ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಧವ್ಯ ವೃದ್ಧಿಗೆ ಪ್ರಾಮಾಣಿಕ ಚರ್ಚೆ

ಪ್ರಧಾನಿ ಮೋದಿ – ಷಿ ಜಿನ್‌ಪಿಂಗ್‌ ಭೇಟಿ: ಅಭಿಪ್ರಾಯ ಹಂಚಿಕೊಂಡ ತಜ್ಞರು
Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ : ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವಣ ಅನೌಪಚಾರಿಕ ಮಾತುಕತೆಯು ಚೀನಾ–ಭಾರತ ಬಾಂಧವ್ಯದ ಬಗೆಗಿನ ಪ್ರಾಮಾಣಿಕ ಚರ್ಚೆಯ ಆರಂಭ ಆಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚೀನಾದ ವುಹಾನ್ ನಗರದಲ್ಲಿ ಮೋದಿ ಹಾಗೂ ಜಿನ್‌ಪಿಂಗ್ ಶುಕ್ರವಾರ, ಶನಿವಾರ ಅನೌಪಚಾರಿಕ ಮಾತುಕತೆ ನಡೆಸಲಿದ್ದಾರೆ. ಭಿನ್ನಾಭಿಪ್ರಾಯ ಹಾಗೂ ಬಿಕ್ಕಟ್ಟುಗಳಿಂದಾಗಿ ಕುಸಿದಿರುವ ಬಾಂಧವ್ಯಕ್ಕೆ ಹೊಸ ಚೈತನ್ಯ ತುಂಬಲು ಇಬ್ಬರೂ ನಾಯಕರು ಪ್ರಯತ್ನ ನಡೆಸಲಿದ್ದಾರೆ.

ಭೇಟಿ ವೇಳೆ ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವುದಿಲ್ಲ ಎಂದು ಎರಡೂ ರಾಷ್ಟ್ರಗಳು ಈಗಾಗಲೇ ಹೇಳಿವೆ. ಭವಿಷ್ಯದ ದೃಷ್ಟಿಯಿಂದ ಪರಸ್ಪರ ಅರ್ಥೈಸಿಕೊಳ್ಳುವ ಪ್ರಕ್ರಿಯೆಯ ಭಾಗ ಇದು ಎಂದು ಸ್ಪಷ್ಟಪಡಿಸಿವೆ.

‘ಪರಮಾಣು ಪೂರೈಕೆದಾರರ ಗುಂಪಿಗೆ ಸೇರುವ ಭಾರತದ ಪ್ರಯತ್ನಕ್ಕೆ ಸಂಬಂಧಿಸಿದಂತೆ ಚೀನಾ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ’ ಎಂದು ಸೆಂಟರ್ ಫಾರ್ ಸ್ಟ್ರಾಟಜಿಕ್ ಅಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ (ಸಿಎಸ್ಐಎಸ್) ಚೀನಾ ಪವರ್ ಪ್ರಾಜೆಕ್ಟ್ ನಿರ್ದೇಶಕ ಬಾನ್ನಿ ಎಸ್. ಗ್ಲೇಸರ್ ಹೇಳಿದ್ದಾರೆ.

‘ಅಂತೆಯೇ, ಷಿ ಅವರು ತೀವ್ರ ಆಸಕ್ತಿ ವಹಿಸಿರುವ ಒಂದು ವಲಯ ಒಂದು ರಸ್ತೆ ಯೋಜನೆಯ ಬಗೆಗೂ ಭಾರತ ತನ್ನ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಇಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ತನ್ನ ಹಿತಕ್ಕೆ ಧಕ್ಕೆಯಾಗುವ ಉಚಿತ ಮತ್ತು ಮುಕ್ತ ಇಂಡೋ ಪೆಸಿಫಿಕ್ ಕಾರ್ಯಯೋಜನೆಯಲ್ಲಿ ಪಾಲ್ಗೊಳ್ಳದಂತೆ ಭಾರತಕ್ಕೆ ಚೀನಾ ಎಚ್ಚರಿಸಬಹುದು’ ಎಂದು ಅವರು ಹೇಳಿದ್ದಾರೆ. ಒಂದು ವಲಯ ಒಂದು ರಸ್ತೆ, ಚೀನಾ–ಪಾಕ್ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಗಳ ಸಂಬಂಧ ಉಂಟಾದ ಭಿನ್ನಾಭಿ‍ಪ್ರಾಯಗಳು ಭಾರತ–ಚೀನಾ ಬಾಂಧವ್ಯಕ್ಕೆ ತೊಡಕಾಗಿದೆ.

ವಿಪುಲ ಅವಕಾಶ
‘ಆರ್ಥಿಕ ಸಹಕಾರವನ್ನು ವಿಸ್ತರಿಸುವ ಹಲವು ಮಾರ್ಗಗಳು ಭಾರತ–ಚೀನಾಕ್ಕೆ ಇವೆ. ಗಡಿಯ ಹಾಗೂ ಇತರ ಅಂಶಗಳ ಕುರಿತಾದ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವುದು ಇದಕ್ಕೆ ಸಹಕಾರಿ ಆಗಬಹುದು’ ಎಂದು ಸಿಎಸ್ಐಎಸ್‌ನಲ್ಲಿನ ಚೀನಾ ವ್ಯವಹಾರ ಮತ್ತು ರಾಜಕೀಯ ಆರ್ಥಿಕತೆ ವಿಭಾಗದ ನಿರ್ದೇಶಕ ಸ್ಕಾಟ್ ಕೆನಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT