಿಂದ ಅವುಗಳನ್ನು ಕಡಿಯಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು. ಆದರೆ, ಇಲ್ಲಿರುವ ಮರಳಿಗೆ ಅವು ಒಣಗಿ ಹೋಗುವ ರಾಸಾಯನಿಕಗಳನ್ನು ಹಾಕಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ನಗರದಲ್ಲಿ ಎಲ್ಲಿಯೂ ಇಲ್ಲದಷ್ಟು ಮರಗಳು ಇಲ್ಲಿವೆ. ಹೀಗಾಗಿ ಶುದ್ಧವಾದ ಗಾಳಿಯನ್ನು ನಾವು ಸೇವಿಸುತ್ತಿದ್ದೇವೆ. ಈ ಮರಗಳು ಅವರಿಗೆ (ಕಡಿಯಲು ಅನುಮತಿ ನೀಡಿದವರಿಗೆ) ಏನು ಮಾಡಿವೆ. ನಾಗರಿಕರು ಉತ್ತಮ ವಾತಾವರಣದಲ್ಲಿ ಬದುಕುವುದು ಅಧಿಕಾರಿಗಳಿಗೆ ಬೇಡವಾಗಿದೆಯೇ?’ ಎಂದು ಐಡಿಯಲ್‌ ಹೋಮ್ಸ್‌ ನಿವಾಸಿಗಳ ಸಂಘದ ಅಧ್ಯಕ್ಷೆ ವಾಣಿ ವೈದ್ಯನಾಥ್‌ ಪ್ರಶ್ನಿಸಿದರು.

ಸ್ಥಳೀಯರಾದ ಜೊಸೇಫ್‌, ನಿವೇದಿತಾ, ಸುರೇಶ್‌, ಪ್ರಸಾದ್‌, ಬದರೀನಾಥ ಮತ್ತಿರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ವಾಣಿಜ್ಯ ಬಳಕೆ ಉದ್ದೇಶ’
ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಕೆ.ಜೆ ಜಾರ್ಜ್‌ ಅವರ ಆಪ್ತ ಕಾರ್ಯದರ್ಶಿ ಹೇಳಿದ್ದರು ಎಂದು ಇದೇ 11ರಂದು ಅದೇ ಸ್ಥಳದಲ್ಲಿ ಮರವೊಂದನ್ನು ಕಡಿಯಲಾಗಿತ್ತು.  ಹೀಗೆ ಕೆಲವು ದಿನಗಳ ಅಂತರದಲ್ಲಿ ಮರಗಳನ್ನು ಒಂದೊಂದಾಗಿ ತೆರವು ಮಾಡಿ, ಆ ಪ್ರದೇಶವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಉದ್ದೇಶ ಈ ಕೃತ್ಯದ ಹಿಂದೆ ಅಡಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT