ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಸಾಹತು ಕಾಲದ ಕಾನೂನು

Last Updated 6 ಮೇ 2018, 19:30 IST
ಅಕ್ಷರ ಗಾತ್ರ

ತೊಂಬತ್ತೊಂಬತ್ತು ವರ್ಷಗಳ ಹಿಂದೆ, ಅಂದರೆ 1919ರ ಏಪ್ರಿಲ್‌ನಲ್ಲಿ, ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡ ನಡೆಯಿತು. ಇದರ ವಿವರಗಳನ್ನೆಲ್ಲ ನಾವು ಶಾಲೆಗಳಲ್ಲಿ ಕಲಿತಿದ್ದೇವೆ. ಕರ್ನಲ್ ಡಯರ್ ಎನ್ನುವ (ನಂತರ ಈತ ಬ್ರಿಗೇಡಿಯರ್ ಜನರಲ್‌ ಕೂಡ ಆದ) ಅಧಿಕಾರಿ ಅಮೃತಸರದಲ್ಲಿ ಸೇರಿದ್ದ ಜನರ ಗುಂಪಿನ ಮೇಲೆ ಗುಂಡು ಹಾರಿಸುವಂತೆ ಬಲೂಚ್ ರೆಜಿಮೆಂಟಿನ 90 ಜನ ಸೈನಿಕರಿಗೆ- 65 ಜನ ಗೂರ್ಖಾಗಳು, 25 ಜನ ಪಂಜಾಬಿಗಳು- ಆದೇಶ ನೀಡಿದ. ಸೈನಿಕರು ತಮ್ಮ ಲೀ ಎನ್‌ಫೀಲ್ಡ್‌ .303 ರೈಫಲ್‌ಗಳಿಂದ ಗುಂಡು ಹಾರಿಸಿದರು. ಗುಂಡು ಖಾಲಿಯಾದಂತೆಲ್ಲ ಪುನಃ ಗುಂಡು ತುಂಬಿಸಿಕೊಳ್ಳುತ್ತಿದ್ದರು. ನಿರಾಯುಧವಾಗಿದ್ದ ಜನಸಮೂಹದ ಮೇಲೆ ಅಂದಾಜು 10 ನಿಮಿಷಗಳ ಅವಧಿಯಲ್ಲಿ ಭಾರತೀಯ ಸೈನಿಕರು 1,600ಕ್ಕಿಂತ ಹೆಚ್ಚು ಗುಂಡುಗಳನ್ನು ಹಾರಿಸಿದ್ದರು.

ಅಲ್ಲಿ ಆದೇಶ ಉಲ್ಲಂಘಿಸಿ ಜನ ಗುಂಪುಗೂಡಿದ್ದರು ಎಂದು ಅಂದಿನ ಸರ್ಕಾರ ಹೇಳಿತು. ಅಧಿಕೃತ ದಾಖಲೆಗಳ ಅನ್ವಯ ಅಲ್ಲಿ 379 ಜನರ ಹತ್ಯೆಯಾಯಿತು, 1100ಕ್ಕೂ ಹೆಚ್ಚು ಜನ ಗಾಯಗೊಂಡರು. ಸಾವಿರಕ್ಕೂ ಹೆಚ್ಚು ಜನರ ಹತ್ಯೆ ನಡೆಯಿತು ಎಂದು ಕಾಂಗ್ರೆಸ್ ಹೇಳಿತು. ಆದರೆ ಹತ್ಯೆಯಾದವರ ನಿಖರ ಸಂಖ್ಯೆ ನಮಗೆ ಎಂದಿಗೂ ಗೊತ್ತಾಗುವುದಿಲ್ಲ. ಸತ್ತವರ ಸಂಖ್ಯೆ ಇಷ್ಟು ಎಂದು ಅಧಿಕೃತ ದಾಖಲೆಗಳಲ್ಲಿ ಹೇಳಿರುವುದನ್ನು ನಂಬದಿರುವುದು ನನಗೆ ಹಲವು ಕಾರಣಗಳಿಂದಾಗಿ ಕಷ್ಟ. ಅದಿರಲಿ, ಈ ಘಟನೆಯು ಇಡೀ ಜಗತ್ತನ್ನು ಬೆಚ್ಚಿಬೀಳಿಸಿತು. ರವೀಂದ್ರನಾಥ ಟ್ಯಾಗೋರ್ ಅವರು ತಮಗೆ ನೀಡಿದ್ದ ನೈಟ್‌ಹುಡ್‌ ಪದವಿ ಹಿಂದಿರುಗಿಸಿದರು.

ಅಲ್ಲಿ ಸೇರಿದ್ದ ಜನರ ಗುಂಪು ರೌಲತ್ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿತ್ತು ಎಂಬುದು ನಮ್ಮಲ್ಲಿ ಹಲವರಿಗೆ ತಿಳಿದಿದೆ. ಆ ಕಾಯ್ದೆಯಲ್ಲಿ ಅಂತಹ ಸಮಸ್ಯೆ ಏನಿತ್ತು? ಯಾವುದೇ ಭಾರತೀಯನನ್ನು ವಿಚಾರಣೆ ಇಲ್ಲದೆ ವಶದಲ್ಲಿ ಇರಿಸಿಕೊಳ್ಳಬಹುದು ಎಂದು ಈ ಕಾಯ್ದೆ ಹೇಳಿತ್ತು. ಈ ಕಾಯ್ದೆಯು ಮುನ್ನೆಚ್ಚರಿಕೆಯ ಕ್ರಮವಾಗಿ ಜನರನ್ನು ವಶಕ್ಕೆ ಪಡೆಯಲು ಅವಕಾಶ ನೀಡಿತ್ತು. ಅಂದರೆ, ವ್ಯಕ್ತಿಯೊಬ್ಬ ಯಾವುದೇ ಅಪರಾಧ ಎಸಗದೇ ಇದ್ದರೂ, ಸರ್ಕಾರ ಅವನನ್ನು ಜೈಲಿನಲ್ಲಿ ಇರಿಸಬಹುದಿತ್ತು. ವ್ಯಕ್ತಿಯೊಬ್ಬ ಮುಂದೊಂದು ದಿನ ಅಪರಾಧ ಎಸಗಬಹುದು ಎಂದು ಸರ್ಕಾರದಲ್ಲಿ ಇರುವ ಯಾರಿಗಾದರೂ ಅನುಮಾನ ಬಂದರೆ, ಆ ವ್ಯಕ್ತಿಯನ್ನು ಜೈಲಿನಲ್ಲಿ ಇರಿಸಬಹುದು. ಈ ಕಾಯ್ದೆಯು ದೇಶವಾಸಿಗಳಲ್ಲಿ ಆಕ್ರೋಶ ಮೂಡಿಸಿತು. ಈ ಕಾಯ್ದೆಯನ್ನು ಲಾಹೋರಿನ ಪತ್ರಿಕೆಯೊಂದು 'ವಾದವೂ ಇಲ್ಲ, ವಕೀಲನೂ ಇಲ್ಲ, ಮೇಲ್ಮನವಿಯೂ ಇಲ್ಲ' ಎಂಬ ಶೀರ್ಷಿಕೆ ಬಳಸಿ ವಿವರಿಸಿತು. ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸುವ ಉತ್ತಮ ವಿವರಣೆ ಅದು.

ಜಲಿಯನ್‌ವಾಲಾ ಬಾಗ್‌ನಲ್ಲಿ ಜನ ಸೇರಿದ್ದರ ಹಿನ್ನೆಲೆ ಇದು. ನಮ್ಮ ದೇಶದ ಅಷ್ಟೊಂದು ಜನ ವಿರೋಧಿಸುತ್ತಿದ್ದ, ಜನರ ಹತ್ಯೆಗೆ ಕಾರಣವಾದ ಕಾಯ್ದೆಯ ಸ್ವರೂಪ ಇದು. ದೋಷಾರೋಪವೂ ಇಲ್ಲದೆ, ವಿಚಾರಣೆಯೂ ಇಲ್ಲದೆ ಭಾರತೀಯರನ್ನು ಜೈಲಿಗೆ ತಳ್ಳುವುದು ತಪ್ಪು ಎಂದು ಪ್ರತಿಭಟನಾಕಾರರು ಭಾವಿಸಿದ್ದರು. ಅವರು ಪ್ರತಿಭಟನೆ ನಡೆಸಿದ್ದರಲ್ಲಿ ತಪ್ಪು ಹುಡುಕುವುದು ಕಷ್ಟ. ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡದ ಕಾರಣದಿಂದಾಗಿ ರೌಲತ್ ಕಾಯ್ದೆಯ ಎಲ್ಲ ಅಂಶಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲಿಲ್ಲ. ಇವೆಲ್ಲ ನಡೆದಿದ್ದು 99 ವರ್ಷಗಳ ಹಿಂದೆ, ವಸಾಹತುಶಾಹಿ ಸರ್ಕಾರವೊಂದರ ಆಳ್ವಿಕೆಯಲ್ಲಿ. ಈಗ ನಾವು ಇಂದಿನ ಸಂದರ್ಭದತ್ತ ಮುಖ ಮಾಡೋಣ.

ದಲಿತ ನಾಯಕ ಚಂದ್ರಶೇಖರ್ ಆಜಾದ್ ರಾವಣ್ ಅವರನ್ನು ಉತ್ತರಪ್ರದೇಶ ಸರ್ಕಾರವು 2017ರ ನವೆಂಬರ್‌ನಲ್ಲಿ ಪ್ರಕರಣ ಇಲ್ಲದಿದ್ದರೂ ಜೈಲಿಗೆ ತಳ್ಳಿತು. ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಮೊಕದ್ದಮೆ ದಾಖಲಿಸಲಾಯಿತು. ಸಾಮಾನ್ಯ ಕ್ರಿಮಿನಲ್ ಅಪರಾಧ ವಿಚಾರಣಾ ಪ್ರಕ್ರಿಯೆಗಳು ಮತ್ತು ನ್ಯಾಯಸಮ್ಮತ ವಿಚಾರಣೆಯ ಮಾನದಂಡಗಳ ಅಡಿ ಸಿಗುವ ಮಾನವ ಹಕ್ಕುಗಳ ರಕ್ಷಣೆಯ ಖಾತ್ರಿ ಚಂದ್ರಶೇಖರ್ ಆಜಾದ್ ಅವರಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಸಿಗುವುದಿಲ್ಲ. ದೋಷಾರೋಪ ಅಥವಾ ವಿಚಾರಣೆ ಇಲ್ಲದಿದ್ದರೂ ಅವರನ್ನು 12 ತಿಂಗಳವರೆಗೆ ಜೈಲಿನಲ್ಲಿ ಇರಿಸಬಹುದು. ಬಿಡುಗಡೆ ಆದ ನಂತರ- ಅವರು ಒಂದು ವೇಳೆ ಬಿಡುಗಡೆ ಆಗಿದ್ದೇ ಆದಲ್ಲಿ- ಇನ್ನೊಂದು ಕಾಯ್ದೆಯ ಅಡಿ ಮತ್ತೆ ಜೈಲಿಗೆ ತಳ್ಳಬಹುದು.

ಚಂದ್ರಶೇಖರ್‌ ಆಜಾದ್ ಅವರನ್ನು ವಶದಲ್ಲಿ ಇರಿಸಿಕೊಳ್ಳುವ ಅವಧಿ ಮೇ 2ರಂದು ಕೊನೆಗೊಂಡಿದೆ. ಆದರೆ ಅಂದು, ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಕೆಲಸ ಮಾಡುವ ಸಲಹಾ ಮಂಡಳಿಯು ಅವರನ್ನು ಇನ್ನೂ ಆರು ತಿಂಗಳ ಅವಧಿಗೆ ಪುನಃ ಜೈಲಿಗೆ ಕಳುಹಿಸಿದೆ. ಈ ಮಂಡಳಿಯು ನ್ಯಾಯಾಂಗದ ಭಾಗವೇನೂ ಅಲ್ಲ ಎಂಬುದನ್ನು ಗಮನಿಸಬೇಕು. ದಲಿತರ ಜೊತೆ ಊಟ ಮಾಡುವ ಭರವಸೆ ನೀಡುವ ಬದಲು ನಮ್ಮ ನಾಯಕರು ದಲಿತರನ್ನು ನ್ಯಾಯಸಮ್ಮತವಾಗಿ ನೋಡಿಕೊಳ್ಳುವ, ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವ ಕಾಯ್ದೆಗಳನ್ನು ಅವರ ವಿರುದ್ಧ ಪ್ರಯೋಗಿಸದಿರುವ ಭರವಸೆ ನೀಡುವುದು ಒಳಿತು.

ಚಂದ್ರಶೇಖರ್ ಆಜಾದ್ ಅವರನ್ನು ಬಿಡುಗಡೆ ಮಾಡಲು ಹೈಕೋರ್ಟ್‌ ಕೂಡ ನಿರಾಕರಿಸಿದೆ. ಆಜಾದ್ ವಿರುದ್ಧ ಯಾವುದೇ ಅಪರಾಧ ಪ್ರಕರಣ ಇಲ್ಲ ಎಂಬುದನ್ನು ಇಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇದು ಮುನ್ನೆಚ್ಚರಿಕೆಯ ಆಧಾರದಲ್ಲಿ ಮಾಡಿರುವ ಬಂಧನ. ಇಂತಹ ಬಂಧನಕ್ಕೆ ಅವಕಾಶ ನೀಡುವ ಕಾನೂನುಗಳನ್ನು ಸುಪ್ರೀಂ ಕೋರ್ಟ್‌, 'ಕಾನೂನಿನ ಚೌಕಟ್ಟು ಇಲ್ಲದ ಕಾನೂನುಗಳು' ಎಂದು ಕರೆದಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಂತಹ ಅನೇಕ ಕಾನೂನುಗಳು ನಮ್ಮಲ್ಲಿ ಇವೆ.

ಇವುಗಳನ್ನು ಬಳಸಿ ಕೇಂದ್ರ ಸರ್ಕಾರ ಹಾಗೂ ಬೇರೆ ಬೇರೆ ರಾಜ್ಯ ಸರ್ಕಾರಗಳು ಪ್ರಜೆಗಳನ್ನು ಬಂಧಿಸಬಹುದು. ವಸಾಹತುಶಾಹಿ ಸರ್ಕಾರಗಳೂ ಮಾಡಲು ಹಿಂಜರಿಯುತ್ತಿದ್ದ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ. ನಮ್ಮದೇ ದೇಶವಾಸಿಗಳ ವಿರುದ್ಧ ಹೀಗೆ ಮಾಡಲು ನಮ್ಮದೇ ದೇಶದ ನ್ಯಾಯಾಧೀಶರು, ಅಧಿಕಾರಿಗಳನ್ನು ಬಳಸಿಕೊಳ್ಳುವಲ್ಲಿಯೂ ಸಮಸ್ಯೆ ಇಲ್ಲ. 1919ರಲ್ಲಿ ನಡೆದ ಹತ್ಯಾಕಾಂಡದ ವಿವರಗಳನ್ನು ನಾನು ಬರೆದಿರುವುದಕ್ಕೆ ಒಂದು ಕಾರಣ ಇದೆ. ಆಗ ಕೂಡ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುರಿ ಇಟ್ಟು, ಅವರ ಮೇಲೆ ಗುಂಡು ಹಾರಿಸಿದವರು ನಮ್ಮವರೇ ಆದ ಗೂರ್ಖಾಗಳು ಮತ್ತು ಪಂಜಾಬಿಗಳು.

ರಾಷ್ಟ್ರೀಯ ಭದ್ರತಾ ಕಾಯ್ದೆ ಎಂಬುದು ದೇಶದ ಭದ್ರತೆಗೆ ಇರುವ ಬೆದರಿಕೆಗಳಿಂದ ರಕ್ಷಿಸಲು ಇರುವ ಗಂಭೀರ ಕಾನೂನಿನಂತೆ ಕಾಣುತ್ತದೆ. ಆದರೆ ಸರ್ಕಾರವು ಭಯೋತ್ಪಾದನಾ ಕೃತ್ಯದ ಭೀತಿಯ ಅಡಿ ಚಂದ್ರಶೇಖರ್ ಆಜಾದ್ ಅವರನ್ನು ಬಂಧಿಸಿಟ್ಟಿಲ್ಲ. ಹಾಗೆ ನೋಡಿದರೆ, ಮುನ್ನೆಚ್ಚರಿಕೆಯ ಬಂಧನಕ್ಕೆ ಅವಕಾಶ ಕಲ್ಪಿಸುವ ನಮ್ಮಲ್ಲಿನ ಬಹುತೇಕ ಕಾಯ್ದೆಗಳಿಗೂ ಭಯೋತ್ಪಾದನೆಗೂ ಸಂಬಂಧ ಇಲ್ಲ. ಗುಜರಾತ್ ಸರ್ಕಾರವು ಅಲ್ಲಿನ ಸಮಾಜ ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆಯ ಅಡಿ ಪ್ರಜೆಗಳನ್ನು ಬಂಧಿಸಬಹುದು. ಕರ್ನಾಟಕ ಸರ್ಕಾರವು ಗೂಂಡಾ ಕಾಯ್ದೆಯ ಅಡಿ ತನ್ನ ಪ್ರಜೆಗಳನ್ನು ಬಂಧಿಸಬಹುದು. ರಾಜ್ಯ ಸರ್ಕಾರಗಳು ರೂಪಿಸಿರುವ ಕಾಯ್ದೆಯ ಅಡಿ ವ್ಯಕ್ತಿಗಳನ್ನು ಆರು ತಿಂಗಳಿಂದ ಎರಡು ವರ್ಷಗಳವರೆಗೂ ಬಂಧನದಲ್ಲಿ ಇರಿಸಬಹುದು. ಮದ್ಯವನ್ನು ಅಕ್ರಮವಾಗಿ ತಯಾರಿಸಿ ಮಾರಾಟ ಮಾಡುವುದು, ಜಮೀನು ಕಬಳಿಸುವುದು, ವಿಡಿಯೊ ಪೈರಸಿ ಸೇರಿದಂತೆ ಬೇರೆ ಬೇರೆ ಕೃತ್ಯಗಳನ್ನು ವ್ಯಕ್ತಿಯೊಬ್ಬ ಮುಂದೆ ಮಾಡಬಹುದು ಎಂದು ಅನುಮಾನಿಸಿ, ಆತನನ್ನು ಬಂಧನದಲ್ಲಿ ಇರಿಸಲು ಅವಕಾಶ ಇರುವ ಕಾಯ್ದೆಗಳು ಬೇರೆ ಬೇರೆ ರಾಜ್ಯಗಳಲ್ಲಿ ಇವೆ.

ತಮಿಳುನಾಡಿನಲ್ಲಿ 2016ರಲ್ಲಿ 1,268 ಜನರನ್ನು ಹೀಗೆ ಬಂಧಿಸಲಾಯಿತು. ಇವರಲ್ಲಿ 62 ಜನ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರು, 21 ಜನ ಮಹಿಳೆಯರು ಎಂದು 'ದಿ ಹಿಂದೂ' ಪತ್ರಿಕೆ ವರದಿ ಮಾಡಿದೆ. 2015ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ವರದಿಯ ಅನ್ವಯ ತೆಲಂಗಾಣದಲ್ಲಿ 339 ಜನರನ್ನು, ಕರ್ನಾಟಕದಲ್ಲಿ 232 ಜನರನ್ನು ಮತ್ತು ಗುಜರಾತಿನಲ್ಲಿ 219 ಜನರನ್ನು ಬಂಧನದಲ್ಲಿ ಇಡಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಬಂಧನದಲ್ಲಿ ಇರಿಸುವ ಅವಕಾಶ ಕಲ್ಪಿಸುವ ಕಾಯ್ದೆಯನ್ನು ತಮಿಳುನಾಡಿನಲ್ಲಿ 'ಅಕ್ರಮ ಮದ್ಯ ತಯಾರಿಕೆ ಮತ್ತು ಮಾರಾಟ, ಮಾದಕ ವಸ್ತುಗಳ ಮಾರಾಟ, ಅರಣ್ಯ ಅಪರಾಧಗಳು, ಗೂಂಡಾ ಕೃತ್ಯಗಳು, ಮಾನವ ಅಕ್ರಮ ಕಳ್ಳಸಾಗಣೆ, ಕೊಳೆಗೇರಿ ಪ್ರದೇಶಗಳ ಅತಿಕ್ರಮಣ ಮತ್ತು ವಿಡಿಯೊ ಪೈರಸಿ ನಿಯಂತ್ರಣ ಕಾಯ್ದೆ' ಎಂದು ಕರೆಯಲಾಗಿದೆ.

ಇಲ್ಲಿ ಸುಸ್ಪಷ್ಟವಾಗಿ ವ್ಯಾಖ್ಯಾನಿಸಲು ಆಗದ ಪದಗಳನ್ನು ಬಳಸಿರುವುದು ಉದ್ದೇಶಪೂರ್ವಕ. ವಸಾಹತುಶಾಹಿ ಸರ್ಕಾರದ ರೀತಿಯಲ್ಲೇ ಭಾರತದ ಪ್ರಜಾತಾಂತ್ರಿಕ ಸರ್ಕಾರ ಕೂಡ ಪ್ರಜೆಗಳನ್ನು ಪೀಡೆಗಳು ಎಂಬಂತೆ ಕಾಣುತ್ತದೆ. ಅದಕ್ಕೆ ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಅದು, ಜನ ಅಪರಾಧ ಎಸಗದಿದ್ದರೂ ಅವರನ್ನು ಜೈಲಿಗೆ ಕಳುಹಿಸಲು ಅವಕಾಶ ಕಲ್ಪಿಸುವ, ನಿರ್ದಿಷ್ಟ ಚೌಕಟ್ಟು ಇಲ್ಲದ, ಅತ್ಯಂತ ಕಠೋರವಾದ ಕಾನೂನು ಹೊಂದಲು ಬಯಸುತ್ತದೆ. 2018ರಲ್ಲಿ ನಮ್ಮ ದೇಶದ ಪ್ರಜೆಗಳಿಗೆ ಆಗುತ್ತಿರುವುದು ಏನು ಎಂಬುದನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳದೆ, 1919ರ ಮಹಾನ್ ದೌರ್ಜನ್ಯವನ್ನು ಮಾತ್ರ ನಮ್ಮ ಪಠ್ಯಪುಸ್ತಕಗಳ ಮೂಲಕ ಮಕ್ಕಳಿಗೆ ಕಲಿಸುತ್ತಿರುವುದು ಸೋಗಲಾಡಿತನ ಆಗುತ್ತದೆ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT