ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಲ್ಲಿದೆ ಚಿನ್ನ ಕನಸಿಗೆ ನೂರು ಬಣ್ಣ

Last Updated 3 ಮೇ 2018, 19:30 IST
ಅಕ್ಷರ ಗಾತ್ರ

* ‘ನೀವು ಸಿನಿಮಾ ಕ್ಷೇತ್ರಕ್ಕೆ ಬಂದಿದ್ದು ಹೇಗೆ?’
ಈ ಪ್ರಶ್ನೆಗೆ ಯಾವಾಗಲೋ ಕೇಳಿದ್ದ ಪೋಲಿ ಜೋಕು ಪಕ್ಕನೆ ನೆನಪಾದವರಂತೆ ನಕ್ಕರು ಸೋನಲ್ ಮಂತೆರೊ. ಕಾಳು ತಿನ್ನುತ್ತ ಕೂತ ಪಾರಿವಾಳಗಳು ಅನಿರೀಕ್ಷಿತ ಸದ್ದಿಗೆ ಹೆದರಿ ಪಢಪಢ ರೆಕ್ಕೆಬಡಿದು ಹಾರುವಂತೆ ಅವರ ಕಣ್ಣರೆಪ್ಪೆಗಳು ಬಡಿದುಕೊಂಡವು. ಕಿವಿಯ ಓಲೆಗಳೂ ಅವರ ಮುಂದಿನ ಮಾತುಗಳನ್ನು ಕೇಳಲು ಕಾತರವಾಗಿ ಇದ್ದಲ್ಲೇ ತುಸು ತೂಗಾಡಿದವು.

ಬೀಸುವ ಗಾಳಿಯ ಸಂಗದೋಷದಿಂದ ಕಿಡಿಗೇಡಿತನ ಮಾಡುತ್ತಿದ್ದ ಮುಂಗುರುಳಿಗೆ ಆಗಾಗ ಶಿಸ್ತಿನ ಪಾಠ ಕಲಿಸುತ್ತಲೇ ‘ಎಂತ ಗೊತ್ತುಂಟ? ನಂಗೆ ಸಿನಿಮಾಕ್ಕೆ ಬರ್ಲಿಕ್ಕೆ ಒಂಚೂರು ಇಷ್ಟ ಇರ್ಲಿಲ್ಲ’ ಎಂದು ‘ಮಂಗಳೂರು ಕನ್ನಡ’ದ ಸೊಗಡಿನಲ್ಲಿಯೇ ಮಾತು ಆರಂಭಿಸಿದರು. ಸಂಗೀತ ವಾದ್ಯದ ಮೆಲು ತರಂಗವನ್ನು ನೆನಪಿಸುವಂತಿದ್ದ ಅವರ ಮಾತುಗಳ ನಡುವೆ ಆಗೀಗ ನಗೆಯ ಸಿಂಚನವೂ ಆಗುತ್ತಿತ್ತು. ಹೇಳಿಕೇಳಿ ಅವರು ಮಂಗಳೂರಿನ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸ್ ಬ್ಯೂಟಿಫುಲ್ ಸ್ಮೈಲ್‌’ ಎಂಬ ಬಿರುದನ್ನು ಮುಡಿಗೇರಿಸಿಕೊಂಡವರು.

ಸೋನಲ್ ಹುಟ್ಟಿ ಬೆಳೆದಿದ್ದೆಲ್ಲ ಮಂಗಳೂರಿನಲ್ಲಿಯೇ. ಮಗಳು ತೆರೆಯ ಮೇಲೆ ಹೊಳೆಯಬೇಕು ಎಂಬ ಕನಸು ಕಂಡಿದ್ದು ಅವರ ಅಮ್ಮ. ‘ನಮ್ಮನೆಯಲ್ಲಿ ಯಾರಾದ್ರೂ ಸಿನಿಮಾದಲ್ಲಿ ನಟಿಸಬೇಕು ಅಂತ ಅಮ್ಮನಿಗೆ ತುಂಬ ಆಸೆ ಇತ್ತು. ಅವರ ಕನಸು ನನಸು ಮಾಡ್ಬೇಕು ಅಂತಾನೇ ನಾನು ಮೊದಲು ತುಳು ಸಿನಿಮಾ ಒಪ್ಕೊಂಡಿದ್ದು’ ಎಂದು ನೆನಪಿಸಿಕೊಳ್ಳುತ್ತಾರೆ ಈ ಕರಾವಳಿಯ ಬೆಡಗಿ. ಸೋನಲ್ ಅವರ ಮೊದಲ ತುಳು ಸಿನಿಮಾ ‘ಎಕ ಸಕ’. ಇದು ನೂರಾ ಇಪ್ಪತ್ತು ದಿನ ಪ್ರದರ್ಶನ ಕಂಡಿತ್ತು. ಈ ಸಿನಿಮಾ ಒಪ್ಪಿಕೊಳ್ಳುವುದಕ್ಕಿಂತ ಮುಂಚೆ ಅವರು ಒಂದು ಕೊಂಕಣಿ ಆಲ್ಬಂ ಮಾಡಿದ್ದರು. ‘ಅಮ್ಮ ನಿಂಗೋಸ್ಕರ ಇದೊಂದು ಸಿನಿಮಾದಲ್ಲಿ ನಟಿಸ್ತೇನೆ. ನಂತ್ರ ನಾನು ಯಾವ ಸಿನಿಮಾನೂ ಮಾಡೂದಿಲ್ಲ’ ಎಂದ ಅವರ ಪ್ರತಿಜ್ಞೆ ಬಹಳ ಕಾಲ ಉಳಿಯಲಿಲ್ಲ. ಮೊದಲ ಸಿನಿಮಾ ಮುಗಿಯುವುದರ ಒಳಗೆ ಇನ್ನೊಂದು ತುಳು ಸಿನಿಮಾದಲ್ಲಿ ನಟಿಸುವ ಅವಕಾಶ ಬಂತು. ‘ಇದು ಕೊನೆಯ ಸಿನಿಮಾ’ ಎಂದುಕೊಂಡೇ ಮತ್ತೆರಡು ಸಿನಿಮಾ ಮಾಡಿದ್ದೂ ಆಯ್ತು.

ತುಳು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾಗಲೇ ಕನ್ನಡದಲ್ಲಿ ‘ಅಭಿಸಾರಿಕೆ’ ಎಂಬ ಸಿನಿಮಾದಲ್ಲಿ ನಟಿಸುವ ಕರೆಯೂ ಬಂತು. ‘ಅಭಿಸಾರಿಕೆ’ಯಲ್ಲಿ ನಟಿಸಬೇಕು ಅನಿಸಿದ್ದು ಪಾತ್ರದ ಸತ್ವದ ಕಾರಣಕ್ಕೆ. ‘ನನಗೆ ಕ್ಲಿನಿಕಲ್ ಸೈಕಾಲಜಿ ಮಾಡಬೇಕು ಅಂತ ಆಸೆ ಇತ್ತು. ಆದರೆ ಒಂದೊಂದೇ ಸಿನಿಮಾ ಮಾಡುತ್ತ ಮಾಡುತ್ತ ನನ್ನ ಭವಿಷ್ಯ ಇರುವುದು ಈ ಕ್ಷೇತ್ರದಲ್ಲಿಯೇ ಎಂದು ಮನದಟ್ಟಾಗತೊಡಗಿತು. ಆ ಸಮಯದಲ್ಲಿ ‘ಅಭಿಸಾರಿಕೆ’ಯಲ್ಲಿ ನಟಿಸಲು ಒಪ್ಪಿಕೊಂಡೆ. ಈ ಚಿತ್ರದಲ್ಲಿ ನಾಯಕಿಯೇ ನಿಜವಾದ ನಾಯಕ. ತುಂಬ ಮಹತ್ವದ ಪಾತ್ರ. ಇದು ನನ್ನ ಮೊದಲ ಕನ್ನಡ ಸಿನಿಮಾ ಕೂಡ ಹೌದು. ಈ ಚಿತ್ರದಲ್ಲಿ ನಟಿಸುತ್ತಲೇ ನಾನು ನಟನೆಯ ಬಗ್ಗೆ ಪಾತ್ರಗಳ ಬಗ್ಗೆ ಹೆಚ್ಚು ಹೆಚ್ಚು ಯೋಚಿಸತೊಡಗಿದೆ’ ಎಂದು ಅವರು ಹೇಳಿಕೊಳ್ಳುತ್ತಾರೆ.

ಅವರ ಮೊದಲ ಕನ್ನಡ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ನಂತರ ಅವರು ‘ಮದುವೆ ದಿಬ್ಬಣ’ ಎನ್ನುವ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ನಟಿಸಿದರು. ಆ ಚಿತ್ರ ಚಿತ್ರಮಂದಿರಕ್ಕೆ ಒಂದು ಬಾಗಿಲಿಂದ ಪ್ರವೇಶಿಸಿ ಇನ್ನೊಂದು ಬಾಗಿಲಿನಿಂದ ಹೊರಗೆ ಹೋದರೂ ಸೋನಲ್ ಪಾತ್ರಕ್ಕೆ ಒಳ್ಳೆಯ ಪ್ರಶಂಸನೆಗಳೇ ದೊರೆತಿವೆಯಂತೆ. ನಂತರ ಒಪ್ಪಿಕೊಂಡ ‘ಲವ್ ಮ್ಯಾಟ್ರು’ ಎನ್ನುವ ಚಿತ್ರವೂ ಬಹುತೇಕ ಪೂರ್ಣಗೊಂಡಿದೆ.

ಪ್ರಥಮ್ ನಾಯಕನಾಗಿ ನಟಿಸುತ್ತಿರುವ ‘ಎಂಎಲ್‌ಎ’ ಚಿತ್ರಕ್ಕೂ ಸೋನಲ್ ನಾಯಕಿ. ಮೊದಮೊದಲು ಈ ‘ಒಳ್ಳೆ ಹುಡ್ಗ’ನ ಕುರಿತ ಗುಣವಿಶೇಷಗಳ ಕುರಿತು ಕೇಳಿ ಭಯಗೊಂಡಿದ್ದರಂತೆ. ಆದರೆ ‘ಚಿತ್ರೀಕರಣದ ಸಂದರ್ಭದಲ್ಲಿ ನನ್ನೊಂದಿಗೆ ಯಾವತ್ತೂ ಅವರು ಕೆಟ್ಟದಾಗಿ ನಡೆದುಕೊಂಡಿಲ್ಲ. ನನಗೆ ಯಾವ ಕೆಟ್ಟ ಅನುಭವವೂ ಆಗಿಲ್ಲ’ ಎಂದೇ ಅವರು ಹೇಳುತ್ತಾರೆ.

ಕಳೆದ ಆರು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಸೋನಲ್‌ ಹೆಚ್ಚು ಉತ್ಸಾಹದಿಂದ ನೆನೆಯುವುದು ಯೋಗರಾಜ ಭಟ್ಟರನ್ನು. ಅವರು ಈಗ ಭಟ್ಟರ ‘ಪಂಚತಂತ್ರ’ ಸಿನಿಮಾದ ನಾಯಕಿ. ‘ಅದು ಚಿತ್ರೀಕರಣ ಎನ್ನುವುದಕ್ಕಿಂತ ಮೋಜಿನ ದಿನಗಳು ಎನ್ನುವುದೇ ಹೆಚ್ಚು ಸೂಕ್ತ’ ಎನ್ನುತ್ತಾರೆ ಸೋನಲ್. ‘ಪಂಚತಂತ್ರ ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಕಲಿತಿದ್ದೇನೆ. ಆ ಚಿತ್ರೀಕರಣಕ್ಕೆ ಹೋಗುವಾಗ ಯಾವುದೋ ಕೆಲಸಕ್ಕೆ ಹೋಗುತ್ತಿದ್ದೇವೆ ಅನಿಸುತ್ತಿರಲಿಲ್ಲ. ಎಂಜಾಯ್ ಮಾಡಬಹುದು ಎಂದು ಖುಷಿಖುಷಿಯಾಗಿ ಹೋಗುತ್ತಿದ್ದೆ’ ಎನ್ನುವ ಅವರು ಈ ಚಿತ್ರದಲ್ಲಿ ಗುಪ್‌ಚುಪ್‌ ಪ್ರೇಮಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.

ವಿವೇಕ್ ಎನ್ನುವ ಹೊಸ ನಿರ್ದೇಶಕರ ‘ಡೆಮೋ ಪೀಸ್’ ಎಂಬ ಚಿತ್ರಕ್ಕೂ ಸೋನಲ್ ಸಹಿ ಹಾಕಿದ್ದಾರೆ.

ತುಳುವಿನಿಂದ ಬಂದು ಕನ್ನಡದಲ್ಲಿ ನೆಲೆನಿಂತು ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಇವರನ್ನು ಹಿಂದಿ ಚಿತ್ರರಂಗವೂ ಕೈಬೀಸಿ ಕರೆಯುತ್ತಿದೆ. ಎನ್. ಎನ್. ಸಿದ್ದಿಕಿ ನಿರ್ದೇಶನದ ‘ಸಾಜನ್ ಚಲೆ ಸಸೂರಾಲ್’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಇನ್ನೊಂದು ಹಿಂದಿ ಚಿತ್ರವೂ ಮಾತುಕತೆಯ ಹಂತದಲ್ಲಿದೆ.

‘ಬೇರೆ ಚಿತ್ರರಂಗದಿಂದ ಎಷ್ಟೇ ಅವಕಾಶಗಳು ಸಿಕ್ಕರೂ ಕನ್ನಡದಲ್ಲಿ ಸಿನಿಮಾಗಳನ್ನು ಮಾಡುತ್ತಲೇ ಇರುತ್ತೇನೆ’ ಎಂದು ವಿಶ್ವಾಸದಿಂದಲೇ ಹೇಳುತ್ತಾರೆ ಅವರು. ಚಿತ್ರಗಳ ಆಯ್ಕೆಯ ವಿಷಯದಲ್ಲಿಯೂ ಸೋನಲ್‌ಗೆ ಇಂಥದ್ದೇ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ನಿರ್ಬಂಧ ಇಲ್ಲ. ‘ಗ್ಲಾಮರ್ ಪಾತ್ರಗಳನ್ನೂ ಮಾಡುತ್ತೇನೆ. ಗ್ಲಾಮರ್ ಎಂದ ತಕ್ಷಣ ಆಶ್ಲೀಲ ಎಂದರ್ಥವಲ್ಲ. ಗ್ಲಾಮರ್ ಉಡುಪುಗಳನ್ನೂ ಸುಂದರವಾಗಿ ವಿನ್ಯಾಸ ಮಾಡಬಹುದು. ಹಾಗೆಯೇ ಅದಕ್ಕೂ ಒಂದು ಗಡಿ ಇರುತ್ತದೆ. ಅದರೊಳಗಿನ ಪಾತ್ರಗಳನ್ನಷ್ಟೇ ನಾನು ಮಾಡುತ್ತೇನೆ’ ಎಂದು ಸ್ಪಷ್ಟವಾಗಿಯೇ ಹೇಳುತ್ತಾರೆ.

‘ಹೀಗೆ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಲೇ ಹೋಗುತ್ತಿರುವ ನಿಮ್ಮನ್ನು ನೋಡಿ ಅಮ್ಮನ ಪ್ರತಿಕ್ರಿಯೆ ಹೇಗಿದೆ?’ ಎಂಬ ಪ್ರಶ್ನೆಗೂ ಅವರು ಅಷ್ಟೇ ಸುಂದರವಾಗಿ ನಗುತ್ತಾರೆ. ‘‘ನನ್ನ ಒಂದೊಂದು ಸಿನಿಮಾವನ್ನೂ ಅವರು ಸಂಭ್ರಮಿಸುತ್ತಿದ್ದಾರೆ. ಅವರ ಕನಸುಗಳು ಬೆಳೆಯುತ್ತಲೇ ಇವೆ. ಇತ್ತೀಚೆಗೆ ‘ಸದ್ಮಾ’ ಚಿತ್ರದಲ್ಲಿ ಶ್ರೀದೇವಿ ನಟಿಸಿದ್ದಾರಲ್ಲಾ, ಅಂಥ ಪಾತ್ರದಲ್ಲಿ ನೀನು ನಟಿಸಬೇಕು ಎಂದು ಹೇಳುತ್ತಿದ್ದಾರೆ. ಒಂದು ರೀತಿಯಲ್ಲಿ ಅವರ ಕನಸುಗಳೇ ನನ್ನನ್ನು ಕೈ ಹಿಡಿದು ನಡೆಸುತ್ತಿವೆ’ ಎಂದು ತುಸು ಭಾವುಕವಾಗಿಯೇ ನುಡಿಯುತ್ತಾರೆ. ಆ ಭಾವುಕತೆಯ ಹಿಂದೆ ಅಮ್ಮನ ಒತ್ತಾಸೆಯೊಟ್ಟಿಗೆ ಅವರ ಕನಸಿನ ಕೃಷಿಯ ಶ್ರಮವೂ ದಟ್ಟವಾಗಿ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT