ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಗ್ಯ’ಗಳು ಕೈಹಿಡಿವ ವಿಶ್ವಾಸ

ನಿಪ್ಪಾಣಿ: ಕಾಂಗ್ರೆಸ್‌ನ ಕಾಕಾಸಾಹೇಬ ಪಾಟೀಲ ಹೇಳಿಕೆ
Last Updated 26 ಏಪ್ರಿಲ್ 2018, 8:32 IST
ಅಕ್ಷರ ಗಾತ್ರ

ಬೆಳಗಾವಿ: ‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಹಲವು ಜನಪರ ಯೋಜನೆಗಳಿಂದ ಈ ಬಾರಿಯ ಚುನಾವಣೆಯಲ್ಲಿ ನನಗೆ ಬಹಳ ಅನುಕೂಲವಾಗಿದೆ’ ಎನ್ನುವುದು ನಿಪ್ಪಾಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾಕಾಸಾಹೇಬ ಪಾಟೀಲ ಅವರ ಮಾತು.

ಕ್ಷೇತ್ರದಲ್ಲಿ ಅವರೂ ಸೇರಿದಂತೆ ಮುಖಂಡರಾದ ಲಕ್ಷ್ಮಣರಾವ್ ಚಿಂಗಲೆ, ವೀರಕುಮಾರ ಪಾಟೀಲ ಕೂಡ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಟಿಕೆಟ್‌ ಫೈಟ್‌ನಲ್ಲಿ ಗೆದ್ದಿರುವ ಕಾಕಾಸಾಹೇಬರು ಪ್ರಚಾರ ಆರಂಭಿಸಿದ್ದಾರೆ. ಇದೇ ಕ್ಷೇತ್ರದಲ್ಲಿ 1999, 2004 ಹಾಗೂ 2008ರಲ್ಲಿ ಸತತ ಮೂರು ಚುನಾವಣೆಯಲ್ಲೂ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದವರು. 2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ವಿರುದ್ಧ ಸೋತಿದ್ದರು. ಇದೀಗ ಮತ್ತೊಮ್ಮೆ ಅವರೊಂದಿಗೆ ಚುನಾವಣಾ ರಣಕಣದಲ್ಲಿನ ಪೈಪೋಟಿಗೆ ಇಳಿದಿದ್ದಾರೆ. ಬಿಡುವಿಲ್ಲದ ಪ್ರಚಾರದ ನಡುವೆಯೂ ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಚುನಾವಣಾ ವಾತಾವರಣ ಹೇಗಿದೆ?

ಮತದಾರರ ಬೆಂಬಲ ನಮ್ಮ ಕಡೆಗಿದೆ. ನಾನು ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ್ದ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಶಾಸಕರು ವಿಫಲವಾಗಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದಲ್ಲಿವೆ. ಇದರಿಂದಾಗಿ ಈ ಬಾರಿ ಗೆಲ್ಲುವುದಕ್ಕೆ ಎಲ್ಲ ರೀತಿಯ ಅವಕಾಶಗಳಿವೆ.

ಈ ವಿಶ್ವಾಸಕ್ಕೆ ಕಾರಣವೇನು?

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಸಾಮಾನ್ಯ ಜನರಿಗೆ ಬಹಳಷ್ಟು ಅನುಕೂಲವಾಗಿದೆ. ಒಂದಿಲ್ಲೊಂದು ಯೋಜನೆಯ ಲಾಭ ಪ್ರತಿ ಕುಟುಂಬವನ್ನೂ ತಲುಪಿದೆ. ಈ ಬಗ್ಗೆ ಜನರಿಗೆ ಸಮಾಧಾನವಿದೆ. ಸಿದ್ದರಾಮಯ್ಯ ಪರವಾದ ಅಲೆಯೂ ಇದೆ. ನಿಪ್ಪಾಣಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಿಸುವಲ್ಲಿ ನೆರವಾಗಿದ್ದೇವೆ. ಇದು ನನಗೆ ನೆರವಾಗಲಿದೆ. ಅಲ್ಲದೇ, ನಾನು 14 ವರ್ಷಗಳವರೆಗೆ ಶಾಸಕನಾಗಿದ್ದಾಗ ಮಾಡಿದ ಕೆಲಸಗಳನ್ನು ಜನರು ಸ್ಮರಿಸುತ್ತಿದ್ದಾರೆ. ಇದರಿಂದಾಗಿ ಮತ ಕೇಳುವುದಕ್ಕೆ ಧೈರ್ಯವಿದೆ. ಹೋದ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗೆ ಬೆಂಬಲ ನೀಡಿದ್ದ ಮುಖಂಡ, ಮಾಜಿ ಶಾಸಕ ಸುಭಾಸ ಜೋಶಿ ಅವರು ಈ ಬಾರಿ ನಮ್ಮೊಂದಿಗೆ ಬಂದಿರುವುದು ಹೆಚ್ಚಿನ ಬಲ ತುಂಬಿದೆ. ಸಂಸದ ಪ್ರಕಾಶ ಹುಕ್ಕೇರಿ, ಮುಖಂಡ ವೀರಕುಮಾರ ಪಾಟೀಲ, ಕಾಂಗ್ರೆಸ್‌ ಜಿಲ್ಲಾ ಘಟಕದ ಮುಖಂಡರು ಬೆಂಬಲ ನೀಡುತ್ತಿದ್ದಾರೆ. ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ ಅವರೂ ಕೈಜೋಡಿಸಿದ್ದಾರೆ. ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಾರಾಷ್ಟ್ರದ ಮುಖಂಡ ಶರದ ಪವಾರ್‌ ರಾಜ್ಯ ಸರ್ಕಾರದ ಬಗ್ಗೆ ಮೆಚ್ಚುಗೆಯ ಮಾತನಾಡಿ ಹೋಗಿದ್ದಾರೆ. ಇವೆಲ್ಲ ಕಾರಣಗಳಿಂದಾಗಿ ನನಗೆ ಬಹಳ ಅನುಕೂಲವಾಗಲಿದೆ. ಇಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಪುನಶ್ಚೇತನಗೊಳ್ಳಲಿದೆ ಎನ್ನುವ ಆತ್ಮವಿಶ್ವಾಸವಿದೆ.

ನೀವು ಗಮನಿಸಿದಂತೆ ಕ್ಷೇತ್ರದಲ್ಲಿರುವ ಸಮಸ್ಯೆಗಳೇನು?

ಇಲ್ಲಿ ಶಾಸಕರ ಪರಿಶ್ರಮದಿಂದಾಗಿ ವಿಶೇಷ ಕೆಲಸಗಳೇನೂ ನಡೆದಿಲ್ಲ. ಅಲ್ಲಲ್ಲಿ ಕೆಲವು ರಸ್ತೆಗಳನ್ನು ಮಾಡಿಸಲಾಗಿದೆ. ಬಹಳಷ್ಟು ಕಡೆ ಹಾಳಾಗಿವೆ. ನನ್ನ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಯಾವುದನ್ನೂ ಸಮರ್ಪಕವಾಗಿ ನಿರ್ವಹಿಸಿಲ್ಲ. ಕ್ಷೇತ್ರದ ಜನರು ಮೂಲಸೌಲಭ್ಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕನಸುಗಳೇನು?

ಸಮಗ್ರ ಅಭಿವೃದ್ಧಿಯೇ ನನ್ನ ಕನಸು. ಕೊಲ್ಲಾಪುರ–ನಿಪ್ಪಾಣಿ–ಬೆಳಗಾವಿ ರೈಲು ಮಾರ್ಗ ನಿರ್ಮಾಣ ನನ್ನ ಯೋಜನೆಯಾಗಿದೆ. ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಈ ಯೋಜನೆಯಿಂದ ಈ ಭಾಗದ ಜನರಿಗೆ ಬಹಳ ಅನುಕೂಲವಾಗಲಿದೆ. ನನ್ನ ನಂತರ ಬಂದ ಶಾಸಕರ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ನಾನು ಆಯ್ಕೆಯಾದಲ್ಲಿ ಅದಕ್ಕೆ ಮರುಜೀವ ನೀಡುತ್ತೇನೆ. ಸರ್ಕಾರದ ಯೋಜನೆಗಳ ಲಾಭ ಕ್ಷೇತ್ರಕ್ಕೆ ಸಮರ್ಪಕವಾಗಿ ದೊರೆಯುವಂತೆ ಮಾಡುತ್ತೇನೆ.

ಜನರು ನಿಮ್ಮನ್ನೇ ಬೆಂಬಲಿಸಬೇಕು ಏಕೆ?

ಮೂರು ಅವಧಿಯಲ್ಲಿ ಇಲ್ಲಿನ ಜನಪ್ರತಿನಿಧಿಯಾಗಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಸೋತರೂ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದೇನೆ. ಅವರ ಕಷ್ಟಗಳಿಗೆ ಪರಿಹಾರ ಒದಗಿಸಲು ಶ್ರಮಿಸಿದ್ದೇನೆ. ಕ್ಷೇತ್ರದಲ್ಲಿ ಪ್ರಗತಿಯ ಪರ್ವ ಮುಂದುವರಿಸುವುದಕ್ಕಾಗಿ ನನ್ನನ್ನು ಬೆಂಬಲಿಸಬೇಕು ಎಂದು ಜನರನ್ನು ಕೋರುತ್ತಾ ಮತ ಕೇಳುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT