ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ಬಿಸಿಲು: ಸೂರ್ಯಾಘಾತ ಆತಂಕ

ಎಚ್ಚರಿಕೆ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಲಹೆ
Last Updated 26 ಏಪ್ರಿಲ್ 2018, 8:59 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಬಿಸಿಲ ಪ್ರಖರತೆ ಹೆಚ್ಚುತ್ತಿದ್ದು, ಸಾರ್ವಜನಿಕರು ಸೂರ್ಯಾಘಾತ (ಸನ್‌ ಸ್ಟ್ರೋಕ್‌)ದಿಂದ ಪಾರಾಗಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಎ. ಜಬ್ಬಾರ್‌ ಸಲಹೆ ನೀಡಿದ್ದಾರೆ.

ಬೇಸಿಗೆಯಲ್ಲಿ ಸಡಿಲ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸಬೇಕು. ಮನೆ ಹೊರಗೆ ಹೋಗುವಾಗ ಕಡ್ಡಾಯವಾಗಿ ಕೊಡೆಯನ್ನು ಬಳಸಬೇಕು. ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಶುದ್ಧ ನೀರು ಸೇವಿಸಬೇಕು. ಆಗಾಗ ಉಪ್ಪು-ಸಕ್ಕರೆ ಮಿಶ್ರಿತ ನೀರು ಕುಡಿಯುವುದು ಒಳ್ಳೆಯದು ಎಂದು ತಿಳಿಸಿದ್ದಾರೆ.

ರಸ, ಪಾನಕಗಳು ಮತ್ತು ದ್ರವ ಆಹಾರ ಹೆಚ್ಚಾಗಿ ಸೇವಿಸಬೇಕು. ಕಾರ್ಬೋನೆಟೆಡ್ ಪಾನೀಯಗಳನ್ನು ತ್ಯಜಿಸಬೇಕು. ಕಾಫಿ, ಟೀ ಇತ್ಯಾದಿಯ ಸೇವನೆ ಸಾಧ್ಯವಾದಷ್ಟು ತಗ್ಗಿಸುವುದು ಸೂಕ್ತ ಎಂದು ಹೇಳಿದ್ದಾರೆ.

ಹತ್ತಿಯ ನುಣುಪಾದ ಬಟ್ಟೆಯಿಂದ ಬೆವರನ್ನು ಒರೆಸಿಕೊಳ್ಳಬೇಕು. ನೀರು, ಮಜ್ಜಿಗೆ, ಎಳೆನೀರು, ಕಲ್ಲಂಗಡಿ ಸೇವನೆ ಉತ್ತಮ. ಬೆಚ್ಚಗಿನ ಮಸಾಲೆ ರಹಿತ, ಶುದ್ಧ, ಸಾತ್ವಿಕ ಆಹಾರ ಸೇವಿಸಬೇಕು. ಗಾಳಿಯಾಡುವಂಥ ಪಾದರಕ್ಷೆ ಧರಿಸಬೇಕು ಎಂದು ತಿಳಿಸಿದ್ದಾರೆ.
ವ್ಯಕ್ತಿ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ಅವನನ್ನು ನೆರಳಿನ ಪ್ರದೇಶಕ್ಕೆ ಕರೆದುಕೊಂಡು ಹೋಗಬೇಕು. ಹಣೆ, ಕತ್ತು, ಪಾದಗಳನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು(ತಂಪಾದ ಅಥವಾ ಐಸ್ ನೀರು ಬಳಕೆ ಮಾಡುವಂತಿಲ್ಲ). ಬಳಿಕ ನಿಧಾನವಾಗಿ ಸಕ್ಕರೆ, ಉಪ್ಪು ಬೆರೆಸಿದ ನೀರು ಕುಡಿಸಬೇಕು. ಹತ್ತಿರದ ವೈದ್ಯರನ್ನು ಕರೆಸಬೇಕು. ಇಲ್ಲವೇ 108ಗೆ ಕರೆ ಮಾಡಬೇಕು ಎಂದು ಹೇಳಿದ್ದಾರೆ.

ಚರ್ಮ ಕೆಂಪಾದರೆ, ಬೆವರಿನ ಪ್ರಮಾಣ ಕಡಿಮೆಯಾದರೆ, ದೇಹದ ಉಷ್ಣತೆ ಜಾಸ್ತಿಯಾದರೆ, ದೀರ್ಘವಾದ ತೀವ್ರ ಉಸಿರಾಟವಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.

ಬಿಗಿಯಾದ ಗಾಢ ಬಣ್ಣದ ಸಿಂಥೆಟಿಕ್ ಬಟ್ಟೆ ಧರಿಸಬಾರದು. ಬಿಸಿಲಿನಲ್ಲಿ ಮನೆಗೆ ಹೋದ ತಕ್ಷಣ ಗಟಗಟನೆ ತಣ್ಣನೆಯ ನೀರು ಕುಡಿಯಬಾರದು. ಅತಿಯಾಗಿ ಊಟ ಸೇವಿಸಬಾರದು. ಬಾಯಾರಿಕೆಯಾದಾಗಲೆಲ್ಲ ಕಡ್ಡಾಯವಾಗಿ ನೀರು ಕುಡಿಯಬೇಕು. ಐಸ್‌ಕ್ರೀಂ ಮತ್ತು ಫ್ರಿಡ್ಜ್‌ನಲ್ಲಿಯ ನೀರಿನ ಸೇವನೆ ತಗ್ಗಿಸಬೇಕು. ಸೋಡಾ ಮತ್ತಿತರ ಕಾರ್ಬೋನೆಟೆಡ್ ತಂಪು ಪಾನಿಯಗಳನ್ನು ಸೇವಿಸಬಾರದು ಎಂದು ಹೇಳಿದ್ದಾರೆ.

ಬಿಸಿಯಾದ ಮಸಾಲೆಯುಕ್ತ ಆಹಾರ ತಿನ್ನಬಾರದು. ಮಾಂಸಾಹಾರ ವರ್ಜಿಸಿ, ಮದ್ಯಪಾನ ತ್ಯಜಿಸುವುದು ಸೂಕ್ತ. ಉಷ್ಣತೆಯಿಂದ ಸುಸ್ತಾದ ವ್ಯಕ್ತಿಯನ್ನು ತುಂಬಾ ತಣ್ಣಗಿನ ಅಥವಾ ಶೀಥಲೀಕರಿಸಿದ ನೀರಿನಿಂದ ಒರೆಸಬಾರದು. ಇದರಿಂದ ವ್ಯಕ್ತಿಯ ದೇಹದ ಹೊರಪದರದಲ್ಲಿನ ರಕ್ತನಾಳಗಳು ಸಂಕುಚಿತಗೊಂಡು ದೇಹದ ಒಳಗಿನ ಉಷ್ಣತೆ ದೇಹದೊಳಗೆ ಬಂಧಿತವಾಗಿ ಆತನ ಅಂಗಾಂಗಳು ನಿಷ್ಕ್ರೀಯಗೊಂಡು, ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇರುತ್ತದೆ. ಸೂರ್ಯಾಘಾತ ಅಥವಾ ಉಷ್ಣಾಘಾತಗಳಿಂದ ತೊಂದರೆಗಳು ಸಂಭವಿಸಿದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ಬಿಸಿಲಿನ ಆಘಾತದಿಂದ ಯಾರಾದರೂ ತೊಂದರೆಗೊಳಗಾದರೆ ತಮ್ಮ ಗ್ರಾಮಗಳಲ್ಲಿರುವ ಮಹಿಳಾ ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರ ನೆರವಿನಿಂದ ಓಆರ್‍ಎಸ್ ದ್ರಾವಣದ ಪೊಟ್ಟಣ ಪಡೆದು ಒಂದು ಲೀಟರ್ ನೀರಿಗೆ ಒಂದು ಪುಡಿಯಂತೆ ಬೆರೆಸಿ ಮೇಲಿಂದ ಮೇಲೆ ಕುಡಿಯುವುದರಿಂದ ನಿರ್ಜಲೀಕರಣದಿಂದ ಪಾರಾಗಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT