ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಗಳ ಪ್ರತಿಮೆಗೆ ಇಲ್ಲ ರಕ್ಷಣೆ

ಬಿಆರ್‌ಟಿ ವನ್ಯಧಾಮದ ಚೆಕ್‌ಪೋಸ್ಟ್‌ ಬಳಿ ನಿರ್ಮಿಸಿರುವ ಆಕೃತಿಗಳು
Last Updated 26 ಏಪ್ರಿಲ್ 2018, 9:19 IST
ಅಕ್ಷರ ಗಾತ್ರ

ಯಳಂದೂರು: ಬಿಆರ್‌ಟಿ ವನ್ಯಧಾಮದ ಚೆಕ್‌ಪೋಸ್ಟ್‌ ಬಳಿ ನಿರ್ಮಿಸಿರುವ ಕಾಡು ಪ್ರಾಣಿಗಳ ಪ್ರತಿಮೆಗಳ ಬಳಿ ಪ್ರವಾಸಿಗರು ಫೋಟೊ ತೆಗೆಸಿಕೊಳ್ಳುವ ಭರದಲ್ಲಿ ಪ್ರತಿಮೆಗಳನ್ನು ವಿರೂಪಗೊಳಿಸುತ್ತಿದ್ದಾರೆ.

ಬಿಆರ್‌ಟಿ ವನ್ಯಧಾಮವು ಹುಲಿ ಸಂರಕ್ಷಿತ ಪ್ರದೇಶವಾಗಿದ್ದು 2011 ರಲ್ಲಿ ಹುಲಿಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ. ಅರಣ್ಯದಲ್ಲಿ ಪ್ರಮುಖವಾಗಿ ಹುಲಿ, ಆನೆ, ಚಿರತೆ, ಕರಡಿ, ಜಿಂಕೆ, ಕಾಡೆಮ್ಮೆ ಸೇರಿದಂತೆ ಇತರೆ ಪ್ರಾಣಿಗಳ ಸಂಕುಲ, ಅಪಾರ ಔಷಧಿ ಸಸ್ಯಗಳ ಸಂಕುಲದ ತಾಣವು ಹೌದು.

ವನ್ಯಧಾಮಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜುಲೈ 2016 ರಲ್ಲಿ ಸುಮಾರು ₹ 3.5 ಲಕ್ಷ ವೆಚ್ಚದಲ್ಲಿ ಹುಲಿ, ಚಿರತೆ, ಆನೆ, ಕಾಡೆಮ್ಮೆ, ಕಾಡುಕುರಿಗಳ ಆಕೃತಿಗಳನ್ನು ನಿರ್ಮಿಸಲಾಗಿದೆ. ಬಿಳಿಗಿರಿರಂಗನಬೆಟ್ಟಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹೋಗುತ್ತಾರೆ. ಈ ವೇಳೆ ಅವರು ಚೆಕ್‌ಪೋಸ್ಟ್ ಪಕ್ಕ ನಿರ್ಮಿಸಿರುವ ಕಾಡು ಪ್ರಾಣಿಗಳ ಪ್ರತಿಮೆಗಳ ಬಳಿ ಫೋಟೊ ತೆಗೆಸಿಕೊಳ್ಳುತ್ತಾರೆ. ಅವುಗಳ ಸುತ್ತ ಸರಪಳಿ ಹಾಕಿದ್ದರೂ ಪ್ರವಾಸಿಗರು ಅದನ್ನು ದಾಟಿ  ಬಳಿ ಹೋಗುತ್ತಾರೆ. ಈ ವೇಳೆ ಪ್ರತಿಮೆಗಳನ್ನು ಒತ್ತಿ ಹಿಡಿಯುವುದು, ಅವುಗಳ ಮೇಲೆ ಕೂರುವುದು ಮಾಡುತ್ತಾರೆ. ಇದರಿಂದ ಕೆಲ ಪ್ರಾಣಿಗಳ ಪ್ರತಿಮೆಗಳಲ್ಲಿ ಕೆಲವು ಭಾಗಗಳು ವಿರೂಪಗೊಂಡಿವೆ.

ಕಂಡು ಕಾಣದಂತಿರುವ ಇಲಾಖೆ ಸಿಬ್ಬಂದಿ: ನಿತ್ಯ ನೂರಾರು ವಾಹನಗಳನ್ನು ತಪಾಸಣೆ ಮಾಡಿ ಬೆಟ್ಟಕ್ಕೆ ಬಿಡಲಾಗುತ್ತದೆ. ಈ ವೇಳೆ ಇಲಾಖೆಯ ಸಿಬ್ಬಂದಿ ಪಕ್ಕದಲ್ಲಿಯೇ ಇದ್ದರು ಪ್ರವಾಸಿಗರು ಪ್ರಾಣಿಗಳ ಪ್ರತಿಮೆಗಳ ಮೇಲೆ ಕುಳಿತು ಫೋಟೊ ತೆಗೆಸಿಕೊಳ್ಳುತ್ತಾರೆ. ಆದರೆ ಯಾವೊಬ್ಬ ಸಿಬ್ಬಂದಿಯೂ ಇದನ್ನು ತಡೆಯಲು ಮುಂದಾಗುತ್ತಿಲ್ಲ ಎನ್ನುವುದು ಪ್ರವಾಸಿಗರಾದ ಪ್ರಕಾಶ, ಶಂಕರ ಅವರ ಆರೋಪ.

‘ಚೆಕ್‌ಪೋಸ್ಟ್‌ನಲ್ಲಿ ನಿರ್ಮಾಣಗೊಂಡಿರುವ ಕಾಡುಪ್ರಾಣಿಗಳ ಪ್ರತಿಕೃತಿಗಳ ಬಗ್ಗೆ ನಮ್ಮ ಇಲಾಖೆಯ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ. ಆದರೂ ಕೆಲವು ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಆದಷ್ಟು ಬೇಗ ಅವುಗಳ ದುರಸ್ತಿಗೆ ಕ್ರಮ ವಹಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಮಹಾದೇವಯ್ಯ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT