ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಾಭಿಮಾನದ ಪ್ರಜ್ವಲಿಸುವ 'ಸೂರ್ಯ'

Last Updated 4 ಮೇ 2018, 12:31 IST
ಅಕ್ಷರ ಗಾತ್ರ

ಚಿತ್ರ: ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ (ತೆಲುಗು)
ನಿರ್ಮಾಪಕರು: ನಾಗೇಂದ್ರ ಬಾಬು, ಶ್ರೀಧರ್ ಲಗದಾಪತಿ
ನಿರ್ದೇಶನ: ವಕ್ಕಂತಂ ವಂಶಿ
ತಾರಾಗಣ: ಅಲ್ಲು ಅರ್ಜುನ್, ಅನು ಇಮ್ಯಾನುವೆಲ್, ಅರ್ಜುನ್ ಸರ್ಜಾ, ಶರತ್ ಕುಮಾರ್, ಠಾಕೂರ್ ಅನೂಪ್ ಸಿಂಗ್

ಭಾವನಾತ್ಮಕವಾದ ಕೌಟುಂಬಿಕ ಸನ್ನಿವೇಶಗಳು, ಪ್ರೇಮ, ಹೊಡೆದಾಟ, ಪ್ರತೀಕಾರ ಇವು ಬಹುತೇಕ ತೆಲುಗು ಸಿನಿಮಾಗಳ ಸಿದ್ಧಸೂತ್ರಗಳು. ಇವುಗಳ ಜೊತೆಗೆ ದೇಶಪ್ರೇಮದ ಆದ್ರತೆಯನ್ನೂ ಸೇರಿಸಿಕೊಂಡು ನಿರ್ಮಿಸಿರುವ ಸಿನಿಮಾ ‘ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ’.

ಅಪ್ಪಟ ದೇಶಾಭಿಮಾನ ಹೊಂದಿರುವ ಯೋಧನೊಬ್ಬ ತನ್ನ ನಿಯಂತ್ರಣಕ್ಕೆ ಸಿಗದ ಮುಂಗೋಪದ ಕಾರಣ ಹಲವು ಸಂಕಷ್ಟಗಳಿಗೆ ಸಿಲುಕುವುದು ಈ ಚಿತ್ರದ ಕಥಾಹಂದರ.

ಯೋಧನ ಪಾತ್ರದಲ್ಲಿ ಅಭಿನಯಿಸಿರುವ ಅಲ್ಲು ಅರ್ಜುನ್ ಆಂಗ್ರಿ ಯಂಗ್ ಮ್ಯಾನ್ ಗೆಟಟ್‌ನಲ್ಲಿ ಮೋಡಿ ಮಾಡುತ್ತಾರೆ. ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡರೂ ತಮ್ಮ ಎಂದಿನ ಶೈಲಿಯಲ್ಲೇ ಪ್ರೇಕ್ಷಕರ ಮನ ಸೆಳೆಯುತ್ತಾರೆ.

‘ಸತ್ತರೆ ದೇಶದ ಗಡಿಯಲ್ಲೇ ಸಾಯಬೇಕು’ ಎನ್ನುವ ಮಹದಾಸೆ ಇಟ್ಟುಕೊಂಡಿರುವ ನಾಯಕನ ಮುಂಗೋಪ ಆತನ ನೌಕರಿಗೂ ಕುತ್ತು ತರುತ್ತದೆ. ಕೊನೆಗೆ ಮನಃಶಾಸ್ತ್ರಜ್ಞರೊಬ್ಬರ ಸಹಿ ಹೊಂದಿದ ಪ್ರಮಾಣ ಪತ್ರ ಲಭಿಸಿದರೆ ಮಾತ್ರ ದೇಶದ ಗಡಿಯಲ್ಲಿ ಸೇವೆಗೆ ನಿಯೋಜನೆ ಮಾಡುವುದಾಗಿ ಸೇನಾಧಿಕಾರಿಗಳು ತಿಳಿಸುವಾಗ ಅಧೀರನಾಗುವ ನಾಯಕ ನಿರ್ವಾಹವಿಲ್ಲದೆ ಊರಿಗೆ ಮರಳುತ್ತಾನೆ. ಅಲ್ಲಿ ನಾಯಕನನ್ನು ಕಾಡುವ ಮನಃಶಾಸ್ತ್ರಜ್ಞ. ತಾನು ಬಿಟ್ಟು ಬಂದಿದ್ದ ಕುಟುಂಬದವರ, ತಂದೆಯ ಮನಗೆಲ್ಲುವ ಸಲುವಾಗಿ ತನ್ನ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸುವುದು. ಜನರ ರಕ್ತ ಹಿಂಡುವ ಸ್ಥಳೀಯ ರೌಡಿಗಳೊಂದಿಗೆ ಸೆಣಸಾಡುವುದನ್ನು ನಿರ್ದೇಶಕರು ಎಳೆ ಎಳೆಯಾಗಿ ಕಟ್ಟಿಕೊಟ್ಟಿದ್ದಾರೆ.

ತನ್ನ ಧ್ಯೇಯ ಸಾಧನೆಗಾಗಿ ನಾಯಕ ಚಿತ್ರದುದ್ದಕ್ಕೂ ಹೆಣಗಾಡುತ್ತಿರುತ್ತಾನೆ. ಈ ಮಧ್ಯೆ ಆತನ ಪ್ರೇಮಕಥೆಯನ್ನು ತುರುಕಿದಂತೆ ಭಾಸವಾಗುತ್ತದೆ. ಅದು ಅಷ್ಟು ಆಪ್ತ ಎನಿಸುವುದಿಲ್ಲ. ನಾಯಕನ ಅಬ್ಬರದ ಅಭಿನಯದ ಮುಂದೆ ನಾಯಕಿಯ ನಟನೆ ಮಸುಕಾಗಿದೆ. ದೇಶದ ರಕ್ಷಣೆಗಾಗಿ ಹಗಲಿರುಳು ದುಡಿಯುವ ಸೈನಿಕರ ಕಷ್ಟ. ದೇಶದ ಹೊರಗಿನ ಶತ್ರುಗಳನ್ನು ಯೋಧರು ಎದುರಿಸಿದರೆ. ದೇಶದೊಳಗಿನ ದುಷ್ಟಶಕ್ತಿಗಳು ಹೇಗೆ ಒಳಗಿನ ಶತ್ರುಗಳನ್ನು ಸೃಷ್ಟಿಸುತ್ತವೆ ಎಂಬುದನ್ನು ಮಾರ್ಮಿಕವಾಗಿ ಚಿತ್ರಿಸಲಾಗಿದೆ.

ವಿಶಾಲ್ ಹಾಗೂ ಶೇಖರ್ ಸಂಗೀತ ನಿರ್ದೇಶನದಲ್ಲಿ ಸುಮಧುರವಾದ ಹಾಡುಗಳು ಮೂಡಿಬಂದಿವೆ. ಅರ್ಜುನ್ ಸರ್ಜಾ ಅವರು ತಮ್ಮ ಗಂಭೀರ ಅಭಿನಯದ ಮೂಲಕ ಚಿತ್ರಕ್ಕೆ ಇನ್ನಷ್ಟು ತೂಕ ತಂದು ಕೊಟ್ಟಿದ್ದಾರೆ. ಕ್ರೌರ್ಯದ ಪ್ರತಿರೂಪದಂತಿರುವ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶರತ್ ಕುಮಾರ್ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ.

ದೇಶಪ್ರೇಮ, ಯೋಧನ ಸಂಘರ್ಷದ ಬದುಕನ್ನು ಚಿತ್ರಸಲು ಪ್ರಯತ್ನಿಸಿದ್ದರೂ ಮಧ್ಯೆ ಮಧ್ಯೆ ಕಥೆಯ ಎಳೆ ದಾರಿತಪ್ಪಿದಂತೆ ಭಾಸವಾಗುತ್ತದೆ. ಆದರೆ, ಜನಪ್ರಿಯ ನಾಯಕನ ಪ್ರಭಾವಳಿಯ ಮುಂದೆ ಅದು ಗೌಣವಾಗಿ ಗೋಚರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT