ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ

ಬಿಜೆಪಿ ಉತ್ಸಾಹಕ್ಕೆ ಜೆಡಿಎಸ್‌ ತಳಮಳ, ಚೇತರಿಸಿಕೊಂಡ ಕಾಂಗ್ರೆಸ್‌
Last Updated 5 ಮೇ 2018, 12:06 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿರುವ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಬಿರುಸುಗೊಳ್ಳುತ್ತಿದ್ದಂತೆ ಕಣದ ಸ್ವರೂಪವೇ ಬದಲಾಗಿದೆ.

ಬಿಜೆಪಿ, ಕಾಂಗ್ರೆಸ್‌ ದಿಢೀರ್‌ ಶಕ್ತಿ ವೃದ್ಧಿಸಿಕೊಂಡಿರುವುದರಿಂದ ಪ್ರತಿಸ್ಪರ್ಧಿಯೇ ಇಲ್ಲ ಎನ್ನುವಷ್ಟು ನಿರಾಳರಾಗಿದ್ದ ಕ್ಷೇತ್ರದ ಶಾಸಕ, ಜೆಡಿಎಸ್‌ ಅಭ್ಯರ್ಥಿ ಎಚ್.ಕೆ.ಕುಮಾರಸ್ವಾಮಿ ಪ್ರಚಾರ ಚುರುಕುಗೊಳಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ, ನಿವೃತ್ತ ಐಎಎಸ್‌ ಅಧಿಕಾರಿ ಸಿದ್ದಯ್ಯ ಅವರು ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ತೀವ್ರಗೊಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ, ಉದ್ಯಮಿ ಜಿ.ಸೋಮಶೇಖರ್‌ ಅರು ಸಂಘಟನೆ, ಮತ ಸೆಳೆಯಲು ಯಥೇಚ್ಚವಾಗಿ ಸಂಪನ್ಮೂಲ ವ್ಯಯಿಸುತ್ತಿದ್ದಾರೆ. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಮೀಸಲು ಕ್ಷೇತ್ರವಾಗಿರುವುದರಿಂದ ಅಖಾಡದಲ್ಲಿರುವ ಎಲ್ಲರೂ ದಲಿತ ಸಮುದಾಯದವರೇ ಆಗಿದ್ದರೂ ಉಪ ಜಾತಿ ಪ್ರಾಮುಖ್ಯ ಪಡೆದುಕೊಂಡಿದೆ. ಎಚ್‌.ಕೆ.ಕುಮಾರಸ್ವಾಮಿ ಹಾಗೂ ಬಿ.ಸಿದ್ದಯ್ಯ ಅತಿ ಹೆಚ್ಚಿನ ಸಂಖ್ಯೆಯ ಮತದಾರರನ್ನು ಹೊಂದಿರುವ ಛಲವಾದಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸೋಮಶೇಖರ್‌ ಭೋವಿ ಸಮುದಾಯದವರಾಗಿದ್ದು, ಆ ಸಮಾಜದ ಮತದಾರರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ.

ಕ್ಷೇತ್ರ ಮರುವಿಂಗಡಣೆ ನಂತರ ಮೀಸಲು ಕ್ಷೇತ್ರವಾದ ಸಕಲೇಶಪುರ ಕ್ಷೇತ್ರದಿಂದ ಶಾಸಕ ಎಚ್.ಕೆ.ಕುಮಾರಸ್ವಾಮಿ ಸತತವಾಗಿ ಎರಡು ಬಾರಿ ಜಯಗಳಿಸಿದ್ದಾರೆ. ಸ್ಥಳೀಯ ದಲಿತ ಮುಖಂಡರ ವಲಯದಲ್ಲಿನ ನಾಯಕತ್ವದ ಕೊರತೆಯಿಂದಾಗಿ ಎರಡೂ ಚುನಾವಣೆಗಳಲ್ಲಿ ಅವರಿಗೆ ಯಾವ ಪಕ್ಷದಿಂದಲೂ ಪೈಪೋಟಿಯೇ ಇರಲಿಲ್ಲ. ಈ ಬಾರಿ ಬಿಜೆಪಿ, ಕಾಂಗ್ರೆಸ್‌ ಪ್ರಬಲ ಪೈಪೋಟಿ ನೀಡುತ್ತಿರುವುದು ಹಾಗೂ ಸಹಜವಾದ ‘ಆಡಳಿತ ವಿರೋಧಿ ಅಲೆ’ ಎದುರಾಗಿರುವುದು ಗೆಲುವಿಗೆ ತೊಡಕಾಗುವ ಸಂಭವ ಇದೆ.

ದಲಿತರಲ್ಲಿ ಎಡಗೈ ಪಂಗಡಕ್ಕೆ ಸೇರಿದ ಸೋಮಶೇಖರ್‌ ಕ್ಷೇತ್ರದ ಎಲ್ಲ ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಸ್ವಂತ ಹಣದಲ್ಲಿ ಬೋರ್‌ವೆಲ್‌ ಕೊರೆಸುವುದು, ದೇವಾಲಯಗಳಿಗೆ ದೇಣಿಗೆ ಕೊಡುವ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಹೊರಗಿನವರನ್ನು ಕಣಕ್ಕಿಳಿಸಿರುವುದಕ್ಕೆ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳು ಬಹಿರಂಗವಾಗಿಯೇ ಅತೃಪ್ತಿ ಹೊರ ಹಾಕಿದ್ದರು. ಆದರೆ, ಕ್ರಮೇಣ ತಣ್ಣಗಾಗಿದೆ.

ಮೇಲುನೋಟಕ್ಕೆ ಬಿಜೆಪಿಯ ಪ್ರಚಾರ ಅಬ್ಬರವೇ ಹೆಚ್ಚಾಗಿದ್ದರೂ ಜೆಡಿಎಸ್‌ ತನ್ನ ಸಾಂಪ್ರದಾಯಿಕ ನೆಲೆ
ಭದ್ರಪಡಿಸಿಕೊಳ್ಳುವತ್ತ ಗಮನ ನೀಡಿದೆ.

ಕುಮಾರಸ್ವಾಮಿ ಸಹ ಕಾರ್ಯತಂತ್ರ ಬದಲಿಸಿಕೊಂಡಿದ್ದು, ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿದ್ದ ರಸ್ತೆಗಳ ಡಾಂಬರೀ
ಕರಣ, ನೀರಿನ ಸಮಸ್ಯೆ ಬಗೆಹರಿಸುವಂತಹ ವಿಷಯಗಳ ಕಡೆ ಹೆಚ್ಚು ಗಮನ ನೀಡುತ್ತಿದ್ದಾರೆ.

ರಾಜಕೀಯಕ್ಕೆ ಹೊಸಬರಾದ ಸಿದ್ದಯ್ಯ, ಸ್ಥಳೀಯ ಕಾಂಗ್ರೆಸ್‌ ಮುಖಂಡರನ್ನು ನಂಬಿಕೊಂಡಿದ್ದಾರೆ ಅತೃಪ್ತರನ್ನು ಸಮಾಧಾನಪಡಿಸಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ಕಡಿಮೆ ಅವಧಿಯಲ್ಲಿ ಸಾಧ್ಯವಾದಷ್ಟು ಮತದಾರರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇವರಿಗೆ ಬೆಂಬಲವಾಗಿ ಕೆಲವು ನಿವೃತ್ತ ಅಧಿಕಾರಿಗಳ ತಂಡ ಪ್ರಚಾರಕ್ಕೆ ಇಳಿದಿದೆ.

ಕಣದಲ್ಲಿರುವ ಹುರಿಯಾಳುಗಳು

ಎಚ್.ಕೆ.ಕುಮಾರಸ್ವಾಮಿ (ಜೆಡಿಎಸ್‌)
ಬಿ. ಸಿದ್ದಯ್ಯ ( ಕಾಂಗ್ರೆಸ್‌)
ಜಿ. ಸೋಮಶೇಖರ್‌ (ಬಿಜೆಪಿ)
ಕೆ.ಪ್ರದೀಪ್ ಕುಮಾರ್ (ಐಎಂಇಪಿ)
ಎಚ್.ಕೆ.ಕುಮಾರಸ್ವಾಮಿ, ಎಂ. ಚನ್ನಮಲ್ಲಯ್ಯ, ವಳಹಳ್ಳಿ ವೀರೇಶ್

(ಎಲ್ಲರೂ ಸ್ವತಂತ್ರ ಅಭ್ಯರ್ಥಿಗಳು)

ದಲಿತರ ಪ್ರಾಬಲ್ಯ

ಕ್ಷೇತ್ರದಲ್ಲಿ ದಲಿತ ಮತದಾರರೇ ನಿರ್ಣಾಯಕರಾಗಿದ್ದರೂ, ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಮತದಾರರು ಫಲಿತಾಂಶ ನಿರ್ಧರಿಸುವಷ್ಟು ಸಂಖ್ಯೆಯಲ್ಲಿದ್ದಾರೆ.

ಲಿಂಗಾಯತ ಪ್ರಾಬಲ್ಯದ ಕ್ಷೇತ್ರಕ್ಕೆ ಕಟ್ಟಾಯ ಹೋಬಳಿ ಸೇರ್ಪಡೆಯಾದ ನಂತರ ಒಕ್ಕಲಿಗರ ಮತಗಳು ನಿರ್ಣಾಯಕವಾಗಿವೆ.

ಈ ಬಾರಿ ಬಿಜೆಪಿ ಬಲಗೊಳ್ಳುವ ಸೂಚನೆ ಇರುವುದರಿಂದ ಲಿಂಗಾಯತ ಸಮುದಾಯದ ಮತಗಳು ಅತ್ತ ವಾಲುವ ಸಾಧ್ಯತೆ ಇದೆ. ಕಾಂಗ್ರೆಸ್‌ ಅಹಿಂದ ಮತ ಬ್ಯಾಂಕ್‌ ಕಾರ್ಡ್‌ ಚಲಾಯಿಸಲು ಎಲ್ಲ ಅಭ್ಯರ್ಥಿಗಳೂ ದಲಿತರೇ ಆಗಿರುವುದು ಪ್ರಮುಖ ಅಡ್ಡಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT