ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಾಭರಣ ದೋಚಿದ ನಕಲಿ ಜ್ಯೋತಿಷಿ

ಸಾರಿಗೆ ಇಲಾಖೆ ಅಧಿಕಾರಿ ಪತ್ನಿಗೆ ವಂಚನೆ
Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಗಂಡನಿಗೆ ಗಂಡಾಂತರವಿದ್ದು, ಅದನ್ನು ತಪ್ಪಿಸಲು ವಿಶೇಷ ಪೂಜೆ ಮಾಡಬೇಕು’ ಎಂದು ನಂಬಿಸಿದ್ದ ನಕಲಿ ಜ್ಯೋತಿಷಿಯೊಬ್ಬ, ಮಮತಾ ಎಂಬುವರ ಚಿನ್ನದ ಆಭರಣಗಳನ್ನು ದೋಚಿದ್ದಾನೆ.

ವಂಚನೆಗೀಡಾದ ಮಹಿಳೆ, ಸಾರಿಗೆ ಇಲಾಖೆ ಅಧಿಕಾರಿ ಚಂದ್ರಶೇಖರ್ ಅವರ ಪತ್ನಿ. ನಿವೃತ್ತ ಐಪಿಎಸ್‌ ಅಧಿಕಾರಿ ಕೆಂಪಯ್ಯ ಅವರ ಸಂಬಂಧಿಯೂ ಹೌದು. ನಕಲಿ ಜ್ಯೋತಿಷಿ ವಿರುದ್ಧ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಚ್‌ಬಿಆರ್‌ ಬಡಾವಣೆಯಲ್ಲಿ ದೂರುದಾರರ ಮನೆ ಇದೆ. ಹಸಿರು ಬಣ್ಣದ ಬಟ್ಟೆ ತೊಟ್ಟು ಅಲ್ಲಿಗೆ ಹೋಗಿದ್ದ ವ್ಯಕ್ತಿಯೊಬ್ಬ, ಜ್ಯೋತಿಷಿ ಎಂದು ಪರಿಚಯಿಸಿಕೊಂಡಿದ್ದ. ಆತನನ್ನು ನಂಬಿದ್ದ ಮಹಿಳೆ, ಮನೆಯೊಳಗೆ ಕರೆದಿದ್ದರು. ಮನೆಯ ವಾಸ್ತು ಸರಿ ಇಲ್ಲವೆಂದು ಹೇಳಿದ್ದ ಆತ, ‘ನಿಮ್ಮ ಪತಿಗೆ ಗಂಡಾಂತರವಿದೆ. ವಿಶೇಷ ಪೂಜೆ ಮಾಡದಿದ್ದರೆ ಸತ್ತು ಹೋಗುತ್ತಾರೆ’ ಎಂದು ಹೆದರಿಸಿದ್ದ. ಆಗ, ಪೂಜೆ ಮಾಡಿಸಲು ಮಹಿಳೆ ಒಪ್ಪಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಪೂಜೆಗೆ ಆಭರಣಗಳನ್ನು ಇಡಬೇಕೆಂದು ಹೇಳಿದ್ದ ಆತ, ಡಬ್ಬಿಯೊಂದರಲ್ಲಿ ಚಿನ್ನದ ಬಳೆ ಹಾಗೂ ಉಂಗುರ ಹಾಕಿಸಿಕೊಂಡಿದ್ದ. ಪೂಜೆ ಮುಗಿಸಿದ ನಂತರ, ‘ಡಬ್ಬಿಯನ್ನು ದೇವರ ಕೋಣೆಯಲ್ಲಿಡಿ. ಸ್ನಾನ ಮಾಡಿ ಡಬ್ಬಿಯನ್ನು ತೆರೆಯಿರಿ’ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದ. ಆತನ ಮಾತಿನಂತೆ ಸ್ನಾನ ಮುಗಿಸಿದ ಬಳಿಕ ಮಹಿಳೆ ಡಬ್ಬಿ ತೆರೆದಿದ್ದರು. ಅದರಲ್ಲಿ ಚಿನ್ನದ ಆಭರಣಗಳೇ ಇರಲಿಲ್ಲ ಎಂದು ಹೇಳಿದರು.

’ಜ್ಯೋತಿಷಿಯ ಚಹರೆಯು ಸಿ.ಸಿ.ಟಿ.ವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಅದನ್ನು ಆಧರಿಸಿ ಆತನನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಜ್ಯೋತಿಷಿ ಸೋಗಿನಲ್ಲಿ ವಂಚನೆ

* 2017ರ ನವೆಂಬರ್‌ 17ರಂದು ಸುಬ್ರಹ್ಮಣ್ಯಪುರದಲ್ಲಿ ನಕಲಿ ಜ್ಯೋತಿಷಿ ಹಾಗೂ ಸನ್ಯಾಸಿನಿಯರ ಗ್ಯಾಂಗ್, ಶ್ರೀದೇವಿ ಎಂಬುವರಿಂದ ₹ 12 ಸಾವಿರ ನಗದು ಹಾಗೂ 150 ಗ್ರಾಂ ಚಿನ್ನಾಭರಣ ದೋಚಿತ್ತು.

* ನವೆಂಬರ್‌ 21ರಂದು ಅತ್ತಿಬೆಲೆಯ ಕಿತ್ತಗಾನಹಳ್ಳಿಯಲ್ಲಿ ವಿಶೇಷ ಪೂಜೆ ನೆಪದಲ್ಲಿ ನಕಲಿ ಜ್ಯೋತಿಯೊಬ್ಬ, ಕಾವ್ಯಾ ಎಂಬುವರಿಂದ ₹ 12 ಸಾವಿರ ನಗದು ಹಾಗೂ 150 ಗ್ರಾಂ ಚಿನ್ನ ಕದ್ದಿದ್ದ.

* ಮಾರ್ಚ್ 29ರಂದು ಅಮೃತಹಳ್ಳಿಯ ಜನತಾ ಕಾಲೊನಿ ನಿವಾಸಿ ಕವಿತಾ ಎಂಬುವರ ಚಿನ್ನಾಭರಣವನ್ನು ನಕಲಿ ಜ್ಯೋತಿಷಿಯೊಬ್ಬ ದೋಚಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT