ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ಹೊಸಹೊಸತು

Last Updated 4 ಮೇ 2018, 21:36 IST
ಅಕ್ಷರ ಗಾತ್ರ

ಕ್ಯಾಲಿಫೋರ್ನಿಯಾದ ಸ್ಯಾನ್‌ಹೋಸೆನಲ್ಲಿ ಈಚೆಗೆ ನಡೆದ ಫೇಸ್‌ಬುಕ್ ಡೆವಲಪರ್ಸ್ ಸಮ್ಮೇಳನದಲ್ಲಿ (ಎಫ್‌8) ಫೇಸ್‌ಬುಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್‌ಬರ್ಗ್ ಸಾಮಾಜಿಕ ಮಾಧ್ಯಮದ ಕೆಲ ಹೊಸ ಸೇವೆಗಳನ್ನು ಅನಾವರಣಗೊಳಿಸಿದರು. ಫೇಸ್‌ಬುಕ್, ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಂ ಆ್ಯಪ್‌ಗಳಲ್ಲಿ ಈ ಸೇವೆಗಳು ಅಪ್‌ಡೇಟ್ ರೂಪದಲ್ಲಿ ಮುಂದಿನ ದಿನಗಳಲ್ಲಿ ಲಭ್ಯವಾಗಲಿವೆ. ಕೆಲ ಸೇವೆಗಳಿಗಾಗಿ ಫೇಸ್‌ಬುಕ್ ಹೊಸ ಆ್ಯಪ್ ರೂಪಿಸಲಿದೆ.

ಏನಿದು ಸಮಾವೇಶ?

ಫೇಸ್‌ಬುಕ್ ಪ್ರತಿವರ್ಷ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ತಂತ್ರಜ್ಞರ ಸಮಾವೇಶವನ್ನು ಆಯೋಜಿಸುತ್ತದೆ. ಕೇಂಬ್ರಿಜ್ ಅನಾಲಿಟಿಕಾ ಮಾಹಿತಿ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ ಈ ವರ್ಷದ ಸಮಾವೇಶವು ಮಹತ್ವ ಪಡೆದುಕೊಂಡಿತ್ತು. ಉದ್ಯಮ ವಲಯದಲ್ಲಿ ಈ ಸಮಾವೇಶಕ್ಕೆ ವಿಶೇಷ ಮಹತ್ವ ಇತ್ತು.

ಏಕಿಷ್ಟು ಮಹತ್ವ?

ಫೇಸ್‌ಬುಕ್‌ಗೆ ವಿಶ್ವದೆಲ್ಲೆಡೆ 100 ಕೋಟಿಗೂ ಹೆಚ್ಚು ಬಳಕೆದಾರರಿದ್ದಾರೆ. ಕೇಂಬ್ರಿಜ್ ಅನಾಲಿಟಿಕಾ ಹಗರಣ ನಂತರ ವಿಶ್ವದೆಲ್ಲೆಡೆ ಜನರು ಫೇಸ್‌ಬುಕ್ ಅಕೌಂಟ್‌ಗಳನ್ನು ಉಳಿಸಿಕೊಳ್ಳಬೇಕೇ, ಪರ್ಯಾಯ ಏನೂ ಇಲ್ಲವೇ, ಫೇಸ್‌ಬುಕ್ ಇಲ್ಲದೆ ಬದುಕಲು ಆಗದೇ... ಧಾಟಿಯ ಪ್ರಶ್ನೆಗಳನ್ನು ಪ್ರಸ್ತಾಪಿಸುತ್ತಾ ಬಿಸಿ ಬಿಸಿ ಚರ್ಚೆ ಮಾಡುತ್ತಿದ್ದರು. ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಫೇಸ್‌ಬುಕ್ ವಿಚಾರಣೆ ಎದುರಿಸುತ್ತಿತ್ತು.

ಕೆಲ ಬಳಕೆದಾರರು ಇನ್‌ಸ್ಟಾಲ್ ಮಾಡಿಕೊಂಡಿದ್ದ ಆ್ಯಪ್ ಅಫ್‌ಲೋಡ್ ಮಾಡಿದ್ದರು, ಹಲವರು ಸೈನ್‌ಔಟ್ ಆಗಿದ್ದರು. ಕೆಲವರು ಅನ್‌ಇನ್‌ಸ್ಟಾಲ್ ಮಾಡಿಕೊಂಡು ಬಳಕೆಯಿಂದ ದೂರ ಸರಿದಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ಮನಗಂಡ ಫೇಸ್‌ಬುಕ್, ಬಳಕೆದಾರರ ವಿಶ್ವಾಸ ಉಳಿಸಿಕೊಳ್ಳಲೇಬೇಕಾದ ಒತ್ತಡದಲ್ಲಿತ್ತು. ಹೀಗಾಗಿಯೇ ಈ ಬಾರಿಯ ತಂತ್ರಜ್ಞರ ಸಮಾವೇಶ ಇಡೀ ವಿಶ್ವದ ಗಮನ ಸೆಳೆದಿತ್ತು.

ಯಾವುದೆಲ್ಲಾ ಹೊಸತು

ಮಾಹಿತಿ ಸೋರಿಕೆಯಂಥ ಗಂಭೀರ ಆರೋಪ ಎದುರಿಸುತ್ತಿರುವ ಫೇಸ್‌ಬುಕ್‌ ಇದೀಗ ‘ಬ್ರೌಸಿಂಗ್ ಹಿಸ್ಟರಿ ಡಿಲೀಟ್’ (ಡಿಜಿಟಲ್ ಹೆಜ್ಜೆಗುರುತು) ಆಯ್ಕೆ
ಯನ್ನು ಬಳಕೆದಾರರಿಗೆ ನೀಡುವ ಮಾತು ಆಡುತ್ತಿದೆ. ಇದರ ಜೊತೆಗೆ ಡೇಟಿಂಗ್‌ಗಾಗಿ ಸಂಗಾತಿಯನ್ನು ಹುಡುಕಿಕೊಳ್ಳುವ ಸವಲತ್ತು, ಎಆರ್ (ಆಗ್ಮೆಂಟೆಡ್‌ ರಿಯಾಲಿಟಿ), ವಿಡಿಯೊ ಕಾಲಿಂಗ್, ಮೈಕ್ರೊಸಾಫ್ಟ್‌ ಸಹಯೋಗದಲ್ಲಿ ‘ವರ್ಕ್‌ಪ್ಲೇಸ್’ ಸೇವೆಗಳ ಸುಧಾರಣೆ, ವಾಟ್ಸ್‌ಆ್ಯಪ್‌ನಲ್ಲಿ ಆಡಿಯೊ ಕ್ಲಿಪ್‌ಗಳನ್ನು ಸೇವ್ ಮಾಡಿಕೊಳ್ಳುವ ಅವಕಾಶ, ಇನ್‌ಸ್ಟಾಗ್ರಾಂ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಗ್ರೂಪ್ ವಿಡಿಯೊ ಕಾಲಿಂಗ್ ಸವಲತ್ತು, ಸ್ಮಾರ್ಟ್‌ಫೋನ್‌ನಲ್ಲಿ ಸಂತೋಷಕೂಟಗಳ (ಪಾರ್ಟಿ) ಖುಷಿ ಒದಗಿಸುವ ಕುರಿತು ಫೇಸ್‌ಬುಕ್‌ನ ಸಿಇಒ  ಝುಕರ್‌ಬರ್ಗ್ ಮಾತನಾಡಿದ್ದರು. ಈ ಪೈಕಿ ಹೆಚ್ಚು ಸದ್ದು ಮಾಡಿದ್ದು ಎರಡು ಸೇವೆಗಳು.

ಡಿಲೀಟ್ ಬ್ರೌಸಿಂಗ್ ಹಿಸ್ಟರಿ ಎಂದರೇನು?

ನಾವು ಫೇಸ್‌ಬುಕ್ ಬಳಸದೆ ಇರುವಾಗಲೂ ಫೇಸ್‌ಬುಕ್ ನಮ್ಮ ಜಾಲತಾಣಗಳ ಭೇಟಿಯನ್ನು ದಾಖಲಿಸಿಕೊಳ್ಳುತ್ತಿರುತ್ತದೆ. ನಂತರ ಈ ಮಾಹಿತಿ
ಯನ್ನು ವಾಣಿಜ್ಯ ಕಂಪನಿಗಳಿಗೆ ಮಾರಿ ಅವರ ಉತ್ಪನ್ನಗಳ ಜಾಹೀರಾತಿಗೆ ನಮ್ಮನ್ನು ಗುರಿಯಾಗಿಸುತ್ತದೆ. ಈವರೆಗೆ ಫೇಸ್‌ಬುಕ್ ಬಳಕೆದಾರರಿಗೆ ಈ ಸಿಕ್ಕಿನಿಂದ ಬಿಡಿಸಿಕೊಳ್ಳಲು ಅವಕಾಶ ಇರಲಿಲ್ಲ. ಆದರೆ ಇದೀಗ ಫೇಸ್‌ಬುಕ್‌ನಲ್ಲಿ ಈವರೆಗೆ ನಮೂದಾಗಿರುವ ಬ್ರೌಸಿಂಗ್ ಹಿಸ್ಟರಿಯನ್ನು ಡಿಲೀಟ್ ಮಾಡುವ ಆಯ್ಕೆ
ಯನ್ನು ಕೊಡುವುದಾಗಿ ಫೇಸ್‌ಬುಕ್ ಘೋಷಿಸಿದೆ. ಖಾಸಗಿತನ ರಕ್ಷಣೆಯ ದೃಷ್ಟಿಯಿಂದ ಇದು ಮಹತ್ವದ ಬೆಳವಣಿಗೆಯಾಗಿದೆ.

ಫೇಸ್‌ಬುಕ್ ಡೇಟಿಂಗ್ ಆ್ಯಪ್ ಹೇಗಿರುತ್ತೆ?

ಈಗ ಚಾಲ್ತಿಯಲ್ಲಿರುವ ಬಹುತೇಕ ಡೇಟಿಂಗ್‌ ಆ್ಯಪ್‌ಗಳು ಫೇಸ್‌ಬುಕ್ ಮಾಹಿತಿಯನ್ನೇ ಆಧರಿಸಿ ಜೋಡಿ ಹುಡುಕುತ್ತಿವೆ. ಈ ವಿದ್ಯಮಾನವನ್ನು ಗಂಭೀರ
ವಾಗಿ ತೆಗೆದುಕೊಂಡಿರುವ ಫೇಸ್‌ಬುಕ್ ಇದೀಗ ಡೇಟಿಂಗ್ ಸೇವೆಯನ್ನೂ ಆರಂಭಿಸುವ ಮಾತು ಆಡಿದೆ. ಫೇಸ್‌ಬುಕ್ ಪ್ರೊಫೈಲ್ ಮತ್ತು ಆನ್‌ಲೈನ್ ಚಟುವಟಿಕೆಗಳ ಮೂಲಕ ನಿಮಗೆ ಸೂಕ್ತ ಎನಿಸುವ ಸಂಗಾತಿಯನ್ನು ಹುಡುಕಿಕೊಡುವ ಸೂತ್ರವನ್ನು (ಆಲ್ಗಾರಿದಂ) ಡೇಟಿಂಗ್ ಆ್ಯಪ್ ಬಳಸಲಿದೆ. ಫೇಸ್‌ಬುಕ್‌ನ ಈ ಹೊಸ ಆ್ಯಪ್ ಬಹುತೇಕ ‘ಹಿಂಜ್’ನ (hinge dating app) ಲಕ್ಷಣಗಳನ್ನೇ ಹೊಂದಿರಲಿದೆ ಎಂದು ತಂತ್ರಜ್ಞರು ಊಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT