ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿ ಸಂಧಾನ; ಕೋಪ ಶಮನ!

ಸಂಸದ ಬಿ. ಶ್ರೀರಾಮುಲುಗಾಗಿ ಮಾತ್ರ ಕ್ಷೇತ್ರ ತ್ಯಾಗ; ಪಟ್ಟಣಶೆಟ್ಟರ ಪಟ್ಟು
Last Updated 26 ಏಪ್ರಿಲ್ 2018, 7:22 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಸಂಸದ ಬಿ.ಶ್ರೀರಾಮುಲುಗೆ ಮಾತ್ರ ಟಿಕೆಟ್ ಬಿಟ್ಟು ಕೊಡುವೆ’ ಎಂದು ಪಟ್ಟು ಹಿಡಿದ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ದಿಢೀರನೆ ತಾವೂ ನಾಮಪತ್ರ ಸಲ್ಲಿಸಿ ಬಂದು ಬಂಡಾಯದ ಬಾವುಟ ಹಾರಿಸುವ ಮುನ್ಸೂಚನೆ ನೀಡಿದ್ದರು. ಇದರಿಂದ ಮಂಗಳವಾರ ರಾತ್ರಿ ಬಾದಾಮಿಯ ಬಿಜೆಪಿ ಪಾಳಯದಲ್ಲಿ ಆತಂಕ ಮೂಡಿತ್ತು.

ಶ್ರೀರಾಮುಲು ಜೊತೆಗೆ ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿ ಮಹಾಂತೇಶ ಮಮದಾಪುರ ಅವರಿಂದಲೂ ಪಕ್ಷದ ಮುಖಂಡರು ನಾಮಪತ್ರ ಕೊಡಿಸಿದ್ದರು. ಇದು ಎಂ.ಕೆ.ಪಟ್ಟಣಶೆಟ್ಟಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ನಂತರ ನಾಟಕೀಯ ಬೆಳವಣಿಗೆಗಳಿಗೂ ಕಾರಣವಾಯಿತು.

ಮಮದಾಪುರ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಯುತ್ತಲೇ ಕೆಲ ಬೆಂಬಲಿಗರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪಟ್ಟಣಶೆಟ್ಟಿ ಅವರಿಗೆ ಒತ್ತಡ ಹಾಕಿದ್ದರು.

ಅವರ ಮಾತಿಗೆ ಮನ್ನಣೆ ನೀಡಿ ಶೆಟ್ಟರು ನಾಮಪತ್ರ ಕೂಡ ಸಲ್ಲಿಸಿ ಬಂದಿದ್ದಾರೆ. ಈ ವೇಳೆ ಅಲ್ಲಿನ ಕಾಳಿದಾಸ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಲ್ಲಿಂದ ಪಟ್ಟಣಶೆಟ್ಟರ ಮನೆಗೆ ಬರಲಿದ್ದಾರೆ. ಕಾಂಗ್ರೆಸ್‌ಗೆ ಆಹ್ವಾನಿಸಲಿದ್ದಾರೆ’ ಎಂಬ ಸುದ್ದಿಯೂ ಹರಡಿತ್ತು.

ಈ ವಿಚಾರ ತಿಳಿದ ಶ್ರೀರಾಮುಲು ಸಂಸದ ಪಿ.ಸಿ.ಗದ್ದಿಗೌಡರ ಅವರೊಂದಿಗೆ ಪಟ್ಟಣಶೆಟ್ಟಿ ಮನೆಗೆ ದೌಡಾಯಿಸಿದರು. ರಾತ್ರಿ ಸಿದ್ದರಾಮಯ್ಯ ಬಾದಾಮಿಯಿಂದ ತೆರಳುವವರೆಗೂ ಅಲ್ಲಿಯೇ ಇದ್ದರು. ಸಂಧಾನಸಭೆ ನಡೆಸಿದರು.

ಶ್ರೀರಾಮುಲುಗೆ ಮಾತ್ರ ಬಿಟ್ಟುಕೊಡುವೆ: ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಯಡಿಯೂರಪ್ಪ ಅವರ ಯಾತ್ರೆ, ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶಿವಯೋಗ ಮಂದಿರಕ್ಕೆ ಭೇಟಿ ನೀಡಿದ್ದ ಕಾರ್ಯಕ್ರಮಕ್ಕೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇನೆ. ಮಹಾಂತೇಶ ಅವರಿಂದ ನಾಮಪತ್ರ ಕೊಡಿಸುವ ವಿಚಾರದಲ್ಲೂ ನನ್ನನ್ನು ಕತ್ತಲೆಯಲ್ಲಿ ಇಡಲಾಗಿದೆ. ಶ್ರಿರಾಮುಲು ಸ್ಪರ್ಧಿಸಿದರೆ ಮಾತ್ರ ಕ್ಷೇತ್ರ ಬಿಟ್ಟುಕೊಡುವೆ. ಇಲ್ಲದಿದ್ದರೆ ನಾನೂ ಕಣಕ್ಕಿಳಿಯುವೆ’ ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.

ಆಗ ಸಮಾಧಾನಪಡಿಸಿದ ಶ್ರೀರಾಮುಲು, ‘ಅಭ್ಯರ್ಥಿ ನಾನೇ ಆಗಿದ್ದರೂ ಚುನಾವಣೆ ಸಿದ್ಧತೆ, ಪ್ರಚಾರ ಸೇರಿದಂತೆ ಎಲ್ಲಾ ಕಾರ್ಯಗಳನ್ನೂ ಗದ್ದಿಗೌಡರ ಹಾಗೂ ನಿಮ್ಮನ್ನು ಮುಂದಿಟ್ಟುಕೊಂಡೇ ಮಾಡಲಾಗುವುದು. ಯಾವುದೇ ಕಾರಣಕ್ಕೂ ನಿಮ್ಮನ್ನು ನಿರ್ಲಕ್ಷಿಸುವುದಿಲ್ಲ. ಮುಂದೆ ಸೂಕ್ತ ಸ್ಥಾನಮಾನ ನೀಡಲಾಗುವುದು. ನಿಮ್ಮ ಅನುಭವ, ರಾಜಕೀಯ
ತಂತ್ರಗಾರಿಕೆಯ ನೆರವು ನಮಗೆ ಬೇಕಿದೆ’ ಎಂದು ಹೇಳಿದ್ದಾಗಿ ತಿಳಿದುಬಂದಿದೆ.

‘ಚುನಾವಣೆ ಮುಗಿಯುವವರೆಗೂ ಪಟ್ಟಣಶೆಟ್ಟರ ನಿವಾಸದ ಒಂದು ಕೊಠಡಿಯಲ್ಲಿಯೇ ಶ್ರೀರಾಮುಲು ವಾಸ್ತವ್ಯ ಹೂಡಲಿದ್ದಾರೆ. ನಿತ್ಯದ ಪೂಜೆಗೂ ಅಲ್ಲಿಯೇ ವ್ಯವಸ್ಥೆ ಮಾಡುವ ತೀರ್ಮಾನ ಕೈಗೊಂಡು ಅವರ ಕೋಪ ಶಮನ
ಗೊಳಿಸಲಾಯಿತು’ ಎಂದು ಗೊತ್ತಾಗಿದೆ.

ಎಂ.ಕೆ.ಪಟ್ಟಣಶೆಟ್ಟಿ ಹಾಗೂ ಮಹಾಂತೇಶ ಮಮದಾಪುರ ಇಬ್ಬರೂ ನಾಮಪತ್ರ ಸಲ್ಲಿಸಿದ್ದಾರೆ ಎಂಬುದು ತಿಳಿಯುತ್ತಿದ್ದಂತೆಯೇ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ರಾಜಶೇಖರ ಶೀಲವಂತರ ಕೂಡ ನಾಮಪತ್ರ ಸಲ್ಲಿಸಲು ಮುಂದಾಗಿದ್ದರು. ಆದರೆ ಸಮಯ ಮುಗಿದ ಕಾರಣ ಸಲ್ಲಿಸಲು ಆಗಿರಲಿಲ್ಲ.

ನೀತಿ ಸಂಹಿತೆ ಉಲ್ಲಂಘನೆ: ಚಿಮ್ಮನಕಟ್ಟಿಗೆ ನೋಟಿಸ್ ಜಾರಿ

ಬಾದಾಮಿ: ಅನುಮತಿ ಪಡೆಯದೇ ಮನೆಯ ಬಳಿ ಬೆಂಬಲಿಗರಿಗೆ ಊಟದ ವ್ಯವಸ್ಥೆ ಮಾಡಿದ್ದ ಹಿನ್ನೆಲೆಯಲ್ಲಿ ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರಿಗೆ ಚುನಾವಣಾ ಅಧಿಕಾರಿ ಪಿ.ರಮೇಶಕುಮಾರ ನೋಟಿಸ್ ಜಾರಿ ಮಾಡಿದ್ದಾರೆ.

ಬಾದಾಮಿಯಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ವೇಳೆ ಮನೆಯ ಬಳಿ ಬೆಂಬಲಿಗರಿಗೆ ಚಿಮ್ಮನಕಟ್ಟಿ ಊಟದ ವ್ಯವಸ್ಥೆ ಮಾಡಿದ್ದರು. ಆದರೆ ಅದಕ್ಕೆ ಪೂರ್ವಾನುಮತಿ ಪಡೆದಿರಲಿಲ್ಲ. ಈ ಬಗ್ಗೆ ಬಂದ ದೂರು ಆಧರಿಸಿ ಶಾಸಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಚಿಮ್ಮನಕಟ್ಟಿ ಅವರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ ಎಂದು ರಮೇಶಕುಮಾರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT