ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ತಾರತಮ್ಯ ನಿವಾರಣೆಗಾಗಿ ಬಾದಾಮಿಯಲ್ಲಿ ಸ್ಪರ್ಧೆ: ಸಿದ್ದರಾಮಯ್ಯ

Last Updated 25 ಏಪ್ರಿಲ್ 2018, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ದಕ್ಷಿಣ ಮತ್ತು ಉತ್ತರ ಕರ್ನಾಟಕದ ಮಧ್ಯೆ ಇರುವ ಪ್ರಾದೇಶಿಕ ತಾರತಮ್ಯ ನಿವಾರಣೆಗಾಗಿ ಬಾದಾಮಿಯಲ್ಲಿ ಸ್ಪರ್ಧಿಸುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ತಮ್ಮ ಫೇಸ್‌ ಬುಕ್ ವಾಲ್‌ನಲ್ಲಿ ಸುದೀರ್ಘ ವಿವರಣೆಯೊಂದಿಗೆ ಸಮರ್ಥನೆ ನೀಡಿರುವ ಅವರು, ‘ನನ್ನ ನಿರ್ಧಾರದ ಬಗ್ಗೆ ವಿಶ್ಲೇಷಣೆ- ವ್ಯಾಖ್ಯಾನಗಳ ಮೂಲಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವುದನ್ನು ಗಮನಿಸಿದ್ದೇನೆ. ಇದು ಕೇವಲ ನನ್ನ ನಿರ್ಧಾರವಲ್ಲ. ರಾಜಕೀಯ ನಾಯಕರಾಗಿರುವ ನಮ್ಮಂತಹವರು ಪಕ್ಷದ ಇತರ ನಾಯಕರು ಮತ್ತು ಕಾರ್ಯಕರ್ತರ ಅಭಿಪ್ರಾಯಕ್ಕೂ ಬೆಲೆ ಕೊಡಬೇಕಾಗುತ್ತದೆ. ಉತ್ತರ ಕರ್ನಾಟಕದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಈ ತೀರ್ಮಾನ ಕೈಗೊಂಡಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

‘ಅಭಿವೃದ್ಧಿಯ ವಿಷಯದಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ ಎಂಬ ದೂರು ಇದೆ. ಈ ತಾರತಮ್ಯಕ್ಕೆ ಬೇರೆಬೇರೆ ಕಾರಣಗಳೂ ಇವೆ. ತಾರತಮ್ಯ ನಿವಾರಣೆಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದೆ. ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿದ್ದಲ್ಲದೇ, ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಹೆಚ್ಚಿನ ಅನುದಾನ ನೀಡಲಾಗಿದೆ. ಇದು ನಮ್ಮ ಬದ್ಧತೆ ಮತ್ತು ಕಾಳಜಿ. ಇದರ ವಿಸ್ತರಣೆಯೇ ಬಾದಾಮಿಯಲ್ಲಿ ನನ್ನ ಸ್ಪರ್ಧೆಯ ನಿರ್ಧಾರ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ನಮ್ಮ ಸರ್ಕಾರ ಕಳೆದ ಐದು ವರ್ಷಗಳ ಅವಧಿಯಲ್ಲಿ ಭೌಗೋಳಿಕ ತಾರತಮ್ಯಕ್ಕೆ ಅವಕಾಶ ಇಲ್ಲದಂತೆ ಆಡಳಿತ ನೀಡಿದೆ. ಈ ವಿಷಯವನ್ನು ರಾಜಕೀಯ ಸಂದೇಶವಾಗಿ ನೀಡುವುದು ನನ್ನ ಸ್ಪರ್ಧೆಯ ಉದ್ದೇಶ. ಬಾದಾಮಿಯ ನನ್ನ ಸ್ಪರ್ಧೆ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಮನಸ್ಸುಗಳನ್ನು ಇನ್ನಷ್ಟು ಹತ್ತಿರ ಕರೆತಂದು ಬೆಸೆಯುವ ಕೆಲಸ ಮಾಡಿದರೆ ನನ್ನ ಈ ಪ್ರಯೋಗ ಯಶಸ್ಸು ಕಂಡಂತಾಗುತ್ತದೆ’ ಎಂದರು.

ಇದೇನೂ ಮೊದಲಲ್ಲ: ಚುನಾವಣೆಗಳಲ್ಲಿ ಎರಡು ಕ್ಷೇತ್ರಗಳಲ್ಲಿನ ಸ್ಪರ್ಧೆ ಹೊಸದೇನಲ್ಲ. ಇದಕ್ಕೆ ಸಂವಿಧಾನವೇ ಅವಕಾಶ ನೀಡಿದೆ. ಇದು ಅಕ್ರಮವೂ ಅಲ್ಲ, ಇದರಲ್ಲಿ ಅಚ್ಚರಿಯೂ ಇಲ್ಲ. ಕರ್ನಾಟಕದಲ್ಲಿ ಇದು ಪ್ರಾರಂಭವಾಗಿದ್ದೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ. 1985ರ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರು ಹೊಳೆನರಸಿಪುರ ಕ್ಷೇತ್ರದ ಜತೆ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿರಲಿಲ್ಲವೇ? 1989 ರಲ್ಲಿ ದೇವೇಗೌಡರು ಮತ್ತೆ ಹೊಳೆನರಸಿಪುರ ಮತ್ತು ಕನಕಪುರ ಕ್ಷೇತ್ರಗಳಿಂದ ಸ್ಪರ್ಧಿಸಿರಲಿಲ್ಲವೇ. ಈಗ ತಂದೆಯ ಹಾದಿಯಲ್ಲಿ ಮಗನೂ ಹೆಜ್ಜೆ ಹಾಕಿದ್ದಾರೆ. ಕುಮಾರಸ್ವಾಮಿಯವರು ಈಗ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿಲ್ಲವೇ ಎಂದೂ ಅವರು ಪ್ರಶ್ನಿಸಿದ್ದಾರೆ.

‘ದೇವೇಗೌಡರು ಮತ್ತು ಕುಮಾರಸ್ವಾಮಿಯವರಂತೆ ನಾನು, ಸಮೀಪದ ಅಥವಾ ಅಕ್ಕಪಕ್ಕದ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿಲ್ಲ ಎಂದರು.

‘ಪ್ರೀತಿಯ ಕರೆಗೆ ಓಗೊಟ್ಟು ಬಂದೆ’

‘ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೆದರಿ ಬಾದಾಮಿಗೆ ಬಂದಿದ್ದಾರೆ ಎಂದು ನಮ್ಮ ವಿರೋಧ ಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ನಾನು ಹೆದರಿ ಓಡಿ ಬಂದಿಲ್ಲ, ಆ ಕ್ಷೇತ್ರದ ಜನರ ಪ್ರೀತಿಯ ಕರೆಗೆ ಓಗೊಟ್ಟು ಬಂದಿದ್ದೇನೆ. ಆ ಪ್ರೀತಿಯ ಫಲ ಏನೆಂಬುದನ್ನು ಚುನಾವಣಾ ಫಲಿತಾಂಶ ಹೇಳಲಿದೆ. ರಾಜಕೀಯದ ಕ್ಷೇತ್ರದಲ್ಲಿರುವ ನಮ್ಮೆಲ್ಲರಿಗೂ ಚುನಾವಣೆ ಎನ್ನುವುದು ಅಗ್ನಿಪರೀಕ್ಷೆ. ಚುನಾವಣೆಯಲ್ಲಿ ಸೋಲು-ಗೆಲುವುಗಳನ್ನೆರಡನ್ನೂ ನಾನು ಕಂಡಿದ್ದೇನೆ. ಗೆಲುವು ತಮ್ಮ ಕಿಸೆಯಲ್ಲಿದ್ದವರಂತೆ ಕೆಲವರು ಮಾತಾಡ್ತಾರೆ, ಇದು ಮತದಾರರಿಗೆ ಮಾಡುವ ಅಪಮಾನ ಎಂಬುದು ನನ್ನ ಅಭಿಪ್ರಾಯ’ ಎಂದರು.

ಸ್ಪರ್ಧೆ ಕುರಿತು ಸವಾಲು–ಜವಾಬಿನ ಹಾದಿ

* 2017 ಅಕ್ಟೋಬರ್ 6: 2018ರ ಚುನಾವಣೆಯೇ ನನ್ನ ಕೊನೆಯ ಚುನಾವಣೆಯ ಎಂದು ಈಗಾಗಲೇ ಘೋಷಿಸಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ- ಸಿದ್ದರಾಮಯ್ಯ

* 2018 ಮಾರ್ಚ್‌ 29: ಧೈರ್ಯವಿದ್ದರೆ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಲಿ-  ಎಚ್‌.ಡಿ. ಕುಮಾರಸ್ವಾಮಿ

* 2018ರ ಮಾರ್ಚ್‌ 30: ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಲು ನಾನು ತಯಾರು. ಧೈರ್ಯವಿದ್ದರೆ ಕುಮಾರಸ್ವಾಮಿ ನನ್ನ ಎದುರು ಸ್ಪರ್ಧಿಸಲಿ- ಸಿದ್ದರಾಮಯ್ಯ

* 2018 ಏಪ್ರಿಲ್‌ 5: ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ–ಸಿದ್ದರಾಮಯ್ಯ

* 2018 ಏಪ್ರಿಲ್ 6: ನನಗೆ ರಾಜಕೀಯ ಪುನರ್ಜನ್ಮ ನೀಡಿದ ಚಾಮುಂಡೇಶ್ವರಿಯಿಂದ ಮಾತ್ರ ಅದೃಷ್ಟ ಪರೀಕ್ಷೆಗೆ ಇಳಿಯುವೆ. ಇದು ಸ್ಪಷ್ಟ ನಿಲುವು- ಸಿದ್ದರಾಮಯ್ಯ.

* 2018 ಏಪ್ರಿಲ್ 16: ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿಲ್ಲ. ಈಗಲೂ ಅಷ್ಟೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ನನ್ನ ಸ್ಪರ್ಧೆ-ಸಿದ್ದರಾಮಯ್ಯ

* 2018 ಏಪ್ರಿಲ್ 18: ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಇಲ್ಲ, ನನಗೆ ಆಸಕ್ತಿ ಇಲ್ಲ ಎಂದು ಹೈಕಮಾಂಡ್‌ಗೆ ಸ್ಪಷ್ಟವಾಗಿ ಹೇಳಿದ್ದೇನೆ-ಸಿದ್ದರಾಮಯ್ಯ

* 2018 ಏಪ್ರಿಲ್‌ 22: ಬಾದಾಮಿಯಿಂದಲೂ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರ ಒತ್ತಡವಿದೆ. ಈ ವಿಷಯದಲ್ಲಿ ವರಿಷ್ಠರ ಅಭಿಪ್ರಾಯಕ್ಕೆ ಬದ್ಧ-ಸಿದ್ದರಾಮಯ್ಯ

* 2018 ಏಪ್ರಿಲ್‌ 25: ಪ್ರಾದೇಶಿಕ ಅಸಮಾನತೆ ನಿವಾರಿಸಲು ಬಾದಾಮಿಯಿಂದ ಸ್ಪರ್ಧೆ-ಸಿದ್ದರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT