ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋನಿ ಆಟಕ್ಕೆ ಒಲಿದ ಜಯ: ಎಬಿಡಿ, ಕ್ವಿಂಟನ್ ಆಟ ವ್ಯರ್ಥ

Last Updated 25 ಏಪ್ರಿಲ್ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಮೊದಲು ಎಬಿಡಿ, ನಂತರ ಎಂಎಸ್‌ಡಿ ಹೆಸರುಗಳು ಪ್ರತಿಧ್ವನಿಸಿದವು. ಆದರೆ, ಗೆಲುವು ಒಲಿದಿದ್ದು ಮಾತ್ರ ಎಂಎಸ್‌ಡಿಗೆ!

ಹೌದು; ಮಹೇಂದ್ರ ಸಿಂಗ್ ದೋನಿ (ಎಂಎಸ್‌ಡಿ) ತಾವು ಇವತ್ತಿಗೂ ಶ್ರೇಷ್ಠ ಫಿನಿಷರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ 5 ವಿಕೆಟ್‌ಗಳ ರೋಚಕ ಜಯದ ಕಾಣಿಕೆ ನೀಡಿದರು.

ಇದರೊಂದಿಗೆ ಬೆಂಗಳೂರು ಕ್ರಿಕೆಟ್‌ಪ್ರಿಯರ ಕಣ್ಮಣಿ ಎಬಿ ಡಿವಿಲಿಯರ್ಸ್ (68; 30ಎ; 2ಬೌಂ, 8ಸಿ) ಮತ್ತು ಕ್ವಿಂಟನ್ ಡಿ ಕಾಕ್ (57; 37ಎ; 1ಬೌಂ, 3 ಸಿ) ಅವರಿಬ್ಬರ ಅರ್ಧಶತಕಗಳು ವ್ಯರ್ಥವಾದವು. ಇವರು ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಸೇರಿಸಿದ್ದ 103 (53ಎ) ರನ್‌ಗಳ ಬಲದಿಂದ   ಬೆಂಗಳೂರು ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 205 ರನ್‌ ಗಳಿಸಿತು. ಈ ಕಠಿಣ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 19.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 207 ರನ್‌ ಗಳಿಸಿತು. 9 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 74 ರನ್‌ ಗಳಿಸಿ ಸೋಲಿನ ಹಾದಿ ಹಿಡಿದಿದ್ದ ಚೆನ್ನೈ ತಂಡಕ್ಕೆ   ನಾಯಕ ಮಹೇಂದ್ರಸಿಂಗ್ ದೋನಿ (ಔಟಾಗದೆ 70; 34ಎ, 1ಬೌ, 7ಸಿ) ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಅಂಬಟಿ ರಾಯುಡು (82; 53 ಎ, 3ಬೌಂ 8ಸಿ) ಅವರು 5ನೇ ವಿಕೆಟ್‌ ಜೊತೆಯಾಟವು ಸಂಜೀವಿನಿಯಾಯಿತು. ಅವರು ಸೇರಿಸಿದ 101 ರನ್‌ಗಳಿಂದ ತಂಡವು ಜಯಿಸಿತು. ಅಂಬಟಿ ರಾಯುಡು ಅವರು ಆರೆಂಜ್ ಕ್ಯಾಪ್ ಪಡೆದರು.

ಮೂರು ವೈಡ್‌ಗಳು: ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಕಟ್ಟಿದ್ದ ರನ್‌ ಗೋಪುರದ ಮೇಲೆ ಗೆಲುವಿನ ಕಳಶ ಇಡುವಲ್ಲಿ ಬೌಲರ್‌ಗಳು ವೈಫಲ್ಯ ಅನುಭವಿಸಿದರು. ಅದರಲ್ಲೂ 19ನೇ ಓವರ್‌ನಲ್ಲಿ ಮಧ್ಯಮವೇಗಿ ಮೊಹಮ್ಮದ್ ಸಿರಾಜ್ ಹಾಕಿದ ಮೂರು ವೈಡ್‌ಗಳು ತಂಡದ ಜಯದ ಅವಕಾಶವನ್ನು ಕಸಿದುಕೊಂಡವು. ಸಿಎಸ್‌ಕೆ ತಂಡಕ್ಕೆ ಕೊನೆಯ ಎಂಟು ಎಸೆತಗಳಲ್ಲಿ 27 ರನ್‌ಗಳು ಬೇಕಿದ್ದವು. ಒಂದು ಎಸೆತದಲ್ಲಿ (18.5) ದೋನಿ ಸಿಕ್ಸರ್‌ ಹೊಡೆದರು. ನಂತರ ಸಿರಾಜ್ ಅವರು ಸತತ ಮೂರು ವೈಡ್‌ ಹಾಕಿದರು. ಕೊನೆಯ ಎಸೆತದಲ್ಲಿ ದೋನಿ ಎರಡು ರನ್ ಹೊಡೆದರು. ಇದರಿಂದಾಗಿ ಕೊನೆಯ ಓವರ್‌ನಲ್ಲಿ 16 ರನ್‌ಗಳನ್ನು ಹೊಡೆಯುವ ಸವಾಲು ಸಿಎಸ್‌ಕೆಗೆ ಇತ್ತು.

ಕೋರಿ ಆ್ಯಂಡರ್ಸನ್ ಹಾಕಿದ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ  ಬ್ರಾವೊ ಬೌಂಡರಿ ಹೊಡೆದರು. ಅವರು ಎರಡನೇ ಎಸೆತವನ್ನು ಸಿಕ್ಸರ್ ಗೆ ಎತ್ತಿದರು. ಮೂರನೇ ಎಸೆತದಲ್ಲಿ ಒಂದು ರನ್ ಹೊಡೆದು ದೋನಿಗೆ ಬ್ಯಾಟಿಂಗ್ ನೀಡಿದರು. ‘ಕೂಲ್ ಕ್ಯಾಪ್ಟನ್’ ದೋನಿ ಚೆಂಡನ್ನು ಸಿಕ್ಸರ್‌ಗೆ ಎತ್ತಿದರು. ಆರ್‌ಸಿಬಿ ಅಭಿಮಾನಿಗಳ ಮುಖ ಬಾಡಿತು. ಸಿಎಸ್‌ಕೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು.

ಎಬಿಡಿ ಅಬ್ಬರ: ಟಾಸ್ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಬೌಲರ್‌ಗಳು ಮಿಂಚಲು ಸಾಧ್ಯವಾಗಲಿಲ್ಲ. ಎಇನಿಂಗ್ಸ್‌ ಆರಂಭಿಸಿದ ವಿರಾಟ್ ಕೊಹ್ಲಿ ಮತ್ತು ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್‌ಗೆ 35 ರನ್ ಗಳಿಸಿದರು. ಐದನೇ ಓವರ್‌ನಲ್ಲಿ ಕೊಹ್ಲಿ ಔಟಾಗಿ ಹೊರನಡೆದರು. ಸ್ವಲ್ಪ ನಿರಾಶೆಗೊಂಡ ಪ್ರೇಕ್ಷಕರು ಮರುಕ್ಷಣವೇ ಪುಟಿದೆದ್ದರು. ಎಬಿಡಿ ರಂಗಪ್ರವೇಶ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಚಲನ ಮೂಡಿಸಿತ್ತು.

ಕಳೆದ ಪಂದ್ಯದಲ್ಲಿ 90 ರನ್‌ ಗಳಿಸಿ ಅಜೇಯರಾಗುಳಿದಿದ್ದ ಎಬಿಡಿ ತಮ್ಮ ಬೀಸಾಟವನ್ನು ಮುಂದುವರಿಸಿದರು. ಇನ್ನೊಂದೆಡೆ ಅವರ ದಕ್ಷಿಣ  ಆಫ್ರಿಕಾದ ಗೆಳೆಯ ಕ್ವಿಂಟನ್ ಕೂಡ ರನ್ ಸೂರೆ ಮಾಡಿದರು. ಆದರೆ ಎಬಿಡಿ ಆಟವೇ ಹೆಚ್ಚು ಅಬ್ಬರದಿಂದ ಕೂಡಿತ್ತು.

ಸಿಎಸ್‌ಕೆಯ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹೀರ್ ಅವರು ಹಾಕಿದ 11ನೇ ಓವರ್‌ನ ನಾಲ್ಕನೇ ಎಸೆತವನ್ನು ಸಿಕ್ಸರ್‌ಗೆ ಎತ್ತಿದರು. ಚೆಂಡು ಮೈದಾನದಿಂದ ಹೊರಗೆ ಬಿತ್ತು. ಮಧ್ಯಮವೇಗಿ ಶಾರ್ದೂಲ್ ಠಾಕೂರ್ ಹಾಕಿದ 13ನೇ ಓವರ್‌ನಲ್ಲಿ ಎಬಿಡಿ  ಸತತ ಮೂರು ಸಿಕ್ಸರ್‌ ಗಳನ್ನು ಬಾರಿಸಿದರು. ಒಟ್ಟು 20 ರನ್‌ಗಳು ಈ ಓವರ್‌ನಲ್ಲಿ ಬಂದವು.

ವಿರಾಟ್ 2 ಸಾವಿರ ರನ್: ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿಯ ಎರಡು ಸಾವಿರ ರನ್‌ಗಳನ್ನು ಪೂರೈಸಿದರು.  ಈ ಪಂದ್ಯದಲ್ಲಿ 18 ರನ್‌ ಗಳಿಸಿದಾಗ ಅವರು ಸಾಧನೆಯ ಗಡಿ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT