ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌: ಮೇಲ್ವರ್ಗಕ್ಕೆ ಮಣೆ ಹಾಕಿದ ಬಿಜೆಪಿ

ಮುಸ್ಲಿಂ ವೋಟ್‌ ಬ್ಯಾಂಕ್‌ ಮೇಲೆ ಕಣ್ಣಿಟ್ಟು ಟಿಕೆಟ್ ನೀಡಿದ ಕಾಂಗ್ರೆಸ್‌; ಹಿಂದುಳಿದವರಿಗೂ ಮನ್ನಣೆ ನೀಡಿದ ಜೆಡಿಎಸ್‌
Last Updated 26 ಏಪ್ರಿಲ್ 2018, 13:57 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಜಾತಿ ಸಮೀಕರಣದ ಸೂತ್ರದಡಿ ಮೂರು ಪ್ರಮುಖ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಎಂಟು ಕ್ಷೇತ್ರಗಳಲ್ಲಿ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರ ಹೊರತು ಪಡಿಸಿದರೆ ಉಳಿದ ಏಳು ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದ ಪ್ರಬಲ ಜಾತಿಗಳಾದ ಪಂಚಮಸಾಲಿ, ಗಾಣಿಗ, ರಡ್ಡಿ ಸಮಾಜದ ಪಾಟೀಲರೇ ಹೆಚ್ಚಿನ ಟಿಕೆಟ್‌ ಗಿಟ್ಟಿಸುವಲ್ಲಿ ಪಾರಮ್ಯ ಮೆರೆದಿದ್ದು, ಗೆಲುವಿಗಾಗಿ ಪರಸ್ಪರ ಸೆಣೆಸಲಿದ್ದಾರೆ.

ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 2018ರ ಮಾರ್ಚ್‌ ಅಂತ್ಯಕ್ಕೆ 17,64,436 ಇದೆ. ಇದರಲ್ಲಿ ಮುಸ್ಲಿಮರ ಮತಗಳೇ ಹೆಚ್ಚಿವೆ. ಮುಸ್ಲಿಮರ ನಂತರ ಪಂಚಮಸಾಲಿ ಸಮಾಜದ ಮತಗಳು ಹೆಚ್ಚಿದ್ದು, ಜಿಲ್ಲೆಯಲ್ಲಿ ಅತ್ಯಧಿಕ ಮತ ಹೊಂದಿದ ಎರಡನೇ ಸಮಾಜ ಇದಾಗಿದೆ.

ಹಾಲುಮತ (ಕುರುಬ) ಸಮಾಜದ ಮತಗಳು ಹೆಚ್ಚಿದ್ದು, ಮೂರನೇ ಸ್ಥಾನ ಪಡೆದಿವೆ. ಇದಕ್ಕೆ ಸನಿಹದಲ್ಲೇ
ಪರಿಶಿಷ್ಟ ಜಾತಿಯ ಮತಗಳು ಇವೆ. ಒಂದು ಸಾವಿರ ಸಂಖ್ಯೆಯೊಳಗಿನ ವ್ಯತ್ಯಾಸವಿದೆಯಷ್ಟೇ. ನಂತರದ ಸ್ಥಾನದಲ್ಲಿ ಲಂಬಾಣಿ, ಗಾಣಿಗ, ರಡ್ಡಿ, ಗಂಗಾ ಮತಸ್ಥ, ಬಣಜಿಗ ಸಮಾಜದ ಮತಗಳು ಬರುತ್ತವೆ ಎಂಬುದು ಅಂಕಿ–ಅಂಶಗಳ ದಾಖಲೆಗಳಿಂದ ತಿಳಿದು ಬಂದಿದೆ.

ಪಂಚಮಸಾಲಿ ಪ್ರಾಬಲ್ಯ: ಜಿಲ್ಲೆಯ ಮತದಾರರಲ್ಲಿ ಹೆಚ್ಚು ಮತದಾರರನ್ನು ಹೊಂದಿರುವ ಎರಡನೇ ಸಮಾಜ ಎಂಬ ಹೆಗ್ಗಳಿಕೆ ಹೊಂದಿರುವ ಪಂಚಮಸಾಲಿ ಸಮಾಜಕ್ಕೆ ಮೂರು ಪಕ್ಷಗಳು ಮಣೆ ಹಾಕಿವೆ. ಒಟ್ಟು ಆರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕಾಂಗ್ರೆಸ್‌ ಬಸವನಬಾಗೇವಾಡಿ
ಯಿಂದ ಹಾಲಿ ಶಾಸಕ ಶಿವಾನಂದ ಎಸ್‌ ಪಾಟೀಲರನ್ನೇ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೆ, ಬಿಜೆಪಿ ಚುನಾವಣೆ ಹೊಸ್ತಿಲಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಬಸನಗೌಡ ಪಾಟೀಲ ಯತ್ನಾಳರನ್ನು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಮೂಲಕ ಉತ್ತರ ಕರ್ನಾಟಕದಲ್ಲಿ ಪ್ರಬಲ ವಾಗಿ ರುವ ಪಂಚಮಸಾಲಿ ಸಮುದಾಯದ ಒಲವು ಗಳಿಸಿಕೊಳ್ಳಲು ಯತ್ನಿಸಿದೆ.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲಗೆ ಬಬಲೇಶ್ವರದಲ್ಲಿ ಸೆಡ್ಡು ಹೊಡೆಯಲಿಕ್ಕಾಗಿಯೇ ಜೆಡಿಎಸ್‌ನಲ್ಲಿದ್ದ ಪಂಚಮಸಾಲಿ ಸಮಾಜದ ಪ್ರಬಲ ಅಭ್ಯರ್ಥಿ ವಿಜುಗೌಡ ಪಾಟೀಲರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಟಿಕೆಟ್‌ ನೀಡಿದೆ. ಇನ್ನು ಜೆಡಿಎಸ್‌ ಸಹ ಈ ಬಾರಿ ಮೂವರು ಪಂಚಮಸಾಲಿ ಸಮುದಾಯದ ಅಭ್ಯರ್ಥಿಗಳನ್ನು ಕಣ
ಕ್ಕಿಳಿಸಿದೆ. ಈ ಹಿಂದಿನ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜಕ್ಕೆ ಹೆಚ್ಚಿನ ಮನ್ನಣೆ ನೀಡಿತ್ತು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ,ಮನಗೂಳಿ ಸಿಂದಗಿಯಿಂದ ಕಣಕ್ಕಿಳಿದರೆ, ಬಸವನ ಬಾಗೇವಾಡಿಯಿಂದ ಸೋಮನಗೌಡ (ಅಪ್ಪುಗೌಡ) ಪಾಟೀಲ ಅಖಾಡಕ್ಕಿಳಿದಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ಹುಲ್ಲಿನ ಹೊರೆ ಹೊತ್ತ ರಾಜುಗೌಡ ಪಾಟೀಲ ಕುದರಿಸಾಲವಾಡಗಿಗೆ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ನೀಡುವ ಮೂಲಕ ಪಂಚಮಸಾಲಿ ಸಮಾಜದ ಮೂವರಿಗೆ ಜೆಡಿಎಸ್ ಮಣೆ ಹಾಕಿದೆ.

ಸಮಾನ ಪ್ರಾತಿನಿಧ್ಯ: ಗಾಣಿಗ, ರಡ್ಡಿ ಸಮಾಜಕ್ಕೆ ಜಿಲ್ಲೆಯಲ್ಲಿ ಸಮಾನ ಪ್ರಾತಿನಿಧ್ಯ ಸಿಕ್ಕಿದೆ. ಕಾಂಗ್ರೆಸ್‌ ಗಾಣಿಗ ಸಮಾಜದ ಯಾವೊಬ್ಬ ವ್ಯಕ್ತಿಗೂ ಟಿಕೆಟ್‌ ನೀಡಿಲ್ಲ. ಇದೇ ರೀತಿ ಜೆಡಿಎಸ್‌ ರಡ್ಡಿ ಸಮಾಜದವರಿಗೆ ಅವಕಾಶ ನೀಡಿಲ್ಲ. ಎರಡೂ ಸಮಾಜದವರು ತಲಾ ನಾಲ್ಕು ಕಡೆ ಸ್ಪರ್ಧೆಗೆ ಅವಕಾಶ ಪಡೆದಿದ್ದಾರೆ.

ಬಿಜೆಪಿ ಗಾಣಿಗ ಸಮಾಜಕ್ಕೆ ಬಂಪರ್‌ ಕೊಡುಗೆ ನೀಡಿದೆ. ಜಿಲ್ಲೆಯ ಈಚೆಗಿನ ಇತಿಹಾಸದಲ್ಲಿ ಮೂರು ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಿಂದಗಿಯಿಂದ ರಮೇಶ ಭೂಸನೂರ, ಬಸವನಬಾಗೇವಾಡಿಯಿಂದ ಸಂಗರಾಜ ದೇಸಾಯಿ, ಇಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ದಯಾಸಾಗರ ಪಾಟೀಲ ಗಾಣಿಗ ಸಮಾಜ ಪ್ರತಿನಿಧಿಸುವವರು.

ಜೆಡಿಎಸ್‌ ಬದಲಾದ ಕಣ ಚಿತ್ರಣದಲ್ಲಿ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಅವರಿಗೆ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ಗಾಣಿಗ ಸಮಾಜಕ್ಕೆ ಆದ್ಯತೆ ನೀಡಿದೆ.

ಮುದ್ದೇಬಿಹಾಳದಿಂದ ಸಿ,ಎಸ್‌.ನಾಡಗೌಡ, ದೇವರಹಿಪ್ಪರಗಿಯಿಂದ ಬಿ.ಎಸ್‌.ಪಾಟೀಲ ಯಾಳಗಿ ಅವರಿಗೆ ಟಿಕೆಟ್‌ ನೀಡುವ ಮೂಲಕ ಕಾಂಗ್ರೆಸ್‌ ಹಿಂದಿನ ಚುನಾವಣೆಯ ಜಾತಿ ಸಮೀಕರಣದ ಸೂತ್ರದಂತೆ ರಡ್ಡಿ ಸಮುದಾಯಕ್ಕೆ ಅವಕಾಶ ನೀಡಿದೆ.

ಬಿಜೆಪಿ ಸಹ ರಡ್ಡಿ ಸಮುದಾಯದ ಇಬ್ಬರನ್ನು ಕಣಕ್ಕಿಳಿಸಿದೆ. ದೇವರ ಹಿಪ್ಪರಗಿಯಿಂದ ಸೋಮನಗೌಡ ಪಾಟೀಲ ಸಾಸನೂರ, ಮುದ್ದೇಬಿಹಾಳ ದಿಂದ ಎ.ಎಸ್‌.ಪಾಟೀಲ ನಡಹಳ್ಳಿ ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್‌ ರಡ್ಡಿ ಸಮಾಜಕ್ಕೆ ಅವಕಾಶ ನೀಡಿಲ್ಲ.

ಲಿಂಗಾಯತ ಉಪಜಾತಿಗೂ ಟಿಕೆಟ್

ಲಿಂಗಾಯತ ಸಮಾಜದ ಇತರೆ ಉಪ ಜಾತಿಯ ಮುಖಂಡರಿಗೂ ಕಾಂಗ್ರೆಸ್‌–ಜೆಡಿಎಸ್‌ ಮಣೆ ಹಾಕಿವೆ. ಬಿಜೆಪಿ ಪ್ರಬಲ ಸಮುದಾಯಕ್ಕಷ್ಟೇ ಮನ್ನಣೆ ನೀಡಿದೆ. ಕಾಂಗ್ರೆಸ್‌ನ ಪ್ರಭಾವಿ ಮುಖಂಡ, ಕುಡು ಒಕ್ಕಲಿಗ ಸಮಾಜದ ಎಂ.ಬಿ.ಪಾಟೀಲ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದರೆ, ಬಣಜಿಗ ಸಮಾಜದ ಯಶವಂತರಾಯಗೌಡ ಪಾಟೀಲ ಇಂಡಿಯ ಕಾಂಗ್ರೆಸ್‌ ಅಭ್ಯರ್ಥಿ. ಈ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸಾಮರ್ಥ್ಯಕ್ಕೆ ಟಿಕೆಟ್‌ ಸಿಕ್ಕಿದೆ.

ಮುದ್ದೇಬಿಹಾಳ, ಬಸವನಬಾಗೇವಾಡಿ, ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ಮತದಾರರನ್ನು ಹೊಂದಿರುವ ವೀರಶೈವ ಹಂಡೇವಜೀರ ಸಮುದಾಯಕ್ಕೆ ಜೆಡಿಎಸ್‌ ಆದ್ಯತೆ ನೀಡಿದೆ. ಮುದ್ದೇಬಿಹಾಳದಿಂದ ಮಂಗಳಾದೇವಿ ಬಿರಾದಾರ ಅವರನ್ನು ಅಖಾಡಕ್ಕಿಳಿಸಿದೆ.

ಕುರುಬರಿಗೆ ಕಾಂಗ್ರೆಸ್‌–ಜೆಡಿಎಸ್ ಮಣೆ

ಹಿಂದುಳಿದ ವರ್ಗದವರಲ್ಲಿ ಕುರುಬರಿಗೆ ಈ ಬಾರಿ ಟಿಕೆಟ್‌ ಕೊಡಬೇಕು ಎಂಬ ಆಂತರಿಕ ನಿಲುವಿಗೆ ಬದ್ಧವಾದ ಕಾಂಗ್ರೆಸ್‌, ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಮಲ್ಲಣ್ಣ ಸಾಲಿ ಅವರನ್ನು ಕಣಕ್ಕಿಳಿಸಿದೆ. ಇದರಿಂದ ಎರಡು ದಶಕದ ಬಳಿಕ ಇಲ್ಲಿ ಗಂಗಾಮತಸ್ಥ ಸಮಾಜಕ್ಕೆ ಅವಕಾಶ ‘ಕೈ’ ತಪ್ಪಿದೆ.

ತೀವ್ರ ಒತ್ತಡದ ನಡುವೆಯೂ ಜೆಡಿಎಸ್‌ ಪಕ್ಷ ನಿಷ್ಠರಿಗೆ ಮಣೆ ಹಾಕುವ ಜತೆಗೆ, ಹೆಚ್ಚಿನ ಸಂಖ್ಯೆಯಲ್ಲಿರುವ ಹಾಲುಮತ ಸಮಾಜದ ಮತಗಳನ್ನು ಸೆಳೆಯಲು ಇಂಡಿ ವಿಧಾನಸಭಾ ಕ್ಷೇತ್ರದಿಂದ ಬಿ.ಡಿ.ಪಾಟೀಲರನ್ನು ಕಣಕ್ಕಿಳಿಸಿದೆ.

ಜಿಲ್ಲೆಯ ಮತದಾರರ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿರುವ ಕುರುಬ ಸಮಾಜಕ್ಕೆ ಎರಡು ಟಿಕೆಟ್‌ ಸಿಕ್ಕಿದೆ. ಕೋಲಾರ ಶಾಸಕ ವರ್ತೂರು ಪ್ರಕಾಶ ಕುರುಬರ ಮತ ನೆಚ್ಚಿಕೊಂಡೇ ಮುದ್ದೇಬಿಹಾಳ ಕ್ಷೇತ್ರದಿಂದ ನಮ್ಮ ಕಾಂಗ್ರೆಸ್‌ ಪಕ್ಷದಿಂದ ಸಹೋದರನ ಪುತ್ರ ವಿ.ಪಿ.ರಕ್ಷಿತ್‌ ಕಣಕ್ಕಿಳಿಸಿದ್ದಾರೆ.

ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ಸೇ ಆಸರೆ

ಜಿಲ್ಲೆಯಲ್ಲಿ ಹೆಚ್ಚು ಮತದಾರರನ್ನು ಹೊಂದಿರುವ ಸಮುದಾಯ ಮುಸ್ಲಿಂ ಸಮಾಜ. ಕಾಂಗ್ರೆಸ್‌ ಹೊರತುಪಡಿಸಿದರೆ ಜೆಡಿಎಸ್‌, ಬಿಜೆಪಿ ಅಭ್ಯರ್ಥಿಗಳನ್ನು ನಿಲ್ಲಿಸಿಲ್ಲ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಹೊಸ ಮುಖ ಅಬ್ದುಲ್‌ ಹಮೀದ್‌ ಮುಶ್ರೀಫ್‌ಗೆ ಅವಕಾಶ ನೀಡಿದೆ. ಆರಂಭದಲ್ಲಿ ಅಪಸ್ವರ ಕೇಳಿದರೂ ಇದೀಗ ಕೊಂಚ ತಗ್ಗಿದೆ.

ಜಿಲ್ಲೆಯ ಎಲ್ಲ ಪಕ್ಷಗಳ ನಾಯಕರು ಮುಸ್ಲಿಂ ಸಮಾಜದ ಅರ್ಹ ನಾಯಕರಿಗೆ ಅವಕಾಶ ನೀಡದೆ, ತಮ್ಮ ಅಧೀನದಲ್ಲಿಟ್ಟುಕೊಳ್ಳುವ ಯತ್ನವನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ಇದರ ಪರಿಣಾಮ ಸಮಾಜದಲ್ಲಿ ಸದೃಢ ನಾಯಕತ್ವ ಬೆಳೆದಿಲ್ಲ. ಹೆಚ್ಚಿನ ಮತದಾರರಿದ್ದರೂ ವೋಟ್‌ ಬ್ಯಾಂಕ್‌ಗಷ್ಟೇ ಸೀಮಿತ ಮಾಡಿಕೊಂಡಿದ್ದಾರೆ ಎಂಬ ಅಸಮಾಧಾನ ಹೆಸರು ಬಹಿರಂಗಪಡಿಸಲಿಚ್ಚಿಸದ ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರದ್ದು.

ಮೀಸಲು ಕ್ಷೇತ್ರದ ಚಿತ್ರಣ

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಎಡಗೈ ಸಮುದಾಯ ಪ್ರತಿನಿಧಿಸುವ ಡಾ.ಗೋಪಾಲ ಕಾರಜೋಳ, ವಿಠ್ಠಲ ಕಟಕದೊಂಡ ಅವರನ್ನು ಕಣಕ್ಕಿಳಿಸಿದ್ದರೆ, ಜೆಡಿಎಸ್‌ ಜಿಲ್ಲೆಯಲ್ಲೇ ಹೆಚ್ಚು ಮತ ಹೊಂದಿರುವ ಸಮಾಜದಲ್ಲಿ ಐದನೇ ಸ್ಥಾನ ಪಡೆದಿರುವ ಲಂಬಾಣಿ ಸಮಾಜದ ದೇವಾನಂದ ಚವ್ಹಾಣರನ್ನೇ ಮತ್ತೆ ಅಖಾಡಕ್ಕಿಳಿಸಿದೆ.

**
ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಮುಸ್ಲಿಂ ಮತದಾರರಿದ್ದರೂ, ಕಾಂಗ್ರೆಸ್‌–ಜೆಡಿಎಸ್‌ ವೋಟ್‌ ಬ್ಯಾಂಕಿಗಷ್ಟೇ ಸೀಮಿತ. ಬಿಜೆಪಿ ತನ್ನ ಧೋರಣೆ ಬದಲಿಸಿಕೊಂಡಿಲ್ಲ
ಕೆ.ಎ.ಪಟೇಲ, ಮುಸ್ಲಿಂ ಸಮುದಾಯದ ಯುವ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT