ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿಯಾದ ಮೇಲೆ ಜೈಲೇ ಕೊನೆ ಶಿವ!

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖಗಳು ಬದಲಾಗಲಿ, ಮುಖವಾಡಗಳು ಬರಿದಾಗಲಿ, ಮುಖಗಳ ಹಿಂದಿನ ಮುಖವಾಡಗಳು ಕಳಚಿ ಬೀಳಲಿ’, ‘ಧಿಕ್ಕಾರವಿರಲಿ ನಿನಗೆ ದ್ವೇಷವೇ, ನಿನ್ನಿಂದ ಮನ ಹಾಳು, ಮನೆ ಪಾಳು, ಬದುಕು ಹಾಳು, ಧಿಕ್ಕಾರವಿರಲಿ ನಿನಗೆ ದ್ವೇಷವೇ!’. ಇವು ನಾಣ್ಣುಡಿಗಳು ಅಲ್ಲ, ನಾಡಿನ ದಾರ್ಶನಿಕರ ಸಂದೇಶಗಳೂ ಅಲ್ಲ. ಗದ್ಯ, ಪದ್ಯದ ಆಯ್ದ ಸಾಲುಗಳೂ ಅಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಆರೋಪಿಗಳ ಬಗ್ಗೆ ಪೊಲೀಸರು ನೀಡಿರುವ ಒಕ್ಕಣೆಗಳು.

ಬೆಂಗಳೂರು ನಗರ ಪೊಲೀಸರ @blrcitypolice ಟ್ವಿಟರ್‌ ಖಾತೆಯನ್ನೊಮ್ಮೆ ಇಣುಕಿದರೆ ಇಂತಹ ಮನ ಸೆಳೆಯುವ, ಆಕರ್ಷಕ ಒಕ್ಕಣೆಗಳು ಗಮನ ಸೆಳೆಯುತ್ತವೆ.

ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಇಬ್ಬರು ರೌಡಿಗಳನ್ನು ನಗರ ಪೊಲೀಸರು ಬಂಧಿಸಿದ್ದರು. ಟ್ವಿಟರ್‌ನಲ್ಲಿ ಅವರ ಬಗ್ಗೆ ಮಾಹಿತಿ ಪೋಸ್ಟ್‌ ಮಾಡಿದ ಸಾಮಾಜಿಕ ಜಾಲತಾಣ ವಿಭಾಗದ ಕಮಾಂಡ್‌ ಘಟಕವು, ‘ನೀ ಯಾರಾದರೇನು ಶಿವ, ಏನಾದರೇನು ಶಿವ, ರೌಡಿಯಾದ ಮೇಲೆ ನಿಂಗೆ ಜೈಲೇ... ಕೊನೆ ಶಿವ’ ಎಂದು ಆಕರ್ಷಕವಾಗಿರುವ ಒಕ್ಕಣಿಕೆ ಪ್ರಕಟಿಸಿದೆ. ಇದಕ್ಕೆ ಅನೇಕರು ಪ್ರತಿಕ್ರಿಯಿಸಿದರೆ, ಕೆಲವರು ಶೇರ್‌ ಮಾಡಿಕೊಂಡಿದ್ದಾರೆ.

ಆರಂಭದಲ್ಲಿ ಎಫ್‌ಐಆರ್‌ಗಳನ್ನೇ ಟ್ವಿಟರ್‌ನಲ್ಲಿ ಪ್ರಕಟಿಸಲಾಗುತ್ತಿತ್ತು. ಅವು ತುಂಬ ವಿವರವಾಗಿರುತ್ತಿದ್ದರಿಂದ ಹೆಚ್ಚು ಪ್ರತಿಕ್ರಿಯೆಗಳು ಬರುತ್ತಿರಲಿಲ್ಲ. ಹಾಗಾಗಿ ದೂರಿನ ಒಂದೆರಡು ಸಾಲನ್ನಷ್ಟೇ ಪ್ರಕಟಿಸಿ, ಅದರೊಟ್ಟಿಗೆ ಒಕ್ಕಣಿಕೆ ಹಾಕಿ ಹೊಸತನಕ್ಕೆ ನಾಂದಿ ಹಾಡಲಾಯಿತು. ಅದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎನ್ನುತ್ತಾರೆ ಸಾಮಾಜಿಕ ಜಾಲತಾಣ ವಿಭಾಗ ಕಮಾಂಡ್‌ ಘಟಕದ ಸಿಬ್ಬಂದಿ.

ಮನೆಗಳ್ಳರ ಬಂಧನ, 12 ಪ್ರಕರಣಗಳನ್ನು ಬೇಧಿಸಿರುವ ಬಗ್ಗೆ ಮಾಹಿತಿ ಪ್ರಕಟಿಸಿ ‘ನಾವು ಬಿದ್ದರೆ ಕಳ್ಳರ ಹಿಂದೆ, ಅವರು ಸೇರೋದೇ ಕಂಬಿ ಹಿಂದೆ!’  ಆನ್‌ಲೈನ್‌ ಮುಖಾಂತರ ಮಹಿಳೆಗೆ ವಂಚಿಸಿದವನ ಬಂಧನದ ವಿವರಗಳೊಂದಿಗೆ ’ನಮ್ಮಿಂದ ಆಫ್‌ಲೈನ್‌ ಆದ ಆಸಾಮಿ!’ ಇವು ಗಮನ ಸೆಳೆಯುವುದಷ್ಟೇ ಅಲ್ಲ, ಮುಂದೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಕಿವಿಹಿಂಡಿ ಹೇಳುವಂತಿವೆ.

ದರೋಡೆಗೆ ಸಂಚು ಹಾಕುತ್ತಿದ್ದ ಕುಖ್ಯಾತ ದರೋಡೆಕೋರರ ಬಂಧನದ ಮಾಹಿತಿಯೊಂದಿಗೆ ’ನಿಮ್ಮ ಸಂಚಿಗೆ ನಮ್ಮ ಪಂಚ್‌, ಈ ಸಲಾನೂ ನಮ್ದೆ’, ‘ರೌಡಿ ಚಟುವಟಿಕೆಗಳಲ್ಲಿ ಭಾಗಿಯಾದರೆ, ಜೈಲು ಖಚಿತ ಪ್ಲೇಟು ಉಚಿತ!, ‘ಮೋಸ ಮಾಡುವುದು ನಿಮಗೆ ಹವ್ಯಾಸ, ಜೈಲೂಟ ಕೊಡಿಸುವುದು ನಮಗೆ ಅಭ್ಯಾಸ’!, ‘ಕೆಟ್ಟದಾರಿಯ ಕೊನೆ, ಸೆರೆಮನೆ’, ‘ಬೇರೆಯವರ ಮನೆಗಳಿಗೆ ಹಾಕಿದರೆ ಕನ್ನ, ನಿಮಗೆ ಬಿದ್ದೆ ಬೀಳುತ್ತೆ ಕಾನೂನಿನ ಗುನ್ನ’!... ಹೀಗೆ ಬಿಸಿಪಿ ಟ್ವಿಟರ್‌ ಖಾತೆಯಲ್ಲಿ ಇನ್ನಷ್ಟು ಆಕರ್ಷಕವಾಗಿರುವ ಒಕ್ಕಣೆಗಳು ಇವೆ.

ತಲೆ ಉಳಿಸಿ

‘ಹೆಲ್ಮೆಟ್‌ ಧರಿಸಿ ಇನ್ನಾದರೂ ಹೆಲ್ಮೆಟ್‌ ಧರಿಸಿ, ಬೇರೆ ಯಾರೂ ಈ ಮಾತನ್ನು ಹೇಳೋದಿಲ್ಲ. ಹೇರ್‌ ಸ್ಟೈಲ್‌ ಅಂತಾ ಹೆಲ್ಮೆಟ್‌ ಹಾಕ್ದಿರೋರೆ ಹೆಚ್ಚು ನಮ್ಮಲೆಲ್ಲಾ

ಹೆಲ್ಮೆಟ್‌ ಧರಿಸಿ ಇನ್ನಾದ್ರೂನು ನಿಮ್ಮ ತಲೆ ಉಳಿಸಿ ಇಂತಹ ಜಾಗೃತಿಯ ಸಂದೇಶಗಳು ಟ್ವಿಟರ್‌ ಖಾತೆಯಲ್ಲಿವೆ.

‘ಬದಲಾವಣೆ ಆಗಲಿ’
‘ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರ ಬದುಕಿನಲ್ಲಿ ಬದಲಾವಣೆಗಳು ಆಗಲಿ ಎನ್ನುವ ದೃಷ್ಟಿಯಿಂದ ಆಕರ್ಷಕವಾಗಿರುವ ಒಕ್ಕಣಿಕೆಗಳನ್ನು ಖಾತೆಯಲ್ಲಿ ಪ್ರಕಟಿಸಲಾಗುತ್ತಿದೆ.ನಮ್ಮಲ್ಲಿರುವ ಪ್ರತಿಭಾವಂತ ಸಿಬ್ಬಂದಿ ತಂಡ ಈ ಕಾರ್ಯವನ್ನು ಮಾಡುತ್ತಿದೆ’ ಎನ್ನುತ್ತಾರೆ ಸಾಮಾಜಿಕ ಜಾಲತಾಣ ವಿಭಾಗದ ಕಮಾಂಡರ್‌ ಘಟಕದ ಹಿರಿಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT