ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ವೈಭವ ಮರಳಿ ಪಡೆಯಲು ಹರ ಸಾಹಸ ಯುವ ನಾಯಕನ ಮನೆಮನೆ ಪ್ರಚಾರ ಭರಾಟೆ

ಯುವ ನಾಯಕ ವೇದವ್ಯಾಸ ಕಾಮತ್‌ ಮನೆಮನೆ ಪ್ರಚಾರ ಭರಾಟೆ
Last Updated 26 ಏಪ್ರಿಲ್ 2018, 12:44 IST
ಅಕ್ಷರ ಗಾತ್ರ

ಮಂಗಳೂರು: ಚುನಾವಣಾ ಕಣದಲ್ಲಿ ಸೆಣಸಲು ಬಹಳ ಹಿಂದೆಯೇ ಸಿದ್ಧತೆ ಆರಂಭಿಸಿದ್ದ ವೇದವ್ಯಾಸ ಕಾಮತ್‌ ಮಂಗಳೂರು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ದಿನದಿಂದಲೇ ಮನೆ ಮನೆ ಪ್ರಚಾರ ಶುರು ಮಾಡಿದ್ದಾರೆ. ಪ್ರತಿದಿನ ಬೆಳಿಗ್ಗೆ 6.30ಕ್ಕೇ ಮನೆಯಿಂದ ಹೊರಡುವ ಕಾಮತ್‌ ಬುಧವಾರ ದೇರೆಬೈಲ್‌, ಕದ್ರಿ ಕಂಬಳ, ಮಲ್ಲಿಕಟ್ಟೆ, ಶಕ್ತಿ ನಗರ,  ಸೆಂಟ್ರಲ್‌ ವಾರ್ಡ್‌ನ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.

1994ರಿಂದ 2008ರವರೆಗೆ ನಾಲ್ಕು ಬಾರಿ ನಿರಂತರ ಬಿಜೆಪಿ ವಶವಾಗಿದ್ದ ಮಂಗಳೂರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ 2013ರಲ್ಲಿ ಕಾಂಗ್ರೆಸ್ ವಶವಾಯಿತು. ಇದೀಗ ಬಿಜೆಪಿ ಯುವನಾಯಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತ ಎಂದೇ ಗುರುತಿಸಿಕೊಂಡಿರುವ  ವೇದವ್ಯಾಸ ಕಾಮತ್‌ ಅವರಿಗೆ  ಬಿಜೆಪಿ ಟಿಕೆಟ್‌ ನೀಡಿದ್ದು,  ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸುವ ಹುಮ್ಮಸ್ಸಿನಿಂದ ಪ್ರಚಾರದ ಭರಾಟೆ ಶುರುವಾಗಿದೆ.

ನಗರದ ಪುರಾತನ ದೇಗುಲವಾದ ಉರ್ವ ಮಾರಿಗುಡಿ ದೇವಸ್ಥಾನದಲ್ಲಿ ಮುಂಜಾನೆ ಪ್ರಾರ್ಥನೆ ಸಲ್ಲಿಸಿ ಪ್ರಚಾರ ಅಭಿಯಾನ ಶುರು ಮಾಡಿದ ಕಾಮತ್‌, ಬಳಿಕ ಮನೆಗಳಿಗೆ ಭೇಟಿ ನೀಡಿದರು. ಈ ಬಾರಿ ಬಿಜೆಪಿಯನ್ನು ಯಾಕೆ ಗೆಲ್ಲಿಸಬೇಕು ಎಂಬ ವಿವರ ಇರುವ ಮಾಹಿತಿ ಜೊತೆಗೆ ತಮ್ಮ ಪರಿಚಯ ಇರುವ ಪತ್ರವನ್ನು ಅವರು ಪ್ರತಿಯೊಬ್ಬರಿಗೆ ನೀಡಿದರು. ದೇರೆಬೈಲ್‌ ನೈಋತ್ಯದ 26ನೇ ವಾರ್ಡ್‌ನಲ್ಲಿ ಪ್ರಮುಖ ಕಾರ್ಯಕರ್ತರು ಅವರ ಜೊತೆಗೂಡಿ ತಮ್ಮ ನಾಯಕನಿಗೆ ಬೆಂಬಲ ಸೂಚಿಸಿದರು. ಸುಮಾರು 70 ಮನೆಗಳ ಸಂಪರ್ಕ ನಡೆಸಿದ ಬಳಿಕ ಕೊಡಿಯಾಲ್‌ಬೈಲ್‌ನಲ್ಲಿರುವ ತಮ್ಮ ಚುನಾವಣಾ ಕಚೇರಿಗೆ ಬಂದು, ಪ್ರಮುಖ ಕಾರ್ಯಕರ್ತರ ಜೊತೆಗೆ ಪ್ರಚಾರ ಅಭಿಯಾನದ ಯೋಜನೆ ರೂಪಿಸಿದರು. ಹಲವು ಸುದ್ದಿವಾಹಿನಿಗಳ ಜೊತೆ ಮಾತನಾಡಿದರು.

ಕಾರ್‌ಸ್ಟ್ರೀಟ್‌ನ ರಾಧಾಕೃಷ್ಣ ದೇವಸ್ಥಾನದಲ್ಲಿ ನಾರಾಯಣ ಭಟ್‌, ಗಿರಿಧರ ಭಟ್‌ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು, ಮಲ್ಲಿಕಟ್ಟೆಯ ಜುಗುಲ್‌ ಸಭಾಂಗಣದಲ್ಲಿ ಮಿಥುನ್‌ ಹಾಗೂ ಜ್ಯೋತಿ ಅವರನ್ನು ಅಭಿನಂದಿಸಿದರು. ಶಕ್ತಿನಗರದಲ್ಲಿ ಹಲವು ಮನೆಗಳಿಗೆ ಭೇಟಿ ನೀಡಿದ ಬಳಿಕ ಬಿಕರ್ನಕಟ್ಟೆಯ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿಯೇ ಮಧ್ಯಾಹ್ನದ ಊಟ ಮಾಡಿದರು. ಮತ್ತೆ ಚುನಾವಣಾ ಕಚೇರಿಯಲ್ಲಿ ಮಾಧ್ಯಮದವರ ಭೇಟಿ ನಡೆಸಿ ಸಂಜೆ ಸೆಂಟ್ರಲ್‌ ವಾರ್ಡ್‌ಗೆ ಭೇಟಿ ನೀಡಿದರು.

ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರಾದ ವೇದವ್ಯಾಸ ಕಾಮತ್‌, ತಾವು ಆರಂಭಿಸಿದ ಸೇವಾಂಜಲಿ ಚಾರಿಟಬಲ್‌ ಟ್ರಸ್ಟ್‌ ಮೂಲಕ ಜಾತಿಯನ್ನು ಮೀರಿ ಸಮಾಜಮುಖಿಯಾಗಿ ಬೆಳೆಯಲು ಪ್ರಯತ್ನಿಸಿದವರು. ಮುಂಬೈನಲ್ಲಿ ಪುಟ್ಟ ಮಗುವಿನ ಚಿಕಿತ್ಸೆಗ ನೆರವಾಗುವ ಸ್ಟೆಮ್‌ಸೆಲ್‌ ಹುಡುಕಾಟದ ಕೆಲಸ ಸಂದರ್ಭದಲ್ಲಿ ಹೆಚ್ಚು ಗುರುತಿಸಿಕೊಂಡವರು.

ಭುವನೇಂದ್ರ ಸಹಕಾರಿ ಸಂಘ ಆರಂಭಿಸಿದ ಹೆಗ್ಗಳಿಕೆ ಅವರದ್ದು. ಅಲ್ಲದೆ ಮಂಗಳಾ ಕ್ಯಾಶ್ಯೂ ಇಂಡಸ್ಟ್ರೀಸ್‌ ಪಾಲುದಾರರಾಗಿರುವ ಅವರು, ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿಯೂ ತೊಡಗಿಸಿಕೊಂಡವರು. ಪತ್ನಿ ವೃಂದಾ ಮತ್ತು ಮಕ್ಕಳಾದ 6ನೇ ತರಗತಿಯಲ್ಲಿ ಓದುವ ವರುಣ್‌, 2ನೇ ತರಗತಿಯಲ್ಲಿ ಓದುವ ವೇದಾಂತ್‌  ಅವರ ಸ್ಫೂರ್ತಿ. ತಂದೆ ವಾಮನ್‌ ಕಾಮತ್‌, ತಾಯಿ ತಾರಾ ಕಾಮತ್‌ ಮತ್ತು  ಅಣ್ಣ ವಾಸು ಕಾಮತ್‌ ಕುಟುಂಬದ ಜೊತೆಗೆ ಅವಿಭಕ್ತ ಕುಟುಂಬದಲ್ಲಿ ವಾಸಿಸುವ ವೇದವ್ಯಾಸ್‌, ಬಿ.ಕಾಂ ಓದಿದ್ದಾರೆ. ಧಾರ್ಮಿಕ ವಿಧಿಗಳಲ್ಲಿ ಅಪಾರ ನಂಬಿಕೆ ಹೊಂದಿರುವವರು.

ಚಿಕ್ಕಂದಿನಲ್ಲಿಯೇ ಆರೆಸ್ಸೆಸ್‌ ಸಂಪರ್ಕ ಹೊಂದಿದ್ದು, ಸೇವಾ ಕಾರ್ಯಗಳತ್ತ ಹೆಚ್ಚು ಗಮನ ಹರಿಸಿದ್ದಾರೆ. ಅಶಕ್ತರಿಗೆ ಪ್ರತಿತಿಂಗಳು ಪಿಂಚಣಿ ನೀಡುವ, ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸವನ್ನು ಸೇವಾಂಜಲಿ ಟ್ರಸ್ಟ್‌ ಮೂಲಕ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ವಿವಿಧ ಹುದ್ದೆ ನಿಭಾಯಿಸಿ, ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷರಾಗಿ ಹಿರಿಯ ನಾಯಕರ ವಿಶ್ವಾಸ ಗಳಿಸಿಕೊಂಡಿದ್ದಾರೆ. ಕಾರ್ಯಕರ್ತರ ಪಡೆ ಅವರ ಬೆನ್ನಿಗಿರುವುದನ್ನು ಗಮನಿಸಿ ಇತ್ತೀಚೆಗೆ ನಡೆದ ‘ಮಂಗಳೂರು ಚಲೋ’ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಅವರಿಗೆ ಪಕ್ಷವು ನಿರ್ವಹಣಾ ಜವಾಬ್ದಾರಿ ನೀಡಿತ್ತು.

ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ಅತೀ ಚಿಕ್ಕ ಕ್ಷೇತ್ರ ಮಂಗಳೂರು ದಕ್ಷಿಣ. ನಗರದ 38 ವಾರ್ಡ್‌ಗಳು ಈ ಕ್ಷೇತ್ರಕ್ಕೆ ಬರುತ್ತವೆ. 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎನ್‌.ಯೋಗೀಶ್‌ ಭಟ್‌ ಅವರಿಗಿಂತ ಕಾಂಗ್ರಸ್‌ನಿಂದ ಮೊತ್ತ ಮೊದಲ ಬಾರಿ ಸ್ಪರ್ಧಿಸಿದ ಜೆ. ಆರ್‌. ಲೋಬೊ ಅವರು 12,275 ಮತಗಳ ಅಂತರದಿಂದ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT