ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಾ, ಎಷ್ಟೊಂದು ತರಕಾರಿ!

Last Updated 7 ಮೇ 2018, 19:30 IST
ಅಕ್ಷರ ಗಾತ್ರ

ಗುರುಬಸಪ್ಪ ವೀರಾಪುರ

ನೀರಿನ ಸಮಸ್ಯೆ ಹಾಗೂ ಕಾಡು ಪ್ರಾಣಿಗಳ ಉಪಟಳದ ಹೊರತಾಗಿಯೂ ಕೃಷಿಯಲ್ಲಿ ನೆಮ್ಮದಿಯ ಜೀವನ ಕಂಡುಕೊಂಡವರು ಉಡುಪಿ ತಾಲ್ಲೂಕಿನ ಸಾಸ್ತಾನ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂಥವರಲ್ಲಿ ನರಸಿಂಹ ನಾಯ್ಕ್ ಒಬ್ಬರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸಂಘದ ಸದಸ್ಯರಾದ ನರಸಿಂಹ ನಾಯ್ಕ್ ಅವರ ಜಮೀನಿನಲ್ಲಿ ಏನೆಲ್ಲಾ ಬೆಳೆಗಳಿವೆ ಎನ್ನುವುದನ್ನು ಲೆಕ್ಕ ಹಾಕುತ್ತಾ ಹೋದರೆ ಅದೊಂದು ದೊಡ್ಡ ಪಟ್ಟಿಯೇ ಆಗುತ್ತದೆ. ಇವರು ಬೆಳೆಯುವ ತರಕಾರಿ ಬೆಳೆಗಳು ಅಷ್ಟೊಂದು ವೈವಿಧ್ಯಮಯವಾಗಿವೆ. ಸರ್ವಋತುಗಳಲ್ಲಿ ಮುಳ್ಳು ಸೌತೆ, ಅಲಸಂದೆ, ಬಸಳೆ, ಹರಿವೆ, ಬದನೆ, ತೊಂಡೆ ಗೆಣಸು, ಕೆಸು ಬೆಳೆಗಳಿಂದ ಅವರ ತೋಟ ತುಂಬಿಹೋಗಿದೆ.

ತಂದೆಯ ಕಾಲದಿಂದಲೂ ನೆಚ್ಚಿಕೊಂಡು ಬಂದ ತರಕಾರಿ ಅಲಸಂದೆ ಎಂದೆನ್ನುವ ನಾಯ್ಕ್, ಸಾಲಿನಿಂದ ಸಾಲಿಗೆ ಏಳು ಅಡಿ ಅಂತರ ಬಿಟ್ಟು ಆರು ಸಾಲುಗಳಲ್ಲಿ ಅಲಸಂದೆ ಬಿತ್ತಿದ್ದಾರೆ. ಜೂನ್‌-ಜುಲೈ ತಿಂಗಳಲ್ಲಿ ಬಿತ್ತಿದರೆ ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳಲ್ಲಿ ಕಾಯಿ ನೀಡಲು ಆರಂಭವಾಗುತ್ತದೆ. ಬಳ್ಳಿಗೆ ರೋಗ ಬಾರದಂತೆ ಎಚ್ಚರಿಕೆ ವಹಿಸಿದರೆ ವರ್ಷದುದ್ದಕ್ಕೂ ಇಳುವರಿ ನೀಡಿ ವಾರ್ಷಿಕ ಬೆಳೆಗಳ ಸಾಲಿನಲ್ಲಿ ಗುರುತಿಸಿಕೊಳ್ಳುತ್ತದೆ. ಒಮ್ಮೆ ಕಟಾವು ಮಾಡುವಾಗ 30 ಕೆ.ಜಿಯಿಂದ 40 ಕೆ.ಜಿವರೆಗೆ ದೊರೆಯುವುದು. ಪ್ರತಿ ವರ್ಷ ಅಲಸಂದೆಯಿಂದ ಸುಮಾರು ₹50 ಸಾವಿರ ಆದಾಯ ಸಿಗುತ್ತದೆ.

ಕರಾವಳಿಯ ಜನತೆಗೆ ಪ್ರತಿವರ್ಷ ಕೈ-ತುಂಬಾ ಆದಾಯವನ್ನು ತಂದು ಕೊಡುವ ಬಸಳೆ ಸುಮಾರು 150ರಿಂದ 200 ಬುಡಗಳಿದ್ದು, ಬುಡದಿಂದ ಬುಡಕ್ಕೆ ಆರು ಅಡಿಗಳ ಅಂತರವನ್ನು ಕಾಯ್ದುಕೊಳ್ಳಲಾಗಿದೆ. ನಂತರ ಚಪ್ಪರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಬಳ್ಳಿಗೆ ಚಪ್ಪರವನ್ನು ಹಾಕಲು ಕೂಲಿಯಾಳುಗಳನ್ನು ಬಳಸದೇ ಮನೆಯವರೇ ನಾಲ್ಕು ಜನರು ಈ ಕೆಲಸವನ್ನು ಮಾಡಿದ್ದಾರೆ. ಒಂದು ಕಟ್ಟು ಬಸಳೆಗೆ ಸರಾಸರಿ ₹20-25 ದರವಿದ್ದು, ಸರಿಸುಮಾರು ₹25 ಸಾವಿರ ಆದಾಯವನ್ನು ಮಾಡಿಕೊಳ್ಳುತ್ತಿದ್ದಾರೆ.

ಮುಳ್ಳುಸೌತೆ ಅಪ್ಪಟ ಮಳೆಯಾಶ್ರಿತ ಬೆಳೆ. ಆದರೆ, ನಾಯ್ಕ್ ಅವರು ಬೇಸಿಗೆಯಲ್ಲಿ ನೀರು ನೀಡಿ ಪೋಷಿಸುವ ಪ್ರಯತ್ನವನ್ನು ಮಾಡುತ್ತಿದ್ದು, ಸಾಕಷ್ಟು ಆದಾಯವನ್ನು ತಂದುಕೊಟ್ಟಿದೆ. ಸೌತೆ ಎರಡರಿಂದ ಮೂರೂವರೆ ತಿಂಗಳ ಬೆಳೆಯಾಗಿದ್ದು, ಕೇವಲ 15 ದಿನಗಳಲ್ಲಿ ಇಳುವರಿ ಸಿಗುತ್ತದೆ. ನಿತ್ಯ ಸುಮಾರು 30 ಕೆ.ಜಿ. ಸೌತೆ ₹20ರಂತೆ ಮಾರಾಟವಾದರೆ 600 ಆದಾಯ ಸಿಗುತ್ತದೆ.



ನಾಲ್ಕು ಸಾಲುಗಳಲ್ಲಿ ಬದನೆಯನ್ನು ನಾಟಿ ಮಾಡಿದ್ದಾರೆ. ಸಸಿಗೆ ₹6ರಂತೆ ಖರ್ಚು ಮಾಡಿ ಸಸಿಗಳನ್ನು ತಯಾರಿಸಿ, ನಾಟಿ ಮಾಡಿದ್ದಾರೆ. ಇದು ಐದು ತಿಂಗಳ ಬೆಳೆಯಾಗಿದ್ದು, ಹಾಕಿದ ಎರಡೂವರೆ ತಿಂಗಳಿಗೆ ಕಾಯಿಯನ್ನು ನೀಡುತ್ತದೆ. ನಾಲ್ಕು ಅಡಿ ಅಂತರದಲ್ಲಿ ಸಾಲುಗಳನ್ನು ತೆಗೆದು ಅದರಲ್ಲಿ ಒಂದೂವರೆ ಅಡಿ ಅಂತರ ಬಿಟ್ಟು ಸಸಿಗಳನ್ನು ನಾಟಿ ಮಾಡಿದ್ದಾರೆ. ಕೆ.ಜಿ.ಗೆ ₹ 30ರಂತೆ ಬದನೆ ಮಾರಾಟವಾಗುತ್ತಿದ್ದು, ವಾರಕ್ಕೊಮ್ಮೆ 40-50 ಕೆ.ಜಿಯಷ್ಟು ಸಿಗುತ್ತಿದೆ.

ಗೆಣಸು 3ರಿಂದ 4 ತಿಂಗಳ ಬೆಳೆಯಾಗಿದ್ದು, ಸದ್ದಿಲ್ಲದೇ ಸಾವಿರಾರು ರೂಪಾಯಿಗಳ ಲಾಭ ಗಳಿಸುವ ಒಂದು ಕೃಷಿ ಚಟುವಟಿಕೆ. 1.5 ಏಕರೆಯಲ್ಲಿ ಗೆಣಸು ಬೆಳೆಯುತ್ತಿದ್ದು, ಕೆ.ಜಿಗೆ ಸರಾಸರಿ ₹10 ದೊರೆಯುತ್ತದೆ. ಕಡಿಮೆ ಬಂಡವಾಳದ ಮೂಲಕ ಮಾನವ ಶ್ರಮದಲ್ಲಿ ಬೆಳೆಯಬಹುದಾದ ಬೆಳೆಯಾಗಿದೆ.

ನಾಯ್ಕ್ ಅವರು ಎಲ್ಲಾ ತರಕಾರಿ ಕೃಷಿಗೆ ಸಾವಯವ ಗೊಬ್ಬರ ಹಾಗೂ ದನಗಳ ಸ್ಲರಿಯನ್ನು ನೀಡುತ್ತಿದ್ದು, ಬೇಸಿಗೆಯಲ್ಲಿ ಪಕ್ಕದ ಹೊಳೆಯಿಂದ ನೀರು ಪಡೆದು ತರಕಾರಿ ಬೆಳೆಗಳನ್ನು ಪೋಷಿಸುತ್ತಾರೆ. ಸಾಂಪ್ರದಾಯಕ ಕೃಷಿಯ ಜತೆಗೆ ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡಾಗ ಅಧಿಕ ಇಳುವರಿ ಪಡೆಯಬಹುದು ಎನ್ನುತ್ತಾರೆ ನಾಯ್ಕ್‌.

ಸಂಪರ್ಕಕ್ಕೆ: 9901735916

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT