ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಥಳೀಯ ಅಭ್ಯರ್ಥಿಗೆ ಬೆಂಬಲ ಖಚಿತ’

ಅಭಿವೃದ್ಧಿ ಕಾರ್ಯಗಳಿಗೆ ಜನಮನ್ನಣೆ: ಯೋಗೇಶ್ವರ್ ವಿಶ್ವಾಸ
Last Updated 9 ಮೇ 2018, 13:30 IST
ಅಕ್ಷರ ಗಾತ್ರ

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿ.ಪಿ. ಯೋಗೇಶ್ವರ್ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಯಾರ ಪ್ರಬಲ ಸ್ಪರ್ಧೆಯೂ ಇಲ್ಲ. ಜನತೆ ಸ್ಥಳೀಯ ಅಭ್ಯರ್ಥಿಯನ್ನೇ ಬೆಂಬಲಿಸುವುದು ನಿಶ್ಚಿತ ಎನ್ನುವುದು ಅವರ ಆತ್ಮವಿಶ್ವಾಸದ ನುಡಿ. ಯೋಗೇಶ್ವರ್‌ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಂತಿದೆ.

ಚನ್ನಪಟ್ಟಣದಲ್ಲಿ ಸದ್ಯ ಚುನಾವಣೆಯ ಅಲೆ ಹೇಗಿದೆ?

ಅಭ್ಯರ್ಥಿಗಳು ಅಂತಿಮವಾದ ಬಳಿಕ ಜನರಲ್ಲಿ ಸ್ಪಷ್ಟ ಅಭಿಪ್ರಾಯ ಮೂಡಿದೆ. ಇಲ್ಲಿ ಪ್ರಮುಖವಾಗಿ ಮೂವರ ನಡುವೆ ಹಣಾಹಣಿ ಇದೆ. ಯಾರು ಉತ್ತಮರು ಎಂದು ಜನರು ಚರ್ಚಿಸಿ ತೀರ್ಮಾನಕ್ಕೆ ಬರುತ್ತಿದ್ದಾರೆ. ಉಳಿದ ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ನಮ್ಮ ತಾಲ್ಲೂಕಿನ ಜೊತೆ ಸಂಬಂಧ ಇಲ್ಲ. ನನ್ನ ಕೆಲಸಗಳು ಜನರಿಗೆ ಮುಟ್ಟಿವೆ. ನಾನು ಅವರ ಮನೆ ಮಗ ಎಂಬುದು ಅರಿವಿಗೆ ಬಂದಿದೆ. ಹೀಗಾಗಿ ನನಗೆ ಅಂತಹ ತೀವ್ರ ಪ್ರತಿಸ್ಪರ್ಧೆ ಕಾಣಿಸುತ್ತಿಲ್ಲ.

ತಾಲ್ಲೂಕಿನಲ್ಲಿ ಹಿಂದಿನಿಂದಲೂ ಕಾಂಗ್ರೆಸ್‌–ಜೆಡಿಎಸ್‌ಗೆ ಅಸ್ತಿತ್ವ ಇಲ್ಲ. ಇಲ್ಲಿ ಸಂಘಟನೆಗೆ ಶ್ರಮಿಸಿದ ವ್ಯಕ್ತಿಗಳನ್ನು ಗುರುತಿಸುವ ಕೆಲಸವನ್ನು ಆ ಪಕ್ಷಗಳು ಮಾಡಿಲ್ಲ. ದಿಢೀರ್ ಎಂದು ಇಲ್ಲಿ ಬಂದು ಸ್ಪರ್ಧೆಗೆ ನಿಂತವರು ಹಾಗೆಯೇ ವಾಪಸ್ ಹೋಗಲಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಸ್ವಾಭಿಮಾನದ ಅಸ್ತ್ರ ಪ್ರಯೋಗಿಸಿದ್ದೀರಿ. ಅದು ಫಲ ನೀಡುವ ವಿಶ್ವಾಸ ಇದೆಯಾ?

ಖಂಡಿತ. ಉಳಿದ ಇಬ್ಬರು ಇಲ್ಲಿ ಉಳಿಯುವುದಿಲ್ಲ. ಜನರ ಕೈಗೆ ಸಿಗುವುದಿಲ್ಲ. ಹೀಗಾಗಿ ಸ್ಥಳೀಯರ ಪರ ಜನರ ಒಲವು ಇದ್ದೇ ಇದೆ. ಕ್ಷೇತ್ರಕ್ಕೆ ಕುಮಾರಸ್ವಾಮಿ ಕೊಡುಗೆ ಏನೂ ಇಲ್ಲ. ಕಾಂಗ್ರೆಸ್‌ ಇಲ್ಲಿ ದಿನೇ ದಿನೇ ಕ್ಷೀಣಿಸುತ್ತಿದೆ. ಇಲ್ಲಿನ ಮತದಾರರು ಜಾತಿ–ಪಂಗಡಗಳನ್ನೂ ಮೀರಿ ಅಭಿವೃದ್ಧಿ ಪರ ಮತ ಚಲಾಯಿಸಲಿದ್ದಾರೆ.

 ರೇವಣ್ಣ, ಕುಮಾರಸ್ವಾಮಿ–ಇಬ್ಬರಲ್ಲಿ ಯಾರು ಪ್ರತಿಸ್ಪರ್ಧಿ?

 ಖಂಡಿತ ಕುಮಾರಸ್ವಾಮಿ. ಆದರೆ ಕಾಂಗ್ರೆಸ್ ಅಭ್ಯರ್ಥಿಯ ಪರ ಡಿಕೆಶಿ ಅವರ ಕಪ್ಪು ಹಣ ಇಲ್ಲಿ ಸ್ವಲ್ಪ ಚಲಾವಣೆಯಲ್ಲಿ ಇದೆ. ಹೀಗಾಗಿ ರೇವಣ್ಣ ಉತ್ಸಾಹದಲ್ಲಿ ಇದ್ದಾರೆ. ಆದರೆ ಅವರು ನಂಬಿರುವ ಸಮಾಜ ಅವರ ಕೈ ಹಿಡಿಯುವುದಿಲ್ಲ. ಎಚ್‌ಡಿಕೆ ವಿವೇಚನೆ ಮಾಡದೇ ಎರಡೂ ಕಡೆ ಸ್ಪರ್ಧಿಸುವ ಆತುರದ ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ

ರೇವಣ್ಣ ಸ್ಪರ್ಧೆ ಹಿಂದೆ ಯಾರದಾದರೂ ತಂತ್ರವಿದೆಯೇ?

ಇದೆಲ್ಲ ಶಿವಕುಮಾರ್ ಅವರ ಚಕ್ರವ್ಯೂಹ. ನನಗೆ ಹಿನ್ನಡೆಯಾಗಲಿ ಎಂಬ ಕಾರಣಕ್ಕೆ ಅವರು ಹೀಗೆಲ್ಲ ಮಾಡಿದರು. ಆದರೆ ಅದರಿಂದ ಅನುಕೂಲವೇ ಆಗುತ್ತಿದೆ. ಇಬ್ಬರೂ ಹೊರಗಿನವರೇಆದ್ದರಿಂದ ಒಳ್ಳೆಯದೇ ಆಗಿದೆ.

ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ರಚನೆಯ ಸಾಧ್ಯತೆ ಇದೆಯಾ?

ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸ ಇದೆ. ಹೀಗಾಗಿ ಜೆಡಿಎಸ್ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ. ಇದು ಒಬ್ಬರಿಗೊಬ್ಬರು ಯಾಮಾರಿಸುವ ತಂತ್ರ ಅಷ್ಟೇ. ಜೆಡಿಎಸ್‌ 25–30 ಸ್ಥಾನವಷ್ಟೇ ಗೆಲ್ಲುವುದು ಖಾತ್ರಿಯಾದ ಬಳಿಕ ಕುಮಾರಸ್ವಾಮಿ ಸ್ವತಃ ಮೈತ್ರಿ ಸಾಧ್ಯತೆಗಳನ್ನು ತೇಲಿ ಬಿಡುತ್ತಿದ್ದಾರೆ. ಮುಂದೆ ಖಂಡಿತ ಅವರಿಗೆ ನಿರಾಸೆ ಕಾದಿದೆ.

 ಬಿಜೆಪಿಯು ಮೈಸೂರು ಭಾಗದಲ್ಲಿ ನಿರೀಕ್ಷಿಸಿದಷ್ಟು ಪ್ರಗತಿ ಸಾಧಿಸಿಲ್ಲವಲ್ಲ?

ಹೌದು. ಅದನ್ನು ನಾನು ಒಪ್ಪುತ್ತೇನೆ. ಆದರೆ ಬಿಜೆಪಿಯು ಅದನ್ನು ಹೊರತುಪಡಿಸಿ ರಾಜ್ಯದಲ್ಲಿ 130 ಸ್ಥಾನಗಳಲ್ಲಿ ಗೆಲ್ಲಲಿದೆ. ಹೀಗಾಗಿ ನಾಯಕರು ಹೆಚ್ಚು ವಿಚಲಿತರಾಗಿಲ್ಲ. ಮುಂದಿನ ದಿನಗಳಲ್ಲಿ ಇಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸಲಾಗುವುದು

ನೀರಾವರಿಯ ಕೆಲಸ ಮುಗಿಯುತ್ತಾ ಬಂದಿದೆ. ಮುಂದಿನ ಯೋಜನೆಗಳೇನು?

ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಹಲವು ಯೋಜನೆಗಳು ಮನಸ್ಸಿನಲ್ಲಿ ಇವೆ. ಕೇಂದ್ರದಲ್ಲಿ ನಮ್ಮದೇ ಪಕ್ಷದ ಸರ್ಕಾರವಿದೆ. ಹೀಗಾಗಿ ಹೆಚ್ಚೆಚ್ಚು ಅನುದಾನ ತರಬೇಕು. ಅಮೃತಾ ಮೊದಲಾದ ಯೋಜನೆಗಳನ್ನು ಕಾರ್ಯಕತಗೊಳಿಸಬೇಕು. ಚನ್ನಪಟ್ಟಣ ಸ್ಮಾರ್ಟ್ ಸಿಟಿಯನ್ನಾಗಿಸಬೇಕು. ಇಲ್ಲಿನ ರೇಷ್ಮೆ ಬೆಳೆಗಾರರು, ಕರಕುಶಲ ಕರ್ಮಿಗಳಿಗೆ ಭದ್ರತೆ ಒದಗಿಸಬೇಕು. ಉಪ ನದಿಗಳನ್ನು ಜೋಡಣೆ ಮಾಡಬೇಕು ಎನ್ನುವ ಕನಸು ನನ್ನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT