ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋತಾಗಲೇ ಗೆಲುವಿನ ಸೂತ್ರ ಸಿಕ್ಕೋದು’

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಸೋಲು– ಪರಿಣಾಮ’ ಎಂಬ ವಿಶಿಷ್ಟ ಸಮಾವೇಶವನ್ನು ಸೆಲ್ಕೊ ಪ್ರತಿಷ್ಠಾನ’ದ ನೇತೃತ್ವದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದಿರಿ...

ಸೋಲು ಎಂಬ ಶಬ್ದವನ್ನು ನಾವು ಗೌರವಿಸುವುದಿಲ್ಲ. ಅವನು ಫೇಲಾಗಿದ್ದಾನೆ, ಅವಳು ಫೇಲಾಗಿದ್ದಾಳೆ ಎಂಬ ಮಾನದಂಡದಲ್ಲಿಯೇ ವ್ಯಕ್ತಿಯನ್ನೂ ಮತ್ತು ಪರಿಸ್ಥಿತಿಯನ್ನೂ ನೋಡುತ್ತೇವೆ. ಸೋಲನ್ನೂ ಗೌರವದಿಂದ ಕಾಣಬೇಕು, ಸೋಲೂ ಒಂದು ರೀತಿಯ ಗೆಲುವು ಎಂದು ಸಮಾಜಕ್ಕೆ ತೋರಿಸಿಕೊಡಬೇಕು ಎಂಬ ಉದ್ದೇಶದಿಂದ ಸಾಧಕರ ಬಾಯಲ್ಲಿ ಅವರ ಸೋಲುಗಳನ್ನು ಹೇಳಿಸುವ ಪ್ರಯತ್ನ ಅದಾಗಿತ್ತು,

ಚರ್ಚೆಗಳಿಂದ ಸಮಾಜದ ಬದಲಾವಣೆ ಸಾಧ್ಯವೇ?

ಐಐಎಂಬಿಯಲ್ಲಿ ನಡೆದ ಈ ಸಮಾವೇಶ ಸೋಲನ್ನು ಸಂಭ್ರಮಿಸುವ ಮತ್ತು ಒಪ್ಪಿಕೊಳ್ಳುವ ಸಾಧ್ಯತೆಯ ಮೊದಲ ಹಂತ. ಹತ್ತಾರು ಕ್ಷೇತ್ರಗಳಲ್ಲಿ ಇವತ್ತು ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿರುವ ಸಾಧಕರು ಈ ಸಮಾವೇಶದಲ್ಲಿ ಮಾತನಾಡಿದ್ದಾರೆ. ಈ ಪರಿಕಲ್ಪನೆಯನ್ನು ಶಿಕ್ಷಣ ಕ್ಷೇತ್ರಕ್ಕೆ ಹೇಗೆ ಅನ್ವಯಿಸಬಹುದು ಎಂಬುದು ನಮ್ಮ ಮುಂದಿರುವ ಚಿಂತನೆ.

ಸಮಾವೇಶದ ಆಶಯಗಳನ್ನು ಶಿಕ್ಷಣ ಕ್ಷೇತ್ರಕ್ಕೆ ಹೇಗೆ ಅನ್ವಯಿಸಬಹುದು?

ಪೂರ್ವ ಪ್ರಾಥಮಿಕ ಶಾಲೆಯಿಂದಲೇ ‘ಎ’ ಪ್ಲಸ್‌ ಅಥವಾ ‘ಎ’ ಗ್ರೇಡ್‌ ಪಡೆಯುವ ವಿದ್ಯಾರ್ಥಿಗಳೇ ಪ್ರತಿಭಾವಂತರು, ಅದಕ್ಕಿಂತ ಕಡಿಮೆ ಅಂಕ ಪಡೆದ ಮಕ್ಕಳು ಪ್ರಯೋಜನಕ್ಕಿಲ್ಲ ಎಂಬ ಭಾವ ನಮ್ಮ ಸಮಾಜದಲ್ಲಿ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಬಲವಾಗಿ ಬೇರೂರಿದೆ. ಇದನ್ನು ಹೋಗಲಾಡಿಸಲು ಏನಾದರೂ ಮಾಡಲೇಬೇಕು. ನಿಜ ಹೇಳಬೇಕೆಂದರೆ ಸಮಸ್ಯೆ ಅಥವಾ ದೌರ್ಬಲ್ಯ ಇರೋದೇ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ.

ಸೋಲಿನ ಕುರಿತು ಪಠ್ಯದ ಮೂಲಕವೇ ಹೇಳುವಂತಾದರೆ?

ಸ್ಪಷ್ಟವಾಗಿ ಹೇಳುವುದಾದರೆ ಅದೇ ನಮ್ಮ ಗುರಿ. ಸೋಲನ್ನು ಸ್ವೀಕರಿಸುವ, ಸಂಭ್ರಮಿಸುವ ಮನೋಭಾವ ಮಕ್ಕಳಲ್ಲಿ ಸಣ್ಣ ವಯಸ್ಸಿನಿಂದಲೇ ಮೂಡಬೇಕು. ಅಂದರೆ ಸೋಲನ್ನು ಧನಾತ್ಮಕವಾಗಿ ನೋಡುವ ವಾತಾವರಣ ನಿರ್ಮಾಣವಾಗಬೇಕು. ಪ್ರಾಥಮಿಕ ಶಾಲಾ ಪಠ್ಯದಲ್ಲೇ ಇದು ಒಳಗೊಂಡಾಗ ಮಾತ್ರ ಅದು ಸಾಧ್ಯ. ಆಗ, ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಕಾರಣಕ್ಕೋ, ಅನುತ್ತೀರ್ಣರಾದ ಕಾರಣಕ್ಕೋ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ, ಮನೆ ಬಿಟ್ಟು ಓಡಿಹೋಗುವ ಮತ್ತು ಶಾಲೆ ಬಿಡುವ ಪ್ರಕರಣಗಳಿಗೆ ಕಡಿವಾಣ ಬೀಳುತ್ತದೆ.

ಹಾಗಿದ್ದರೆ, ಈ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಏನು?

ನಾವು ಮೊದಲು ತಲುಪಬೇಕಾಗಿರುವುದು ಗ್ರಾಮೀಣ ಪ್ರದೇಶದ ಮಕ್ಕಳನ್ನು. ಅಲ್ಲಿನ ಮಕ್ಕಳು ಫೇಲಾದ ತಕ್ಷಣ ಶಾಲೆ ಬಿಟ್ಟುಬಿಡುತ್ತಾರೆ. ಇದನ್ನು ತಡೆಯುವ ಪ್ರಯತ್ನವಾಗಬೇಕಾಗಿದೆ. ನಾವು ಮಕ್ಕಳೆದುರು ಭಾಷಣ ಮಾಡುವುದಿಲ್ಲ. ಸೋಲನ್ನು ಸಕಾರಾತ್ಮಕವಾಗಿ ಹೇಗೆ ಸ್ವೀಕರಿಸಬೇಕು ಮತ್ತು ಈಗ ನಮ್ಮ ಮುಂದಿರುವ ಸಾಧಕರು ತಮ್ಮ ಮೊದಲ ಪ್ರಯತ್ನದಲ್ಲಿ ಸೋತಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ ಗೆದ್ದಿದ್ದಾರೆ ಎಂಬ ಬಗ್ಗೆ ಶಿಕ್ಷಕರಿಗೆ ಮತ್ತು ಮಕ್ಕಳ ಪೋಷಕರಿಗೆ ತಿಳಿಸಿಕೊಡುತ್ತೇವೆ. ಅಲ್ಲದೆ ‘ಸೋಲು ಒಳ್ಳೆಯದೇ’ ಎಂಬ ಪೋಸ್ಟರ್‌ಗಳನ್ನೂ ಶಾಲೆಗಳಲ್ಲಿ ಪ್ರಕಟಿಸಬೇಕೆಂದಿದ್ದೇವೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಈ ಬಗ್ಗೆ ಇದೊಂದು ಸರಣಿ ಕಾರ್ಯಕ್ರಮವಾಗಿ ನಡೆಯಲಿದೆ.

ನೀವು ಸೋಲನ್ನು ಹೇಗೆ ಪರಿಭಾವಿಸುತ್ತೀರಿ?

‘ಸೆಲ್ಕೊ ಪ್ರತಿಷ್ಠಾನ’ ಆರಂಭವಾದಾಗ ಸೌರಶಕ್ತಿಯನ್ನು ಮನೆಗಳಿಗೆ ಬಳಸುವ ಬಗ್ಗೆ ಜನರ ಮನವೊಲಿಸುವುದೇ ಸವಾಲಾಗಿತ್ತು. ಈಗ ಬೇರೆ ಬೇರೆ ರಾಷ್ಟ್ರಗಳಲ್ಲಿಯೂ ನಮ್ಮ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಆದರೆ ಶುರುವಿನಲ್ಲಿ ನಾನು ಅಥವಾ ನನ್ನ ಸಂಸ್ಥೆ ಹಲವು ಆಯಾಮಗಳಲ್ಲಿ ಸೋಲು ಕಾಣಬೇಕಾಯಿತು. ಹಾಗಂತ ‘ಅಯ್ಯೋ ಈ ಯೋಜನೆ ನಮ್ಮಿಂದಾಗಲ್ಲಪ್ಪ’ ಅಂತ ಕೈಬಿಡಲಿಲ್ಲ. ಬದಲಾಗಿ ಸೋಲಿಗೆ ಕಾರಣವೇನು ಮತ್ತು ಮುಂದೆ ಹಾಗಾಗದಂತೆ ಏನು ಮಾಡಬಹುದು ಎಂದು ವಿಶ್ಲೇಷಿಸಿ ನಮ್ಮ ಕಾರ್ಯತಂತ್ರದಲ್ಲಿ ರೂಪಾಂತರ ಮಾಡಿಕೊಂಡೆ. ಸೋಲನ್ನು ಗೆಲುವಿನ ಸೂತ್ರವಾಗಿಸುವ ಜಾಣ್ಮೆ ಇದ್ದರೆ ಪ್ರತಿ ಸೋಲಿನಲ್ಲಿಯೂ ಗೆಲುವಿನ ಪಾಠವನ್ನು ಕಂಡುಕೊಳ್ಳಬಹುದು.

**

ಸೋಲನ್ನು ಸವಾಲಾಗಿ ಸ್ವೀಕರಿಸಿದ ವಿದ್ಯಾರ್ಥಿನಿ

‘ಹುಬ್ಬಳ್ಳಿ ಹತ್ತಿರ ಒಂದು ಕೊಳೆಗೇರಿಯಲ್ಲಿ ಮನೆಗಳಿಗೆ ಸೆಲ್ಕೊ ಸೌರಶಕ್ತಿ ಘಟಕಗಳ ಅಳವಡಿಕೆ ನಡೆದಿತ್ತು. ಒಂದು ತಿಂಗಳು ಅಳವಡಿಸಿದ್ದ ಪ್ರಾಯೋಗಿಕ ಘಟಕಗಳನ್ನು ತೆಗೆಯುವ ದಿನವದು. ಒಂದು ಮನೆಯಲ್ಲಿ ಹುಡುಗಿಯೊಬ್ಬಳು ನಮ್ಮ ಸಿಬ್ಬಂದಿಯನ್ನು ನೋಡಿದ್ದೇ ತಡ ನೆಲದಲ್ಲಿ ಬಿದ್ದು ಹೊರಳಾಡಲು ಶುರು ಮಾಡಿದಳು. ಯಾಕೆ ಎಂದು ವಿಚಾರಿಸಿದರೆ, ‘ಕರೆಂಟ್‌ ತೆಗೀಬೇಡಿ ನಾನು ಡಾಕ್ಟರ್‌ ಆಗಬೇಕು. ಕರೆಂಟ್ ಇಲ್ಲದಿದ್ದರೆ ಓದಲು ಸಾಧ್ಯವಿಲ್ಲ’ ಎಂದು ಗೋಳಾಡಿದಳು.

ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಅವರ ಮನೆಯಲ್ಲಿ ನಮ್ಮ ಯೋಜನೆ ಅನುಷ್ಠಾನಗೊಳ್ಳುವವರೆಗೂ ತಾತ್ಕಾಲಿಕ ಸಂಪರ್ಕವನ್ನು ಉಳಿಸಿದೆವು.  ಓದಬೇಕು ಎಂಬ ಛಲ ಇದ್ದರೂ ಅವಕಾಶ ಸಿಗದಿರುವ ನತದೃಷ್ಟರೂ ನಮ್ಮ ಮಧ್ಯೆ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT