ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಪಾಳಯಕ್ಕೆ ಹೈಕೋರ್ಟ್‌ ಆದೇಶದ ಮರ್ಮಾಘಾತ

2013ರಲ್ಲಿ ದಾವೆ ಹೂಡಿದ್ದ ಎನ್‌.ಮುನಿಆಂಜಪ್ಪ; ಶಾಸಕ ಕೊತ್ತೂರು ಮಂಜುನಾಥ್‌ ಜಾತಿ ಪ್ರಮಾಣಪತ್ರ ವಿವಾದ
Last Updated 26 ಏಪ್ರಿಲ್ 2018, 7:27 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮುಳಬಾಗಿಲು ಮೀಸಲು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೊತ್ತೂರು ಜಿ.ಮಂಜುನಾಥ್‌ರ ಜಾತಿ ಪ್ರಮಾಣಪತ್ರ ಸಂಬಂಧ ಹೈಕೋರ್ಟ್‌ ಬುಧವಾರ ನೀಡಿದ ಆದೇಶದಿಂದ ಕಾಂಗ್ರೆಸ್‌ಗೆ ಚುನಾವಣೆಗೂ ಮುನ್ನವೇ ಮರ್ಮಾಘಾತವಾಗಿದೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮಂಜುನಾಥ್‌ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. ಶಾಸಕರಾದ ದಿನದಿಂದಲೂ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಾ ಅವರು ನಾಲ್ಕೈದು ತಿಂಗಳ ಹಿಂದೆಯಷ್ಟೇ ಅಧಿಕೃತವಾಗಿ ‘ಕೈ’ ಪಾಳಯ ಸೇರಿದ್ದರು.

ರಾಜ್ಯದ ‘ಮೂಡಣ ಬಾಗಿಲು’ ಎಂದು ಹೆಸರಾಗಿರುವ ಮುಳಬಾಗಿಲು ಕ್ಷೇತ್ರದಿಂದಲೇ ಕಾಂಗ್ರೆಸ್‌ ನಾಯಕರು ಚುನಾವಣಾ ಪ್ರಚಾರ ಆರಂಭಿಸಿ ಮಂಜುನಾಥ್‌ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದರು. ಮಂಜುನಾಥ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿ ಫಾರಂ ಪಡೆದು ಸೋಮವಾರ (ಏ.23) ನಾಮಪತ್ರ ಸಲ್ಲಿಸಿದ್ದರು.

ಮಂಜುನಾಥ್‌, ಹಿಂದುಳಿದ ಜಾತಿಗಳ ಪ್ರವರ್ಗ 1ರ ಪಟ್ಟಿಯಲ್ಲಿನ ಬೈರಾಗಿ ಜಾತಿಯವರು. ಆದರೆ ಅವರು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ ಬುಡ್ಗ ಜಂಗಮ ಜಾತಿಗೆ ಸೇರಿದವರು ಎಂದು 2013ರ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಅವರ ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್‌ ಅಭ್ಯರ್ಥಿ ಎನ್‌.ಮುನಿಆಂಜಪ್ಪ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

2013ರ ಚುನಾವಣೆಯಲ್ಲಿ ಮಂಜುನಾಥ್‌ 73,146 ಮತ ಗಳಿಸಿ ಜಯ ಸಾಧಿಸಿದ್ದರು. ಮುನಿಆಂಜಪ್ಪ 39,142 ಮತಗಳನ್ನು ಗಳಿಸಿ 34,004 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಮುನಿಆಂಜಪ್ಪರ ದೂರಿನ ಸಂಬಂಧ ಐದು ವರ್ಷಗಳ ಕಾಲ ವಿಚಾರಣೆ ನಡೆದು, ನ್ಯಾಯಾಲಯವು ಪ್ರಕರಣದ ಅಂತಿಮ ಆದೇಶವನ್ನು ಬುಧವಾರಕ್ಕೆ (ಏ.25) ಕಾಯ್ದಿರಿಸಿತ್ತು.

ಕೋಲಾರದಲ್ಲೂ ನಾಮಪತ್ರ: ನ್ಯಾಯಾಲಯದಲ್ಲಿ ವ್ಯತಿರಿಕ್ತ ಆದೇಶ ಬರಬಹುದೆಂದು ನಿರೀಕ್ಷಿಸಿದ್ದ ಮಂಜುನಾಥ್‌ ನಾಮಪತ್ರ ಸಲ್ಲಿಕೆಯ ಕಡೆ ದಿನವಾದ ಮಂಗಳವಾರ (ಏ.24) ಕೊನೆ ಕ್ಷಣದಲ್ಲಿ ತರಾತುರಿಯಲ್ಲಿ ಕೋಲಾರ ಸಾಮಾನ್ಯ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದ್ದರು. ಆ ಮೂಲಕ ಮುಳಬಾಗಿಲು ಅಥವಾ ಕೋಲಾರ ಕ್ಷೇತ್ರದ ಪೈಕಿ ಯಾವುದಾದರೂ ಒಂದು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ತಂತ್ರಗಾರಿಕೆ ರೂಪಿಸಿದರು.

ಹೈಕೋರ್ಟ್‌ ಮಂಜುನಾಥ್‌ರ ಜಾತಿ ಪ್ರಮಾಣಪತ್ರವು ನಕಲಿ ಎಂದು ಹೇಳಿ ಅಸಿಂಧುಗೊಳಿಸಿ ಆದೇಶ
ಹೊರಡಿಸಿದೆ. ಇದರ ಬೆನ್ನಲ್ಲೇ ಮುಳಬಾಗಿಲು ಕ್ಷೇತ್ರದಲ್ಲಿನ ಬೇರೆ ಪಕ್ಷಗಳ ಅಭ್ಯರ್ಥಿಗಳು ಹೈಕೋರ್ಟ್‌ ಆದೇಶವನ್ನು ಪ್ರಸ್ತಾಪಿಸಿ ನಾಮಪತ್ರ ಪರಿಶೀಲನೆ ವೇಳೆ ಮಂಜುನಾಥ್‌ರ ಜಾತಿ ಪ್ರಮಾಣಪತ್ರ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಇದರಿಂದ ಮಂಜುನಾಥ್‌ರ ನಾಮಪತ್ರ ಊರ್ಜಿತವಾಗುವ ಬಗ್ಗೆ ಆತಂಕ ಸೃಷ್ಟಿಯಾಗಿದ್ದು, ಪಕ್ಷದ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ.

ಅಡ್ಡಿಯಿಲ್ಲ: ಇತ್ತ ಕೋಲಾರ ಕ್ಷೇತ್ರದ ಚುನಾವಣಾ ಕಣದಲ್ಲಿನ ಯಾವುದೇ ಅಭ್ಯರ್ಥಿಗಳು ಹಾಗೂ ಪಕ್ಷಗಳ ಏಜೆಂಟರು ನಾಮಪತ್ರ ಪರಿಶೀಲನೆ ವೇಳೆ ಮಂಜುನಾಥ್‌ರ ಉಮೇದುವಾರಿಕೆ ಸಂಬಂಧ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಹೀಗಾಗಿ ಚುನಾವಣಾಧಿಕಾರಿಯು ನಾಮಪತ್ರ ಊರ್ಜಿತಗೊಳಿಸಿದ್ದು, ಕಾನೂನಾತ್ಮಕವಾಗಿ ಕೋಲಾರದಲ್ಲಿ ಮಂಜುನಾಥ್‌ರ ಸ್ಪರ್ಧೆಗೆ ಯಾವುದೇ ಅಡ್ಡಿಯಿಲ್ಲ.

ಜಾತಿ ಪ್ರಮಾಣಪತ್ರದ ವಿವಾದದ ಕಾರಣಕ್ಕೆ ಮಂಜುನಾಥ್‌ ಒಂದು ವರ್ಷದಿಂದಲೂ ಕೋಲಾರ ಕ್ಷೇತ್ರದತ್ತ ದೃಷ್ಟಿ ನೆಟ್ಟಿದ್ದರು. ಆಗಿನಿಂದಲೇ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಭೂಮಿಕೆ ಸಿದ್ಧಪಡಿಸಿಕೊಂಡಿದ್ದ ಅವರನ್ನು ಕೋಲಾರ ಕ್ಷೇತ್ರಕ್ಕೆ ಕರೆತರಲು ಕಾಂಗ್ರೆಸ್‌ನ ಒಂದು ಬಣ ತೆರೆಮರೆಯಲ್ಲೇ ಪ್ರಯತ್ನ ನಡೆಸಿತ್ತು.

ಆದರೆ, ಪಕ್ಷದಲ್ಲಿನ ಮತ್ತೊಂದು ಬಣ ನಿವೃತ್ತ ಐಎಎಸ್‌ ಅಧಿಕಾರಿ ಸೈಯದ್‌ ಜಮೀರ್‌ ಪಾಷಾ ಅವರಿಗೆ ಟಿಕೆಟ್‌ ಕೊಡಿಸಿ ಈಗಾಗಲೇ ನಾಮಪತ್ರ ಸಹ ಹಾಕಿಸಿದೆ. ಮತದಾನಕ್ಕೆ 17 ದಿನವಷ್ಟೇ ಬಾಕಿ ಇದ್ದು, ಮಂಜುನಾಥ್‌ರ ಮುಂದಿನ ರಾಜಕೀಯ ನಡೆ ತೀವ್ರ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT