ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದೇ ಕಾಡುವ ಭೂತಕಾಲದ ನೆನಪು

Last Updated 4 ಮೇ 2018, 19:30 IST
ಅಕ್ಷರ ಗಾತ್ರ

1. ನನ್ನ ಜೀವನದಲ್ಲಿ ಹಿಂದೆ ನಡೆದ ಘಟನೆಯಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ. ಆದರೆ ಅದರಿಂದ ನನಗೆ ಹೊರಬರಲು ಸಾಧ್ಯವಾಗುತ್ತಿಲ್ಲ. ಸಹಜಜೀವನಕ್ಕೆ ಮರಳಲು ತುಂಬಾ ಕಷ್ಟ ಎನಿಸುತ್ತಿದೆ. ಏನು ಮಾಡಲಿ?
– ದಯಾ, ಬೆಂಗಳೂರು

ಉತ್ತರ: ಮನಸ್ಸಿಗೆ ನೋವು ನೀಡುವ ಭೂತಕಾಲದ ಕೆಲವು ನೆನಪುಗಳು ಭವಿಷ್ಯದಲ್ಲಿ ಬದುಕಲು ತೊಂದರೆ ಮಾಡುತ್ತವೆ. ನಿಮಗೆ ಭೂತಕಾಲದಲ್ಲಿ ಏನಾಗಿದೆಯೋ ಆ ಘಟನೆಯಿಂದ ಹೊರ ಬರಲು ನಿಮಗೆ ಕಷ್ಟವಾಗುತ್ತಿದೆ. ನೀವು ಇಂದು ಹೀಗಾಗಿರುವುದಕ್ಕೆ ಭೂತಕಾಲದಲ್ಲಿ ನಡೆದ ಘಟನೆಯೇ ಕಾರಣ ಎಂಬುದನ್ನು ಒಪ್ಪಿಕೊಳ್ಳಿ. ಇದರಿಂದ ಒಂದು ಹಂತಕ್ಕೆ ನಿಮ್ಮ ನೋವು ಕಡಿಮೆಯಾಗಬಹುದು. ನೀವು ಭೂತಕಾಲಕ್ಕೆ ಮರಳಲು ಸಾಧ್ಯವಿಲ್ಲ ಎಂಬುದನ್ನೂ ಒಪ್ಪಿಕೊಳ್ಳಿ. ಆದರೆ ನೀವು ಹಿಂದಿನ ಘಟನೆಯ ನೆನಪನ್ನು ಹೇಗೆ ನಿಭಾಯಿಸುತ್ತೀರಿ, ಹೇಗೆ ಸ್ವೀಕರಿಸುತ್ತೀರಿ – ಮೊದಲು ಅದನ್ನು ಬದಲಾಯಿಸಿಕೊಳ್ಳಬಹುದು. ಹಾಗೊಂದು ವೇಳೆ ಬದಲಾಯಿಸಿಕೊಳ್ಳದಿದ್ದರೆ ಈ ನೋವು ನಿಮ್ಮ ಹೊಸ ಅನುಭವಗಳು ಹಾಗೂ ಸಂಬಂಧಗಳೊಂದಿಗೆ ಮುಂದುವರಿದು ನಿಮ್ಮೊಳಗೆ ನೀವೇ ನೋವನ್ನು ಪಡುವಂತಾಗುತ್ತದೆ. ನೀವು ಅದನ್ನು ಒಪ್ಪಿಕೊಳ್ಳುವವರೆಗೂ ಭೂತಕಾಲದ ಘಟನೆಯಿಂದ ಹೊರಬರಲು ಸಾಧ್ಯವಿಲ್ಲ. ಕೆಲವು ಅಘಾತಕಾರಿ ಘಟನೆ ಅಥವಾ ಅತಿಯಾದ ಭಾವನಾತ್ಮಕ ಪ್ರತಿಕ್ರಿಯೆಗಳು ಎದುರಾದಾಗ ಅದನ್ನು ಶಾಂತವಾಗಿ ಒಪ್ಪಿಕೊಳ್ಳಿ. ಭೂತಕಾಲದ ಬಗ್ಗೆ ನಿಮಗೆ ಯಾವ ಭಾವನೆ ಬರುತ್ತದೋ ಅದನ್ನು ಹಾಗೇ ಬರಲು ಬಿಡಿ.
ಯೋಗ ಹಾಗೂ ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಭಾವನಾತ್ಮಕ ಘಟನೆಗಳು ದೈಹಿಕವಾಗಿ ನಿಮ್ಮ ಮೇಲೆ ಪರಿಣಾಮ ಬೀರದಂತೆ ಮಾಡಲು ಸಹಾಯ ಮಾಡುತ್ತವೆ. ನೀವು ವ್ಯಕ್ತಪಡಿಸಲಾಗದ ಭಾವನೆಗಳು ಹಾಗೂ ಯೋಚನೆಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ, ನಿಮಗೆ ಬೆಂಬಲ ನೀಡುವ ವ್ಯಕ್ತಿಗಳ ಜೊತೆ ಸಮಯ ಕಳೆಯಿರಿ. ನೀವು ಏನನ್ನೂ ಮಾಡಲು ಹೊರಟಿದ್ದೀರಿ ಎಂಬುದರ ಬಗ್ಗೆ ಅವರ ಬಳಿ ಮಾತನಾಡಿ. ನಿಮಗೆ ನೀವು ಅಸಹಾಯಕ ಏನ್ನಿಸಿದರೆ ವೃತ್ತಿಪರ ಚಿಕಿತ್ಸಕರನ್ನು ಭೇಟಿ ಮಾಡಿ.

2. ನಾನು ಬಿ.ಎಸ್ಸಿ.ಯನ್ನು ಮುಗಿಸಿದ್ದೇನೆ. ನನಗೆ ಐ.ಎ.ಎಸ್. ಮಾಡುವ ಗುರಿ ಇದೆ. ಚೆನ್ನಾಗಿಯೇ ಓದುತ್ತೇನೆ. ಆದರೆ ‌ಒಮ್ಮೊಮ್ಮೆ ಮನಸ್ಸಿನ ಆಲೋಚನೆಗಳು ಬೇರೆ ಕಡೆಗೆ ಹೋಗುತ್ತವೆ. ನನ್ನ ಮನಸ್ಸು ಯಾವತ್ತೂ ಓದಿನ ಮೇಲೆ ಇರಬೇಕು, ಗಮನ ಹೆಚ್ಚಬೇಕು ಎಂದರೆ ಏನು ಮಾಡಬೇಕು?
–ರವಿ, ಬೆಳಗಾವಿ

ಉತ್ತರ:  ನೀವು ಜೀವನದಲ್ಲಿ ಒಂದು ಗುರಿಯನ್ನು ಇರಿಸಿಕೊಂಡಿದ್ದೀರಿ. ಜೊತೆಗೆ ಆ ಗುರಿ ಸಾಧಿಸಲು ನಿಮ್ಮಿಂದಾದ ಪ್ರಯತ್ನ ಮಾಡುತ್ತಲೇ ಇದ್ದೀರಿ. ಆದರೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ. ಚಿಂತೆ ಬಿಡಿ, ಒಳ್ಳೆಯ ವಿದ್ಯಾರ್ಥಿಗಳಲ್ಲಿ ಇದು ಸಾಮಾನ್ಯ ಸಂಗತಿ. ಓದಿನ ಮೇಲೆ ಗಮನ ಹರಿಸಲು ನಿಮ್ಮ ಓದಿನ ಮಾದರಿಯಲ್ಲಿ ಕೆಲವೊಂದು ಬದಲಾವಣೆಯನ್ನು ತರಬೇಕು. ಹೊರಗಡೆಯ ಸದ್ದುಗದ್ದಲ ಕೇಳಿಸದ ಶಾಂತವಾಗಿರುವ ಜಾಗದಲ್ಲಿ ಕುಳಿತು ಓದಿ; ಓದಿನಲ್ಲಿ ಹೊಸ ತಂತ್ರಗಳನ್ನು ಪ್ರಯ್ನತಿಸಿ. ಆಗಾಗ ಬೇಕೆನ್ನಿಸಿದಾಗ ಮನಸ್ಸಿಗೆ ವಿರಾಮ ನೀಡಿ. ನಿಮಗೆ ಸೂಕ್ತ ಎನಿಸುವ ಹಾಗೂ ನಿಮಗೆ ಅರ್ಥವಾಗುವ ವಿಧಾನದಲ್ಲೇ ಓದಿ. ನಿಮಗೆ ಯಾವ ರೀತಿಯ ಓದು ಸೂಕ್ತ ಎನ್ನಿಸುತ್ತದೋ ಅಲ್ಲಿಯವರೆಗೂ ಪ್ರಯೋಗಗಳನ್ನು ಮಾಡುತ್ತಲೇ ಇರಿ. ಯಾವುದೋ ಒಂದು ಸೂಕ್ತವಾದ ಮಾರ್ಗವನ್ನು ಕಂಡುಕೊಂಡಾಗ ಗಮನ ನೀಡುವುದು ಸುಲಭವಾಗುತ್ತದೆ. ಸ್ವ–ಸಹಾಯವೇ ಇಲ್ಲಿ ಮುಖ್ಯವಾಗುತ್ತದೆ. ನಿಮ್ಮ ಮನಸ್ಸಿಗೆ ಸರಿ ಎನ್ನಿಸಿದ ಕೆಲಸವನ್ನು ಮಾಡುವುದು ಬೇರೆಯವರಿಂದ ನಿಲ್ಲಿಸಲು ಸಾಧ್ಯವಾಗುವುದಿಲ್ಲ, ಆದರೆ ನೀವು ಸಾಧಿಸಲು ಹೊರಟ ಕೆಲಸ ವಿಫಲವಾದಾಗ ಅದನ್ನು ನೀವೇ ಎದುರಿಸಬೇಕು. ನಿಮ್ಮ ಸಾಮಾಜಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರಿಕೊಳ್ಳಿ, ಯಾವುದು ನಿಮ್ಮನ್ನು ಅಡ್ಡಿಪಡಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ಅದರಿಂದ ದೂರ ಇರಲು ಪ್ರಯ್ನತಿಸಿ. ಈ ವಿಷಯದಲ್ಲಿ ನೀವೇ ಮುಂದೆ ಹೆಜ್ಜೆ ಇರಿಸಬೇಕು ಮತ್ತು ಯಾರೂ ನಿಮಗೆ ಸಹಾಯ ಮಾಡುವುದಿಲ್ಲ. ಅದಕ್ಕಿಂತ ಮುಖ್ಯವಾದುದು ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ ಮತ್ತು ನಿಮ್ಮ ಪ್ರಾಶಸ್ಯಗಳ ಮೇಲೆ ಗಮನ ಹರಿಸಿ, ಹಾಗಾಗಿ ಅದಕ್ಕೆ ಧ್ಯಾನ ಸಹಾಯ ಮಾಡುತ್ತದೆ. ಆದರೆ ಇದನ್ನು ತಪ್ಪದೆ ಪ್ರತಿದಿನ ಅರ್ಧಗಂಟೆ ಮಾಡಲೇಬೇಕು.


3. ನನಗೆ ನಿದ್ದೆ ಬರುವುದಿಲ್ಲ. ಯಾವಾಗಲೂ ಯೋಚನೆಗಳು ತಲೆಯನ್ನು ಮುತ್ತುತ್ತಿರುತ್ತದೆ ಮತ್ತು ಯಾವಾಗಲೂ ಮನಸ್ಸು ಚಂಚಲವಾಗಿರುತ್ತದೆ. ಯಾವುದೇ ವಿಷಯದ ಮೇಲೂ ಗಂಭೀರವಾಗಿ ಯೋಚಿಸಲು ಸಾಧ್ಯವಾಗುತ್ತಿಲ್ಲ. ನನಗೆ ಪರಿಹಾರ ತಿಳಿಸಿ.
–ಹೆಸರು, ಊರು ಬೇಡ

ಉತ್ತರ: ಈ ಕಾಲಂನಲ್ಲಿ ನಾನು ಅನೇಕ ಬಾರಿ ಚಂಚಲ ಮನಸ್ಸಿನಿಂದ ಹೊರ ಬರಬೇಕಾದರೆ ಏನು ಮಾಡಬೇಕು ಎಂಬುದನ್ನು ತಿಳಿಸಿದ್ದೇನೆ. ಇದರಿಂದ ಹೊರಬರಲು ಇರುವ ಒಂದೇ ಒಂದು ದಾರಿಯೆಂದರೆ ಪ್ರತಿದಿನ ವ್ಯಾಯಾಮ ಹಾಗೂ ಧ್ಯಾನ ಮಾಡುವುದು. ಇದು ನಿಮಗೆ ಶಾಂತವಾಗಿ ಹಾಗೂ ರಿಲ್ಯಾಕ್ಸ್ ಆಗಿರಲು ಸಹಾಯ ಮಾಡುತ್ತದೆ. ಇದು ನಿಮಗೆ ಚೆನ್ನಾಗಿ ನಿದ್ರಿಸಲು ಸಹಾಯ ಮಾಡುತ್ತದೆ ಮತ್ತು ನಿಮಗೆ ತಿಳಿಯದಂತೆ ಅತಿಯಾಗಿ ಆಲೋಚಿಸುವುದನ್ನು ನಿಲ್ಲಿಸಿ. ಯಾವುದಾದರೂ ಒಳ್ಳೆಯ ಯೋಗತರಗತಿಗೆ ಸೇರಿಕೊಳ್ಳಿ. ಯೋಗ–ಧ್ಯಾನಗಳನ್ನು ಬಿಡದೆ ಮಾಡಿ. ಖಂಡಿತ ನಿಮ್ಮಲ್ಲಿ ನೀವೇ ಬದಲಾವಣೆಯನ್ನು ಗುರುತಿಸುತ್ತೀರಿ.

ಏನಾದ್ರೂ ಕೇಳ್ಬೋದು
ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ. ಇಮೇಲ್ ವಿಳಾಸ; bhoomika@prajavani.co.in ವಾಟ್ಸ್ಯಾಪ್: 9482006746

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT