ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಹಕ್ಕು ರಕ್ಷಣೆ ಸಮಾಜದ ಕರ್ತವ್ಯ

ಕಾರ್ಯಾಗಾರದಲ್ಲಿ ನ್ಯಾಯಾಧೀಶ ಎನ್‌.ಎಸ್‌.ಕುಲಕರ್ಣಿ ಕಿವಿಮಾತು
Last Updated 26 ಏಪ್ರಿಲ್ 2018, 12:25 IST
ಅಕ್ಷರ ಗಾತ್ರ

ಕುಷ್ಟಗಿ: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಹೆಚ್ಚಳಕ್ಕೆ ಸಾರ್ವಜನಿಕರಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಇಲ್ಲದಿರುವುದೂ ಪ್ರಮುಖ ಕಾರಣ ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಎನ್‌.ಎಸ್‌.ಕುಲಕರ್ಣಿ ಅಭಿಪ್ರಾಯಪಟ್ಟರು.

ಬುಧವಾರ ನ್ಯಾಯಾಲಯ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ಏರ್ಪಡಿಸಿದ್ದ ಮಕ್ಕಳ ಹಕ್ಕುಗಳ ಸಂರಕ್ಷಣೆ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಕಾನೂನಿನ ಅರಿವಿನ ಕೊರತೆಯಿಂದ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿಯಂಥ ಸಾಮಾಜಿಕ ಪಿಡುಗುಗಳು ಜೀವಂತವಾಗಿವೆ ಎಂದರು.

‘ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಬೇಕಾದರೆ ಅವರಿಗೆ ಉತ್ತಮ ಶಿಕ್ಷಣದ ಜತೆಗೆ ಅವರ ಹಕ್ಕುಗಳನ್ನು ಸಂರಕ್ಷಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ. ಮಕ್ಕಳು ಬದುಕು, ಆರೋಗ್ಯ, ಜೀವನ ವಿಕಾಸ, ಶಿಕ್ಷಣ ಇವುಗಳಿಂದ ಮಕ್ಕಳು ವಂಚಿತರಾಗಬಾರದು ಎಂಬ ಕಾರಣಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ ಜಾರಿಯಲ್ಲಿದೆ’ ಎಂದರು.

‘ವಯಸ್ಸಿಗೆ ಅನುಗುಣವಾಗಿ ಸ್ವಚ್ಛಂದ ಬದುಕಿಗೆ ತೊಂದರೆಯಾಗಬಾರದು ಮತ್ತು ಅವರ ಅಭಿಪ್ರಾಯಗಳಿಗೂ ಮನ್ನಣೆ ದೊರೆಯಬೇಕು. ಈ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾನೂನು ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ’ ಎಂದು ಹೇಳಿದರು.

ಸರ್ಕಾರಿ ವಕೀಲ ಎ.ಐ.ಹಾದಿಮನಿ ಉಪನ್ಯಾಸ ನೀಡಿ, ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳ ಹಕ್ಕುಗಳ ರಕ್ಷಿಸುವ ಸಲುವಾಗಿ ಹೊಸ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪ ಸಾಬೀತಾದರೆ ಗಲ್ಲು ಶಿಕ್ಷೆಗೆ ಗುರಿಪಡಿಸುವ ಕಾನೂನು ರಚನೆಯಾಗಿದೆ’ ಎಂದರು.

‘ಮಕ್ಕಳ ಹಕ್ಕುಗಳನ್ನು ಕಸಿದು ಕೊಳ್ಳುವ ಪ್ರವೃತ್ತಿ ಸಮಾಜದಲ್ಲಿ ಬದಲಾಗಬೇಕು. ಭಾವಿ ಪ್ರಜೆಗಳಾ ಗಿರುವ ಮಕ್ಕಳನ್ನು ನಿರ್ಲಕ್ಷಿಸದೆ ಗೌರವಿ ಸುಂತಾಗಬೇಕು’ ಎಂದು ಹೇಳಿದರು.

ವಕೀಲರಾದ ಸಂಗನಗೌಡ ಪಾಟೀಲ, ನಾಗಪ್ಪ ಸೂಡಿ, ಎಚ್‌.ಬಿ.ಕುರಿ ಮಾತನಾಡಿದರು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಪರಸಪ್ಪ ಗುಜಮಾಗಡಿ ಅಧ್ಯಕ್ಷತೆ ವಹಿಸಿದ್ದರು. ಕಿರಿಯಶ್ರೇಣಿ ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಬಿ.ಕೇಶವಮೂರ್ತಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರಫೀಕ್ ಅಹ್ಮದ್ ಇದ್ದರು.

ಚಂದ್ರಶೇಖರ ಉಪ್ಪಿನ, ಡಿ.ಗೋಪಾಲರಾವ ನಿರೂಪಿಸಿದರು. ಎಚ್‌.ಆರ್‌.ನಾಯಕ ವಂದಿಸಿದರು.

**
ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಾಬೀತಾದರೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ರೂಪುಗೊಂಡಿದೆ. ಇದು ಉತ್ತಮ ಬೆಳವಣಿಗೆ
– ಎ.ಐ.ಹಾದಿಮನಿ, ಸರ್ಕಾರಿ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT