ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕಾಸ್ಪದ ಸಾವು : ಪ್ರಕರಣ ಸಿಐಡಿ ತನಿಖೆಗೆ

ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾ ಗೋಪಿನಾಥ್
Last Updated 25 ಏಪ್ರಿಲ್ 2018, 19:39 IST
ಅಕ್ಷರ ಗಾತ್ರ

ತುಮಕೂರು: ನಗರ ಠಾಣೆ ಪೊಲೀಸರು ಮಂಗಳವಾರ ರಾತ್ರಿ ವಿಚಾರಣೆಗೆ ಕರೆ ತಂದಿದ್ದ ಬೆಂಗಳೂರಿನ ಹೆಬ್ಬಾಳ ನಿವಾಸಿ ಮಹಮ್ಮದ್ ಅಫ್ತಾ (39) ಎಂಬುವವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

‘ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸುವಾಗಲೇ ಅವರು ಮೃತಪಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ನನ್ನ ಸಹೋದರ ಚೆನ್ನಾಗಿಯೇ ಇದ್ದ. ಮಂಗಳವಾರ ಮಧ್ಯಾಹ್ನವಷ್ಟೇ ಮನೆಗೆ ಬಂದಿದ್ದ. ಆತನ ಸಾವಿನ ಬಗ್ಗೆ ಅನುಮಾನವಿದ್ದು, ತನಿಖೆ ನಡೆಸಬೇಕು’ ಎಂದು ಅಫ್ತಾ ಸಹೋದರ ಆರಿಫ್ ಒತ್ತಾಯಿಸಿದ್ದಾರೆ.

‘ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹವಿದ್ದು, ನಮ್ಮ ತಾಯಿ ಮತ್ತು ನನಗೆ ನೋಡಲು ಅವಕಾಶ ಕೊಟ್ಟಿಲ್ಲ’ ಎಂದು ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್, ‘ಮಂಗಳವಾರ ರಾತ್ರಿ ತುಮಕೂರು ತಾಲ್ಲೂಕಿನ ಚೋಂಬಳ್ಳಿ ಗ್ರಾಮದಲ್ಲಿ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ಗ್ರಾಮಸ್ಥರು ಹಿಡಿದಿದ್ದಾರೆ ಎಂಬ ಮಾಹಿತಿ ಮೇರೆಗೆ ನಗರ ಠಾಣೆ ಪೊಲೀಸರು ಅಲ್ಲಿಗೆ ತೆರಳಿದ್ದರು’ ಎಂದು ತಿಳಿಸಿದರು.

‘ಅಲ್ಲಿ ಮೂವರ ಮೇಲೆ 15- 20 ಜನರು ಹಲ್ಲೆ ನಡೆಸುತ್ತಿದ್ದರು. ಅದನ್ನು ಕಂಡ ಪೊಲೀಸರು ಆ ಮೂವರನ್ನು ರಕ್ಷಿಸಿದರು.  ಬಳಿಕ ಮಹಮ್ಮದ್ ಅಫ್ತಾ, ಸೈಯದ್ ಖಾಸಿಂ ಸಾಬ್ ಹಾಗೂ ಶೇಖರ್ ಎಂಬುವವರನ್ನು ನಗರ ಠಾಣೆ ಸಬ್ ಇನ್ ಸ್ಪೆಕ್ಟರ್ ಮತ್ತು ಸಿಬ್ಬಂದಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು’ ಎಂದರು.

‘ಮಹಮದ್ ಅಫ್ತಾ ಬಳಿ ಪಿಸ್ತೂಲ್ ಇದ್ದುದರಿಂದ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖಾ ವಿಧಾನಗಳನ್ನು ಅನುಸರಿಸುತ್ತಿರುವಾಗ ಮಹಮ್ಮದ್ ಅಫ್ತಾ ಕುಸಿದು ಬಿದ್ದರು. ಬಳಿಕ ಅವರನ್ನು ಜಿಲ್ಲಾ ಅಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷೆ ನಡೆಸಿದ ವೈದ್ಯರು ಮರಣ ಹೊಂದಿದ್ದಾರೆ ಎಂದು ತಿಳಿಸಿದರು’ ಎಂದು ವಿವರಿಸಿದರು.

‘ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮಧುಗಿರಿ ಡಿಎಸ್ಪಿ ಅವರಿಗೆ ತನಿಖೆ ಜವಾಬ್ದಾರಿ ವಹಿಸಲಾಗಿದೆ. ಪೊಲೀಸ್ ವಶದಲ್ಲಿದ್ದಾಗ ಮೃತಪಟ್ಟ (ಕಸ್ಟೊಡಿಯಲ್ ಡೆತ್) ಪ್ರಕರಣ. ಲಾಕಪ್ ಡೆತ್ ಅಲ್ಲ. ಪ್ರಕರಣವನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಯಂತೆ ಮುಂದಿನ ತನಿಖೆಗೆ ಸಿಐಡಿ ಘಟಕಕ್ಕೆ ವಹಿಸಲಾಗಿದೆ’ ಎಂದರು.

ಅಫ್ತಾ ಹಿನ್ನೆಲೆ: ‘ಮೃತಪಟ್ಟ ಮಹಮ್ಮದ್ ಅಫ್ತಾ ಎಂಬುವವನ ಮೇಲೆ ಈ ಹಿಂದೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಲಾಭಕ್ಕಾಗಿ ಕೊಲೆ ಪ್ರಕರಣ ದಾಖಲಾಗಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT