ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಕ್ಷೇತ್ರಗಳಲ್ಲಿ 17 ನಾಮಪತ್ರ ತಿರಸ್ಕೃತ

114 ಅಭ್ಯರ್ಥಿಗಳ ಸ್ಪರ್ಧೆ, 160 ನಾಮಪತ್ರಗಳು ಅಂಗೀಕಾರ
Last Updated 26 ಏಪ್ರಿಲ್ 2018, 10:09 IST
ಅಕ್ಷರ ಗಾತ್ರ

ದಾವಣಗೆರೆ: ವಿಧಾನಸಭಾ ಚುನಾವಣೆಗೆ ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಬುಧವಾರ ನಡೆದಿದ್ದು, 17 ತಿರಸ್ಕೃತಗೊಂಡಿವೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಂದ 114 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 160 ನಾಮಪತ್ರಗಳು ಅಂಗೀಕಾರವಾಗಿವೆ.

ದಾವಣಗೆರೆ ದಕ್ಷಿಣ: ಒಟ್ಟು 12 ಅಭ್ಯರ್ಥಿಗಳಿದ್ದು, 18 ನಾಮಪತ್ರಗಳು ಅಂಗೀಕಾರವಾಗಿವೆ. 1 ತಿರಸ್ಕೃತಗೊಂಡಿದೆ. ಬಿಜೆಪಿಯಿಂದ ಎಚ್‌.ಎಸ್‌. ನಾಗರಾಜ್ ನಾಮಪತ್ರ ಸಲ್ಲಿಸಿದ್ದರು. ಆದರೆ, ‘ಬಿ’ ಫಾರಂ ಸಲ್ಲಿಸದ ಕಾರಣ ಅದು ತಿರಸ್ಕೃತಗೊಂಡಿದೆ. ಇವರೇ ಸ್ವತಂತ್ರ ಅಭ್ಯರ್ಥಿಯಾಗಿ ಸಲ್ಲಿಸಿದ ಇನ್ನೊಂದು ನಾಮಪತ್ರ ಅಂಗೀಕೃತವಾಗಿದೆ ಎಂದು ಚುನಾವಣಾಧಿಕಾರಿ ಇಸ್ಲುದ್ದೀನ್ ಗದ್ಯಾಳ್‌ ತಿಳಿಸಿದರು.

ದಾವಣಗೆರೆ ಉತ್ತರ: 15 ಅಭ್ಯರ್ಥಿಗಳ 19 ನಾಮಪತ್ರಗಳು ಅಂಗೀಕಾರವಾಗಿದ್ದು, 4 ತಿರಸ್ಕೃತಗೊಂಡಿವೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವರಾಜ್‌ ‘ಬಿ’ ಫಾರಂ ಸಲ್ಲಿಸದ ಕಾರಣ ತಿರಸ್ಕೃತಗೊಳಿಸಲಾಗಿದೆ. ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದವರಲ್ಲಿ ಮಂಜುನಾಥ, ಸುಭಾನ್ ಖಾನ್‌ ಅವರು ಅಗತ್ಯ ಸಂಖ್ಯೆಯ ಸೂಚಕರ ಸಹಿ ಪಡೆದಿರಲಿಲ್ಲ. ಇನ್ನೊಬ್ಬ ಪಕ್ಷೇತರ ಅಭ್ಯರ್ಥಿ ಚಂದ್ರಪ್ಪ ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಅವರ ನಾಮಪತ್ರ ತಿರಸ್ಕೃತ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಯೋಗಾನಂದ ತಿಳಿಸಿದರು.

ಮಾಯಕೊಂಡ; ತಿರಸ್ಕೃತ ಇಲ್ಲ ಮಾಯಕೊಂಡದಲ್ಲಿ 16 ಅಭ್ಯರ್ಥಿಗಳಿಂದ 16 ನಾಮಪತ್ರ ಅಂಗೀಕಾರವಾಗಿವೆ. ಯಾವುದೂ ತಿರಸ್ಕೃತವಾಗಿಲ್ಲ.

ಹೊನ್ನಾಳಿ ಒಂದು ನಾಮಪತ್ರ ತಿರಸ್ಕೃತ

ಹೊನ್ನಾಳಿ: ವಿಧಾನಸಭಾ ಕ್ಷೇತ್ರದ ಚುನಾವಣೆಗೆ 31 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಪಕ್ಷೇತರ ಅಭ್ಯರ್ಥಿ ಎಲ್.ಎಚ್. ಪಾಟೀಲ್ ಅವರ ಎರಡು ನಾಮಪತ್ರಗಳ ಪೈಕಿ ಒಂದು ನಾಮಪತ್ರ ತಿರಸ್ಕೃತವಾಗಿದೆ. ಉಳಿದ 30 ನಾಮಪತ್ರಗಳು ಸಿಂಧುವಾಗಿವೆ ಎಂದು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕ ವಿ.ಕೆ. ಧವೆ ತಿಳಿಸಿದರು.

ಬುಧವಾರ ನಾಮಪತ್ರ ಪರಿಶೀಲನೆ ನಡೆಸಿದ ಬಳಿಕ ಅವರು ಮಾಹಿತಿ ನೀಡಿ, ಏ.27ರಂದು ಮಧ್ಯಾಹ್ನ 3 ಗಂಟೆಯವರೆಗೂ ನಾಮಪತ್ರ ಹಿಂಪಡೆಯಲು ಅವಕಾಶವಿದೆ ಎಂದು ಅವರು ತಿಳಿಸಿದರು.

ಚುನಾವಣೆಗೆ ಅನರ್ಹ: ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಡಾ.ಡಿ.ಸೀತಾನಾಯ್ಕ ಮಾಚಿಗೊಂಡನಹಳ್ಳಿ ಅವರು ಚುನಾವಣಾ ಆಯೋಗಕ್ಕೆ ಲೆಕ್ಕಪತ್ರ ನೀಡಿರಲಿಲ್ಲ ಎಂಬ ಕಾರಣಕ್ಕೆ ಅವರನ್ನು ಅನರ್ಹಗೊಳಿಸಲಾಗಿದೆ. ಅವರು ಮಾರ್ಚ್‌ 26, 2018ರಿಂದ ಮುಂದಿನ 3 ವರ್ಷಗಳವರೆಗೆ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ ಎಂದು ಸಹಾಯಕ ಚುನಾವಣಾಧಿಕಾರಿ ತುಷಾರ ಬಿ.ಹೊಸೂರು ಹೇಳಿದರು.

20 ನಾಮಪತ್ರ ಸಿಂಧು

ಹರಿಹರ: ನಗರದ ಮಿನಿವಿಧಾನಸೌಧದಲ್ಲಿ ಇರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ನಾಮಪತ್ರ ಪರಿಶೀಲನೆಯಲ್ಲಿ 12 ಅಭ್ಯರ್ಥಿಗಳಿಂದ ಸಲ್ಲಿಕೆಯಾದ 20 ನಾಮಪತ್ರಗಳು ಸಿಂಧುಗೊಂಡಿವೆ. ಲೋಕ್ ಅವಾಜ್ ದಳದ ಅಭ್ಯರ್ಥಿ ಎಂ. ರಾಜಾಸಾಬ್ ಅವರ ನಾಮಪತ್ರ ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿದೆ.

ಪರಿಶೀಲನೆಯಲ್ಲಿ ಸ್ವೀಕೃತವಾದ ಅಭ್ಯರ್ಥಿಗಳ ಹೆಸರು ಮತ್ತು ಪಕ್ಷದ ವಿವರಗಳು ಕೆಳಗಿನಂತಿವೆ. ಕಾಂಗ್ರೆಸ್ ಅಭ್ಯರ್ಥಿ ಎಸ್. ರಾಮಪ್ಪ, ಬಿಜೆಪಿ ಅಭ್ಯರ್ಥಿ ಬಿ.ಪಿ. ಹರೀಶ್, ಜೆಡಿಎಸ್ ಅಭ್ಯರ್ಥಿ ಎಚ್.ಎಸ್. ಶಿವಶಂಕರ, ಐಎನ್‍ಸಿಪಿ ಪಕ್ಷದ ಅಭ್ಯರ್ಥಿ ಪಿ. ಬೀರಪ್ಪ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್ ಲೆನಿನಿಸ್ಟ್ ಲಿಬರೇಶನ್) ಅಭ್ಯರ್ಥಿ ಎಸ್. ಬೀರಪ್ಪ, ಶ್ರಮಜೀವಿ ಪಕ್ಷದ ಅಭ್ಯರ್ಥಿ ಕೆ. ಸೈಯದ್ ಜಬೀಉಲ್ಲಾ, ಸಾಮಾನ್ಯ ಜನತಾ ಪಕ್ಷದ ಶಬೀರ್ ಅಹ್ಮದ್, ಪಕ್ಷೇತರ ಅಭ್ಯರ್ಥಿಗಳಾಗಿ ಎಲ್. ತಿಪ್ಪೇಶ್, ನಾಗರಾಜ್ ಪಾಳೇಗಾರ್, ಟಿ.ಕೆ. ನವೀನ್, ಡಿ. ನಾಗಪ್ಪ, ಎಸ್. ಸಂಕೇತ್ ಅವರ ನಾಮಪತ್ರ ಸ್ವೀಕೃತವಾಗಿದೆ.

ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ನಂತರ ಅಧಿಕೃತ ಅಭ್ಯಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಚುನಾವಣಾಧಿಕಾರಿ ಸಾಜಿದ್ ಅಹಮದ್ ಮುಲ್ಲಾ ತಿಳಿಸಿದ್ದಾರೆ.

ಎಲ್ಲ ನಾಮಪತ್ರ ಕ್ರಮಬದ್ಧ

ಚನ್ನಗಿರಿ: ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಜೆಡಿಯು ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಒಟ್ಟು 18 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಎಲ್ಲ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ಬಿಜೆಪಿ ಅಭ್ಯರ್ಥಿ ಮಾಡಾಳ್ ವಿರೂಪಾಕ್ಷಪ್ಪ 3, ಕಾಂಗ್ರೆಸ್ ವಡ್ನಾಳ್ ರಾಜಣ್ಣ 2, ಜೆಡಿಎಸ್‌ನ ಹೊದಿಗೆರೆ ರಮೇಶ್ 2, ಜೆಡಿಯುನ ಮಹಿಮ ಪಟೇಲ್, ಎಐಎಂಇಪಿ ವಿಜಯಕುಮಾರ್, ಅಖಿಲ ಭಾರತ ಹಿಂದೂಮಹಾಸಭಾದ ಎಚ್.ಆರ್. ಹರೀಶ್ ಹಳ್ಳಿ, ಕೆಜೆಪಿ ಮಹಮದ್ ಜಹೀರ್ ಅಹಮದ್, ರೈತಸಂಘ (ಕೋಡಿಹಳ್ಳಿ ಚಂದ್ರಶೇಖರ್ ಬಣ) ರುದ್ರೇಶ್ ಕರೆಕಟ್ಟೆ, ಪಕ್ಷೇತರ ಅಭ್ಯರ್ಥಿಗಳಾಗಿ ಬಿ.ಎಂ. ವೀರಭದ್ರಪ್ಪ, ಜಫ್ರುಲ್ ಖಾನ್, ವಿಜಯಕುಮಾರ್ ಪಾಟೀಲ್ ದೊಡ್ಡಮಲ್ಲಾಪುರ 3 ನಾಮಪತ್ರ ಸಲ್ಲಿಸಿದ್ದರು. ಯಾವುದೇ ನಾಮಪತ್ರ ತಿರಸ್ಕೃತಗೊಂಡಿಲ್ಲ. ಎಲ್ಲಾ 18 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಡಾ. ಉಮೇಶ್ ತಿಳಿಸಿದರು.

2 ನಾಮಪತ್ರ ತಿರಸ್ಕೃತ

ಹರಪನಹಳ್ಳಿ: ವಿಧಾನಸಭಾ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳ 20 ನಾಮಪತ್ರಗಳು ಅಂಗೀಕಾರವಾಗಿದ್ದು, 2 ತಿರಸ್ಕೃತಗೊಂಡಿವೆ.

ಜಗಳೂರು: 7 ನಾಮಪತ್ರ ತಿರಸ್ಕೃತ

ಜಗಳೂರು: ಜಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಸಲ್ಲಿಸಿದ್ದ 25 ನಾಮಪತ್ರಗಳ ಪೈಕಿ 7 ನಾಮಪತ್ರಗಳು ತಿರಸ್ಕೃತವಾಗಿವೆ. ಪಟ್ಟಣದ ಮಿನಿ ವಿಧಾನಸೌಧದಲ್ಲಿ ಬುಧವಾರ ನಡೆದ ನಾಮಪತ್ರ ಪರಿಶೀಲನಾ ಕಾರ್ಯದಲ್ಲಿ ವಿವಿಧ ಕಾರಣಗಳಿಂದಾಗಿ 7 ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕೃತಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿ ಮಧುಸೂದನ್‌ ತಿಳಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ. ರಾಜೇಶ್‌, ಬಿಜೆಪಿ ಅಭ್ಯರ್ಥಿ ಎಸ್‌.ವಿ. ರಾಮಚಂದ್ರ ಹಾಗೂ ಜೆಡಿಎಸ್‌ ಪಕ್ಷದ ದೇವೇಂದ್ರಪ್ಪ ಸೇರಿ 18 ನಾಮಪತ್ರಗಳು ಸ್ವೀಕೃತವಾಗಿವೆ. ಎಚ್‌.ಜಿ. ಕೃಷ್ಣಮೂರ್ತಿ, ಎಸ್‌.ಆರ್‌. ಇಂದಿರಾ, ಜಿ.ಕೆ. ಹೇಮಣ್ಣ, ರವಿಪ್ರಸಾದ್‌, ದೇವೇಂದ್ರಪ್ಪ ಹಾಗೂ ಚೌಡಪ್ಪ ಅವರ ನಾಮಪತ್ರಗಳು ತಿರಸ್ಕೃತವಾಗಿವೆ. ಬಿಜೆಪಿ ಅಭ್ಯರ್ಥಿ ಎಸ್‌.ವಿ. ರಾಮಚಂದ್ರ ಅವರ ಜಾತಿ ಪ್ರಮಾಣಪತ್ರದ ಬಗ್ಗೆ ಸಮಾಜವಾದಿ ಪಕ್ಷದ ಅಭ್ಯರ್ಥಿ ಸಿದ್ದಪ್ಪ ಅವರು ಚುನಾವಣಾಧಿಕಾರಿಗೆ ದೂರು ನೀಡಿದ್ದರು . ದೂರು ತಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬ ಕಾರಣ ನೀಡಿ ಚುನಾವಣಾಧಿಕಾರಿ ಮಧುಸೂದನ್‌ ಅವರು ದೂರು ಅರ್ಜಿಯನ್ನು ವಜಾಗೊಳಿಸಿದರು. ವಿವಿಧ ಪಕ್ಷಗಳ ಅಭ್ಯರ್ಥಿಗಳಾದ ಸೆಚ್‌.ಪಿ. ರಾಜೇಶ್‌, ಎಸ್‌.ವಿ. ರಾಮಚಂದ್ರ, ದೇವೇಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT