ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಾದ ಬಣ್ಣ: ಬದಲಾವಣೆ ಬಯಸಿದ ಜನತೆ

ನಿವೃತ್ತ ಪೊಲೀಸ್ ಅಧಿಕಾರಿ, ಸಿನಿಮಾ ನಟ, ಮಾಜಿ ಶಾಸಕ: ಹಿರೇಕೆರೂರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ.ಪಾಟೀಲ್
Last Updated 26 ಏಪ್ರಿಲ್ 2018, 11:15 IST
ಅಕ್ಷರ ಗಾತ್ರ

ಹಾವೇರಿ: ‘ಈಗ ಬಿಜೆಪಿಯ ಬಣ್ಣ ಬಯಲಾಗಿದೆ. ಬನ್ನಿಕೋಡರಿಂದ ‘ಕೈ’ಗೆ ಹೆಚ್ಚಿನ ಬಲ ಬಂದಿದೆ. ಜನತೆಯಿಂದ ನಿರೀಕ್ಷೆ ಮೀರಿದ ಬೆಂಬಲ ದೊರೆತಿದೆ. ಹೀಗಾಗಿ, ಕ್ಷೇತ್ರದಲ್ಲಿ ಬದಲಾವಣೆ ಕಾಲ ಸಮೀಪಿಸಿದೆ’ ಎಂದು ತಮ್ಮ ವಿಶಿಷ್ಟ ಶೈಲಿಯ ಮೂಲಕವೇ ಹಿರೇಕೆರೂರ ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣವನ್ನು ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ.ಪಾಟೀಲ್ ಬಣ್ಣಿಸಿದರು.

ಪೊಲೀಸ್ ಅಧಿಕಾರಿಯಾಗಿದ್ದ ಅವರು, 1998ರಲ್ಲಿ ತೆರೆಕಂಡ ‘ಕೌರವ’ ಸಿನಿಮಾ ಮೂಲಕ ಮನೆ ಮಾತಾದರು. ಆ ಬಳಿಕ ಹಿರೇಕೆರೂರಿನಲ್ಲಿ ನಡೆದ ರೈತ ಹೋರಾಟದಲ್ಲಿ ಜೈಲು ಸೇರಿದ್ದು, ರಾಜಕೀಯ ನಾಯಕರಾಗಿ ರೂಪುಗೊಂಡರು. ಎರಡು ಬಾರಿ ಶಾಸಕರಾದರು. ಖಡಕ್ ಖದರ್, ಮೃದು ಸ್ಪಂದನೆ ಹಾಗೂ ದಿಟ್ಟ ಹಾವಭಾವದ ಮೂಲಕ ಜನರ ನಡುವೆ ಛಾಪು ಮೂಡಿಸಿದ ಅವರ ಜೊತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ವಿವರಗಳು ಇಲ್ಲಿವೆ.

ವಿಭಿನ್ನ ಕ್ಷೇತ್ರಗಳಾದ ಸಿನಿಮಾ ಮತ್ತು ರಾಜಕೀಯದ ಅನುಭವ ಹೇಗಿದೆ?

‘ರೀಲ್’ ಮತ್ತು ‘ರಿಯಲ್’ ಎರಡರಲ್ಲೂ ನಾಯಕನಾಗಿದ್ದೇನೆ. ಅಲ್ಲಿ ನಟನೆಯ ಮೂಲಕ ‘ಹಿರೋ’ಗಳಾದರೆ, ಇಲ್ಲಿ ನೈಜ ನಾಯಕತ್ವ ಬೇಕು. ಯಾವುದೇ ಕಾಯಕ, ವೃತ್ತಿ, ಹೋರಾಟದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದೇ ನನಗೆ ಯಶಸ್ಸು ನೀಡಿದೆ.

ಒಂದರ್ಥದಲ್ಲಿ ಸಿನಿಮಾ ಕ್ಷೇತ್ರವೇ ಬೇರೆ, ರಾಜಕೀಯವೇ ಬೇರೆ. ಸಿನಿಮಾದಲ್ಲಿ ನಟನೆಗೆ ಪ್ರಾಮುಖ್ಯ ಇದ್ದರೆ, ಇಲ್ಲಿ ಬದುಕಿನ ನೈಜತೆ ಇರುತ್ತದೆ. ಆದರೆ, ಸಿನಿಮಾದ ಜನಪ್ರಿಯತೆಯ ಛಾಯೆ ನನ್ನ ರಾಜಕೀಯದ ಬದುಕಿನ ಆರಂಭದ ದಿನಗಳಲ್ಲಿ ಪ್ರಭಾವ ಬೀರಿತ್ತು. ಆ ಬಳಿಕ ಸ್ಪಂದನೆ ಮತ್ತು ಸೇವೆಯಿಂದ ಜನತೆಗೆ ಹತ್ತಿರವಾದೆನು. ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಯೂ ಬಂದು ನೇರವಾಗಿ ಸಂಪರ್ಕಿಸುತ್ತಾರೆ.

 ಸಿನಿಮಾದ ಬಳಿಕ ರಾಜಕೀಯ ಹೇಗಿದೆ?

ಮೊದಲು ಸಿನಮಾ ನಟ ಎಂಬ ಛಾಯೆ ಇತ್ತು. ಆದರೆ, ನಾನು ರೈತರ ಪರವಾಗಿ ಉಗ್ರ ಹೋರಾಟ ನಡೆಸಿದಾಗ, ಜೈಲಿಗೆ ಕಳುಹಿಸಿದರೂ ಹಿಂಜರಿಯಲಿಲ್ಲ. ರೀಲ್ (ಸಿನಿಮಾ) ಮತ್ತು ರಿಯಲ್ (ನೈಜ) ಬದುಕುಗಳೆರಡರಲ್ಲೂ ನೇರ ಮತ್ತು ದಿಟ್ಟವಾಗಿ ಇರುತ್ತೇನೆ. ಸುಳ್ಳು, ಆ ಕ್ಷಣಕ್ಕೆ ಸಿಹಿ ಆಗಿರುತ್ತದೆ. ಸತ್ಯ ಕಹಿ ಆಗಿರುತ್ತದೆ. ಹೀಗಾಗಿ ಕೆಲವೊಮ್ಮೆ ಕೆಲವರಿಗೆ ಸ್ವಲ್ಪ ಕಸಿವಿಸಿ ಉಂಟಾಗಿರಬಹುದು. ಆದರೆ, ಸತ್ಯ ಅರಿವಾದ ಬಳಿಕ ಹಲವರು ಮತ್ತೆ ನನ್ನ ಬಳಿ ಬಂದಿದ್ದಾರೆ. ಬೆಂಬಲಿಸಿದ್ದಾರೆ.

ಕ್ಷೇತ್ರದಲ್ಲಿ ರಾಜಕೀಯ ಧ್ರುವೀಕರ ಣದ ಬಗ್ಗೆ?

ಬನ್ನಿಕೋಡ ನೀರಾವರಿಗೆ ಆದ್ಯತೆ ನೀಡಿದ್ದರು. ಜಾತ್ಯತೀತ ನಿಲುವಿನ ನಮ್ಮಿಬ್ಬರ ನಡುವೆ ಮತ ವಿಭಜನೆಯು ಇತರರಿಗೆ ನೆರವಾಯಿತು. ಹೀಗಾಗಿ ಅವರು ಕಾಂಗ್ರೆಸ್‌ಗೆ ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಶೇ 40ರಷ್ಟು ಮುಸ್ಲಿಮರು ಕೆಜೆಪಿ ಬೆಂಬಲಿಸಿದ್ದರು. ಆದರೆ, ಕೆಜೆಪಿಯೇ ಬಿಜೆಪಿಯ ಮುಖ ಎಂಬುವುದು ಜನತೆಗೆ ಈಗ ಅರಿವಾಗಿದೆ. ಅತ್ತ ಬಿಜೆಪಿ ಬಣ್ಣವೂ ಬಯಲಾಗಿದೆ.

ನೀವು ರಾಜಕೀಯಕ್ಕೆ ಬರಲು ಪ್ರಮುಖ ಕಾರಣವೇನು?

ನಾನು, ಹೋರಾಟದಿಂದ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ಆದರೆ, ಜನತೆ ನನ್ನ ಕೈ ಹಿಡಿದಿದ್ದಾರೆ. ಹೀಗಾಗಿ ಅವರ ಸೇವೆಗೆ ನಾನು ನನ್ನ ಬದುಕು ಸೀಮಿತವಾಗಿ ಇಟ್ಟಿದ್ದೇನೆ. ಅಲ್ಲಿರುವಾಗ (ಸಿನಿಮಾ, ಅಧಿಕಾರಿ) ಆ ಕ್ಷೇತ್ರ, ಇಲ್ಲಿ ಬಂದ ಮೇಲೆ ಈ ಕ್ಷೇತ್ರಕ್ಕೆ ನ್ಯಾಯ ಕೊಟ್ಟಿದ್ದೇನೆ. ಆ ತೃಪ್ತಿ ಇದೆ. ಇಲ್ಲಿ ಬಿ.ಸಿ.ಪಾಟೀಲ್ ಜನರಿಗೆ 24*7 ಸಿಕ್ತಾರೆ. ಮಧ್ಯವರ್ತಿ ಅಥವಾ ಎರಡನೇ ಹಂತದ ಮುಖಂಡರ ಅವಶ್ಯಕತೆ ಇಲ್ಲ. ಶಾಸಕನಾಗಿ ಕಟ್ಟಕಡೆಯ ಜನರಿಗೆ ನ್ಯಾಯ ಕೊಟ್ಟಿದ್ದೇನೆ.

 ಜನತೆ ಬಿ.ಸಿ. ಪಾಟೀಲರನ್ನು ಏಕೆ ಬೆಂಬಲಿಸಬೇಕು?

ಕಳೆದ ಬಾರಿ ಸೋಲಾದರೂ, ನಾನು ಜನ ಸೇವೆಯನ್ನು ನಿಲ್ಲಿಸಲಿಲ್ಲ. ಕಳೆದ ಐದು ವರ್ಷಗಳಲ್ಲಿ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲಕ ಕ್ಷೇತ್ರಕ್ಕೆ 72 ಕೆರೆ ತುಂಬಿಸುವ 4 ನೀರಾವರಿ ಯೋಜನೆ ತರಲು ಶ್ರಮಿಸಿದ್ದೇನೆ. ರಟ್ಟೀಹಳ್ಳಿ ತಾಲ್ಲೂಕು ರಚನೆ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದೇನೆ. ಅಲ್ಲದೇ, ಈ ಹಿಂದೆ ಎಂಟೂವರೆ ವರ್ಷ ಶಾಸಕನಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಪ್ರಮುಖವಾಗಿವೆ.

ನಿಮ್ಮ ಪ್ರಕಾರ ಹಿರೇಕೆರೂರ ಕ್ಷೇತ್ರದ ಪ್ರಮುಖ ಆದ್ಯತೆಗಳೇನು?

ನಮ್ಮ ಕ್ಷೇತ್ರದಲ್ಲಿ ಶೇ 95ರಷ್ಟು ರೈತರು ಇದ್ದಾರೆ. ಹೀಗಾಗಿ ನೀರಾವರಿ, ವಿದ್ಯುತ್ ಹಾಗೂ ಕೃಷಿಗೆ ಪೂರಕ ವ್ಯವಸ್ಥೆ ಸಿಗಬೇಕು. ಬಾಕಿ ಉಳಿದ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದು. ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರು, ಮಧ್ಯಮ ವರ್ಗದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಸಿದ್ಧ ಉಡುಪು ಘಟಕ, ಇತರ ಕೈಗಾರಿಕೆಗಳನ್ನು ಸ್ಥಾಪಿಸುವುದು, ಪ್ರತಿಯೊಬ್ಬರಿಗೂ ಶಿಕ್ಷಣ ದೊರಕುವಂತೆ ಮಾಡುವುದು ನನ್ನ ಆದ್ಯತೆ.
ಮದಗ ಮತ್ತು ಇತರ ಕೆರೆಗಳ ಅಭಿವೃದ್ಧಿ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರವಾಗಿ ರೂಪಿಸುವುದು. ಸರ್ವಜ್ಞ ಪೀಠದ ಅಭಿವೃದ್ಧಿ, ರಟ್ಟೀಹಳ್ಳಿ ತಾಲ್ಲೂಕಿಗೆ ಮೂಲಸೌಕರ್ಯ ಕಲ್ಪಿಸುವುದು ಇತ್ಯಾದಿಗಳಿವೆ.

ಈ ಬಾರಿಯ ಚುನಾವಣೆ ಹೇಗಿದೆ?

ಕಳೆದ ಐದು ವರ್ಷಗಳು ಮಾತ್ರವಲ್ಲ, ತಂದೆ– ಮಗ ಒಟ್ಟು 25 ವರ್ಷ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಆದರೆ, ಯಾವುದೇ ಪ್ರಮುಖವಾದ ಕೊಡುಗೆ ನೀಡಿಲ್ಲ. ಹೀಗಾಗಿ ಜನತೆ ನನಗೆ, ಠೇವಣಿಗೆ ಹಣ ಕೊಟ್ಟಿದ್ದಾರೆ. ರೊಟ್ಟಿ ಬುತ್ತಿ ಕಟ್ಟಿಕೊಂಡು ಬಂದು ಮೆರವಣಿಗೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನರೇ ಸ್ವಯಂ ಪ್ರೇರಣೆಯಿಂದ ಗೆಲ್ಲಿಸುವ ವಿಶ್ವಾಸ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT