ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ರರನ್ನು ಕೈಬೀಸಿ ಕರೆಯುತ್ತಿರುವ ಪುರ ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರ

ನಕ್ಷತ್ರಾಕಾರ ದೇವಾಲಯ
Last Updated 1 ಸೆಪ್ಟೆಂಬರ್ 2018, 11:20 IST
ಅಕ್ಷರ ಗಾತ್ರ

ವೇದಾವತಿ ನದಿ ದಂಡೆಯ ಮೇಲಿರುವ ಯಗಟಿಪುರ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಸುಂದರ ಮತ್ತು ಪ್ರಶಾಂತ ಪರಿಸರದಲ್ಲಿದ್ದು, ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

ಕಡೂರಿನಿಂದ ಪೂರ್ವಕ್ಕೆ 22 ಕಿ.ಮೀ. ದೂರದಲ್ಲಿರುವ ಯಗಟಿ ಐತಿಹಾಸಿಕ ಪ್ರಸಿದ್ದಿ ಪಡೆದ ಸ್ಥಳ. ಇಲ್ಲಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಪುರ ಗ್ರಾಮದಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಹೊಯ್ಸಳ ದೊರೆಗೆ ಸಂತಾನಭಾಗ್ಯ ನೀಡಿದ ಹಿರಿಮೆಯುಳ್ಳ ಮತ್ತು ಸಾವಿರಾರು ಭಕ್ತರು ಆರಾಧಿಸುವ ಶ್ರದ್ಧಾ ಭಕ್ತಿಯ ತಾಣವಾಗಿದೆ. ರಥೋತ್ಸವದ ವೇಳೆ ಇಲ್ಲಿ ಸಂಭವಿಸುವ ಗಂಗೋದ್ಭವ ವಿಸ್ಮಯಕಾರಿ ಸಂಗತಿ.

ಕ್ರಿ.ಶ. 1102 ರಲ್ಲಿ ಹೊಯ್ಸಳ ಅರಸ ಹರಿಹರ ಸೋಮೇಶ್ವರ ಈ ದೇವಸ್ಥಾನವನ್ನು ನಿರ್ಮಿಸಿದ ಬಗ್ಗೆ ಕೈಬರಹದ ದಾಖಲೆಯೊಂದು ಲಭ್ಯವಿದೆ. ಈ ದೇವಾಲಯ ನಿರ್ಮಾಣದ ಹಿಂದೆ ಪ್ರಚಲಿತವಾಗಿರುವ ಒಂದು ಸಂಗತಿ ಹೀಗಿದೆ.

‘ಅರನತೊಳಲು ಎಂಬ ಗ್ರಾಮದ ಗೌಡಿಕೆ ಇದ್ದ ವೀರ ಶೆಟ್ಟಿಗೆ ಮಕ್ಕಳಿರಲಿಲ್ಲ. ಅವನಲ್ಲಿದ್ದ ಒಂದು ಹಸು ಪ್ರತಿದಿನ ವೇದಾವತಿ ನದಿ ದಂಡೆಯ ಮೇಲಿದ್ದ ಹುತ್ತಕ್ಕೆ ಹಾಲು ಕರೆಯುತ್ತಿದ್ದುದನ್ನು ಕಂಡ ವೀರಶೆಟ್ಟಿ ಆ ಹುತ್ತವನ್ನು ಆಗೆದಾಗ ಅದರೊಳಗಿದ್ದ ಸರ್ಪವೊಂದು ಪೂರ್ವ ದಿಕ್ಕಿಗೆ ಹೋಗಿ ಮಲಗುತ್ತದೆ. ಅದೇ ರಾತ್ರಿ ವೀರಶೆಟ್ಟಿಗೆ ಸ್ವಪ್ನದಲ್ಲಿ ಈಶ್ವರ ದರ್ಶನವಿತ್ತು, ಮಲ್ಲಾಸುರ ಎಂಬ ರಾಕ್ಷಸನನ್ನು ಕೊಂದಸ್ಥಳ ಅದು ಅಲ್ಲಿ ನನಗೆ ದೇಗುಲ ನಿರ್ಮಿಸು, ನನಗೆ ಸಂತಸವಾಗುತ್ತದೆ ಎಂದು ತಿಳಿಸಿದ. ಹಾಗೆ ವೀರಶೆಟ್ಟಿ ಸರ್ಪ ಮಲಗಿದ್ದ ಸ್ಥಳದಲ್ಲಿ ಶಿವಾಲಯವನ್ನು ಕಟ್ಟಿಸಿ, ಲಿಂಗವನ್ನು ಪ್ರತಿಷ್ಠಾಪಿಸಿ ಅದಕ್ಕೆ ಮಲ್ಲಿಕಾರ್ಜುನ ಎಂಬ ಹೆಸರಿಟ್ಟ. ಈ ಸಂಗತಿ ತಿಳಿದ ಹೊಯ್ಸಳ ಅರಸರ ಹರಿಹರ ಸೋಮೇಶ್ವರ ಇಲ್ಲಿಗೆ ಬಂದು ಮಲ್ಲಿಕಾರ್ಜುನನ್ನು ಪೂಜಿಸಿ ಸಂತಾನ ಭಾಗ್ಯ ಪಡೆದ. ಆತ ಇಲ್ಲಿಗೆ ಬಂದ ಸಂದರ್ಭದಲ್ಲಿ ವೆಂಗಟಿ ಮತ್ತು ಎಲಿಹುಣಸಿ ಎಂಬ ಇಬ್ಬರು ನೃತ್ಯಗಾತಿಯರ ನೃತ್ಯಕ್ಕೆ ಮನಸೋತು ಎರಡು ಗ್ರಾಮಗಳನ್ನು ಅವರಿಗೆ ನೀಡಿ, ಅದಕ್ಕೆ ಅವರ ಹೆಸರನ್ನು ಇಟ್ಟನಂತೆ. ಅವೇ ಈಗ ಯಗಟಿ ಮತ್ತು ಯಲ್ಲಂಬಳಸೆ ಎಂದು ಹೆಸರಾಗಿದೆ’

ಪ್ರಶಾಂತವಾಗಿ ಹರಿಯುವ ವೇದಾವತಿ ನದಿಯ ಎಡದಂಡೆಯ ಮೇಲಿರುವ ಮಲ್ಲಿಕಾರ್ಜುನಸ್ವಾಮಿ ದೇವಾಲಯ ದೊಡ್ಡದಾಗಿದ್ದು, ನಕ್ಷತ್ರಾಕಾರದಲ್ಲಿದೆ. ಹೆಚ್ಚಿನ ಶಿಲ್ಪಕಲೆಯಿಲ್ಲದಿದ್ದರೂ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾಗಿದೆ. ದೇಗುಲದ ಸುತ್ತಲೂ ಕಂಬಗಳಿಂದ ಕೂಡಿದ ಪ್ರಕಾರವಿದೆ. ದೇಗುಲ ಪ್ರಾಕಾರದಲ್ಲಿ ಗಣಪತಿ, ಅಂತರಘಟ್ಟಮ್ಮ, ಶ್ರೀ ಚೌಡೇಶ್ವರಿ ಆಲಯಗಳಿವೆ. ಪ್ರತಿದಿನ ತ್ರಿಕಾಲ ಪೂಜೆ ನಡೆಯುತ್ತದೆ.

ಪ್ರತಿವರ್ಷ ಪಾಲ್ಗುಣ ಶುದ್ಧ ಮಘಾ ನಕ್ಷತ್ರದಲ್ಲಿ ರಥೋತ್ಸವ ನಡೆಯುತ್ತದೆ. ಸಾವಿರಾರು ಜನರು ಈ ಸಂದರ್ಭದಲ್ಲಿ ಸೇರುತ್ತಾರೆ. ಈ ಸಮಯದಲ್ಲಿ ಪುಬ್ಬ ನಕ್ಷತ್ರದಲ್ಲಿ ಗಂಗೋದ್ಭವ ನಡೆಯುವುದು ವಿಶೇಷ ವಿದ್ಯಮಾನಗಳಲ್ಲೊಂದಾಗಿದೆ. ದೇಗುಲಕ್ಕೆ ಮೂರು ಅಂತಸ್ತಿನ ದೊಡ್ಡ ರಾಜಗೋಪುರ ನಿರ್ಮಿಸಲಾಗಿದ್ದು. ಪ್ರಧಾನ ದ್ವಾರದ ಪಕ್ಕದಲ್ಲಿ ಇರುವ ಬಾಗಿಲು ಆಂಜನೇಯಸ್ವಾಮಿಗೆ ಪ್ರತಿದಿನ ವಿಶೇಷ ಅಲಂಕಾರಗಳು ನಡೆಯುತ್ತದೆ.

ಇತ್ತೀಚೆಗೆ ದೇಗುಲದ ಎದುರು 25 ಅಡಿ ಎತ್ತರದ ಮಂದಸ್ಮಿತ ಧ್ಯಾನಮುದ್ರೆಯ ಶಿವನ ಪ್ರತಿಮೆ ನಿರ್ಮಿಸಿದ್ದು, ಅತ್ಯಂತ ಆಕರ್ಷಕವಾಗಿದೆ. ಸುಂದರ ಉದ್ಯಾನವೂ ಇಲ್ಲಿದೆ. ದೇಗುಲದ ಆಡಳಿತ ಮಂಡಳಿ ಮೂಲಕ ನಿತ್ಯ ಅನ್ನದಾಸೋಹ ವ್ಯವಸ್ಥೆಯಿಲ್ಲಿದೆ.

ಭಕ್ತರ ಭಾವುಕ ತಾಣವಾಗಿ ಮತ್ತು ಮನಸ್ಸನ್ನು ಪ್ರಫುಲ್ಲಗೊಳಿಸುವ ಪ್ರೇಕ್ಷಣೀಯ ಸ್ಥಳವಾಗಿ ಯಗಟಿ ಪುರ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಪ್ರಸಿದ್ಧಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT