ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಆಶಯ ಆದ್ಯತೆಯಾಗಲಿ

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ವಿಧಾನಸಭಾ ಚುನಾವಣೆಗೆ ಕಣ ಸಿದ್ಧವಾಗಿದೆ. ರಾಜ್ಯದ ರಾಜಕೀಯ ಚಿತ್ರಣವೂ ಕ್ಷಣಕ್ಷಣಕ್ಕೆ ಬದಲಾಗುತ್ತಿದೆ. ನಿನ್ನೆಯವರೆಗೆ ‘ಕೋಮುವಾದಿ ರಾಜಕಾರಣಿ’ ಎಂದು ಜಾತ್ಯತೀತ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದವರು, ರಾತ್ರೋರಾತ್ರಿ ಪಕ್ಷ ಬದಲಾಯಿಸಿ ‘ಜಾತ್ಯತೀತ ರಾಜಕಾರಣಿ’ಯಾಗುವ ಅದ್ಭುತ ಪವಾಡಗಳು ನಡೆಯುತ್ತಿವೆ. ಜಾತ್ಯತೀತ ಸಿದ್ಧಾಂತದ ಬಗ್ಗೆ ಉದ್ದುದ್ದ ಭಾಷಣ ಬಿಗಿದಿದ್ದ ರಾಜಕಾರಣಿಯು ತಾನೇ ‘ಕೋಮುವಾದಿ’ ಎಂದು ಜರೆದಿದ್ದ ಪಕ್ಷವನ್ನು ಸೇರಿ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುವ ಅವಕಾಶವಾದಿ ರಾಜಕಾರಣ ಎಲ್ಲೆ ಮೀರಿದೆ. ಈ ರಾಜಕೀಯ ಮೇಲಾಟದಲ್ಲಿ, ಸಂವಿಧಾನದ ಮೌಲ್ಯಗಳಿಗಿಂತ ಪರಸ್ಪರ ನಿಂದನೆ, ಕೆಸರೆರಚಾಟ, ತೇಜೋವಧೆ, ಗಣನೀಯವಲ್ಲದ ಸಣ್ಣಪುಟ್ಟ ವಿಚಾರಗಳನ್ನು ವೈಭವೀಕರಿಸಿ, ಗಣನೀಯ ವಿಚಾರಗಳು ಚರ್ಚೆಗೂ ಬಾರದಂಥ ರೀತಿಯಲ್ಲಿ ರಾಜಕಾರಣಿಗಳು ಕುಬ್ಜರಾಗಿ ವರ್ತಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಸಂವಿಧಾನಬದ್ಧ ಮತ್ತು ಸಂವಿಧಾನದ ಮೌಲ್ಯಗಳಿಗೆ ಪೂರಕವಾದ ವಿಷಯಗಳನ್ನು ಚುನಾವಣೆಯ ವಿಷಯಗಳನ್ನಾಗಿಸಬೇಕೆಂಬ ಆಶಯ ಈ ಲೇಖನದ್ದು.

ಚುನಾವಣೆಯು ಪ್ರಜಾಸತ್ತೆಯ ಜೀವಾಳ. ಅಧಿಕಾರ ನಡೆಸಲು ಸಾರ್ವಭೌಮರಾದ ಜನರಿಂದ ಜನಾದೇಶ ಪಡೆಯುವುದು ಚುನಾವಣೆಯ ಉದ್ದೇಶ. ರಾಜಕೀಯ ಪಕ್ಷಗಳು ಮತ್ತು ಅವುಗಳ ನೇತಾರರಾದ ರಾಜಕಾರಣಿಗಳು ಪರಸ್ಪರ ನಿಂದನೆ, ಕೆಸರೆರಚಾಟ, ತೇಜೋವಧೆ ಮಾಡುವುದರ ಬದಲು ಸಂವಿಧಾನದ ಮೌಲ್ಯಗಳನ್ನು ಮುನ್ನೆಲೆಗೆ ತರುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ನಮ್ಮ ಸಂವಿಧಾನದ ಆಶಯದಂತೆ, ನಾವು ಭಾರತವನ್ನು ‘ಸಾರ್ವಭೌಮ, ಸಮಾಜವಾದಿ ಜಾತ್ಯತೀತ ಪ್ರಜಾಪ್ರಭುತ್ವ ಗಣತಂತ್ರ’ವನ್ನಾಗಿಸಲು ಒಪ್ಪಿ ಸಂವಿಧಾನವನ್ನು ಸ್ವೀಕರಿಸಿದ್ದೇವೆ. ಪ್ರಜ್ಞಾವಂತರಾದ ನಾವೆಲ್ಲರೂ ಅದರಲ್ಲೂ ವಿಶೇಷವಾಗಿ ಪ್ರಜಾಸತ್ತೆಯ ಮೂಲಕ ಅಧಿಕಾರದ ಗದ್ದುಗೆ ಏರಬಯಸುವ ರಾಜಕಾರಣಿಗಳು, ಸಂವಿಧಾನದ ಈ ಆಶಯಗಳನ್ನು ಈಡೇರಿಸಲು ಕೈಗೊಳ್ಳಬಹುದಾದ ಕಾರ್ಯಸೂಚಿಯೇ ಜನರಿಂದ ಮತ ಕೇಳುವ ಮೂಲ ಸಾಧನವಾಗಬೇಕು. ಸಾಮಾನ್ಯವಾಗಿ ಕಾರ್ಯಸೂಚಿಯೆಂದರೆ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆ. ಸಂವಿಧಾನದ ಮೂಲ ತತ್ವಗಳು ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಮತ್ತು ಚುನಾವಣೆಯ ವಿಷಯವಾಗಬೇಕೆಂಬುದು ನಿರ್ವಿವಾದ. ಅದು ಹೇಗೆ ಮತ್ತು ಏಕೆ ಎಂಬುದನ್ನು ವಿವರಿಸುವುದು ಸೂಕ್ತವೆನಿಸುತ್ತದೆ.

ಭಾರತ ಸರ್ವಸ್ವತಂತ್ರ ರಾಷ್ಟ್ರ. ಆಂತರಿಕವಾಗಿಯಾಗಲೀ ಅಥವಾ ಬಾಹ್ಯವಾಗಿಯಾಗಲೀ ದೇಶದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಯಾವುದೇ ಶಕ್ತಿ ನಿಯಂತ್ರಿಸುವಂತಿರಬಾರದು. ಭಾರತದ ಸಾರ್ವಭೌಮತ್ವವನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರಗಳು ಕಾರ್ಯಕ್ರಮಗಳನ್ನು ರೂಪಿಸಬೇಕು. ಆದರೆ, ವಾಸ್ತವದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಬರುತ್ತಿದ್ದು ಪರೋಕ್ಷವಾಗಿ ಭಾರತದ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸುವ ಪ್ರಕ್ರಿಯೆಯು ನಮ್ಮ ಸಾರ್ವಭೌಮತ್ವಕ್ಕೆ ಪೆಟ್ಟು ನೀಡುತ್ತಿದೆ.

ಸಂವಿಧಾನದಲ್ಲಿ ‘ಸಮಾಜವಾದಿ’ ಎಂಬ ಪದವು ವಿಶೇಷ ಸಂದೇಶವನ್ನು ಸಾರುತ್ತದೆ. ಸಂವಿಧಾನದ ಮೌಲ್ಯಗಳಾದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ತಾರತಮ್ಯರಹಿತ ಮೌಲ್ಯಗಳಿಗೆ ಅನುಗುಣವಾಗಿ ರಾಜ್ಯ ಮತ್ತು ದೇಶವನ್ನು ಕಟ್ಟುವ ಕೆಲಸವಾಗಬೇಕೆಂಬುದು ‘ಸಮಾಜವಾದಿ’ ಪದದ ಆಶಯ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯು ಅಭಿವೃದ್ಧಿಯ ಮೂಲಮಂತ್ರವಾಗಬೇಕು. ಧರ್ಮ, ಜಾತಿ, ಲಿಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೆ, ಎಲ್ಲರಿಗೂ ಸಮಾನ ಸಾಮಾಜಿಕ ಹಾಗೂ ಆರ್ಥಿಕ ಅವಕಾಶಗಳನ್ನು ಕಲ್ಪಿಸುವ ಮೂಲಕ ಪ್ರತಿಯೊಬ್ಬ ಪ್ರಜೆಗೂ ಘನತೆಯಿಂದ ಜೀವಿಸುವ ಅವಕಾಶವನ್ನು ಕಲ್ಪಿಸಿಕೊಡುವುದು ಸಮಾಜವಾದಿ ಕಲ್ಪನೆಯನ್ನು ಅಪ್ಪಿಕೊಂಡು ಸಂವಿಧಾನದಲ್ಲಿ ಅಳವಡಿಸಿಕೊಂಡ ರಾಷ್ಟ್ರದ ಜವಾಬ್ದಾರಿ. ಸರಳವಾಗಿ ಹೇಳಬೇಕೆಂದರೆ, ಮಾನವ ಹಕ್ಕುಗಳ ನೆಲೆಯಲ್ಲಿ ಸುಖೀ ರಾಜ್ಯದ ನಿರ್ಮಾಣ ಸರ್ಕಾರದ ಜವಾಬ್ದಾರಿ. ಅಂದಮೇಲೆ, ದೇಶದ– ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಘನತೆಯಿಂದ ಜೀವಿಸಲು ಸಾಧ್ಯವಾಗುವಂಥ ವಾತಾವರಣ ನಿರ್ಮಿಸಲು ರಾಜಕೀಯ ಪಕ್ಷಗಳ ಪ್ರಣಾಳಿಕೆ ಮತ್ತು ರಾಜಕಾರಣಿಗಳ ಕ್ರಿಯಾಯೋಜನೆ ಏನೆಂಬುದು ಚುನಾವಣೆಯ ವಿಷಯವಾಗಬೇಕಲ್ಲವೇ?

ಜಾತ್ಯತೀತ ಪದ ಜಾತೀಯತೆಯ ಮಧ್ಯೆ ನಲುಗಿ ಅಣಕಕ್ಕೆ ಗುರಿಯಾಗಿರುವ ಹಾಗೂ ಜಾತ್ಯತೀತ ಪರಿಕಲ್ಪನೆಯನ್ನು ಜೀವನದ ಮೌಲ್ಯವನ್ನಾಗಿ ಸ್ವೀಕರಿಸಿದವರನ್ನು ‘ತಂದೆ ತಾಯಿಯ ರಕ್ತದ ಪರಿಚಯವಿಲ್ಲದವರು’ ಎಂದು ಮೂದಲಿಸುವ ಇಂದಿನ ಸಂದರ್ಭದಲ್ಲಿ, ಜಾತ್ಯತೀತ ತತ್ವವನ್ನು ಎತ್ತಿಹಿಡಿಯುವುದು ಮತ್ತು ಪುನರ್‌ ಸ್ಥಾಪಿಸುವುದು ಪ್ರಜ್ಞಾವಂತ ನಾಗರಿಕನ ಕರ್ತವ್ಯ. ಸಂವಿಧಾನದ ಆಶಯದಂತೆ ದೇಶದ ಪ್ರತಿಯೊಬ್ಬ ಪ್ರಜೆಗೂ ತನಗಿಷ್ಟ
ವಾದ ಧರ್ಮವನ್ನು ಪಾಲಿಸಲು ಅಥವಾ ಯಾವುದೇ ಧರ್ಮವನ್ನು ಪಾಲಿಸದಿರಲು ಹಕ್ಕಿದೆ. ಪ್ರಜೆಗಳು ತಮ್ಮ ಧಾರ್ಮಿಕ ಮೂಲಭೂತ ಹಕ್ಕಿನ ಹೊರತಾಗಿ ಕಾನೂನಿನ ನೆಲೆಯಲ್ಲಿ ಸಮಾನರಾಗಿರುತ್ತಾರೆ. ಆದ್ದರಿಂದ ಜಾತಿ- ಧರ್ಮದ ಹೆಸರಿನಲ್ಲಿ ಭೇದಭಾವ ಸಲ್ಲದು. ರಾಜ್ಯದವರೇ ಆಗಿದ್ದ ಬೊಮ್ಮಾಯಿ ಹಾಗೂ ಭಾರತ ಸರ್ಕಾರದ ನಡುವಿನ ದಾವೆಯಲ್ಲಿ ಸುಪ್ರೀಂ ಕೋರ್ಟ್‌ ‘ಜಾತ್ಯತೀತತೆ ಭಾರತ ಸಂವಿಧಾನದ ಒಂದು ಸಮಗ್ರ ಭಾಗ’ ಎಂದು
ಪ್ರತಿಪಾದಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಜಾತ್ಯತೀತ ಮೌಲ್ಯವನ್ನು ಸಾಕಾರಗೊಳಿಸುವ ಮೂಲಕ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಪ್ರತಿಯೊಬ್ಬ ಪ್ರಜೆಯ ವೈಯಕ್ತಿಕ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಭ್ರಾತೃತ್ವ ಮತ್ತು ದೇಶದ ಸಮಗ್ರತೆ- ಏಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚುನಾವಣಾ ಪ್ರಣಾಳಿಕೆ ಮತ್ತು ಕ್ರಿಯಾಯೋಜನೆ ರೂಪಿಸಬೇಕು. ಅವುಗಳೇ ಚುನಾವಣೆಯ ಮುಖ್ಯ ವಿಷಯಗಳಾಗಬೇಕು.

ಪ್ರಜಾಪ್ರಭುತ್ವ ನಮ್ಮ ಆಯ್ಕೆ. ಈ ವ್ಯವಸ್ಥೆಯಲ್ಲಿ ಪ್ರಜೆಗಳೇ ಸರ್ವಸ್ವ ಎಂದು ಪದೇ ಪದೇ ಭಾಷಣ ಮಾಡುತ್ತೇವೆ. ವಾಸ್ತವದಲ್ಲಿ ಜನಸಾಮಾನ್ಯನಿಗೆ ಪ್ರಜಾಪ್ರಭುತ್ವವೆಂದರೆ ಹಣ, ಜಾತಿ ಮತ್ತು ತೋಳ್ಬಲ ಎಂಬ ಭಾವನೆ ಗಟ್ಟಿಯಾಗುತ್ತಿದೆ. ಸಂವಿಧಾನ ಜಾರಿಯಾಗಿ ಏಳು ದಶಕಗಳಾಗುತ್ತ ಬಂದರೂ ಸಂವಿಧಾನದ ಮೂಲ ಆಶಯಗಳು ಸಾಕಾರಗೊಳ್ಳದಿರುವುದು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಿದೆ. ಸಂವಿಧಾನವನ್ನು ಪೂರ್ಣವಾಗಿ ಜಾರಿಗೊಳಿಸಬೇಕಾದ ಈ ಪರ್ವ ಕಾಲದಲ್ಲಿ ಸಂವಿಧಾನ ಬದಲಾವಣೆಯ ಮಾತುಗಳು ಆತಂಕ ಹುಟ್ಟಿಸುತ್ತವೆ. ಈ ಎಲ್ಲ ಕಾರಣಗಳಿಂದ ನಮ್ಮ ಈ ಚುನಾವಣೆಯಲ್ಲಿ ಸಂವಿಧಾನದ ಮೌಲ್ಯಗಳು ಮತ್ತು ವಿಷಯಗಳು ಚುನಾವಣೆಯ ಪ್ರಧಾನ ವಿಷಯಗಳಾಗಬೇಕು. ಇಲ್ಲವಾದಲ್ಲಿ ನಾವೇ ಒಪ್ಪಿ ಅಪ್ಪಿಕೊಂಡ ಸಂವಿಧಾನವನ್ನು ನಮ್ಮ ಚುನಾವಣೆಗಳು ಅಣಕಿಸಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT