ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವರಾಜು ವಿರುದ್ಧ ವಾಗ್ದಾಳಿ

ಜಿಲ್ಲೆಯಲ್ಲಿ ಬಿಜೆಪಿ ಸೋಲು, ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆಗೆ ಜಿಎಸ್‌ಬಿ ಕಾರಣ: ಸೊಗಡು ಶಿವಣ್ಣ ಆರೋಪ
Last Updated 26 ಏಪ್ರಿಲ್ 2018, 13:38 IST
ಅಕ್ಷರ ಗಾತ್ರ

ತುಮಕೂರು: ‘2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ಜಿಲ್ಲೆಯಲ್ಲಿ ಬಿಜೆಪಿ ಸೋಲಿಗೆ ಜಿ.ಎಸ್.ಬಸವರಾಜು ಅವರೇ ಕಾರಣ. ಈಗ ಯಡಿಯೂರಪ್ಪ ಅವರ ಮೇಲೆ ಪ್ರಭಾವ ಬೀರಿ ಹಲವು ದಶಕಗಳ ಕಾಲ ಪಕ್ಷಕ್ಕಾಗಿ ದುಡಿದ ನನ್ನಂತಹ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲು ಕಾರಣರಾಗಿದ್ದಾರೆ’ ಎಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿ.ಎಸ್.ಬಸವರಾಜು ಬಿಜೆಪಿಗೆ ಬಂದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಅವರ ಆಯ್ಕೆಗೆ ಶ್ರಮಿಸಿದ್ದೆ. ಆದರೆ, ನಮಗೇ ಅವರು ಮೋಸ ಮಾಡಿದರು. ಅಲ್ಲದೇ ಬಸವರಾಜು ಮತ್ತು ಅವರ ಮಗ ನಮ್ಮನ್ನು ರಾಜಕೀಯವಾಗಿ ಹತ್ತಿಕ್ಕಲು ಅನೇಕ ರೀತಿಯಲ್ಲಿ ಚಟುವಟಿಕೆ ನಡೆಸಿದರು. ಅವರ ಇಂತಹ ರಾಜಕೀಯದ ಬಗ್ಗೆ ಅಸಮಾಧಾನವಿದೆ’ ಎಂದು ಹೇಳಿದರು.

‘ಐದು ವರ್ಷಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಸವರಾಜು ಅವರು ತಮ್ಮ ಮಗನನ್ನು ಕೆಜೆಪಿ ಅಭ್ಯರ್ಥಿಯನ್ನಾಗಿ ಚುನಾವಣೆಗೆ ನಿಲ್ಲಿಸಿದರು. ಇಡೀ ಜಿಲ್ಲೆಯಲ್ಲಿ ಬಿಜೆಪಿ ಸೋಲಿಗೆ ಕಾರಣರಾದರು. ಜಿಲ್ಲೆಯಲ್ಲಿ ಜಾತಿ ರಾಜಕಾರಣ ಪ್ರಾರಂಭವಾಗಲು ಅವರೇ ಕಾರಣ’ ಎಂದು ಆರೋಪಿಸಿದರು.

‘2012–13ರಲ್ಲಿ ಬಿಜೆಪಿ ಸರ್ಕಾರದ ಆಡಳಿತ ಕೊನೆಯ ವರ್ಷದಲ್ಲಿ ತುಮಕೂರು ನಗರಾಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಬಳಕೆಗೆ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಟೆಂಡರ್ ಅನುಮೋದನೆಯಾಗಲು ಬಿಡಲಿಲ್ಲ. ತುಮಕೂರು ನಗರಸಭಾ ಗುತ್ತಿಗೆದಾರರ ಸಂಘ ಎಂಬ ಅನಧಿಕೃತ ಸಂಘ ಸ್ಥಾಪಿಸಿ ಸರ್ಕಾರದ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಕಾಮಗಾರಿ ಸ್ಥಗಿತಗೊಳಿಸಿದರು’ ಎಂದು ಆಪಾದಿಸಿದರು.

ಯಡಿಯೂರಪ್ಪ ಅವರು ಕೆ.ಜೆ.ಪಿ ಪ್ರಾರಂಭಿಸಿದಾಗ ಸಂಘದ ಮೂಲದವರು ಮತ್ತು ಮೂಲ ಬಿಜೆಪಿ ಕಾರ್ಯಕರ್ತರು ಬಿಜೆಪಿಯಲ್ಲಿಯೇ ಉಳಿದುಕೊಂಡಿದ್ದೆವು. ನಾನು ಕೆಜಿಪಿ ಸೇರಲಿಲ್ಲ ಎಂಬ ಅಸಮಧಾನವು ಯಡಿಯೂರಪ್ಪ ಅವರಿಗೆ ಇದೆ. ಇದನ್ನೇ ಅವಕಾಶವಾಗಿ ಬಳಸಿಕೊಂಡ ಬಸವರಾಜು ನಮ್ಮ ವಿರುದ್ಧ ಯಡಿಯೂರಪ್ಪಗೆ ಚಾಡಿ ಹೇಳಿ ಪಿತೂರಿ ನಡೆಸಿದರು. ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ತಮ್ಮ ಮತ್ತು ತಮ್ಮ ಕುಟುಂಬದ ರಾಜಕಾರಣದ ಉಳಿವಿಗಾಗಿ ಪಕ್ಷದಲ್ಲಿ ಒಡಕು ಮೂಡಿಸುವ ರಾಜಕಾರಣ ಮಾಡಿದರು ಎಂದು ಟೀಕಿಸಿದರು.

‘2014ರಲ್ಲಿ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಸೇರ್ಪಡೆಯಾದಾಗ ಬಸವರಾಜು ಬಿಜೆಪಿಗೆ ಬಂದರು. ಲೋಕಸಭೆಗೆ ಸ್ಪರ್ಧಿಸಿ ಮೋದಿ ಹವಾದಲ್ಲಿಯೂ ಸೋಲುಂಡರು. ಬಳಿಕ ಯಡಿಯೂರಪ್ಪ ಅವರ ಶಿಫಾರಸಿನಂತೆ ತಮ್ಮ ಮಗನನ್ನೇ ಬಿಜೆಪಿ ಜಿಲ್ಲಾಧ್ಯಕ್ಷನನ್ನಾಗಿ ಮಾಡಿದರು. ಪಕ್ಷದ ಮೂಲ ಕಾರ್ಯಕರ್ತರನ್ನು ದೂರವಿಡಲಾಯಿತು. 2015ರಿಂದ ಇಲ್ಲಿಯವರೆಗೂ ಪಕ್ಷದ ಕಾರ್ಯಕ್ರಮಗಳಿಂದ ದೂರ ಇಡಲಾಗಿದೆ’ ಎಂದು ಆರೋಪಿಸಿದರು.

‘ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷದ್ರೋಹಿ ಅಲ್ಲ. ಕಾರ್ಯಕರ್ತರು, ಅಭಿಮಾನಿಗಳು, ಹಿತಚಿಂತಕರ ಭಾವನೆಗೆ ಬದ್ಧನಾಗಿರುತ್ತೇನೆ. ಕಾರ್ಯಕರ್ತರ ಋಣವಿದ್ದು, ಅವರ ಅಭಿಪ್ರಾಯದಂತೆಯೇ ನಡೆಯುತ್ತೇನೆ’ ಎಂದು ಹೇಳಿದರು.

‘ನಾನು ಆರ್.ಎಸ್.ಎಸ್ ಹಾಗೂ ಬಿಜೆಪಿಯ ಮೂಲ ಕಾರ್ಯಕರ್ತ. ನನಗೆ ರಾಜ್ಯದ ಪಕ್ಷದ ನಾಯಕರು ನನ್ನ ಸೇವೆಯನ್ನು ಕಡೆಗಣಿಸಿರುವ ಬಗ್ಗೆ ಅಸಮಾಧಾನವಿದೆ. ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ನನ್ನ ಅಭಿಪ್ರಾಯ ಕೇಳಲಿಲ್ಲ’ ಎಂದು ಟೀಕಿಸಿದರು.

‘ಹತ್ತಾರು ವರ್ಷಗಳ ಕಾಲ ಪಕ್ಷಕ್ಕೆ ದುಡಿದಿರುವ ವ್ಯಕ್ತಿಗಳನ್ನು ಕಡೆಗಣಿಸಿರುವ ಬಗ್ಗೆ ನೋವಿದೆ. ಈಗ ಪಕ್ಷ ಆಯ್ಕೆ ಮಾಡಿರುವ ಅಭ್ಯರ್ಥಿಗಳಲ್ಲಿ ಸಾಮರ್ಥ್ಯದ ಕೊರತೆ ಇದೆ. ಪಕ್ಷದ ಬಗ್ಗೆ ಅನೇಕರಲ್ಲಿ ಅಭಿಮಾನ ಬದಲಾಗಿ ಸ್ವಾರ್ಥ ತುಂಬಿದೆ ಎಂದು ಸಾರ್ವಜನಿಕರೇ ಹೇಳುತ್ತಿದ್ದಾರೆ’ ಎಂದು ತಿಳಿಸಿದರು.

‘ನಾವು ಪಕ್ಷದ ಮೂಲ ಕಾರ್ಯಕರ್ತರು. ಆದರೆ, ಇಂದು ಪಕ್ಷದಲ್ಲಿಯೇ ಬೆಲೆ ಇಲ್ಲದಂತಾಗಿದೆ. ಈಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂದಾಗ ನನಗೆ ಮತ್ತು ಎಂ.ಬಿ.ನಂದೀಶ್ ಅವರಿಗೆ ಎರಡು ಪಾಸ್ ಮಾತ್ರ ಕೊಡಲಾಯಿತು. ಅನೇಕರಿಗೆ ಕೊಡಲೇ ಇಲ್ಲ. ಇದು ವಿಪರ್ಯಾಸ’ ಎಂದು ಹೇಳಿದರು.

ಪಕ್ಷದ ಮುಖಂಡ ಎಂ.ಬಿ.ನಂದೀಶ್, ಶಾಂತರಾಜು, ಪ್ರಕಾಶ್, ಜಿ.ಕೆ.ಬಸವರಾಜು, ಕೆ.ಪಿ.ಮಹೇಶ್, ನವಿನ್‌ಕುಮಾರ್ ಗೋಷ್ಠಿಯಲ್ಲಿದ್ದರು.

ಏಕಪಕ್ಷೀಯ ನಿರ್ಧಾರ

'ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಬೆಳವಣಿಗೆಯ ಬಗ್ಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ' ಎಂದು ಸೊಗಡು ಶಿವಣ್ಣ ಹೇಳಿದರು.

‘ಅವರ ಈ ನಿರ್ಧಾರದ ಬಗ್ಗೆ ನನ್ನಂತಹ ಮೂಲ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ನನ್ನ ಮೇಲೆ ರಾಜಕೀಯ ದ್ವೇಷ ಸಾಧಿಸಿದ್ದಕ್ಕೆ ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT