ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17ರ ಸಂಭ್ರಮದಲ್ಲಿ ಕನ್ನಡದ ರೇನ್‌ಬೋ

ಕಾಮನಬಿಲ್ಲು
Last Updated 31 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಪರಿಶುದ್ಧ ಕನ್ನಡ ಭಾಷೆಯಿಂದಲೇ ಕೇಳುಗರನ್ನು ಆಕರ್ಷಿಸಿ, ಮೆಚ್ಚುಗೆಗೆ ಪಾತ್ರವಾಗಿರುವ ಆಕಾಶವಾಣಿಯ ‘ಎಫ್‌ಎಂ ರೇನ್‌ಬೋ’ (ಕನ್ನಡ ಕಾಮನಬಿಲ್ಲು–101.3) ಸೆಪ್ಟೆಂಬರ್ 1ರಂದು 17ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂತಸದ ಸಮಯದಲ್ಲಿ ತನ್ನ ಕೇಳುಗರ ಮನತಣಿಸಲು ದಿನವಿಡಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಬೆಳಿಗ್ಗೆ 6ಕ್ಕೆ ವಿಶೇಷ ಕಾರ್ಯಕ್ರಮಗಳು ಶುರುವಾಗಲಿದ್ದು, ರಾತ್ರಿ 10ರವರೆಗೆ ಅವು ಮುಂದುವರೆಯಲಿವೆ. ಹೆಸರಾಂತ ಕವಿಗಳು, ನಟರು, ಆಯಾ ಕ್ಷೇತ್ರಗಳ ತಜ್ಞರನ್ನು ಸ್ಟುಡಿಯೊಗೆ ಕರೆಸಿ ಅವರಿಂದ ಲೈವ್ ಶೋಗಳನ್ನು ರೇನ್‌ಬೋ ನಡೆಸಿಕೊಡಲಿದೆ.

17 ವರ್ಷ ಪೂರ್ಣಗೊಂಡ ಸಂತಸದಲ್ಲೇ ಮಾತಿಗೆ ಸಿಕ್ಕ ರೇನ್‌ಬೋ ಕಾರ್ಯಕ್ರಮ ನಿರ್ವಾಹಕ ಎಸ್.ಆರ್.ಭಟ್, ‘ಪ್ರಾರಂಭದಿಂದ ಇಲ್ಲಿಯವರೆಗೆ ಕಾಲಕ್ಕೆ ತಕ್ಕಂತೆ ಕಾರ್ಯಕ್ರಮಗಳಲ್ಲಿ ಬದಲಾವಣೆ ಕಂಡರೂ ಬಳಸುವ ಭಾಷೆಯಲ್ಲಿ ತನ್ನತನ ಕಳೆದುಕೊಳ್ಳದೇ ಕೇಳುಗರ ಮನಗೆದ್ದಿದ್ದೇವೆ ಎಂದು ಭಾವಿಸಿದ್ದೇವೆ. ಕೇಳುಗರ ಅಪಾರವಾದ ಈ ಅಭಿಮಾನಕ್ಕೆ ರೇನ್‌ಬೋ ಸದಾ ಋಣಿಯಾಗಿರುತ್ತದೆ’ ಎಂದರು.

‘ರೇನ್‌ಬೋ ಕೇಳುಗರ ನಾಡಿಮಿಡಿತದಂತೆ ಕೆಲಸ ಮಾಡುತ್ತಿದ್ದೆ. ಅದರ ಪ್ರತೀಕವಾಗಿ ನಮ್ಮೆಲ್ಲ ಕಾರ್ಯಕ್ರಮಗಳಿಗೆ ವಾಟ್ಸ್ಆ್ಯಪ್ ಮೂಲಕ ಮುಕ್ತವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅವರು ನೀಡುವ ಸಲಹೆಗಳನ್ನು ಅಷ್ಟೇ ಮುಕ್ತಮನಸ್ಸಿನಿಂದ ರೇನ್‌ಬೋ ಸ್ವೀಕರಿಸಿ, ಅಳವಡಿಸಿಕೊಳ್ಳುತ್ತಿದೆ’ ಅಂದರು.

‘ಬೇರೆ ಎಫ್‌ಎಂಗಳಿಗಿಂತ ಕನ್ನಡದ ಕಾಮನಬಿಲ್ಲು ಭಿನ್ನವಾದದ್ದು. ಭಾಷೆಗೆ ಆದ್ಯತೆ ನೀಡುವುದರ ಜೊತೆಗೆ ಕೇಳುಗರಿಗೆ ಅತಿ ಎನಿಸದಂತೆ ಸೇವೆ ನೀಡುತ್ತಿದ್ದೇವೆ. ಪ್ರತಿ ಗಂಟೆಗೆ ಎರಡು ನಿಮಿಷ ಸುದ್ದಿ ನೀಡುತ್ತಿದ್ದು, ಇದಕ್ಕೆ ಶೋತೃಗಳಿಂದ ಹೆಚ್ಚು ಪ್ರಶಂಸೆ ವ್ಯಕ್ತವಾಗುತ್ತಿದೆ. ದಿನ 19 ಗಂಟೆಗಳ ಕಾರ್ಯದಲ್ಲಿ 18 ಗಂಟೆಗಳ ಲೈವ್‌ ಶೋಗಳನ್ನು ನಮ್ಮ ಆರ್‌ಜೆಗಳು ನಡೆಸಿಕೊಡುತ್ತಿದ್ದಾರೆ. ಯಾವುದೇ ಕಾರ್ಯಕ್ರಮವನ್ನು ನಾವು ರೆಕಾರ್ಡಿಂಗ್ ಮಾಡಿ ಪ್ರಸಾರ ಮಾಡುತ್ತಿಲ್ಲ. ಪ್ರಾಯೋಜಿತ ಕಾರ್ಯಕ್ರಮಗಳು ಮಾತ್ರ ರೆಕಾರ್ಡಿಂಗ್ ಆಗುತ್ತಿವೆ’ ಎನ್ನುತ್ತಾರೆ
ಅವರು.

‘ಪರಿಶುದ್ಧ ಭಾಷೆ, ಮಾಧುರ್ಯ ಪೂರ್ಣ ಸಂಗೀತ, ಮಾಹಿತಿಯುಕ್ತ ಮನರಂಜನೆ ನಮ್ಮ ಆದ್ಯತೆ. ನಮ್ಮದು ಒಂದು ರೀತಿ ಇನ್ಫೋಟೈನ್‌ಮೆಂಟ್. ಜನರ ಕೇಳ್ಮೆಯ ತಾಳ್ಮೆಯಿಂದ 17 ವರ್ಷ ಅಡೆತಡೆಗಳಿಲ್ಲದೆ ನಡೆದುಕೊಂಡು ಬಂದಿದ್ದೇವೆ. ಕೇಳುಗರ ಅಭಿಮಾನ ನಮ್ಮ ಮೇಲೆ ಇದೇ ರೀತಿ ಇರಲಿ ಎಂದೂ ಆಶಿಸುತ್ತೇವೆ’ ಎನ್ನುತ್ತಾರೆರೇನ್‌ಬೋದ ಮತ್ತೊಬ್ಬ ಕಾರ್ಯಕ್ರಮ ನಿರ್ವಾಹಕ ಟಿ.ವಿ.ವಿಜಯಶಂಕರ್.

ಎಲ್ಲ ವರ್ಗದ ಜನರಿಗೆ ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ. ಮಕ್ಕಳಿಂದ ಹಿರಿಯರಿಗೆ ಆದ್ಯತೆ ನೀಡುವ ರೇನ್‌ಬೋ,ಸ್ಟಾರ್ಟ್ ಅಪ್ ಕಂಪನಿಗಳು ಹಾಗೂ ಮಹಿಳಾ ಸಬಲೀಕರಣ ಸಂಬಂಧ ವಿಶೇಷ ಕಾರ್ಯಕ್ರಮಗಳನ್ನು ನಿತ್ಯ ನೀಡುವ ಯೋಜನೆಯನ್ನು ಹೊಂದಿದೆ. ಕೇಳುಗರ ಕೇಳುವ ತಾಳ್ಮೆ ಕಡಿಮೆ. ಹೀಗಾಗಿ, ಐದು ನಿಮಿಷದ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಮುಂದಿನ ದಿನಗಳಲ್ಲಿ ರೇನ್‌ಬೊ ಆದ್ಯತೆ ನೀಡುವ ಉದ್ದೇಶ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT