ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾತಂತ್ರ ಧರ್ಮ, ಸಂವಿಧಾನ ಧರ್ಮಗ್ರಂಥ

ಅಂಬೇಡ್ಕರ್‌ ಜಯಂತ್ಯುತ್ಸವ: ‘ಎತ್ತ ಸಾಗುತ್ತಿದೆ ಭಾರತ?’ ಕಾರ್ಯಕ್ರಮ
Last Updated 26 ಏಪ್ರಿಲ್ 2018, 9:46 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಜಾತಿ ಹೆಸರಿನಲ್ಲಿ ಮತಕೇಳುವವರು, ಆಮಿಷ ಒಡ್ಡುವವರನ್ನು ದೂರ ಇಡಿ. ನಿಮ್ಮ ಮನಸ್ಸಿಗೆ ಉತ್ತಮ ಎನಿಸಿದವರಿಗೆ ಮಾತ್ರ ವೋಟು ಹಾಕಿ’ ಎಂದು ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದರಾವ್‌ ಕಿವಿಮಾತು ಹೇಳಿದರು.

ದಲಿತ ಸಂಘರ್ಷ ಸಮಿತಿ, ಪ್ರಗತಿಪರ ಸಂಘಟನೆಗಳ ವೇದಿಕೆ ವತಿಯಿಂದ ಅಂಬೇಡ್ಕರ್‌ ಜಯಂತ್ಯುತ್ಸವದ ಅಂಗವಾಗಿ ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ‘ಎತ್ತ ಸಾಗುತ್ತಿದೆ ಭಾರತ?’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಜನರಿಗೆ ಮತದಾನದ ಹಕ್ಕು ಇರುವುದ ರಿಂದಲೇ ರಾಜಕಾರಣಿಗಳು ಚುನಾವಣೆ ಬಂದಾಗ ನಮ್ಮನ್ನು ಹಿಂಬಾಲಿಸುವುದು. ವೋಟಿಗಾಗಿ ಹಣದ ಆಮಿಷವೊಡ್ಡಿದರೆ, ಇಷ್ಟೊಂದು ದುಡ್ಡು ಎಲ್ಲಿಂದ ಬಂದಿದ್ದು ಎಂದು ಅವರನ್ನು ಪ್ರಶ್ನೆ ಮಾಡಿ. ಮತವನ್ನು ಮಾರಿಕೊಳ್ಳಬೇಡಿ’ ಎಂದು ಸಲಹೆ ನೀಡಿದರು.

‘ವೋಟು ಮಾಡುವ ಹಕ್ಕನ್ನು ಎಲ್ಲರಿಗೂ ಕೊಡುವುದು ಬೇಡ ಎಂದು ಅಂಬೇಡ್ಕರ್‌ ಅವರಿಗೆ ಸಂವಿಧಾನ ರಚನಾ ಸಮಿತಿಯ ಸದಸ್ಯರೊಬ್ಬರು ಹೇಳಿದ್ದರಂತೆ. ಕೆಲವರಿಗೆ ವೋಟಿನ ಹಕ್ಕನ್ನು ನಿರಾಕರಿಸಿದರೆ ಯಾವುದಕ್ಕಾಗಿ ಬದುಕನ್ನು ವ್ಯಯಿಸಿದ್ದೆನೋ ಅದನ್ನು ನಾನೇ ನಂಬದಂತೆ ಎಂದು ಅಂಬೇಡ್ಕರ್‌ ಆ ಸದಸ್ಯರಿಗೆ ತಿಳಿಸಿದ್ದರಂತೆ. ವಿಚಾರ ಮಾಡುವ ಹಕ್ಕನ್ನು ಸಂವಿಧಾನವು ನಮಗೆ ನೀಡಿದೆ. ಪ್ರಜಾತಂತ್ರವೇ ಧರ್ಮ, ಸಂವಿಧಾನವೇ ಧರ್ಮಗ್ರಂಥ’ ಎಂದು ಪ್ರತಿಪಾದಿಸಿದರು.

‘ಚುನಾವಣೆ ಬಗ್ಗೆ ನಾವೆಲ್ಲರೂ ಯೋಚಿಸಬೇಕು. ಭ್ರಷ್ಟಾಚಾರ, ಮಾನಸಿಕ ಭ್ರಷ್ಟಾಚಾರ ಎಷ್ಟು ನೀಚವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ದಲಿತರನ್ನು ಉದ್ಧಾರ ಮಾಡಿದ್ದೇವೆ ಎಂದು ಸುಮ್ಮನೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಏಕೆಂದರೆ ದಲಿತರ ವೋಟು ಶೇ 29 ರಷ್ಟಿದೆ’ ಎಂದು ಹೇಳಿದರು.

‘ಭಗವದ್ಗೀತೆ, ಉಪನಿಷತ್ತುಗಳು ಪ್ರಶ್ನಿಸುವ ಹಕ್ಕನ್ನು ನೀಡಿಲ್ಲ. ವಿಚಾರ ಮಾಡುವಂತೆ ಇಲ್ಲ, ಅದು ಇದ್ದಂತೆ ಒಪ್ಪಿಕೊಳ್ಳಬೇಕು. ಅದಕ್ಕೆ ಅಂಬೇಡ್ಕರ್‌ ಅವರು ಮನು ಧರ್ಮಶಾಸ್ತ್ರವನ್ನು ಸುಟ್ಟುಹಾಕಿದರು. ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯುವುದಿಲ್ಲ ಎಂದು ಅವರು ಹೇಳಿದ್ದರು. ನಾನು ಹಿಂದೂವಾಗಿ ಹುಟ್ಟಿದ್ದೇನೆ, ಮನುಷ್ಯನಾಗಿ ಸಾಯುತ್ತೇನೆ. ನನಗಿರುವುದು ಮನುಷ್ಯ ಧರ್ಮ ಮಾತ್ರ’ ಎಂದು ಹೇಳಿದರು.

‘ದಲಿತರಲ್ಲಿ ಇಂದಿಗೂ ಕೀಳರಿಮೆ ಇದೆ. ಅದು ನಿವಾರಣೆಯಾಗಬೇಕು. ಎಲ್ಲರೂ ಮನುಷ್ಯರು ಎಂಬ ಭಾವನೆ ಮೂಡಬೇಕು’ ಎಂದರು. ‘ಅಂಬೇಡ್ಕರ್‌ ಜಯಂತ್ಯುತ್ಸವ ಎಂದರೆ ಅವರ ಚಿಂತನೆ, ವಿಚಾರಧಾರೆ, ಆದರ್ಶಗಳನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರ್ಥ. ಅಂಬೇಡ್ಕರ್‌ ಅವರ ವಿಚಾರಗಳನ್ನು ಓದಿಕೊಳ್ಳಬೇಕು’ ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರೆಗೋಡು ಮಾತನಾಡಿ, ‘ಸಂವಿಧಾನ ಬದಲಾಯಿಸಬೇಕು, ಮೀಸಲಾತಿ ಬದಲಾಯಿಸಬೇಕು ಎಂಬ ಹುನ್ನಾ ರಗಳು ನಡೆಯುತ್ತಿವೆ. ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ಉಳಿವಿಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ’ ಎಂದು ಎಚ್ಚರಿಸಿದರು.

ದಸಂಸ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಅರಣ್ಯ–ವಸತಿ ವಿಹಾರಧಾಮ ನಿಗಮದ ಅಧ್ಯಕ್ಷ ಎ.ಎನ್‌.ಮಹೇಶ್‌, ಮುಖಂಡರಾದ ಎಂ.ಬಿ.ಶ್ರೀನಿವಾಸ್‌, ರಾಜರತ್ನಂ, ದಂಟರಮಕ್ಕಿ ಶ್ರೀನಿವಾಸ್‌, ಸಿದ್ದಲಿಂಗಯ್ಯ, ಅಂಗಡಿಚಂದ್ರು, ಕೆ.ಜೆ.ಮಂಜುನಾಥ್‌ ಅವರು ಈ ವೇಳೆ ಉಪಸ್ಥಿತರಿದ್ದರು.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ

‘ಪ್ರಧಾನಿ ಮೋದಿ ಎದುರು ಯಾರೂ ತುಟಿ ಬಿಚ್ಚುತ್ತಿಲ್ಲ. ಎಲ್ಲರನ್ನೂ ಅವರು ಹೆದರಿಸಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣ ಇದೆ. ಗರಿಷ್ಠ ಮುಖಬೆಲೆ ನೋಟು ಅಮಾನ್ಯ, ಸರಕು ಸೇವಾ ತೆರಿಗೆ ಪದ್ಧತಿ (ಜಿಎಸ್‌ಟಿ) ಜಾರಿಯಿಂದ ಜನಸಾಮಾನ್ಯರು ತೊಂದರೆ ಅನುಭವಿಸಿದರು. ಒಳಜಗಳ ಸೃಷ್ಟಿಸಿ, ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿಕಟ್ಟಿ ಒಡೆದು ಆಳುವ ನೀತಿಯನ್ನು ಬಿಜೆಪಿ ಮಾಡುತ್ತಿದೆ’ ಎಂದು ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದರಾವ್‌ ದೂಷಿಸಿದರು.

**
ಕೋಮುವಾದಿಗಳು, ಜಾತಿವಾದಿಗಳ ಧ್ರುವೀಕರಣ ನಡೆಯುತ್ತಿದ್ದು, ಅದನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ಕೆಲಸವನ್ನು ಮಾಡಬೇಕಿದೆ
ಗುರುಪ್ರಸಾದ್‌ ಕೆರೆಗೋಡು, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT