ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಷೇತ್ರದ ಅಭಿವೃದ್ಧಿಗೆ ತಂಡಗಳ ರಚನೆ’

Last Updated 26 ಏಪ್ರಿಲ್ 2018, 10:29 IST
ಅಕ್ಷರ ಗಾತ್ರ

ಧಾರವಾಡ: ಹುಬ್ಬಳ್ಳಿ–ಧಾರವಾಡ ಪಶ್ಷಿಮ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಎರಡು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದ, ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಕ್ಷೇತ್ರದಲ್ಲಿರುವ ಸಮಸ್ಯೆಗಳು, ಅವುಗಳ ನಿವಾರಣೆಗೆ ಕೈಗೊಳ್ಳ ಬಯಸಿರುವ ಕ್ರಮಗಳು ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹೊಂದಿರುವ ಕನಸುಗಳ ಬಗ್ಗೆ ‘ಪ್ರಜಾವಾಣಿ’ ಜತೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

 ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಹೇಗೆ ಸಾಗಿದೆ?

ಕಳೆದ ನಾಲ್ಕೂವರೆ ವರ್ಷಗಳಿಂದ ಸತತವಾಗಿ ಪ್ರಚಾರ ನಡೆಸುತ್ತಲೇ ಇದ್ದೇನೆ. ನಾನು, ಯಾವ ಪಕ್ಷದಿಂದ ಸ್ಪರ್ಧಿಸಲಿದ್ದೇನೆ ಎಂಬ ಗೊಂದಲ ಕ್ಷೇತ್ರದ ಜನರಲ್ಲಿತ್ತು. ಅದು ಈಗ ಸ್ಪಷ್ಟವಾಗಿದೆ. ಪ್ರಚಾರಕ್ಕೆ ಎಲ್ಲ ಕಡೆ ಉತ್ತಮ ಸ್ಪಂದನೆ ಸಿಗುತ್ತಿದೆ.

 ಕ್ಷೇತ್ರದೊಂದಿಗೆ ನಿರಂತರ ಒಡನಾಟ ಹೊಂದಿದ್ದೇನೆ ಎನ್ನುತ್ತೀರಿ. ಇಲ್ಲಿನ ಸಮಸ್ಯೆಗಳೇನು?

ಸೂಪರ್ ಮಾರುಕಟ್ಟೆ ಸಮಸ್ಯೆ ಈವರೆಗೂ ಬಗೆಹರಿದಿಲ್ಲ. ಕಸದ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಜನ್ನತ ನಗರ, ದಾನು ನಗರ ಇತ್ಯಾದಿ ಬಡಾವಣೆಗಳಲ್ಲಿ ಕಸ ವಿಲೇವಾರಿ ಈಗಲೂ ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಸರ್ಕಾರದ ಅನುದಾನದಲ್ಲಿ ಮನೆ ಕಟ್ಟಿಸಿದ್ದರೂ, ಫಲಾನುಭವಿಗಳ ಆಯ್ಕೆ ಆಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಅಲ್ಲಲ್ಲಿ ಇನ್ನೂ ಇದೆ.

ಐದು ವರ್ಷಗಳಿಂದ ನಿಮ್ಮದೇ ಪಕ್ಷ ಅಧಿಕಾರದಲ್ಲಿತ್ತು. ಈ ಸಮಸ್ಯೆಗಳಿಗೆ ಏಕೆ ಪರಿಹಾರ ಹುಡುಕಲಿಲ್ಲ?

ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ ಇಲ್ಲಿನ ಅಭಿವೃದ್ಧಿಗೆ ಸಾಕಷ್ಟು ಹಣ ನೀಡಿದೆ. ಆದರೆ, ಅದರ ಹಿಂದಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ದೊರೆತ ಕೊಡುಗೆ ಏನು? ಆಗಿರುವ ಅಭಿವೃದ್ಧಿಯಾದರೂ ಏನು? ಐದು ವರ್ಷಗಳಲ್ಲಿ ಇಲ್ಲಿನ ಬಸ್‌ ನಿಲ್ದಾಣ, ಕಾಂಕ್ರೀಟ್ ರಸ್ತೆ ಇತ್ಯಾದಿಗಳ ನಿರ್ಮಾಣ ಆಗಿದೆ. ಕ್ಷೇತ್ರದ ಜನರಿಗೆ ಜನಸಾಮಾನ್ಯರ ಶಾಸಕರು ಬೇಕಾಗಿದ್ದಾರೆ.

ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ವಿಭಜನೆ ಆಗಬೇಕು ಎನ್ನುವುದಕ್ಕೆ ತಮ್ಮ ನಿಲವೇನು?

ಈ ಆಲೋಚನೆ ನನಗೂ ಇದೆ. ಐದು ವರ್ಷಗಳ ಹಿಂದೆಯೇ ಈ ವಿಷಯ ಪ್ರಸ್ತಾಪಿಸಿದ್ದೆ. ಪ್ರತ್ಯೇಕವಾದರೆ ಮಾತ್ರ ಧಾರವಾಡ ಹಾಗೂ ಹುಬ್ಬಳ್ಳಿ ಸಮಾನವಾಗಿ ಬೆಳೆಯಲಿವೆ. ಸರ್ಕಾರ ಎರಡೂ ಪಾಲಿಕೆಗಳಿಗೆ ಅನುದಾನ ಬಿಡುಗಡೆ ಮಾಡಲಿದೆ. ಆಗ ಹೆಚ್ಚು ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ.

ನೀವು ಶಾಸಕರಾದರೆ ಕ್ಷೇತ್ರದ ಜನರು ಏನನ್ನು ನಿರೀಕ್ಷಿಸಬಹುದು?

ನಾನು ಟೀಂ ವರ್ಕ್‌ನಲ್ಲಿ ನಂಬಿಕೆ ಇಟ್ಟಿರುವವನು. ಕಳೆದ ಏಳು ವರ್ಷಗಳಲ್ಲಿ ಅಂಜುಮನ್ ಸಂಸ್ಥೆ ಉತ್ತಮ ಸಾಧನೆ ಮಾಡಲು ನಾವೆಲ್ಲರೂ ಒಂದು ತಂಡವಾಗಿ ಕಾರ್ಯ ನಿರ್ವಹಿಸಿದ್ದೇ ಸಾಕ್ಷಿ. ಹಾಗೆಯೇ ಕ್ಷೇತ್ರದ ಸಮಸ್ಯೆ ಪರಿಹರಿಸಲು ತಂಡಗಳ ರಚನೆ ಹಾಗೂ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಜನರ ಸಮಸ್ಯೆ ಶೀಘ್ರದಲ್ಲಿ ಪರಿಹರಿಸಲಾಗುವುದು. ಕಾನೂನು ಸುವ್ಯವಸ್ಥೆ ಕಾಪಾಡಲು ಕಂಕಣಬದ್ಧನಾಗಿದ್ದೇನೆ.

ಜೆಡಿಎಸ್‌ನಿಂದಲೂ ಮುಸ್ಲಿಂ ಅಭ್ಯರ್ಥಿ ಕಣದಲ್ಲಿದ್ದಾರೆ. ಇದು ನಿಮ್ಮ ಗೆಲುವಿಗೆ ತೊಡಕಾಗಲಿದೆಯೇ?

ಖಂಡಿತಾ ಇಲ್ಲ. ಬಿಜೆಪಿ ಹಾಗೂ ಜೆಡಿಎಸ್ ಒಳಒಪ್ಪಂದದಿಂದ ಕೊನೇ ಗಳಿಗೆಯಲ್ಲಿ ಇಬ್ಬರಿಗೆ ಬಿ‌ ಫಾರಂ ನೀಡಲಾಗಿದೆ. ಎರಡೂ ಪಕ್ಷಗಳ ಆಂತರಿಕ ಒಪ್ಪಂದ ಬಹಿರಂಗವಾಗಿದೆ. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಕಾಂಗ್ರೆಸ್‌, ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಇನ್ನೂ ಐದಾರು ಮುಸ್ಲಿಂ ಅಭ್ಯರ್ಥಿಗಳು ನಿಂತರೂ ಪ್ರಜ್ಞಾವಂತ ಮತದಾರರು
ನನ್ನನ್ನೇ ಆಯ್ಕೆ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ.

ನೀವು ಅಪರಾಧ ಹಿನ್ನೆಲೆಯುಳ್ಳವರು ಎಂಬ ಆರೋಪ ಇದೆಯಲ್ಲಾ?

ರಾಷ್ಟ್ರಧ್ವಜ ಹಾರಿಸುವ ವಿಷಯದಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರಿಂದ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಲಾಗಿದೆ. ಧ್ವಜಾರೋಹಣ ಜಾಗಕ್ಕೆ ಸಂಬಂಧಿಸಿದಂತೆ ವಾಗ್ವಾದ ಆಗಿದ್ದು ನಿಜ. ಅದಕ್ಕೆ ನನ್ನ ಮೇಲೆ ಆರೋಪ ಹೊರಿಸಲಾಗಿದೆ. ಇದೇ ಕೆಲಸ ಬಿಜೆಪಿಯವರು ಮಾಡಿದ್ದರೆ ಅವರು ದೇಶ ಭಕ್ತರಾಗುತ್ತಿದ್ದರು. ನಾನು ಮಾಡಿದ್ದಕ್ಕೆ ಪ್ರಕರಣ ಎದುರಿಸುವಂತಾಗಿದೆ. ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿದ್ದೇನೆ ಎಂದು ಆರೋಪ ಮಾಡಲಾಗುತ್ತದೆ. ಹೀಗೆ ಆರೋಪ ಮಾಡುವವರು ದಾಖಲೆ ಒದಗಿಸಬೇಕು. ಚುನಾವಣೆ ಬಂದಾಗಲೇ ಇಂಥ ಆರೋಪದ ಹಿಂದಿನ ಕಾರಣ ಕ್ಷೇತ್ರದ ಜನರಿಗೆ ಗೊತ್ತಿದೆ.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಗಳಿವೆ. ಸರಿಪಡಿಸಲು ಏನು ಕ್ರಮ ಕೈಗೊಳ್ಳುವಿರಿ?

ಅಧಿಕಾರಿಗಳು ಸರಿಯಾಗಿದ್ದರೆ, ಅಪರಾಧ ಕೃತ್ಯಗಳು ಸಹಜವಾಗಿ ನಿಯಂತ್ರಣದಲ್ಲಿರುತ್ತವೆ. ಆದರೆ, ಈವರೆಗೂ ಆದ ಕೊಲೆಗಳು ರಿಯಲ್‌ ಎಸ್ಟೇಟ್‌ ಅಥವಾ ವೈಯಕ್ತಿಕ ಕಾರಣಗಳಿಗೆ ಆಗಿವೆ. ಈಗಿರುವ ಶಾಸಕರು ಈ ಬಗ್ಗೆ ಏನು ಕ್ರಮಕೈಗೊಂಡಿದ್ದಾರೆ. ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಲಾಗುವುದು.

ಕ್ಷೇತ್ರದ ಮತದಾರರು ನಿಮಗೆ ಏಕೆ ಮತ ಹಾಕಬೇಕು?

ನನ್ನ ಕೈಲಾದಷ್ಟು, ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ಎಲ್ಲ ವರ್ಗದವರೊಂದಿಗೂ ಬೆರೆತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ನನ್ನದೇ ಆದ ಕನಸುಗಳನ್ನು ಹೊಂದಿದ್ದೇನೆ. ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡಲು
ಸಿದ್ಧನಿದ್ದೇನೆ. ಹೀಗಾಗಿ, ಜನರು ಬೆಂಬಲಿಸುತ್ತಾರೆ ಎಂಬ ಭರವಸೆ ಇದೆ.

ಇಸ್ಮಾಯಿಲ್ ತಮಟಗಾರ ಕುರಿತು

ಯಸ್ಸು: 40

ವಿದ್ಯಾರ್ಹತೆ: ಬಿ.ಕಾಂ.

ಉದ್ಯೋಗ: ಹಣ್ಣಿನ ವ್ಯಾಪಾರ

ಪ್ರತಿನಿಧಿಸುವ ಕ್ಷೇತ್ರ: ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ

ರಾಜಕೀಯ ಅನುಭವ: ಎರಡು ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT