ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಬೋಧರಂಗರ ಪಲ್ಲಕ್ಕಿ ಉತ್ಸವ

ಮೂಡಲಗಿ: ಖಾರೀಕು, ಬತ್ತಾಸು, ಹೂವು, ಹಣ್ಣು ಸಮರ್ಪಣೆ
Last Updated 26 ಏಪ್ರಿಲ್ 2018, 8:25 IST
ಅಕ್ಷರ ಗಾತ್ರ

ಮೂಡಲಗಿ: ಶಯನಾಯಿ, ಡೊಳ್ಳು, ಗಂಟೆಗಳ ನಾದ, ಜಾಂಝ್‌ಪಥ ವಾದ್ಯ ಮತ್ತು ತೋಪುಗಳ ಸಪ್ಪಳ ಸೇರಿದಂತೆ ವಿವಿಧ ವಾದ್ಯಗಳ ಅಬ್ಬರದಲ್ಲಿ ಭಾವೈಕ್ಯಕ್ಕೆ ಹೆಸರಾಗಿರುವ ಇಲ್ಲಿಯ ಶಿವಬೋಧರಂಗ ಸ್ವಾಮಿಯ ಪುಣ್ಯತಿಥಿಯ ಜಾತ್ರೆಯ ಪಲ್ಲಕ್ಕಿ ಉತ್ಸವವು ಬುಧವಾರ ಸಂಭ್ರಮದಿಂದ ಜರುಗಿತು.

ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಿಗ್ಗೆ ಸನ್ನಿಧಿಗೆ ಅಭಿಷೇಕ, ವಿಶೇಷ ಪೂಜೆಗಳು ಜರುಗಿತು. ಶ್ರೀಮಠದ ಪರಂಪರೆಯಂತೆ ಮಧ್ಯಾಹ್ನ ಮೇಲಿನ ಮಠದಿಂದ ಶಿವಬೋಧರಂಗರ ಮೂರ್ತಿ ಇರುವ ಅಲಂಕೃತ ಪಲ್ಲಕ್ಕಿಯು ಕೆಳಗಿನ ಮಠಕ್ಕೆ ಸಾಗುತ್ತಿದ್ದಂತೆ ಸಾವಿರಾರು ಭಕ್ತರು ‘ಶಿವಬೋಧರಂಗ ಮಹಾರಾಜಕೀ ಜೈ’ ಎನ್ನುವ ಮುಗಿಲು ಮುಟ್ಟುವ ಘೋಷಣೆಗಳು ಮೊಳಗಿದವು.

ಪಲ್ಲಕ್ಕಿ ಸಾಗುವ ದಾರಿಯಲ್ಲಿ ಖಾರೀಕು, ಬತ್ತಾಸು, ಹೂವು, ಹಣ್ಣುಗಳನ್ನು ಭಕ್ತರು ಸಮರ್ಪಿಸಿದರು. ಪಲ್ಲಕ್ಕಿಯು ಕೆಳಗಿನ ಮಠವನ್ನು ತಲುಪಿದ ನಂತರ ವಸಂತ ಪೂಜೆ, ಗುರುಮಂಡಲ ಪೂಜೆ, ಅನ್ನಪೂರ್ಣ ಪೂಜೆ ನಂತರ ಮಹಾನೈವೇದ್ಯ
ಮತ್ತು ಆರತಿ ಸೇವೆಗಳು ಜರುಗಿದವು. ಸಂಜೆ ಜರುಗಿದ ಮಹಾಪ್ರಸಾದದಲ್ಲಿ ಜಾತಿ, ಮತ, ಪಂಥ ಮತ್ತು ಮೇಲು, ಕೀಳು ಎನ್ನದೆ ಸಾವಿರಾರು ಜನರು ಭಾಗವಹಿಸಿ ಭಾವೈಕ್ಯ ಸಾರಿದರು.

ಹರಕೆ: ಜಾತ್ರೆಯ ನಿಮಿತ್ತ ಮಂಗಳವಾರ ರಾತ್ರಿಯಿಂದ ಹಿಡಿದು ಬುಧವಾರ ಬೆಳಿಗ್ಗೆ 7 ಗಂಟೆಯವರೆಗೆ ಭಕ್ತರು ದೀರ್ಘ ದಂಡ ನಮಸ್ಕಾರದ ಹರಕೆಯನ್ನು ತೀರಿಸಿದರು.

ಮೂಡಲಗಿ ಸೇರಿದಂತೆ ಇಟ್ನಾಳ, ಗುರ್ಲಾಪುರ, ಖಾನಟ್ಟಿ, ರಂಗಾಪುರ, ಕಮಲದಿನ್ನಿ, ಶಿವಾಪುರ, ಹಳ್ಳೂರ. ಪಟಗುಂದಿ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ ಭಕ್ತರು ಭಕ್ತಿಯಿಂದ ಹರಕೆ ಸಲ್ಲಿಸುವ ದೃಶ್ಯವು ಭಕ್ತಿಭಾವವನ್ನು ಬಿಂಬಿಸುತಿತ್ತು. ಕೆಲವರು ಯಲ್ಲಮ್ಮಾದೇವಿ ದೇವಸ್ಥಾನದಿಂದ ಕೆಳಗಿನ ಮಠಕ್ಕೆ ಹರಕೆ ತೀರಿಸಿದರೆ, ಇನ್ನು ಕೆಲವರು ಹತ್ತಾರ ಮೈಲುಗಳ ಅಂತರದಲ್ಲಿರುವ ತಮ್ಮ ಮನೆಯಿಂದ ಹರಕೆಯನ್ನು ತೀರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT