ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಎಂದಿಗೂ ನಾಯಕತ್ವದ ಮೇಲೆ ನಿಂತಿಲ್ಲ

ಗೆಲುವು ನೂರಕ್ಕೆ ನೂರು ಖಚಿತ: ಎಚ್.ಎಂ.ರೇವಣ್ಣ ವಿಶ್ವಾಸ
Last Updated 26 ಏಪ್ರಿಲ್ 2018, 13:20 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಶತಮಾನದ ಇತಿಹಾಸದ ಕಾಂಗ್ರೆಸ್ ಪಕ್ಷವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಗೆಲುವು ನೂರಕ್ಕೆ ನೂರು ಖಚಿತ’ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೇವೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಈಗಲೂ ಬಲಿಷ್ಠವಾಗಿದೆ. ಕಾಂಗ್ರೆಸ್ ಎಂದಿಗೂ ನಾಯಕತ್ವದ ಮೇಲೆ ನಿಂತಿಲ್ಲ. ನಾಯಕರು ಬರುತ್ತಾರೆ ಹೋಗುತ್ತಾರೆ. ಆದರೆ ನಿಷ್ಠಾವಂತ ಕಾರ್ಯಕರ್ತರ ಪಡೆ ಶತಮಾನದಿಂದಲೂ ಪಕ್ಷದ ಬೆನ್ನಿಗೆ ನಿಂತಿದೆ’ ಎಂದರು.

‘ಕೆಲವರು ಈಜಲು ಸಾಧ್ಯವಾಗದೆ ಹೊರ ಹೋಗುತ್ತಾರೆಯೇ ಹೊರತು, ನಿಷ್ಠಾವಂತ ಕಾರ್ಯಕರ್ತರು ಯಾರೂ ಅಂತಹವರ ಹಿಂದೆ ಹೋಗುವುದಿಲ್ಲ’ ಎಂದು ರೇವಣ್ಣ ಅವರು ಶಾಸಕ ಯೋಗೇಶ್ವರ್ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ಅವರು ನಡೆಸಿದರು.

ಕೆಪಿಸಿಸಿ ಕಾರ್ಯದರ್ಶಿ ಶಾರದಾಗೌಡ ಮಾತನಾಡಿ, ‘ಕೆಲವರು ಪಕ್ಷದಿಂದ ಎಲ್ಲವನ್ನೂ ಅನುಭವಿಸುತ್ತಾರೆ. ಆನಂತರ ಎಲ್ಲವೂ ತಮ್ಮಿಂದಲೇ ಎನ್ನುವಂತೆ, ತಮ್ಮ ಅನುಕೂಲಕ್ಕೆ ತಕ್ಕಂತೆ ಪಕ್ಷವನ್ನು ಬಳಸಿಕೊಂಡು ಸಮಯ ಸಾಧಕತನವನ್ನು ಪ್ರದರ್ಶಿಸಿ ಪಕ್ಷಕ್ಕೆ ದ್ರೋಹ ಬಗೆಯುತ್ತಾರೆ’ ಎಂದು ಶಾಸಕ ಯೋಗೇಶ್ವರ್ ಹೆಸರು ಹೇಳದೆ ಕುಟುಕಿದರು.

ಕಾಂಗ್ರೆಸ್ ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯಿತಿ ಹಾಗೂ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರದ ಸೂತ್ರ ಹಿಡಿದಿದೆ.ಇದು ಪಕ್ಷ ತಾಲ್ಲೂಕಿನಲ್ಲಿ ಗಟ್ಟಿಯಾಗಿರುವುದು ಸಾಕ್ಷಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ. ವೀರೇಗೌಡ ಮಾತನಾಡಿ, ‘ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ರಾಜ್ಯ ಮಾಡಬೇಕೆನ್ನುವ ಬಿಜೆಪಿಯ ನಾಯಕರ ಆಸೆ ಎಂದಿಗೂ ಈಡೇರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಎಷ್ಟೇ ಬಾರಿ ಬರಲಿ, ಅವರ ಬೇಳೆ ಇಲ್ಲಿ ಏನೂ ಬೇಯುವುದಿಲ್ಲ. ರಾಜ್ಯದ ಜನತೆ ಪ್ರಜ್ಞಾವಂತರಾಗಿದ್ದು, ಅಭಿವೃದ್ಧಿ ಪರ ಇರುವವರಿಗೆ ಮಣೆ ಹಾಕುತ್ತಾರೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಗಂಗಾಧರ್, ಜಿಲ್ಲಾ ಪಂಚಾಯತಿ ಸದಸ್ಯೆ ಸುಗುಣ, ಮುಖಂಡ ತಿಮ್ಮಪ್ಪ
ರಾಜು, ತಾಲ್ಲೂಕು ಗ್ರಾಮಾಂತರ ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಶಿವಮಾದು, ಚನ್ನಪಟ್ಟಣ ನಗರ ಘಟಕದ ಪ್ರಚಾರ ಸಮಿತಿ
ಅಧ್ಯಕ್ಷ ಚೇತನ್ ಕೀಕರ್, ಬೊಮ್ಮನಾಯಕನಹಳ್ಳಿ ಕೃಷ್ಣಪ್ಪ ಭಾಗವಹಿಸಿದ್ದರು.

ಗೃಹಪ್ರವೇಶ: ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ಪಟ್ಟಣದ ಕರ್ನಾಟಕ ಗೃಹಮಂಡಳಿ ಬಡಾವಣೆ
ಯಲ್ಲಿ (ಕೆ.ಎಚ್.ಬಿ. ಬಡಾವಣೆ) ಬುಧವಾರ ಗೃಹಪ್ರವೇಶ ಮಾಡಿದರು.

ಬಡಾವಣೆಯಲ್ಲಿ ನೂತನವಾಗಿ ಬಾಡಿಗೆಗಾಗಿ ಮನೆ ಮಾಡಿರುವ ರೇವಣ್ಣ ಅವರು ಪತ್ನಿ ಹಾಗೂ ಮಕ್ಕಳ ಸಮೇತರಾಗಿ ಪೂಜೆ ಸಲ್ಲಿಸಿ ಗೃಹಪ್ರವೇಶ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT