ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯಕ್ಕೆ ಆದ್ಯತೆ

ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ಭರವಸೆ
Last Updated 26 ಏಪ್ರಿಲ್ 2018, 10:53 IST
ಅಕ್ಷರ ಗಾತ್ರ

ಗದಗ: ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದ್ದ ಗದಗ ವಿಧಾನಸಭಾ ಕ್ಷೇತ್ರದಲ್ಲಿ 2008ರಲ್ಲಿ ಮೊದಲ ಬಾರಿಗೆ ಕಮಲ
ಅರಳಿತು. 2013ರಲ್ಲಿ ಮತ್ತೆ ಮುದುಡಿತು. ಆ ವರ್ಷ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎರಡನೆ ಸ್ಥಾನ ಪಡೆದು
ಗಮನ ಸೆಳೆದಿದ್ದ ಅನಿಲ ಮೆಣಸಿನಕಾಯಿಗೆ ಈ ಬಾರಿ ಬಿಜೆಪಿ ಟಿಕೆಟ್‌ ಲಭಿಸಿದೆ. ಗದಗ ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದು ಎರಡು ದಶಕ ಕಳೆದರೂ, ಜಿಲ್ಲಾಕೇಂದ್ರದಲ್ಲೇ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ಕೆಲವು ವಾರ್ಡ್‌ಗಳಲ್ಲಿ ಮೂಲಸೌಕರ್ಯವೇ ಸಮರ್ಪಕವಾಗಿ ಅಭಿವೃದ್ಧಿಯಾಗಿಲ್ಲ ಎನ್ನುವ ಅನಿಲ್‌ ಮೆಣಸಿನಕಾಯಿ, ಸ್ಪಷ್ಟವಾದ ಅಭಿವೃದ್ಧಿ ಪರಿಕಲ್ಪನೆಯೊಂದಿಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಜನರು ನಿಮಗೆ (ಬಿಜೆಪಿಗೆ) ಯಾಕೆ ವೋಟ್‌ ಹಾಕಬೇಕು? ಯಾವ ವಿಷಯ ಇಟ್ಟುಕೊಂಡು ಮತದಾರರ ಬಳಿಗೆ ಹೋಗುತ್ತೀರಿ?

ನಾನು ಹುಟ್ಟಿ ಬೆಳೆದ ಊರು ಗದಗ. ಈ ನಗರದ ಇಂದಿನ ಸ್ಥಿತಿ ನೋಡುವಾಗ ತೀವ್ರ ಬೇಸರವಾಗುತ್ತದೆ. ಜನಸಾಮಾನ್ಯರಿಗೆ ಬೇಕಾದ ಮೂಲ ಸೌಲಭ್ಯಗಳೇ ಇಲ್ಲಿ ಇನ್ನೂ ಅಭಿವೃದ್ಧಿಯಾಗಿಲ್ಲ. ಯುವಜನರಿಗೆ ಉದ್ಯೋಗಾವಕಾಶಗಳಿಲ್ಲ. ಈ ಕ್ಷೇತ್ರವನ್ನು ಪ್ರತಿನಿಧಿ ಸಿದವರು ಜವಳಿ ಖಾತೆ ಸಚಿವರಾದರೂ ಬೆಟಗೇರಿ ಭಾಗದ ನೇಕಾರರ ಸಮಸ್ಯೆಗಳನ್ನು ಇತ್ಯರ್ಥಪಡಿಸಲಿಲ್ಲ. ನೀರಾವರಿ ಖಾತೆ ನಿಭಾಯಿಸಿದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಿಲ್ಲ. ಚೆಕ್‌ಡ್ಯಾಂ, ಕೆರೆಗಳನ್ನು ಅಭಿವೃದ್ಧಿ ಮಾಡಲಿಲ್ಲ. ‘ಅಮೃತಸಿಟಿ’ ಯೋಜನೆಯ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಿಲ್ಲ. ವಸತಿ ರಹಿತ ಫಲಾನುಭವಿಗಳಿಗೆ ಮನೆಗಳ ನಕಲಿ ಹಕ್ಕುಪತ್ರಗಳನ್ನು ವಿತರಿಸುತ್ತಾರೆ ಎಂದರೆ ಯಾವ ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಬದಲಾವಣೆ ಆಗಬೇಕಿದ್ದರೆ ಜನರು ಬಿಜೆಪಿಗೆ ವೋಟ್‌ ಹಾಕಬೇಕು. ಶ್ರೀರಾಮುಲು ಅವರು ಗದಗ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಮಾಡಿದ್ದ ಅಭಿವೃದ್ಧಿ ಕೆಲಸಗಳನ್ನೇ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೇನೆ.

ಈ ಚುನಾವಣೆ ನಿಮಗೆ ಯಾಕೆ ಮಹತ್ವದ್ದು? ಕ್ಷೇತ್ರದಲ್ಲಿ ನಿಮ್ಮ ಪಕ್ಷಕ್ಕೆ ಪೂರಕ ಅಂಶಗಳು ಯಾವುದು?

ಹಲವು ದಶಕಗಳ ಕಾಲ ಕಾಂಗ್ರೆಸ್‌ ಈ ಕ್ಷೇತ್ರವನ್ನು ಆಳಿದರೂ ಇಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಭೀಷ್ಮಕೆರೆ
ಉದ್ಯಾನ ಅಭಿವೃದ್ಧಿ, ಕುಡಿಯುವ ನೀರಿನ ಪೂರೈಕೆ, ಪುತ್ಥಳಿಗಳ ಸ್ಥಾಪನೆ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಶ್ರೀರಾಮುಲು ಅವರು ಅಲ್ಪಾವಧಿಯಲ್ಲೇ ಗದುಗಿನ ಅಭಿವೃದ್ಧಿಗಾಗಿ ದೊಡ್ಡ ಪ್ಯಾಕೇಜ್‌ ತಂದಿದ್ದರು. ಶ್ರೀರಾಮುಲು ಅವರನ್ನು ಈ ಕ್ಷೇತ್ರದ ಜನರು ತಮ್ಮ ಮನೆ ಮಗನಂತೆ ಕಾಣುತ್ತಿದ್ದಾರೆ. ಅದೇ ನಮಗೆ ದೊಡ್ಡ ಶಕ್ತಿ. ಅವರು ಗದುಗಿನಲ್ಲಿ ರೋಡ್‌ ಶೋ ನಡೆಸಿದ ನಂತರ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಗದಗ ಜಿಲ್ಲೆಗೆ ಭೇಟಿ ನೀಡಿದ ನಂತರ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬಂದಿದೆ. 40 ವರ್ಷದೊಳಗಿನ ಯುವ ಮತದಾರರ ಸಂಪೂರ್ಣ ಬೆಂಬಲ ಬಿಜೆಪಿಗೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಮತದಾರನನ್ನೂ ತಲುಪಿದ್ದು, ಎಲ್ಲೆಡೆ ಪೂರಕ ವಾತಾ
ವರಣ ಕಂಡುಬರುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ನಡೆಯಲಿದೆ.

ನೀವು ಇಲ್ಲಿನವರಲ್ಲ, ಹೊರಗಿನವರು, ಚುನಾವಣೆ ಸಂದರ್ಭದಲ್ಲಿ ಮಾತ್ರ ಇಲ್ಲಿಗೆ ಬರುತ್ತೀರಿ ಎಂಬ ಆರೋಪ ಇದೆಯಲ್ಲಾ?

ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ಇದ್ದೆ. ಆದರೆ, ಕ್ಷೇತ್ರದ ಜತೆಗೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದೇನೆ. ಪ್ರತಿವರ್ಷ ಶ್ರೀರಾಮುಲು ಅಭಿಮಾನಿ ಬಳಗದ ವತಿಯಿಂದ ಗದುಗಿನಲ್ಲಿ ಸಾಮೂಹಿಕ ವಿವಾಹ ಆಯೋಜಿಸುತ್ತೇವೆ. ರಂಜಾನ್‌ ಸಂದ
ರ್ಭದಲ್ಲಿ ಇಫ್ತಿಯಾರ್‌ ಕೂಟಗಳನ್ನು ಮಾಡುತ್ತೇವೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಸ್ಪಂದಿಸಿದ್ದೇವೆ. ಅವರ ಕೈಗೂ ಸಿಗುತ್ತೇವೆ. 2013ರ ಚುನಾವಣೆಯಲ್ಲಿ ಪರಾಭವಗೊಂಡರೂ ನಂತರ ನಿರಂತರವಾಗಿ ಕ್ಷೇತ್ರದೊಂದಿಗೆ ನಂಟು ಹೊಂದಿದ್ದೇನೆ. ಈ ಕ್ಷೇತ್ರದ ಜನತೆಯ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿದ್ದೇನೆ.

ಕ್ಷೇತ್ರದ ಜನರು ನಿಮ್ಮಿಂದ ಏನು ನಿರೀಕ್ಷಿಸಬಹುದು?

ಅಭಿವೃದ್ಧಿ ಸಿದ್ಧಾಂತದ ಆಧಾರದಲ್ಲೇ ಈ ಸಲದ ಚುನಾವಣೆ ನಡೆಯಲಿದೆ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಆದರೆ, ಕಾಂಗ್ರೆಸ್‌ನದು ಕುತಂತ್ರ ರಾಜಕಾರಣ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ನನಗೆ ನಿರ್ದಿಷ್ಟವಾದ ಪರಿಕಲ್ಪನೆ ಇದೆ. ಆಯ್ಕೆಯಾದರೆ 6 ತಿಂಗಳಲ್ಲಿ ಗದಗ–ಬೆಟಗೇರಿ ಅವಳಿ ನಗರದ ಎಲ್ಲ ವಾರ್ಡ್‌ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತೇನೆ.ಕುಡಿಯುವ ನೀರು, ಸಮರ್ಪಕ ರಸ್ತೆಗೆ ಮೊದಲ ಆದ್ಯತೆ.ಗದಗ ಈ ಹಿಂದೆ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ವ್ಯಾಪಾರ ವಹಿವಾಟು ಅಭಿವೃದ್ಧಿಗೆ ಬೇಕಿರುವ ಉತ್ತೇಜನ ಕ್ರಮಗಳನ್ನು ಕೈಗೊಳ್ಳುತ್ತೇನೆ. ಕೈಗಾರಿಕೆಗಳನ್ನು ಆಕರ್ಷಿಸಲು, ಉದ್ಯಮಗಳನ್ನು ಸ್ಥಾಪಿಸಲು ಪೂರಕ ವಾತಾವರಣ ಸೃಷ್ಟಿಸುತ್ತೇನೆ.

ಉದ್ಯೋಗಾವಕಾಶ ಸೃಷ್ಟಿಗೆ ಮೊದಲ ಆದ್ಯತೆ: ಅನಿಲ್

ಆಯ್ಕೆಯಾದರೆ ಮೊದಲ ಆದ್ಯತೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಮತ್ತು ಉದ್ಯೋಗಾವಕಾಶ ಸೃಷ್ಟಿಗೆ. ಈ ಕ್ಷೇತ್ರದ ಯುವಜನರು ದುಡಿಯಲು ಗೋವಾ, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಗುಳೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಬೇಕು. ಸ್ಥಳೀಯ ಮಟ್ಟದಲ್ಲಿ ಅವರಿಗೆ ಉದ್ಯೋಗ ಲಭಿಸಬೇಕು. ಇದಕ್ಕಾಗಿ ಇಲ್ಲಿಗೆ ಕೈಗಾರಿಕೆಗಳನ್ನು ಆಕರ್ಷಿಸಬೇಕು. ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನೀಡಿರುವ ಗದಗ ನಗರವನ್ನು ಮಾದರಿ ಕ್ರೀಡಾ ನಗರಿಯನ್ನಾಗಿ ಅಭಿವೃದ್ಧಿಪಡಿಸಬೇಕು ಎಂಬ ಕನಸು ಇದೆ. ಇಲ್ಲಿಗೆ ಕ್ರೀಡಾ ವಿಶ್ವವಿದ್ಯಾಲಯ ತರಲೂ ಪ್ರಯತ್ನಿಸುತ್ತೇನೆ. ಬೆಟಗೇರಿ ಭಾಗದ ನೇಕಾರರ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT