ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಗಾಳಿಗೆ ಮುರಿದ ಮರ, ಉದುರಿದ ಮಾವು

ಶ್ರೀನಿವಾಸಪುರ: ಮಾವಿನ ಫಸಲಿಗೆ ಅಲ್ಪ ಪ್ರಮಾಣದ ಹಾನಿ
Last Updated 26 ಏಪ್ರಿಲ್ 2018, 7:29 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಪಟ್ಟಣದ ಸುತ್ತ ಮುತ್ತ ಮಂಗಳವಾರ ಸಂಜೆ ಹಾಗೂ ರಾತ್ರಿ ಬಿರುಗಾಳಿಯೊಂದಿಗೆ ಗುಡುಗು ಮಿಂಚಿನ ಮಳೆ ಸುರಿಯಿತು.

ಬಿರುಗಾಳಿಯ ಹೊಡೆತಕ್ಕೆ ಕೆಲವು ಕಡೆ ಮರಗಳು ಮುರಿದು ಬಿದ್ದಿವೆ. ಅಲ್ಲಲ್ಲಿ ಮಾವಿನ ಫಸಲಿಗೆ ಅಲ್ಪ ಪ್ರಮಾಣದ ಹಾನಿ ಉಂಟಾಗಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ಬಿಸಿಲು ಸುಡುತ್ತಿತ್ತು. ವಾತಾವರಣದಲ್ಲಿ ಉಷ್ಣಾಂಶ ಅಧಿಕವಾಗಿತ್ತು. ಮಳೆ ಬರುವ ಸೂಚನೆ ಇತ್ತಾದರೂ, ಸಂಜೆಯಾದರೂ ಮಳೆಯ ಸುಳಿವು ಇರಲಿಲ್ಲ. ಆದರೆ ಕತ್ತಲು ಆವರಿಸುತ್ತಿದ್ದಂತೆ ಆಕಾಶವನ್ನು ಮಳೆ ಮೋಡಗಳು ಮುತ್ತಿದವು. ಇದರ ಹಿಂದೆಯೇ ಗಾಳಿಯೊಂದಿಗೆ ಗುಡುಗು ಮಿಂಚಿನ ಮಳೆ ಸುರಿಯಿತು.

ಬಿರುಗಾಳಿಯ ಹೊಡೆತಕ್ಕೆ ಕೆಲವು ಕಡೆ ಮಾವಿನ ಕಾಯಿ ಉದುರಿ ಬಿದ್ದಿರುವ ಹಾಗೂ ಕೊಂಬೆ ರೆಂಬೆ ಮುರಿದು ಬಿದ್ದಿರುವ ಬಗ್ಗೆ ವರದಿಯಾಗಿದೆ. ತಾಲ್ಲೂಕಿನಲ್ಲಿ ಈ ನಡುವೆ ಬೀಸುತ್ತಿದ್ದ ಬಿರುಗಾಳಿಗೆ ಮಾವಿನ ಫಸಲಿಗೆ ಧಕ್ಕೆ ಉಂಟಾಗಿದೆ. ಈಗಾಗಲೇ ಮರಗಳಲ್ಲಿ ಕಡಿಮೆ ಫಸಲಿದ್ದು, ಬಿರುಗಾಳಿ ಹೊಡೆತ ಫಸಲಿನ ಪ್ರಮಾಣ ಕುಸಿಯುವ ಸಾಧ್ಯತೆ ಇದೆ ಎಂಬುದು ಬೆಳೆಗಾರರ ಅಭಿಪ್ರಾಯ.

ಬೇರೆ ಕಡೆಗಳಿಗೆ ಹೋಲಿಸಿದರೆ ಕಸಬಾ ಹೋಬಳಿಯಲ್ಲಿ ಮಾವಿನ ಹೀಚು ಈಗಷ್ಟೆ ಕಾಯಿಯಾಗಿ ಮಾರ್ಪಡುತ್ತಿದೆ. ಹಾಗಾಗಿ ಗಾಳಿಯ ಹೊಡೆತದಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಆದರೆ ಇತರ ಕಡೆಗಳಲ್ಲಿ ಕಾಯಿಯ ಗಾತ್ರ ದೊಡ್ಡದಾಗಿದ್ದು, ಈಚೆಗೆ ಬೀಸಿದ ಬಿರುಗಾಳಿಗೆ ಉದುರಿ ಬಿದ್ದಿದೆ.

ಬೇಸಿಗೆಯ ರಣಬಿಸಿಲಿನಿಂದಾಗಿ ಮಾವಿನ ಹೀಚು ಉದುರಿ ನೆಲಕಚ್ಚುತ್ತಿದೆ. ಮರದಲ್ಲಿ ಉಳಿದಿರುವ ಫಸಲಿಗಿಂತ ಉದುರಿ ಬಿದ್ದಿರುವ ಫಸಲಿನ ಪ್ರಮಾಣ ಹೆಚ್ಚಾಗಿದೆ ಎಂದು ಮಾವು ಬೆಳೆಗಾರ ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಮಳೆಯಾಗುತ್ತಿರುವುದರಿಂದ ಹೀಚು ಉದುರುವ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ನೆಲ ತೇವಗೊಂಡಿರುವುದರಿಂದ ಮಾವಿನ ಕಾಯಿ ಗಾತ್ರ ಹೆಚ್ಚುತ್ತದೆ. ಆದರೆ ಮಳೆ, ಬಿರುಗಾಳಿ, ಆಲಿಕಲ್ಲು, ಮಚ್ಚೆ ರೋಗ ಇತ್ಯಾದಿಗಳಿಂದ ಕಾಯಿ ಸುಗ್ಗಿಯ ತನಕ ಉಳಿಯಬೇಕಾಗಿದೆ ಎಂಬುದು ಬೆಳೆಗಾರರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT