ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವ: ಸೌಲಭ್ಯ ಕಲ್ಪಿಸಲು ಕ್ರಮ

ಮಹಾಮಂಡಳ ಮುಖಂಡರಿಗೆ ಪಾಲಿಕೆ ಆಯುಕ್ತರ ಭರವಸೆ
Last Updated 30 ಆಗಸ್ಟ್ 2018, 13:00 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಹೆಸ್ಕಾಂ, ಪೊಲೀಸ್‌ ಇಲಾಖೆ, ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದರು.

ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಾರ್ವಜನಿಕ ಗಣೇಶ ಮಂಡಳಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಈ ಭರವಸೆ ನೀಡಿದರು.

‘ಸಾರ್ವಜನಿಕ ಗಣೇಶ ಮೂರ್ತಿಗಳು ಮೆರವಣಿಗೆಯಲ್ಲಿ ಸಾಗುವ ರಸ್ತೆಗಳ ದುರಸ್ತಿಗೆ ಟೆಂಡರ್ ಆಗಿದೆ. ಕಾರ್ಯಾದೇಶವನ್ನೂ ನೀಡಲಾಗಿದೆ. ಕಾಮಗಾರಿಗಳನ್ನು ಆರಂಭಿಸುವುದು, ಮಳೆಯಿಂದಾಗಿ ತಡವಾಗಿದೆ. ಗುಂಡಿಗಳನ್ನು ಮುಚ್ಚುವುದಕ್ಕೆ ಹಣದ ಕೊರತೆ ಇಲ್ಲ’ ಎಂದು ಮಾಹಿತಿ ನೀಡಿದರು.

‘ಗಣೇಶ ಮಂಟಪಗಳ ಸುತ್ತಮುತ್ತ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುವುದು. ಗಣೇಶ ಮೂರ್ತಿಗಳ ವಿಸರ್ಜನೆಗೆ ಹೊಂಡಗಳನ್ನು ಸಜ್ಜುಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರು ಪೂರೈಕೆಗೆ, ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಹೊಂಡಗಳ ಬಳಿ ಜೀವರಕ್ಷಕ ತಂಡಗಳನ್ನು ನಿಯೋಜಿಸಲಾಗುವುದು’ ಎಂದು ಹೇಳಿದರು.

24 ಗಂಟೆಯೂ ವಿದ್ಯುತ್‌:
‘ಉತ್ಸವ ಸಂದರ್ಭದಲ್ಲಿ 24 ಗಂಟೆಯೂ ತಡೆರಹಿತ ವಿದ್ಯುತ್ ಪೂರೈಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಡಿಸಿಪಿ ಸೀಮಾ ಲಾಟ್ಕರ್ ಮಾತನಾಡಿ, ‘ಉತ್ಸವದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಬಾರದು. ಇದಕ್ಕಾಗಿ ನಿಯಮಗಳನ್ನು ಪಾಲಿಸಲೇಬೇಕು. ನಮ್ಮ ಸಂಭ್ರಮದಿಂದ ಬೇರೆಯವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಅನುಮತಿ ಪಡೆಯಬೇಕೇಕೆ?:
ಅಧ್ಯಕ್ಷತೆ ವಹಿಸಿದ್ದ ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ‘ಉತ್ಸವಕ್ಕೆ ಪಾಲಿಕೆಯಿಂದ ಎಲ್ಲ ಸಹಕಾರ ನೀಡಲಾಗುವುದು. ಮಂಡಳದವರು ಯಾರಿಗೂ ತೊಂದರೆಯಾಗದಂತೆ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು’ ಎಂದು ಕೋರಿದರು.

ಮುಖಂಡ ರಮಾಕಾಂತ ಕೊಂಡುಸ್ಕರ ಮಾತನಾಡಿ, ‘ಗಣೇಶೋತ್ಸವವನ್ನು ನಡೆಸುತ್ತಿದ್ದೇವೆ. ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತೇವೆ. ಆದರೆ, ಎಲ್ಲದಕ್ಕೂ ಅನುಮತಿ ಪಡೆಯಬೇಕು ಎನ್ನುತ್ತೀರಿ. ನಾವೇನು ಮನೆ ಕಟ್ಟುತ್ತಿದ್ದೇವೆಯೇ? ಇದು ಇಡೀ ಸಮಾಜದ ಹಬ್ಬ. ಎಲ್ಲರೂ ಸೇರಿ ಶಾಂತಿಯಿಂದ ಆಚರಿಸಬೇಕು. ಹೀಗಾಗಿ, ಅಧಿಕಾರಿಗಳು ಅವಕಾಶ ಹಾಗೂ ಸಹಕಾರ ಕೊಡಬೇಕು. ಅನುಮತಿ ಪಡೆಯಲಿ ಎಂದು ನಿರೀಕ್ಷಿಸಬಾರದು’ ಎಂದರು.

ಉಪಮೇಯರ್‌ ಮಧುಶ್ರೀ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT