ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಧೋಳ ನಾಯಿ ನಿಯತ್ತು ಕಾಂಗ್ರೆಸ್‌ಗೆ ಇಲ್ಲ: ಮೋದಿ

Last Updated 6 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶನಿಷ್ಠೆ ಮತ್ತು ರಾಷ್ಟ್ರ ರಕ್ಷಣೆ ವಿಚಾರದಲ್ಲಿ ಮುಧೋಳ ತಳಿ ನಾಯಿಗೆ ಇರುವ ನಿಯತ್ತು ಕಾಂಗ್ರೆಸ್ಸಿಗೆ ಇಲ್ಲ’ ಎಂದು ‘ಕೈ’ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಟೀಕಾ ಪ್ರಹಾರ ಮುಂದುವರಿಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಆರು ದಿನಗಳು ಮಾತ್ರ ಬಾಕಿ ಉಳಿದಿದ್ದು, ಪ್ರಚಾರದ ಕಾವು ತಾರಕಕ್ಕೇರಿದೆ. ಈ ಮಧ್ಯೆ, ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿರುವ ಕಾಂಗ್ರೆಸ್‌ ನಾಯಕರಿಗೆ ಪ್ರಚಾರದುದ್ದಕ್ಕೂ ಮೋದಿ ತೀಕ್ಷ್ಣ ಮಾತುಗಳಿಂದ ತಿವಿಯುತ್ತಿದ್ದಾರೆ.

ಜಮಖಂಡಿಯಲ್ಲಿ ಭಾನುವಾರ ಮಾತನಾಡಿದ ಮೋದಿ, ‘ಪೂರ್ವಜರಿಂದ, ಹಿರಿಯರಿಂದ ಹಾಗೂ ಮಹಾತ್ಮ ಗಾಂಧೀಜಿಯಿಂದ ನೀವು ದೇಶಭಕ್ತಿ ಕಲಿಯಲಿಲ್ಲ. ಮುಧೋಳ ತಳಿ ನಾಯಿ ನೋಡಿಯಾದರೂ ಕಲಿಯಿರಿ’ ಎಂದು ಕಿಚಾಯಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಧೋಳ ತಳಿ ನಾಯಿಯ ನಿಷ್ಠೆ ಗುರುತಿಸಿ ಸೈನ್ಯದಲ್ಲಿ ತುಕಡಿ ರಚಿಸಿದ್ದೇವೆ’ ಎಂದರು.

‘ದೇಶಭಕ್ತಿಯ ಜ್ವಾಲೆಯಲ್ಲಿಯೇ ಸ್ವಾತಂತ್ರ್ಯ ಪಡೆದಿದ್ದೇವೆ. ಈಗ ಅದೇ ನೆಲೆಯಲ್ಲಿ ದೇಶದ ಅಭಿವೃದ್ಧಿ ಮಾಡೋಣ ಎಂದರೆ ಕಾಂಗ್ರೆಸ್‌ನವರು ಬಿಡುತ್ತಿಲ್ಲ. ಅದರಲ್ಲೂ ಕೆಟ್ಟ ವಾಸನೆ ಹುಡುಕುತ್ತಿದ್ದಾರೆ. ಭಾರತೀಯ ಸೇನೆ ಶತ್ರು ಪಾಳಯಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಬಂದರೆ ಅದಕ್ಕೂ ಸಾಕ್ಷ್ಯ ಕೇಳುವ ಪಾಪವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ದಲಿತರಾದ ರಾಮನಾಥ ಕೋವಿಂದ್ ಅವರನ್ನು ಬಿಜೆಪಿ ರಾಷ್ಟ್ರಪತಿ ಮಾಡಿತು. ಇದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ. ಅದೇ ಕಾರಣಕ್ಕೆ ವರ್ಷ ಕಳೆದರೂ ಸೋನಿಯಾ ಗಾಂಧಿ ಸೌಜನ್ಯಕ್ಕಾದರೂ ಕೋವಿಂದ್‌ ಅವರನ್ನು ಭೇಟಿ ಮಾಡಿಲ್ಲ. ಏಳು ತಿಂಗಳು ನಂತರ ಮನವಿ ಪತ್ರ ಸಲ್ಲಿಕೆ ನೆಪದಲ್ಲಿ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ. ಅಹಂಕಾರ ಮುಗಿಲು ಮುಟ್ಟಿರುವ ಇವರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ’ ಎಂದು ಪ್ರಶ್ನಿಸಿದರು.

ಚಿತ್ರದುರ್ಗದಲ್ಲಿ ಮಾತನಾಡಿ, ‘ದೇಶದ ಎಲ್ಲೆಡೆ ಕಾಂಗ್ರೆಸ್‌ ನಾಯಕರ ಹೆಸರಿನ ಹಿಂದೆ ಮುಂದೆ ಉಪನಾಮ ಸೇರಿಕೊಳ್ಳುತ್ತವೆ. ಚಿತ್ರದುರ್ಗ ಜಿಲ್ಲೆಯ ಸಚಿವರೊಬ್ಬರ ಹೆಸರಿನ ಜೊತೆಗೆ ‘ಡೀಲ್‌’ ಎಂಬ ಉಪನಾಮ ಪ್ರಚಲಿತದಲ್ಲಿದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಅವರ ಹೆಸರು ಪ್ರಸ್ತಾಪಿಸದೆ ಆರೋಪಿಸಿದರು.

‘ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್‌ ಅವಮಾನಿಸಿದೆ. ಶೋಷಿತರು, ದಲಿತರು ಹಾಗೂ ನಿರ್ಲಕ್ಷಿತ ಸಮುದಾಯಗಳ ಬಗ್ಗೆ ಕಾಳಜಿ ಹೊಂದಿದ್ದ ನಿಜಲಿಂಗಪ್ಪ, ನೆಹರೂ ಜಾರಿಗೆ ತರುತ್ತಿದ್ದ ಆರ್ಥಿಕ ನೀತಿಗಳನ್ನು ವಿರೋಧಿಸಿದ್ದರು. ಈ ಕಾರಣಕ್ಕಾಗಿ ಅವರನ್ನು ಬೆಳೆಯಲು ಕಾಂಗ್ರೆಸ್‌ ಬಿಡಲಿಲ್ಲ’ ಎಂದು ದೂರಿದರು.

ರಾಯಚೂರಿನಲ್ಲಿ ಮಾತನಾಡಿ, ‘ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೆ ತಮ್ಮ ಭ್ರಷ್ಟಾಚಾರ ಹೊರಬರುತ್ತದೆ ಎಂಬ ಆತಂಕ ಕಾಂಗ್ರೆಸ್‌ ನಾಯಕರನ್ನು ಕಾಡುತ್ತಿದೆ’ ಎಂದರು.

ಸಂಸ್ಕೃತಿಹೀನ ಪ್ರಚಾರ: ಸಿ.ಎಂ
‘ಸಂಸ್ಕೃತಿ, ಪರಂಪರೆ ಬಗ್ಗೆ ಮಾತನಾಡುವ ಬಿಜೆಪಿಯ ಚುನಾವಣಾ ಪ್ರಚಾರವೂ ಘನತೆ- ಗೌರವದಿಂದ ನಡೆಯಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಇಷ್ಟೊಂದು ಕೀಳುಮಟ್ಟದ ಪ್ರಚಾರ ನನ್ನ ರಾಜಕೀಯ ಜೀವನದಲ್ಲಿ ಎಂದೂ ನೋಡಿಲ್ಲ’ ಎಂದು ‘ಸಂಸ್ಕೃತಿಹೀನ ಬಿಜೆಪಿ ಪ್ರಚಾರ’ ಹ್ಯಾಷ್‌ಟ್ಯಾಗ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಭಾನುವಾರದ ವಿದ್ಯಮಾನ

* ಕಾಂಗ್ರೆಸ್‌ ಪಕ್ಷದಲ್ಲಿ ಮುನಿಸಿಕೊಂಡಿರುವ ಹಿರಿಯ ನಾಯಕ ಅಂಬರೀಷ್‌ಗೆ ಪಕ್ಷ ಸೇರುವಂತೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿಯಿಂದ ಆಹ್ವಾನ. ತುಟಿಬಿಚ್ಚದ ಅಂಬಿ

* ಮೊದಲ ಬಾರಿಗೆ ನಾನು ಪಕ್ಷೇತರನಾಗಿ ಗೆದ್ದೆ. ಆಗೇನು ದೇವೇಗೌಡ ನನ್ನನ್ನು ಗೆಲ್ಲಿಸಿದ್ನಾ... ಮುಖ್ಯಮಂತ್ರಿ ಸಿದ್ದರಾಮಯ್ಯ (ಮಾಧ್ಯಮ ಸಂವಾದದಲ್ಲಿ)

* ಮೇಲ್ಜಾತಿಯಲ್ಲಿರುವ ಬಡವರಿಗೆ ಮೀಸಲಾತಿ ಕಲ್ಪಿಸಲು ಬಿಜೆಪಿ ಹಾಗೂ ಕಾಂಗ್ರೆಸ್‌ ಹಿಂದೇಟು ಹಾಕುತ್ತಿವೆ– ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ (ಬೀದರ್‌ನಲ್ಲಿ)

* ನೂರಾರು ಜನರಿಗೆ ಸಾವಿರಾರು ಕೋಟಿ ವಂಚಿಸಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್‌ ಈಶ್ವರನ್‌ ಜಾಲಕ್ಕೆ ಸಿದ್ದರಾಮಯ್ಯ ಸಹಾಯ ಮಾಡಿದ್ದಾರೆ– ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ.ಸಂಬೀತ್‌ ಪಾತ್ರ (ಮಾಧ್ಯಮಗೋಷ್ಠಿಯಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT