ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೈಂಗಿಕ ದೌರ್ಜನ್ಯ ಸಂತ್ರಸ್ತ ಬಾಲಕರಿಗೂ ಪರಿಹಾರ ನೀಡಿ’

Last Updated 25 ಏಪ್ರಿಲ್ 2018, 20:00 IST
ಅಕ್ಷರ ಗಾತ್ರ

ನವದೆಹಲಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಗಂಡು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳಿಗೆ ತಿದ್ದುಪಡಿ ತರುವ ಪ್ರಸ್ತಾವವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಮುಂದಿಟ್ಟಿದ್ದಾರೆ.

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಹೆಣ್ಣು ಮಕ್ಕಳಿಗೆ ಅನ್ವಯವಾಗುವ ಕಾನೂನು ಗಂಡು ಮಕ್ಕಳಿಗೂ ಅನ್ವಯ ಆಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕರ ಬಗ್ಗೆ ಸಮಗ್ರವಾದ ಅಧ್ಯಯನ ನಡೆಸುವುದಾಗಿ ಅವರು ಘೋಷಿಸಿದ್ದಾರೆ. ಇಂತಹ ಅಧ್ಯಯನ ಇದೇ ಮೊದಲ ಬಾರಿ ನಡೆಯಲಿದೆ.

‘ಗಂಡು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಲಿಂಗಾತೀತವಾಗಿ ನಡೆಯುತ್ತಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಗಂಡು ಮಕ್ಕಳು ಜೀವನವಿಡೀ ಈ ಬಗ್ಗೆ ಮೌನವಾಗಿರುತ್ತಾರೆ. ಅಪಮಾನದ ಭೀತಿ ಇದಕ್ಕೆ ಕಾರಣ. ಇದೊಂದು ಗಂಭೀರ ಸಮಸ್ಯೆಯಾಗಿದ್ದು ಪರಿಹಾರ ಕಂಡುಕೊಳ್ಳಲೇಬೇಕಿದೆ’ ಎಂದು ಮೇನಕಾ ಅಭಿಪ್ರಾಯಪಟ್ಟಿದ್ದಾರೆ.

ಗಂಡು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಸಿನಿಮಾ ನಿರ್ದೇಶಕಿ ಇನ್ಸಿಯಾ ದಾರಿವಾಲಾ ಅವರು ಚೇಂಜ್‌ ಡಾಟ್‌ ಆರ್ಗ್‌ನಲ್ಲಿ ಪ್ರಕಟಿಸಿದ ಅರ್ಜಿಗೆ ಮೇನಕಾ ಈ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಗಮನ ಹರಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗಕ್ಕೆ (ಎನ್‌ಸಿಪಿಸಿಆರ್‌) ಕಳೆದ ವರ್ಷವೇ ಸೂಚನೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಇನ್ಸಿಯಾ ಅವರ ಅರ್ಜಿ ಗಮನಕ್ಕೆ ಬಂದ ಬಳಿಕ ಮೇನಕಾ ಅವರು ಈ ಸೂಚನೆ ನೀಡಿದ್ದಾರೆ.

ಗಂಡು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಎನ್‌ಸಿಪಿಸಿಆರ್‌ ವಿಚಾರ ಸಂಕಿರಣವೊಂದನ್ನು ನಡೆಸಿದೆ. ಸಂತ್ರಸ್ತರಿಗೆ ಸಂಬಂಧಿಸಿದ ಕಾನೂನುಗಳಿಗೆ ತಿದ್ದುಪಡಿ ಮಾಡಬೇಕು ಎಂಬ ನಿರ್ಣಯವನ್ನು ಈ ಸಮಾವೇಶವು ಸರ್ವಾನುಮತದಿಂದ ಕೈಗೊಂಡಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಗಂಡು ಮಕ್ಕಳಿಗೆ ಪರಿಹಾರ ನೀಡಿಕೆಯನ್ನೂ ತಿದ್ದುಪಡಿಯಲ್ಲಿ ಸೇರಿಸಬೇಕು ಎಂದು ಮೇನಕಾ ತಿಳಿಸಿದ್ದಾರೆ.

ಶೇ 52.9ರಷ್ಟು ಗಂಡು ಮಕ್ಕಳು
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2007ರಲ್ಲಿ ಅಧ್ಯಯನ ನಡೆಸಿತ್ತು. ಶೇ 53.2ರಷ್ಟು ಮಕ್ಕಳು ಒಂದು ಅಥವಾ ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಈ ಅಧ್ಯಯನ ವರದಿ ಹೇಳಿತ್ತು. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವವರಲ್ಲಿ ಶೇ 52.9ರಷ್ಟು ಗಂಡು ಮಕ್ಕಳು ಎಂಬ ಅಂಶವೂ ಈ ವರದಿಯಲ್ಲಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT