ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಿಂದ 8 ರೌಡಿಗಳ ಗಡಿಪಾರು

ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳ ಪರೇಡ್‌: ಐಜಿಪಿ ಅಲೋಕ್‌ಕುಮಾರ್ ಖಡಕ್ ಎಚ್ಚರಿಕೆ
Last Updated 26 ಏಪ್ರಿಲ್ 2018, 10:48 IST
ಅಕ್ಷರ ಗಾತ್ರ

ಗದಗ: ‘ಚುನಾವಣಾ ಅಕ್ರಮಗಳನ್ನುತಡೆಯುವ ನಿಟ್ಟಿನಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಗೂಂಡಾ ಕಾಯ್ದೆಯಡಿ ಜಿಲ್ಲೆಯ
8 ಮಂದಿ ರೌಡಿಗಳನ್ನು ಗಡಿಪಾರು ಮಾಡಲು ಈಗಾಗಲೇ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ’ ಎಂದು ಐಜಿಪಿ ಅಲೋಕ್ ಕುಮಾರ್ ಹೇಳಿದರು.

ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿನ ನಗರ ಪೊಲೀಸ್‌ ಠಾಣೆಯಲ್ಲಿ 69 ರೌಡಿಗಳ ಪರೇಡ್‌ ನಡೆಸಿದ ಅವರು, ಎಲ್ಲರ ಪೂರ್ವಾಪರ ವಿಚಾರಿಸಿ, ‘ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಕಾನೂನು– ಸುವ್ಯವಸ್ಥೆಗೆ ಭಂಗ ಉಂಟು ಮಾಡುವುದು ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

‘ಆರೋಪಿಗಳನ್ನು ಕಾಲಕಾಲಕ್ಕೆ ಠಾಣೆಗೆ ಕರೆಯಿಸಿ ಬಿಸಿ ಮಾಡಬೇಕು.ಇಂದು ಪರೇಡ್‌ಗೆ ಹಾಜರಾಗದ ರೌಡಿ
ಗಳನ್ನು 3 ದಿನಗಳ ಒಳಗಾಗಿ ಠಾಣೆಗಳಿಗೆ ಕರೆಯಿಸಿ ಪರೇಡ್ ನಡೆಸಬೇಕು’ ಎಂದು ಎಸ್ಪಿ ಸಂತೋಷ ಬಾಬು ಅವರಿಗೆ ಸೂಚಿಸಿದರು.

‘ಜಿಲ್ಲೆಯ ರೌಡಿಶೀಟರ್‌ ಪಟ್ಟಿಯಲ್ಲಿ ಇರುವ ಗಿರೀಶ್ ಮುಕ್ಕಣ್ಣವರ, ರಾಜೇಸಾಬ್ ಪೆಂಡಾರಿ, ಅರುಣ್ ಬೆಳದಡಿ, ಅಶೋಕ್ ಚಿಮ್ಮಲಗಿ ಗಡಿಪಾರಿಗೆ ಈಗಾಗಲೇ ಆದೇಶಿಸಲಾಗಿದೆ. ಇದಲ್ಲದೆ ಇನ್ನೂ ನಾಲ್ವರನ್ನು ಶೀಘ್ರ ಗಡಿಪಾರು ಮಾಡಲಾಗುತ್ತದೆ’ ಎಂದು ಐಜಿಪಿ ಹೇಳಿದರು.

ರೌಡಿಗಳ ವಿಳಾಸ, ಮೊಬೈಲ್ ಸಂಖ್ಯೆ, ಕುಟುಂಬದವರ ವಿವರ, ಮಾಡುತ್ತಿರುವ ಉದ್ಯೋಗ ಇನ್ನಿತರ ವಿವರ‌ಗಳನ್ನು ಸಂಗ್ರಹಿಸಿ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡ ಅಧಿಕಾರಿಗಳು, ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಕಳುಹಿಸಿದರು.

‘ರಾಡಿ ಪರೇಡ್‌ನಲ್ಲಿ ಬೆಳದಡಿ ಕುಟುಂಬದ ನಾಲ್ವರು ಹಾಜರಿದ್ದರು. ಒಬ್ಬೊಬ್ಬರದೇ ಹೆಸರು ಓದಿದ ಐಜಿಪಿ, ಇಡೀ ಕುಟುಂಬವೇ ಗೂಂಡಾ ಹಿನ್ನೆಲೆ ಹೊಂದಿದೆಯಲ್ಲಾ ಎಂದು ಖಾರವಾಗಿ ಪ್ರಶ್ನಿಸಿದರು. ಗಡಿಪಾರು ಪಟ್ಟಿಯಲ್ಲಿ ಹೆಸರು ಇದ್ದವರಿಗೆ ನಿಮಗೆಲ್ಲ ಈಗಲೇ ಸೆಂಡಪ್‌ ಮಾಡುತ್ತೇನೆ ಎಂದರು. ಯಾವುದೇ ತಪ್ಪು ಮಾಡದಿದ್ದರೂ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ’ ಎಂದು ಕೆಲವು ರೌಡಿಗಳು ಅವಲತ್ತುಕೊಂಡರು.

‘ಇನ್ನು ಕೆಲವರು ನಾವು ಯಾವುದೇ ಗಲಭೆಯಲ್ಲಿ ಭಾಗಿಯಾಗಿಲ್ಲ, ಮಹದಾಯಿ ಹೋರಾಟದಲ್ಲಿ ಭಾಗವಹಿಸಿದ್ದೇವೆ ಎಂದರು. ಹೀಗೆ ಹೇಳಿದವರ ವಿರುದ್ಧ ಇರುವ ಆರೋಪಗಳನ್ನು ನೋಡಿದ ನೋಡಿದ ಐಜಿಪಿ, ಮಹದಾಯಿ ಹೋರಾಟಗಾರರ ಹೆಸರಿನಲ್ಲಿ ನೀವು ಕಾನೂನು– ಸುವ್ಯವಸ್ಥೆಗೆ ಭಂಗ ಉಂಟು ಮಾಡಿದ್ದು, ಆಸ್ತಿ ಹಾನಿ ಮಾಡಿದ್ದನ್ನು ಮುಚ್ಚಿಡಬೇಡಿ’ ಎಂದು ಬೆವರಿಳಿಸಿದರು.

ಪೊಲೀಸ್‌ ಠಾಣೆ ಎದುರು ಪ್ರತಿಭಟನೆ: ‘ಗದಗ ಜಿಲ್ಲಾಡಳಿತ ಮತ್ತು ಜಿಲ್ಲೆಯ ಹಿರಿಯ ಅಧಿಕಾರಿಗಳು ಕಾಂಗ್ರೆಸ್‌ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಸೇರಿದವರನ್ನು ಗುರಿಯಾಗಿಸಿ ರೌಡಿ ಪರೇಡ್ ನಡೆಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿ, ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ಮತ್ತು ಅವರ ಬೆಂಬಲಿಗರು ನಗರ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು.

‘ಬುಧವಾರ ಬೆಳಗಿನ ಜಾವ 4 ಗಂಟೆಗೆ ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗಿ ಪೊಲೀಸರು ಅನೇಕರನ್ನು ಕರೆದುಕೊಂಡು ಬಂದು ರೌಡಿ ಪರೇಡ್‌ಗೆ ನಿಲ್ಲಿಸಿದ್ದಾರೆ. ನಾವು ಕಾನೂನು ಗೌರವಿಸುತ್ತೇವೆ. ಆದರೆ, ಈ ರೀತಿಯ ದಬ್ಬಾಳಿಕೆ ರಾಜಕಾರಣ ಸರಿಯಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಅನೇಕರು ಕಾನೂನು ಉಲ್ಲಂಘಿಸಿ,ಈಗ ಚುನಾವಣೆಯಲ್ಲಿ ಸಕ್ರಿಯರಾಗಿದ್ದಾರೆ. ಅವರ ಯಾರ ಹೆಸರೂ ಈ ರೌಡಿಶೀಟರ್‌ ಪಟ್ಟಿಯಲ್ಲಿ ಇಲ್ಲ’ ಎಂದು ಅನಿಲ್‌ ಆಕ್ರೋಶ ವ್ಯಕ್ತಪಡಿಸಿದರು.

‘ಆರೋಪಿಯ ಪಕ್ಷ ನೋಡಿ ಪೊಲೀಸರು ಕ್ರಮ ಕೈಗೊಳ್ಳುವುದಿಲ್ಲ. ಆತನ ಕೃತ್ಯ ನೋಡಿ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಪಕ್ಷಕ್ಕೆ ಸೇರಿದವರಾದರೂ ಕಾನೂನು–ಸುವ್ಯವಸ್ಥೆಗೆ ಭಂಗ ಉಂಟು ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ವಹಿಸುತ್ತೇವೆ’ ಎಂದು ಐಜಿಪಿ ಹೇಳಿದರು.

‘ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಗದಗ ಮತಕ್ಷೇತ್ರದ ಚುನಾವಣಾ ಅಧಿಕಾರಿ ಪಿ.ಎಸ್‌.ಮಂಜುನಾಥ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಲಾಗಿತ್ತು. ಆದರೆ, ಇದೀಗ ಮತ್ತೆ ಅವರನ್ನು ಗದಗ ಮತಕ್ಷೇತ್ರಕ್ಕೆ ಚುನಾವಣಾ ಕಾರ್ಯಕ್ಕೆ ಮರು ನಿಯೋಜನೆ ಮಾಡಲಾಗಿದೆ. ಅದಕ್ಕಾಗಿ ಈ ಕಾರ್ಯಕ್ಕೆ ಈಗಾಗಲೇ ನಿಯೋಜನೆಗೊಂಡಿದ್ದ ಅಧಿಕಾರಿಯನ್ನು ರಜೆಯ ಮೇಲೆ ಕಳುಹಿಸಲಾಗಿದೆ’ ಎಂದು ಅನಿಲ್‌ ಮೆಣಸಿನಕಾಯಿ ಆರೋಪಿಸಿದರು.

‘ಜಿಮ್ಸ್‌’ ನಿರ್ದೇಶಕ ಪಿ.ಎಸ್‌. ಭೂಸರೆಡ್ಡಿ ಅವರು ನೇರವಾಗಿ ಅಲ್ಲಿರುವ ಗುತ್ತಿಗೆ ಕಾರ್ಮಿಕರಿಗೆ ನೀವು ಕಾಂಗ್ರೆಸ್‌ ಬೆಂಬಲಿಸದಿದ್ದರೆ ನಿಮ್ಮನ್ನು ಕಾಯಂಗೊಳಿಸುವುದಿಲ್ಲ ಎನ್ನುತ್ತಾರೆ. ವಿದ್ಯಾರ್ಥಿಗಳನ್ನು ಚುನಾವಣಾ ಪ್ರಚಾರಕ್ಕೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜಿಲ್ಲಾಡಳಿತ ಸಂಪೂರ್ಣ ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುತ್ತಿದೆ ಎಂದು ಅರ್ಥವಾಗುತ್ತದೆ’ ಎಂದು ಅವರು ಹೇಳಿದರು.

‘ಎಚ್‌.ಕೆ.ಪಾಟೀಲ ಅವರು ಇಂತಹ ದಬ್ಬಾಳಿಕೆ ರಾಜಕಾರಣ ಬಿಟ್ಟು, ಅಭಿವೃದ್ಧಿಪರ ಕೆಲಸಗಳನ್ನು ಹೇಳಿಕೊಂಡು ಚುನಾವಣೆ ಎದುರಿಸಲಿ, ಜನರು ವೋಟ್‌ ಹಾಕುತ್ತಾರೆ. ದಬ್ಬಾಳಿಕೆ ಕಾಲ ಮುಗಿದು ಹೋಗಿದೆ. ಇನ್ನು ಹೆಚ್ಚೆಂದರೆ 12 ದಿನ ದಬ್ಬಾಳಿಕೆ ಮಾಡಬಹುದು. ಆ ನಂತರ ಜನರು ಇದಕ್ಕೆ ಉತ್ತರ ನೀಡುತ್ತಾರೆ’ ಎಂದು ಹೇಳಿದರು.

**
ನಾವು ಆರೋಪಿಯ ಜಾತಿ, ಧರ್ಮ, ಪಕ್ಷ ನೋಡಿಕೊಂಡು ಕ್ರಮ ಕೈಗೊಳ್ಳುವುದಿಲ್ಲ. ಆತನ ಕೃತ್ಯ ನೋಡಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ
– ಅಲೋಕ್‌ಕುಮಾರ್‌, ಐಜಿಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT