ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆಯೆಂಬ ಮಜಾ!

Last Updated 27 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಆಂಟೀ... ಆಂಟೀ... ಅಂಕಲ್‌... ಅಂಕಲ್‌...’ ಪುಟ್ಟ ಮಕ್ಕಳ ಇಂಥ ಕರೆ ಎದೆಗೆ ಎಷ್ಟು ಆಪ್ಯಾಯಮಾನ ಎನ್ನುವುದು ಈಚೆಗೆ ಅರಿವಿಗೆ ಬರುತ್ತಿದೆ.

ಪರೀಕ್ಷೆಗಳು ಮುಗಿದು ಮಕ್ಕಳೆಲ್ಲ ಪಂಜರದಿಂದ ಹೊರಬಂದ ಹಕ್ಕಿಗಳಾಗಿದ್ದಾರೆ. ಎಲ್ಲಿಲ್ಲದ ಉತ್ಸಾಹ, ತುಂಟಾಟ. ಇಡೀ ದಿನ ಯಾವ ಜಂಜಾಟವೂ ಇಲ್ಲದೆ ಕಳೆಯುವ ಕಾಲ. ಹಾಗಾಗಿ ಸೂರ್ಯನ ಬಿಸಿಲಿನ ತಾಪಕ್ಕೆ ಎಳೆಮಕ್ಕಳು ಬಾಡದಿರಲಿ ಎಂದೇ ಕೊಡುವ ಬೇಸಿಗೆರಜೆಯಲ್ಲಿ ಮಕ್ಕಳು ಹಗಲು–ಇರುಳು, ಬಿಸಿಲು–ಕತ್ತಲು ಎನ್ನದೆ ತಮ್ಮಿಷ್ಟದಂತೆ ಆಡುವ ಸಮಯ.

ತಂದೆ–ತಾಯಿ, ಅಜ್ಜ–ಅಜ್ಜಿಯರಿಗೆ ಚಿಂತೆ – ಮಕ್ಕಳು ಬಿಸಿಲಲ್ಲಿ ಆಡುತ್ತಾರಲ್ಲಾ ಎಂದು. ಆದರೆ ಇವ್ಯಾವುದರ ಅರಿವೂ ಇರದ ಮಕ್ಕಳು ಸ್ವಚ್ಛಂದವಾಗಿ ಹಾರುತ್ತಾ, ನೆಗೆಯುತ್ತಾ, ಕುಣಿಯುತ್ತಾ ಆನಂದವಾಗಿ ‘ಬಿಸಿಲುಬಾಳೇಹಣ್ಣು’ ತಿನ್ನುತ್ತಾರೆ.

ಈಚೆಗೆ ಪ್ರತಿದಿನ ಇಳಿಸಂಜೆಯಲ್ಲಿ ನಾನು ಕೆಲಸದಿಂದ ಬರುವುದನ್ನೇ ಕಾದವರಂತೆ ಸುಮಾರು ಐದಾರು ಮಕ್ಕಳ ಒಂದು ದಂಡು ನಮ್ಮ ಮನೆಯ ಅಂಗಳಕ್ಕೆ ದಾಳಿಯಿಡುತ್ತಿದೆ. ‘ಆಂಟೀ ಆಟಕ್ಕೆ ಬನ್ನೀsss.. ಪ್ಲೀssssಸ್...’ ಎಂದು ಗೋಗರೆವ ಉತ್ಸಾಹದ ಚಿಲುಮೆಗಳನ್ನು ನೋಡಿದಾಗ ಇಡೀ ದಿನ ದುಡಿದ ಆಯಾಸದ ನೆನಪು ತಕ್ಷಣಕ್ಕೆ ಮರೆತು ಹೋಗುತ್ತದೆ.

‘ಅವಲಕ್ಕಿ ಪವಲಕ್ಕಿ ಕಾಂಚನ ಮಿನಮಿನ ಡಾಂ ಡೂಂ, ಡಸ್ ಪುಸ್’ ಎಂದು ಒಂದು ಸಲ, ‘ರತ್ತೋ ರತ್ತೋ ರಾಯನ ಮಗಳೇ, ಬಿತ್ತೋಬಿತ್ತೋ ಭೀಮನ ಮಗಳೇ’ ಎಂದು ಮತ್ತೊಂದು ಸಲ, ಗಿರಗಿಟ್ಟಲೇ ಆಟ ಇನ್ನೊಂದು ಸಲ, ಮೊಬೈನ್‌ನಲ್ಲಿ ಹಾಡು ಹಾಕಿ ಅದು ನಿಂತ ತಕ್ಷಣ ‘ಸ್ಟಾಚ್ಯೂ’ ಅಂತ ಪ್ರತಿಮೆಗಳಂತೆ ನಿಲ್ಲುವವರನ್ನು ಗೋಳುಹೊಯ್ದುಕೊಂಡು, ಜೋಕ್ ಹಾರಿಸಿ ನಗಿಸಿ ಅವರನ್ನು ಪ್ರತಿಮೆಗಳಿಂದ ಹೊರತಂದು ‘ಔಟ್’ ಎಂದು ಕೇಕೆ ಹಾಕಿ ನಗುವ ಮಕ್ಕಳ ಜೊತೆ ನಾವೂ ಮಕ್ಕಳಾಗುತ್ತಿದ್ದೇವೆ. ಸ್ವಲ್ಪ ಗಂಭೀರ ಸ್ವಭಾವದ ನನ್ನ ಪತಿಯೂ ಈ ಮಕ್ಕಳ ಬಲವಂತಕ್ಕೆ ಅವರ ಜೊತೆ ಅವರಂತೆಯೇ ಆಡುತ್ತ, ನಗುತ್ತಾ ಮಕ್ಕಳಾಗುತ್ತಿದ್ದಾರೆ. ಜೊತೆಗೆ ಮಕ್ಕಳ ಆಸೆಗಾಗಿ ನಾವು ದಂಪತಿಗಳೂ ನಮ್ಮ ಮನೆಯ ಕಾಂಪೌಂಡಿನಲ್ಲಿಯೇ ಜೂಟಾಟ, ಗಿರಿಗಿಟ್ಟಲೆ ಆಡುತ್ತಿದ್ದೇವೆ.

ನಮಗೂ ಬಾಲ್ಯ ಮರುಕಳಿಸಿದೆ; ನಾವಿಬ್ಬರೂ ಹಾಗೆ ಆಡುವಾಗ ಆ ಮಕ್ಕಳ ಮುಖದಲ್ಲಿ ಏನೋ ಗೆದ್ದ ಸಂಭ್ರಮ, ದೊಡ್ಡವರು ತಮ್ಮ ಮಾತಿಗೆ ಬೆಲೆ ಕೊಡುತ್ತಾರಲ್ಲಾ ಎಂಬ ಹೆಮ್ಮೆ. ಮಕ್ಕಳ ಮುಖದಲ್ಲಿ ಆಗ ಕಾಣುವ ಆ ಗೆಲುವು, ನಗು ನಮ್ಮನ್ನು ಅರಳಿಸುತ್ತಿವೆ. ಮುಗ್ಧಮಕ್ಕಳ ಜೊತೆ ಕಳೆಯುವ ಸಮಯವೇ ಜೀವನದ ಅತ್ಯಂತ ಆನಂದದ ಕ್ಷಣಗಳು.

ಆದರೆ ಈ ಅರಿವಿರದೆಯೋ ಅಥವಾ ಅನಿವಾರ್ಯ ಪರಿಸ್ಥಿತಿಯಿಂದಲೋ ಮಕ್ಕಳನ್ನು ಸಮ್ಮರ್ ಕ್ಯಾಂಪ್‍ಗೋ, ಇನ್ಯಾವುದೋ ಮಕ್ಕಳಾಲಯಕ್ಕೋ ಕಳುಹಿಸುವ ತಂದೆ–ತಾಯಿಗಳು ಮಕ್ಕಳಿಂದ ದೊರೆಯುವ ಇಂತಹ ಆನಂದದಿಂದ ವಂಚಿತರಾಗುತ್ತಿದ್ದಾರೆ; ಮಕ್ಕಳ ಪರಿಪೂರ್ಣ ವ್ಯಕ್ತಿತ್ವವಿಕಾಸದ ಚಿಗುರು ಹುಲುಸಾಗುವ ಸಾಧ್ಯತೆಯನ್ನು ಚಿವುಟುತ್ತಿದ್ದಾರೆ.

ಮನೆಯೆಂದರೆ, ಶಾಲೆಯೆಂದರೆ ನಾಲ್ಕು ಗೋಡೆಗಳು ಮಾತ್ರವೇ ಆಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಮಕ್ಕಳು ಟಿ.ವಿ., ಮೊಬೈಲ್, ಕಂಪ್ಯೂಟರ್‌ಗಳ ಜೊತೆಯೇ ಬಾಂಧವ್ಯ ಬೆಳೆಸಿಕೊಂಡು ಅವುಗಳ ಜೊತೆಯೇ ಆಡುತ್ತ, ಅವುಗಳನ್ನೇ ತಮ್ಮ ಪ್ರಪಂಚ ಮಾಡಿಕೊಂಡು, ಬೇಕೋ ಬೇಡವೋ ಒಂದಿಷ್ಟು ಒಳ್ಳೆಯ-ಕೆಟ್ಟ ಮಾಹಿತಿಗಳು ಕಣ್ಣು, ತಲೆಗೆ ತುಂಬಿಕೊಳ್ಳುತ್ತವೆ. ಮಕ್ಕಳ ಸೃಜನಶೀಲತೆಯನ್ನು ಸುಟ್ಟುಕರಕಲಾಗಿಸಿ ಅವರನ್ನೂ ಕಂಪ್ಯೂಟರ್‌ಗಳಂತಹ ಯಂತ್ರಗಳನ್ನಾಗಿಸುತ್ತಿರುವ ಈ ದಿನಗಳಲ್ಲಿ ಮಕ್ಕಳ ಬೇಸಿಗೆಯರಜೆಯನ್ನು ತಂದೆ–ತಾಯಿಯರು, ಅಜ್ಜ ಅಜ್ಜಿಯರು ಹಸಿರಾಗಿಸಬೇಕಿದೆ.

ಏಕೆಂದರೆ ಮಕ್ಕಳೇ ನಮ್ಮ ಮನೆಯ ಆಸ್ತಿ ಮತ್ತು ಸಮಾಜದ ಆಸ್ತಿಯೂ. ಕೇವಲ ದೈಹಿಕ ವಿಕಾಸವೇ ಪ್ರಧಾನವಾಗಿರುವಾಗ ಮಾನಸಿಕ ವಿಕಸನ ಮಕ್ಕಳ ಒಟ್ಟು ವ್ಯಕ್ತಿತ್ವಕ್ಕೊಂದು ಸುವರ್ಣಚೌಕಟ್ಟು ನೀಡಿ ಸತ್ಪ್ರಜೆಗಳನ್ನಾಗಿಸುತ್ತದೆ ಎನ್ನುವ ಕನಿಷ್ಠ ಅರಿವು ನಮಗೆ ಬೇಕಿದೆ. ಈ ನಿಟ್ಟಿನಲ್ಲಿ ಒಂದಿಷ್ಟು ಹೊಸ ಹೊಸ ಆಲೋಚನೆಗಳತ್ತ ನಾವೂ ಗಮನ ಹರಿಸೋಣ.

ಮಕ್ಕಳಿಗೆ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಬೇಕೆಂಬ ಅರಿವನ್ನು ಮೂಡಿಸಬೇಕು. ಒಬ್ಬೊಬ್ಬರೇ ಮಕ್ಕಳಿರುವ ಈ ದಿನಗಳಲ್ಲಿ ಮಕ್ಕಳು ಊಟ ಮಾಡಿದರೆ ಸಾಕು ಎಂದು ಅವರು ತಿಂದ ತಟ್ಟೆಯನ್ನು ಕೂಡ ತಾಯಿಯೋ ತಂದೆಯೋ ಕೆಲಸದವರೋ ತೆಗೆದುಕೊಂಡು ಹೋಗುತ್ತಾರೆ. ಅದರ ಬದಲು ತಾವು ತಿಂದ ತಟ್ಟೆ, ಕುಡಿದ ಲೋಟವನ್ನು ಗಲಬರಿಸಿ ಸಿಂಕಿನಲ್ಲಿ ಇಡುವಂತಹ ಚಿಕ್ಕ ಪುಟ್ಟ ಕೆಲಸವನ್ನಾದರೂ ಮಾಡುವಂತಾಗಬೇಕು.

ಏಕೆ ಈ ಮಾತು ಹೇಳಿದೆ ಎಂದರೆ ಗಾಬರಿ ಹುಟ್ಟಿಸುವ ಒಂದು ಸಂಗತಿ ನನ್ನ ಗೆಳತಿಯ ಮನೆಯಲ್ಲಿ ನಡೆಯಿತು. ಆಕೆಯ ಐದನೇ ತರಗತಿಯ ಮಗನ ಕ್ಲಾಸ್‍ಮೇಟ್ ಒಬ್ಬಳು ಕಳೆದ ರಜೆಯಲ್ಲಿ ಅವರ ಮನೆಗೆ ಬಂದಾಗ, ಆಕೆ ಕೊಟ್ಟ ಸ್ನಾಕ್ಸ್ ತಿಂದ ಮೇಲೆ ನನ್ನ ಗೆಳತಿಯ ಮಗ ಪ್ಲೇಟನ್ನು ಸಿಂಕಿಗೆ ಹಾಕಿದ. ಅವನ ಗೆಳತಿ ಕಣ್ಕಣ್ಣು ಬಿಟ್ಟುಕೊಂಡು ‘ಇದನ್ನು ನೀನೇ ಮಾಡುತ್ತೀಯಾ? ಮಕ್ಕಳು ಇದನ್ನು ಮಾಡ್ತಾರೆ ಅಂತ ನನಗೆ ಗೊತ್ತೇ ಇರಲಿಲ್ಲ’ ಎಂದಳಂತೆ.

ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡಲು ಮಕ್ಕಳನ್ನು ಪ್ರೇರೇಪಿಸಬೇಕು. ಗಿಡಗಳಿಗೆ ನೀರು ಹಾಕುವುದು, ಹರಡಿದ ಪತ್ರಿಕೆಗಳನ್ನು ಸ್ವಸ್ಥಾನದಲ್ಲಿರಿಸುವುದು, ಮಲಗಿ ಎದ್ದ ಮೇಲೆ ಹೊದಿಕೆಯನ್ನು ಮಡಿಸಿಡುವುದು... ಇಂಥವು. ಇದರಿಂದ ಮಕ್ಕಳಿಗೆ ಸಮಯ ಹೋಗುವುದರ ಜೊತೆಗೆ ಮನೆಯ ಆಗುಹೋಗುಗಳ ಬಗೆಗೆ ಒಂದಿಷ್ಟು ತಿಳಿವಳಿಕೆ ಮೂಡುತ್ತದೆ. ಜೊತೆಗೆ ತಾಯ್ತಂದೆಯರ ಕಷ್ಟ–ಸುಖಗಳ ಬಗ್ಗೆಯೂ ತಿಳಿಯುತ್ತದೆ. ಕಾಳು, ಬೇಳೆ, ತರಕಾರಿಗಳ ಬಗೆಗೆ ತಿಳಿವಳಿಕೆ ಮಾತ್ರವಲ್ಲದೇ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ ಮೂಡುತ್ತದೆ. ಇದು ಪಟ್ಟಣದ ಮಕ್ಕಳಿಗೆ ಮಾತ್ರ ಅನ್ವಯ. ಏಕೆಂದರೆ ಹಳ್ಳಿಯ ಮಕ್ಕಳಿಗೆ ಈ ಬಗೆಯ ತಿಳಿವಳಿಕೆ ಬುದ್ಧಿ ತಿಳಿದಾಗಿನಿಂದ ಬಂದಿರುತ್ತದೆ. ಅವರು ಹಸು ಕರು ಕುರಿಗಳನ್ನು ನೋಡಿಕೊಳ್ಳುವುದು, ಗದ್ದೆಗೆ ತಂದೆ ತಾಯಿ ಅಣ್ಣಂದಿರ ಜೊತೆ ಹೋಗಿ ಸಣ್ಣ ಪುಟ್ಟಕೆಲಸಗಳನ್ನು ಮಾಡುತ್ತಿರುತ್ತಾರೆ.

ಈ ದಿನಗಳಲ್ಲಿ ಹೆಣ್ಣುಮಕ್ಕಳಾಗಲೀ ಗಂಡುಮಕ್ಕಳಾಗಲೀ ಅಡುಗೆಯ ಬಗೆಗೆ ಸ್ವಲ್ಪವಾದರೂ ಜ್ಞಾನವಿದ್ದರೆ ಒಳಿತು. ಹಾಗಾಗಿ ಅಡುಗೆ–ತಿಂಡಿಗಳನ್ನು ಮಾಡುವಾಗ ಮಕ್ಕಳ ಜೊತೆ ಸಮಯ ಕಳೆದಂತೆಯೂ ಆಯಿತು, ಅವರಿಗೆ ಕಲಿಸಿದಂತೆಯೂ ಆಯಿತು.

ನಮ್ಮ ಮನೆಗೆ ಧಾಂಗುಡಿಯಿಡುವ ಬಹುತೇಕ ಮಕ್ಕಳಲ್ಲಿ ಹೆಣ್ಣುಮಕ್ಕಳೇ ಹೆಚ್ಚು. ಹಾಗಾಗಿ ಅಡುಗೆ ಆಟವೂ ಇಲ್ಲಿ ಉಂಟು. ಕ್ಯಾರೆಟ್ ಹಲ್ವ ಮಾಡುವುದು ಹೇಗೆ, ಬಜ್ಜಿ ಮಾಡುವುದು ಹೇಗೆ ಎಂದು ಅಷ್ಟು ಸ್ಪಷ್ಟವಾಗಿ ವಿವರಿಸುತ್ತಾ ಮಾಡುವುದನ್ನು ನೋಡಿದಾಗ ಮಕ್ಕಳಲ್ಲಿ ಗಮನಿಸುವ ಗುಣ ಅಧಿಕವಾಗಿರುತ್ತದೆ ಎಂಬುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ಮಕ್ಕಳ ಈ ಗಮನಿಸುವಿಕೆಯ ಗುಣಕ್ಕೆ ನಾವು ದೊಡ್ಡವರು ನೀರೆರೆಯಬೇಕು. ಅಲ್ಲಿ ನೋಡು ಹಕ್ಕಿ ಇದೆ ಎಂದರೆ ಸಾಕು. ಅದನ್ನು ಬಿಟ್ಟು ಅದರ ಬಣ್ಣ ಯಾವುದು, ಅದರ ಕೊಕ್ಕು ನೋಡು, ಅದರ ಬಾಲ ನೋಡು ಎಂದು ಮಕ್ಕಳ ಗಮನವನ್ನು ನಮ್ಮ ದೃಷ್ಟಿಕೋನದಿಂದ ಸೆಳೆಯುತ್ತೇವೆ. ಮಕ್ಕಳಿಗೇ ಬಿಟ್ಟರೆ ಅವರ ಕಲ್ಪನಾವಿಹಾರ ಗರಿಗೆದರುತ್ತದೆ.

ಈ ರಜೆಯಲ್ಲಿ ಮಕ್ಕಳಿಗೆ ಜೇಡಿಮಣ್ಣನ್ನು ಕೊಟ್ಟು ನೋಡಿ. ಅವರ ಸೃಜನಶೀಲತೆಯನ್ನು ಗರಿಗೆದರಿಸಿ. ಒಂದಿಷ್ಟು ತಮಾಷೆ ಮಾಡಬೇಕೆಂದರೆ ಅಪ್ಪನೋ ಅಮ್ಮನೋ ಅಜ್ಜಿಯೋ ಅಜ್ಜನೋ ಅದರಿಂದ ಮಾಡಿ ಎಂದರೆ ಮಕ್ಕಳು ಮಾಡುವ ಚಿತ್ರ ವಿಚಿತ್ರ ಆಕಾರಗಳನ್ನು ನೋಡಿ ಅವರೂ ನಕ್ಕು ನಲಿಯುತ್ತಾರೆ, ಹಿರಿಯರೂ ಸಂತೋಷಿಸಬಹುದು. ಹಕ್ಕಿ, ಪ್ರಾಣಿಗಳನ್ನು ಜೇಡಿಮಣ್ಣಿನಿಂದ ಮಾಡಲು ಹೇಳಿ. ಅಡುಗೆಗೆ ಬಳಸುವ ವಸ್ತುಗಳನ್ನು ಮಾಡಲು ಹೇಳೋಣ. ಅವರ ಕಲ್ಪನೆಗೆ ತಕ್ಕಂತೆ ಮಾಡಲು ಬಿಡೋಣ, ನಾವು ಮಧ್ಯೆ ತಲೆತೂರಿಸುವುದು ಬೇಡ. ಮಕ್ಕಳು ಹೆಚ್ಚು ಪ್ರತಿಭಾವಂತರು. ಅದನ್ನು ನೀರೆರೆದು ಪೋಷಿಸುವುದು ನಮ್ಮ ಕರ್ತವ್ಯವಷ್ಟೇ.

ಬಹುಮುಖ್ಯವಾಗಿ ಮಕ್ಕಳಿಗೆ ಈ ರಜೆಯಲ್ಲಿ ನಾವು ಕಲಿಸಬಹುದಾದದ್ದೆಂದರೆ ಅವರು ಇಷ್ಟಪಡುವುದನ್ನು ನಾವು ಮಾಡುವುದನ್ನು ಬಿಟ್ಟು, ನಾವು ಮಾಡಿದ್ದನ್ನು ಮಕ್ಕಳು ಇಷ್ಟಪಟ್ಟು ತಿನ್ನುವುದನ್ನು ಕಲಿಸುವುದು.

ನಮ್ಮ ಮಕ್ಕಳು ಈ ಸಮಾಜದ ಒಂದು ಭಾಗ. ಹಾಗಾಗಿ ಅವರು ಕೇವಲ ನಮ್ಮ ಜೊತೆ ಮಾತ್ರವೇ ಆಡದೆ ಅಕ್ಕಪಕ್ಕದ ಮಕ್ಕಳೊಡನೆ ಆಡುವುದು, ನೆರೆಹೊರೆಯವರೊಂದಿಗೆ ಮಾತುಕತೆಯಾಡುವುದಕ್ಕೂ ಬಿಡಬೇಕು. ಸಾಮುದಾಯಿಕವಾಗಿ ಬೆಳೆದಾಗ ಮಾತ್ರ ಮಕ್ಕಳು ಸಮೃದ್ಧವಾಗಿ ಚಿಂತಿಸಲು, ಬದುಕಲು ಸಾಧ್ಯ.

ರಜೆಗೆ ಅಜ್ಜ–ಅಜ್ಜಿಯರ ಮನೆಗೆ ಕಳುಹಿಸೋಣ. ಸಂಸ್ಕಾರವಂತರನ್ನಾಗಿಸುವುದು ಹಿರಿಯರಿಗೆ ಬಂದ ಬಳುವಳಿ. ನೈತಿಕತೆಯ ಎಳೆಯನ್ನು ಹೊಂದಿರುವ ಕಥೆ ಹೇಳುವ ಅಜ್ಜಿ ಅಜ್ಜಂದಿರು ಮಕ್ಕಳ ಆಟಿಕೆಯೂ ಹೌದು, ಶಿಲ್ಪಿಗಳೂ ಹೌದು.

ಮಕ್ಕಳಿಗೆ ದೈಹಿಕವಾಗಿ ಆಯಾಸ ಆಗುವ ಆಟ ಆಡಲು ಬಿಡೋಣ. ಆಗ ತನ್ನಿಂದ ತಾನೇ ನಿದಿರೆ ಅಪ್ಪುತ್ತದೆ, ಅಲಾರಾಂ ಇಲ್ಲದೆಯೇ ಎಚ್ಚರವಾಗುತ್ತದೆ. ಇದು ಬಯೋಕ್ಲಾಕ್ ಸರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ನೀರಿನಲ್ಲಿ ಆಡುವುದೆಂದರೆ ಆಬಾಲವೃದ್ಧರಾಗಿ ಎಲ್ಲರಿಗೂ ಪ್ರೀತಿ. ವಾಟರ್ ಗೇಮ್ಸ್ ಪಾರ್ಕ್‌ಗಳಿಗೆ ಕರೆದೊಯ್ದು ಕೋಟೆಯ ನಡುವೆ, ಕ್ಲೋರಿನ್‌ನಲ್ಲಿ ಮಕ್ಕಳನ್ನು ಹುದುಗಿಸುವ ಬದಲು ಬದಲಾವಣೆ ಎಂದು ಯಾವುದಾದರೂ ಹಳ್ಳಿಗೆ ಕರೆದೊಯ್ಯಿರಿ. ಗಿಡಮರ ಹಕ್ಕಿಗಳನ್ನು ನೋಡುತ್ತ ನದಿ–ಕಾಲುವೆಗಳಲ್ಲಿ ನಿಮ್ಮ ಕಣ್ಗಾವಲಿನಲ್ಲಿ ಮಕ್ಕಳು ಆಡಿ ಪ್ರಕೃತಿಯ ಸವಿಯನ್ನು ಸವಿಯಲಿ.

ಸಿನಿಮಾ ಥಿಯೇಟರ್‌ಗಳಿಗೆ ಹೋಗುವ ಬದಲು ಪುಟ್ಟ ಪ್ರೊಜೆಕ್ಟರ್‌ ತಂದುಕೊಡಿ. ರೂಮಿನಲ್ಲಿ ಕತ್ತಲು ಮಾಡಿ ಒಂದು ಬಿಳಿ ಬಟ್ಟೆಯ ಮೇಲೆ ಅವರೇ ಸಿನಿಮಾ ಓಡಿಸಲಿ. ಗೆಳೆಯರೊಂದಿಗೆ ಸಂತಸ ಪಡಲಿ. ತಾವೇ ಸಿನಿಮಾ ತೋರಿಸಿದ ಆನಂದ, ಹೆಮ್ಮೆ ನಮ್ಮ ಮಕ್ಕಳದ್ದಾಗಲಿ.

ಬೇರೆ ಮಕ್ಕಳೊಂದಿಗೆ ಆಡುವಾಗ ಅತಿ ಹೆಚ್ಚು ಆಟಿಕೆಗಳನ್ನು ಕೊಡುವುದು ಬೇಡ. ಇರುವುದನ್ನೇ ಹಂಚಿ ಆಡುವುದನ್ನು, ಹಂಚಿ ತಿನ್ನುವುದನ್ನು ಮಕ್ಕಳು ಕಲಿಯಬೇಕಿದೆ.

ಮಕ್ಕಳ ಈ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಅಮ್ಮಂದಿರ ಪಾತ್ರ ಗಮನೀಯ. ತಾಯಿಯ ತಾಳ್ಮೆ ಮಕ್ಕಳ ವ್ಯಕ್ತಿತ್ವ ವಿಕಾಸದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ತಪ್ಪು ಮಾಡಿದಾಗ ಬೈಯ್ಯದೆ, ನಿಧಾನವಾಗಿ ತಿದ್ದಿ ತೀಡುವ ತಾಯಿ, ಅಜ್ಜಿಯರ ಕಣ್ಬೆಳಕಿನಲ್ಲಿ ಈ ಬೇಸಿಗೆ ರಜೆಯನ್ನು ಮಕ್ಕಳು ಸವಿಯಲಿ.

‘ಆಂಟೀ.. ಆಂಟೀ.. ಅಂಕಲ್ಲ್... ಅಂಕಲ್ಲ್....’ ನಮ್ಮ ರಸ್ತೆಯ ಮಕ್ಕಳು ಕೂಗ್ತಿದಾರೆ. ಅವರ ಜೊತೆ ಆಡ್ಬೇಕು. ಮತ್ತೆ ಸಿಗ್ತೀನಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT