ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಸ್ವೇಚ್ಛೆಯಾಗದಂತೆ ಎಚ್ಚರವಹಿಸಿ

ವಿದುರಾಶ್ವತ್ಥ ವೀರಸೌಧ ಚಿತ್ರವುಳ್ಳ ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಕೋಡಿರಂಗಪ್ಪ ಅಭಿಮತ
Last Updated 26 ಏಪ್ರಿಲ್ 2018, 9:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಲಕ್ಷಾಂತರ ಹೋರಾಟಗಾರರು ರಕ್ತ ಬಸಿದು, ತ್ಯಾಗ ಬಲಿದಾನಗಳ ಮೂಲಕ ತಂದು ಕೊಟ್ಟಿರುವ ಸ್ವಾತಂತ್ರ್ಯದ ಬೆಲೆ ಅಮೂಲ್ಯವಾದ್ದದ್ದು. ಹೀಗಾಗಿ ಪ್ರತಿಯೊಬ್ಬರೂ ಜವಾಬ್ದಾರಿಯುತ ಪ್ರಜೆಗಳಾಗಿ ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗದಂತೆ ಬಳಸಿಕೊಳ್ಳಬೇಕು’ ಎಂದು ಶಿಕ್ಷಣ ತಜ್ಞ ಕೋಡಿರಂಗಪ್ಪ ಹೇಳಿದರು.

ನಗರ ಹೊರವಲಯದ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದ ಧ್ವಜ ಸತ್ಯಾಗ್ರಹಕ್ಕೆ 80 ವರ್ಷಗಳು ತುಂಬಿದ ಪ್ರಯುಕ್ತ ವಿದುರಾಶ್ವತ್ಥ ಸ್ವತಂತ್ರ ಸ್ಮಾರಕ ಅಭಿವೃದ್ಧಿ ಸಮಿತಿ ಮತ್ತು ಅಂಚೆ ಇಲಾಖೆ ಸಹಯೋಗದಲ್ಲಿ ಹೊರತಂದ ವಿದುರಾಶ್ವತ್ಥ ವೀರಸೌಧ ಚಿತ್ರವುಳ್ಳ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮತ್ತು ಸ್ವಿಪ್ ಸಮಿತಿಯಿಂದ ಮತದಾನದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತ ಸ್ವತಂತ್ರ್ಯ ಹೋರಾಟಕ್ಕೆ ಬ್ರಿಟಿಷರನ್ನು ಈ ದೇಶದಿಂದ ತೊಲಗಿಸುವುದು ಮತ್ತು ಆಂತರಿಕವಾಗಿ ದೇಶವನ್ನು ಒಂದುಗೂಡಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎನ್ನುವ ಎರಡು ಮುಖ್ಯ ಆಶಯಗಳಿದ್ದವು. ಊಳಿಗಮಾನ್ಯ ವ್ಯವಸ್ಥೆಯಿಂದ ಈ ದೇಶವನ್ನು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪರಿವರ್ತಿಸಿದ ಸ್ವಾತಂತ್ರ್ಯ ಸಂಗ್ರಾಮ ಎಲ್ಲ ವರ್ಗಗಳ ಜನರನ್ನು ಒಳಗೊಂಡಿತ್ತು’ ಎಂದು ಹೇಳಿದರು.

‘ಇಡೀ ದೇಶದಲ್ಲಿ ವ್ಯಾಪಕವಾಗಿ ಹರಡಿದ ಸ್ವಾತಂತ್ರ್ಯ ಹೋರಾಟದ ಪ್ರೇರಣೆಯಿಂದ ವಿದುರಾಶ್ವತ್ಥದಲ್ಲಿ ಕೂಡ ದೊಡ್ಡ ಚಳವಳಿಯೇ ನಡೆದು ಅನೇಕರು ಹುತಾತ್ಮರಾದರು. ಸ್ವಾತಂತ್ರ್ಯ ನಮಗೆ ಸುಮ್ಮನೆ ಬಂದಿಲ್ಲ. ಅದಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ನಾವು ಸದಾ ಸ್ಮರಿಸಬೇಕು’ ಎಂದು ತಿಳಿಸಿದರು.

ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುರೇಶ್ ಬಾಬು ಮಾತನಾಡಿ, ‘ಚರಿತ್ರೆಯನ್ನು ಆವೇಶದ ಬದಲು ಕಥೆಯಂತೆ ಓದಬೇಕು. ಭಾವನೆಗಳಿಗೆ ಪ್ರಚೋದನೆ ಕೊಡದೆ ಚರಿತ್ರೆಯ ಅಂಶಗಳನ್ನು ನಾವು ಗ್ರಹಿಸಬೇಕಾಗಿದೆ. ಮಹಾಭಾರತ ಕಾವ್ಯದಲ್ಲಿ ಉಲ್ಲೇಖಿತವಾಗಿರುವ ವಿದುರಾಶ್ವತ್ಥ ಹಿಂದೂಗಳಿಗೆ ಪವಿತ್ರ ಯಾತ್ರಾ ಸ್ಥಳವಾಗಿದೆ. ಅಂತಹ ಪವಿತ್ರ ಸ್ಥಳದಲ್ಲಿ ಮಡಿದವರ ಸ್ಮರಣೆ ಮಾಡುವಂತಹ ಈ ಕೆಲಸ ಶ್ಲಾಘನೀಯವಾದ್ದದ್ದು’ ಎಂದರು.

ಚುನಾವಣಾ ನೋಡಲ್‌ ಅಧಿಕಾರಿ ಗುರುದತ್‌ ಹೆಗಡೆ ಮಾತನಾಡಿ, ‘ಅಂಚೆ ಇಲಾಖೆ ಒಂದು ರೀತಿಯ ಒಂದು ವಸ್ತು ಸಂಗ್ರಹಾಲಯವಿದ್ದಂತೆ. ಅನೇಕ ದಶಕಗಳಿಂದ ಈ ಇಲಾಖೆ ದೇಶಕ್ಕೆ ದೊಡ್ಡ ಸೇವೆ ನೀಡಿದೆ. ಇವತ್ತು ವಿದುರಾಶ್ವತ್ಥದ ವೀರ ಪುರುಷರ ಚರಿತ್ರೆಯನ್ನು ಗೌರವಿಸುವಂತಹ ಕೆಲಸವನ್ನು ಅಂಚೆ ಇಲಾಖೆ ಮಾಡಿ, ಅದರ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಮುಂದಾಗಿರುವುದು ಅಭಿನಂದನೀಯ’ ಎಂದು ಹೇಳಿದರು.

‘ಮೇ 12 ರಂದು ನಡೆಯುವ ವಿಧಾನಸಭೆ ಚುನಾವಣೆ ಮತದಾನದಲ್ಲಿ ಎಲ್ಲ ಅರ್ಹ ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಕಡ್ಡಾಯವಾಗಿ ನೈತಿಕ ಮತದಾನ ಮಾಡಬೇಕು. ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.

ಚಿಂತಕ ಪ್ರೊ.ಗಂಗಾಧರ ಮೂರ್ತಿ, ಕಾಲೇಜಿನ ಪ್ರಾಂಶುಪಾಲೆ ಲೀಲಾವತಿ, ಅಂಚೆ ಇಲಾಖೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ವಿಭಾಗದ ಹಿರಿಯ ಸೂಪರಿಂಟೆಂಡೆಂಟ್ ಬಿ.ಎಸ್‌.ಉಮೇಶ್, ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯ ಸಹಾಯಕ ನಿರ್ದೇಶಕ ಅನಂತರಾಮ, ಅಂಚೆ ಚೀಟಿ ಸಂಗ್ರಹಕಾರ ವರಳನಾಥ ಭಟ್ ಉಪಸ್ಥಿತರಿದ್ದರು.

**
ವಿದ್ಯಾರ್ಥಿಗಳು ಬರೀ ಪಠ್ಯದ ಓದಿಗೆ ಸೀಮಿತರಾಗಬಾರದು. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಹೋರಾಟಗಾರರ ಬಗ್ಗೆ ತಿಳಿದುಕೊಳ್ಳಬೇಕು
ಕೋಡಿರಂಗಪ್ಪ, ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT