ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಗ್ದಂಡನೆ – ಸಭಾಪತಿಯ ಸರಿಯಾದ ಹೆಜ್ಜೆ

Last Updated 9 ಮೇ 2018, 19:30 IST
ಅಕ್ಷರ ಗಾತ್ರ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ಅವರನ್ನು ವಾಗ್ದಂಡನೆಗೆ ಗುರಿಪಡಿಸುವ ಮನವಿಯನ್ನು ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಕೂಡ ಆಗಿರುವ ಎಂ. ವೆಂಕಯ್ಯ ನಾಯ್ಡು ಅವರು ತಿರಸ್ಕರಿಸಿರುವುದನ್ನು ಕಾಂಗ್ರೆಸ್ ಪಕ್ಷ ಮತ್ತು ಆ ಮನವಿಗೆ ಸಹಿ ಮಾಡಿದ್ದ ಕೆಲವರು ಪ್ರಶ್ನಿಸಿದ್ದಾರೆ. ಇಂತಹ ‘ಕಾನೂನುಬಾಹಿರ ಆದೇಶ’ ಹೊರಡಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವು ಸಭಾಪತಿ ವಿರುದ್ಧ ‘ಹರಿಹಾಯ್ದಿದೆ’ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

‘ವಾಗ್ದಂಡನೆಗೆ ಗುರಿಪಡಿಸುವ ಮನವಿಯ ಬಗ್ಗೆ ತಾವಾಗಿಯೇ ತೀರ್ಮಾನ ಕೈಗೊಳ್ಳುವ ಅಧಿಕಾರ ಸಭಾಪತಿಗೆ ಇಲ್ಲ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿರುವುದಾಗಿ ವರದಿಯಾಗಿದೆ. ‘ಸಂಸದರು ಸಲ್ಲಿಸಿದ ಮನವಿಯನ್ನು ಪ್ರಾಥಮಿಕ ಹಂತದಲ್ಲಿಯೇ ತಿರಸ್ಕರಿಸಿರುವುದು ಭಾರತದ ಇತಿಹಾಸದಲ್ಲಿ ಎಂದೂ ನಡೆದಿರಲಿಲ್ಲ’ ಎಂದು ಕಾಂಗ್ರೆಸ್ ಪಕ್ಷದ ಕಪಿಲ್ ಸಿಬಲ್ ಹೇಳಿದ್ದಾರೆ.

ಸಭಾಪತಿಯವರ ತೀರ್ಮಾನವನ್ನು ಪ್ರಶ್ನಿಸುವ ಅಧಿಕಾರ ಸಂಸದರಿಗೆ ಇದೆ. ಆದರೆ ಮನವಿಯನ್ನು ಪ್ರಾಥಮಿಕ ಹಂತದಲ್ಲಿ ತಿರಸ್ಕರಿಸಲು ಕಾನೂನಿನಲ್ಲಿ ಅವಕಾಶ ಇಲ್ಲ, ಇಂತಹ ಕ್ರಮವನ್ನು ಹಿಂದೆಂದೂ ಕೈಗೊಂಡಿರಲಿಲ್ಲ ಎಂದು ಕೆಲವರು ಹೇಳಿರುವುದು ಸಂಪೂರ್ಣ ತಪ್ಪು.

ವಾಗ್ದಂಡನೆ ಮನವಿಯನ್ನು ಒಪ್ಪಬೇಕೇ ಬೇಡವೇ ಎಂಬುದನ್ನು ರಾಜ್ಯಸಭೆಯ ಸಭಾಪತಿ ತಮ್ಮ ವಿವೇಚನೆ ಬಳಸಿ ತೀರ್ಮಾನಿಸಲು ಕಾನೂನು ಅವಕಾಶ ಮಾಡಿಕೊಡುವುದಿಲ್ಲ ಎಂಬ ವಾದ ಖಂಡಿತ ತಪ್ಪು. ‘ಸ್ಪೀಕರ್ ಅಥವಾ ಸಭಾಪತಿ, ತಮಗೆ ಸೂಕ್ತ ಅನಿಸಿದ ವ್ಯಕ್ತಿಗಳ ಜೊತೆ, ಅಂಥವರು ಯಾರಾದರೂ ಇದ್ದರೆ, ಸಮಾಲೋಚನೆ ನಡೆಸಿ, ತಮ್ಮ ಬಳಿ ಇರಬಹುದಾದ ದಾಖಲೆಗಳನ್ನು, ಅಂಥವೇನಾದರೂ ಇದ್ದರೆ, ಪರಿಶೀಲಿಸಿ, ಮನವಿಯನ್ನುಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು’ ಎಂದು ನ್ಯಾಯಮೂರ್ತಿಗಳ (ವಿಚಾರಣಾ) ಕಾಯ್ದೆ - 1968ರ ಸೆಕ್ಷನ್ 3ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಿರುವಾಗ, ಮನವಿಯನ್ನು ಸಭಾಪತಿಯವರು ಪ್ರಾಥಮಿಕ ಹಂತದಲ್ಲಿಯೇ ತಿರಸ್ಕರಿಸಬಹುದೇ ಎನ್ನುವ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲಗಳು ಮೂಡಲು ಅವಕಾಶವೇ ಇಲ್ಲ.

ನ್ಯಾಯಮೂರ್ತಿಗಳ (ವಿಚಾರಣಾ) ಕಾಯ್ದೆ- 1968 ಜಾರಿಗೆ ಬಂದ ನಂತರ, 1970ರಲ್ಲಿ ಸಲ್ಲಿಕೆಯಾದ ಮೊದಲ ಮನವಿಯನ್ನು ಲೋಕಸಭೆಯ ಸ್ಪೀಕರ್ ಜಿ.ಎಸ್. ಧಿಲ್ಲೋನ್ ಅವರು ತಿರಸ್ಕರಿಸಿದ್ದರು. ಪೂರ್ವ ನಿದರ್ಶನಗಳ ಬಗ್ಗೆ ಮಾತನಾಡುವಾಗ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಧಿಲ್ಲೋನ್ ಈ ತೀರ್ಮಾನ ಕೈಗೊಂಡ ಸಂದರ್ಭದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇತ್ತು. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಜೆ.ಸಿ. ಶಾ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು 199 ಸಂಸದರು ಸಹಿ ಮಾಡಿದ್ದ ಮನವಿಯು ‘ಹುಡುಗಾಟಿಕೆಯದ್ದು’ ಎಂದು ಸ್ಪೀಕರ್ ಹೇಳಿದ್ದರು. ಇಷ್ಟೇ ಅಲ್ಲ, ನ್ಯಾಯಮೂರ್ತಿ ಶಾ ವಿರುದ್ಧ ಮಾಡಿದ ಯಾವುದೇ ಆರೋಪಗಳು ಸದನದ ಕಡತಗಳಲ್ಲಿ ದಾಖಲಾಗದಂತೆ ಕೂಡ ಸ್ಪೀಕರ್‌ ನೋಡಿಕೊಂಡಿದ್ದರು.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ವಿ. ರಾಮಸ್ವಾಮಿ ಅವರನ್ನು ವಾಗ್ದಂಡನೆಗೆ ಗುರಿಪಡಿಸುವ ಯತ್ನಕ್ಕೆ ಕಾಂಗ್ರೆಸ್ ಬೆಂಬಲ ನೀಡಿರಲಿಲ್ಲ. ಹೀಗಿರುವಾಗ, ಈ ಹಂತದಲ್ಲಿ ಕಾಂಗ್ರೆಸ್ ಪಕ್ಷ ಮುಂದಿಟ್ಟಿರುವ ವಾದಗಳು ವಿಚಿತ್ರ ಅನಿಸುತ್ತಿವೆ. ಇಂದಿನ ಸಿಜೆಐ ವಿರುದ್ಧದ ಆರೋಪಗಳು ‘ಮಾಡಿರಲೂಬಹುದು, ಮಾಡಿರದೆಯೂ ಇರಬಹುದು’ ಎಂಬಂತೆ ತೀರಾ ಜಾಳುಜಾಳಾಗಿ ಇವೆ. ಆದರೆ 1993ರಲ್ಲಿ ನ್ಯಾಯಮೂರ್ತಿ ರಾಮಸ್ವಾಮಿ ವಿರುದ್ಧ ಕೇಳಿಬಂದಿದ್ದ ಆರೋಪಗಳು ತೀರಾ ಗಂಭೀರವಾಗಿದ್ದವು, ಹಿಂದೆಂದೂ ಅಂತಹ ಆರೋಪಗಳು ಕೇಳಿಬಂದಿರಲಿಲ್ಲ.

‘ಇವರು ತಮ್ಮ ಅಧಿಕಾರವನ್ನು ಉದ್ದೇಶಪೂರ್ವಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ನೈತಿಕವಾಗಿ ಕಿಡಿಗೇಡಿತನದ ಕೆಲಸ ಮಾಡಿದ್ದಾರೆ. ನ್ಯಾಯಾಂಗಕ್ಕೆ ಅಗೌರವ ತಂದಿದ್ದಾರೆ’ ಎಂದು ನ್ಯಾಯಮೂರ್ತಿ ರಾಮಸ್ವಾಮಿ ಮೇಲಿನ ಆರೋಪಗಳ ಬಗ್ಗೆ ವಿಚಾರಣೆ ನಡೆಸಿದ ಮೂವರು ನ್ಯಾಯಮೂರ್ತಿಗಳ ಸಮಿತಿ ಹೇಳಿತ್ತು. ನ್ಯಾಯಮೂರ್ತಿ ರಾಮಸ್ವಾಮಿ ತಪ್ಪು ಮಾಡಿದ್ದಾರೆ ಎಂದೂ ಹೇಳಿತ್ತು. ಇಂತಹ ನ್ಯಾಯಮೂರ್ತಿಯನ್ನು ವಾಗ್ದಂಡನೆಗೆ ಗುರಿಪಡಿಸುವ ಮನವಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಲಿಲ್ಲ. ಆಗ ನ್ಯಾಯಮೂರ್ತಿ ರಾಮಸ್ವಾಮಿ ಅವರ ಪರ ವಕೀಲಿಕೆ ನಡೆಸಿದ್ದು, ಮುಂಚೂಣಿಯಲ್ಲಿ ನಿಂತು ಅವರನ್ನು ಸಮರ್ಥಿಸಿಕೊಂಡಿದ್ದು ಕಪಿಲ್ ಸಿಬಲ್.

ನ್ಯಾಯಮೂರ್ತಿಗಳ (ವಿಚಾರಣಾ) ಮಸೂದೆಯು ಮೊದಲು ಚರ್ಚೆಗೆ ಬಂದಿದ್ದು 1964ರಲ್ಲಿ. ನ್ಯಾಯಮೂರ್ತಿಯನ್ನು ವಾಗ್ದಂಡನೆಗೆ ಗುರಿಪಡಿಸುವ ಮನವಿಯನ್ನು ಒಪ್ಪಬೇಕೋ, ತಿರಸ್ಕರಿಸಬೇಕೋ ಎಂಬ ವಿಚಾರದಲ್ಲಿ ಸ್ಪೀಕರ್ ಅಥವಾ ಸಭಾಪತಿ ತೀರ್ಮಾನ ಕೈಗೊಳ್ಳಬೇಕು ಎನ್ನುವುದನ್ನು ಬೆಂಬಲಿಸಿ ಆ ಸಂದರ್ಭದಲ್ಲಿ ದೇಶದಲ್ಲಿದ್ದ ಅತ್ಯುತ್ತಮ ನ್ಯಾಯಶಾಸ್ತ್ರಜ್ಞರು ಬಲವಾದ ವಾದ ಮಂಡಿಸಿದ್ದರು. ಇದು ಈ ಮಸೂದೆಯ ಇತಿಹಾಸವನ್ನು ಅವಲೋಕಿಸಿದರೆ ಗೊತ್ತಾಗುತ್ತದೆ.

ಆಗ ಕೇಂದ್ರ ಸರ್ಕಾರ ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಯ ಪರಿಶೀಲನೆಗೆ ಒಪ್ಪಿಸಿತ್ತು. ಎಂ.ಎನ್. ಕೌಲ್, ಲೋಕಸಭೆಯ ಮಾಜಿ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸತ್ತಿನ ನಡಾವಳಿಗಳ ಕುರಿತ ಅತ್ಯಂತ ಅಧಿಕೃತ ಕೈಪಿಡಿಯ ಸಹಲೇಖಕ ಸಿ.ಕೆ. ದಫ್ತಾರೆ, ಎಂ.ಸಿ. ಸೆಟಲ್ವಾಡ್, ಎಲ್.ಎಂ. ಸಿಂಘ್ವಿ, ಎಂ.ಸಿ. ಚಟರ್ಜಿ, ಜಿ.ಎಸ್. ಪಾಠಕ್, ‍‍‍ಪಿ.ಎನ್. ಸಪ್ರು, ಕೆ.ಕೆ. ಶಾ ಅವರಂಥವರು ಈ ಸಮಿತಿಯ ಮುಂದೆ 1966ರಲ್ಲಿ ಹಾಜರಾಗಿದ್ದರು. ಈ ಸಮಿತಿ ವರದಿ ನೀಡಿದ ನಂತರ ಸರ್ಕಾರವು ಮಸೂದೆಯಲ್ಲಿ ಕೆಲವು ಬದಲಾವಣೆಗಳನ್ನು ತಂದಿತು. ಮಸೂದೆಯು 1968ರಲ್ಲಿ ಅನುಮೋದನೆ ಪಡೆದುಕೊಂಡಿತು. ಈ ಸಮಿತಿಯಲ್ಲಿ ನಡೆದ ಚರ್ಚೆಗಳು, ಸಮಿತಿಯ ಮುಂದೆ ಹಾಜರಾದ ತಜ್ಞರು ವ್ಯಕ್ತಪಡಿಸಿದ ಅಭಿಪ್ರಾಯಗಳು ಮತ್ತು ಸಮಿತಿ ನೀಡಿದ ಅಂತಿಮ ಶಿಫಾರಸುಗಳು ಮಾರ್ಗದರ್ಶಿಯಂತೆ ಇವೆ. ಈಗ ನಮ್ಮೆದುರು ಇರುವ ವಿಷಯಗಳ ವಿಚಾರವಾಗಿ ಅವುಗಳನ್ನು ಉಲ್ಲೇಖಿಸುವುದು ಸೂಕ್ತ.

‘ಮೇಲ್ನೋಟಕ್ಕೆ ಮನವಿಯಲ್ಲಿ ಹುರುಳಿದೆಯೇ ಎಂಬುದನ್ನು ಸ್ಪೀಕರ್ ಅಥವಾ ಸಭಾಪತಿ ಪರಿಶೀಲಿಸಬೇಕಿರುವುದು ಅಗತ್ಯ’ ಎಂದು ಎಂ.ಎನ್. ಕೌಲ್ ಸ್ಪಷ್ಟವಾಗಿ ಹೇಳಿದ್ದರು. ಹಿರಿಯ ವಿಜ್ಞಾನಿ ಡಾ. ಮೇಘನಾಥ್ ಸಹಾ ಅವರು ನ್ಯಾಯಮೂರ್ತಿಯೊಬ್ಬರ ವಿರುದ್ಧ ಒಂದು ದೂರು ದಾಖಲಿಸಿದ್ದರು. ಇದು ಸಂವಿಧಾನ ಜಾರಿಗೆ ಬಂದ ನಂತರ ದಾಖಲಾದ ಇಂತಹ ಮೊದಲ ದೂರು. ಇದನ್ನು ಸ್ಪೀಕರ್ ಮಾವಳಣಕರ್‌ ಅವರಿಗೆ ಕಳುಹಿಸಲಾಯಿತು. ಅವರು ‘ಈ ದೂರನ್ನು ಅಂಗೀಕರಿಸುವ ಮೊದಲು, ದೂರಿನಲ್ಲಿ ಹುರುಳಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ಹೇಳಿದ್ದರು ಎನ್ನುವ ವಿಚಾರವನ್ನು ಕೌಲ್, ಸಮಿತಿಯ ಮುಂದೆ ಹೇಳಿದ್ದರು. ಮಾವಳಣಕರ್ ಅವರು ದೂರುದಾರರ ಜೊತೆ ನಡೆಸಿದ ಮಾತುಕತೆಯ ವಿವರಗಳನ್ನೂ ಕೌಲ್ ನೆನಪಿಸಿಕೊಂಡಿದ್ದರು.

ಸ್ಪೀಕರ್‌ ಅವರು ಆರು ದಶಕಗಳಿಗೂ ಹಿಂದೆ ಡಾ. ಸಹಾ ಅವರಿಗೆ ಹೇಳಿದ ವಿಚಾರಗಳು ಇಂದಿಗೂ ಅನ್ವಯ ಆಗುವಂತೆ ಇವೆ. ಆ ಮಾತುಗಳು ಈಗ ದೇಶದ ಮುಂದೆ ಇರುವ ಪ್ರಕರಣ ಹಾಗೂ ಸಿಜೆಐ ವಿರುದ್ಧದ ಮನವಿಯ ವಿಚಾರದಲ್ಲಿ ಸಭಾಪತಿ ಕೈಗೊಂಡ ತೀರ್ಮಾನದ ಮೇಲೆ ಪ್ರಭಾವ ಬೀರಬಲ್ಲಂಥವು. ಕೌಲ್‌ ಹೇಳಿರುವಂತೆ ಮಾವಳಣಕರ್ ಅವರು ದೂರುದಾರರ ಬಳಿ ಆಡಿದ್ದ ಮಾತುಗಳು ಹೀಗಿದ್ದವು: ‘ಇಲ್ಲಿ ನೋಡಿ... ಮೊದಲು ನನಗೆ ತೃಪ್ತಿಯಾಗಬೇಕು, ಸ್ಪೀಕರ್‌ ಆಗಿ ಇದು ನನ್ನ ಕರ್ತವ್ಯ. ದೂರನ್ನು ಒಪ್ಪಿಕೊಳ್ಳುವುದು ಅಥವಾ ಒಪ್ಪಿಕೊಳ್ಳದೆ ಇರುವುದು ನನ್ನ ಅಧಿಕಾರ ಮತ್ತು ಜವಾಬ್ದಾರಿ. ತೀರಾ ಎಚ್ಚರಿಕೆಯಿಂದ ನಾನು ಇದನ್ನು ಗಮನಿಸಬೇಕು, ನನಗೆ ಬೇರೆ ಆಯ್ಕೆಗಳೇ ಇಲ್ಲದಿದ್ದರೆ ಮಾತ್ರ ನಾನು ಇದನ್ನು ಸ್ವೀಕರಿಸುವೆ.’

‘ಆರೋಪಗಳನ್ನು ‍ಪರಿಶೀಲಿಸುವುದು, ಅವುಗಳ ಸತ್ಯಾಸತ್ಯತೆ ಅರಿಯುವುದು’ ಸ್ಪೀಕರ್ ಕೆಲಸ ಎಂದು ಕೌಲ್ ಅವರು ಸಮಿತಿಗೆ ಹೇಳಿದ್ದರು. ಗೃಹ ಸಚಿವರು, ಅಂದಿನ ಸಿಜೆಐ ಮತ್ತು ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಆಗ ಸ್ಪೀಕರ್ ಕೈಗೊಂಡ ಕ್ರಮವನ್ನು ಬೆಂಬಲಿಸಿದ್ದರು ಎಂದು ಕೌಲ್, ಸಮಿತಿಗೆ ಹೇಳಿದ್ದರು. ‘ಅರ್ಜಿ ಹುಡುಗಾಟಿಕೆಯದ್ದಾಗಿದ್ದರೆ’ ಅದನ್ನು ತಿರಸ್ಕರಿಸುವ ಅಧಿಕಾರ ಸ್ಪೀಕರ್‌ಗೆ ಇರುತ್ತದೆ. ಮನವಿಯೊಂದನ್ನು ಸಲ್ಲಿಸಿದ ಮಾತ್ರಕ್ಕೆ, ಆರೋಪಗಳೆಲ್ಲವೂ ಸಾಬೀತಾಗುತ್ತವೆ ಎಂದು ಸಂಸತ್ತಿನ ಯಾವ ಸದಸ್ಯರೂ ಭಾವಿಸಬಾರದು. ಸಂಸದರು ಕ್ರಮ ಕೈಗೊಳ್ಳುವ ಪ್ರಕ್ರಿಯೆಯನ್ನಷ್ಟೇ ಆರಂಭಿಸಿರುತ್ತಾರೆ ಎಂದೂ ಕೌಲ್ ವಿವರಿಸಿದ್ದರು.

‘ಪುರಾವೆ ಇಲ್ಲದೆ ಚಾರಿತ್ರ್ಯವಧೆ ಆಗಬಾರದು’ ಎಂದು ಕೆ.ಕೆ. ಶಾ, ಸಮಿತಿಗೆ ಹೇಳಿದ್ದರು. ಇನ್ನೊಬ್ಬರು ಹಿರಿಯ ನ್ಯಾಯಶಾಸ್ತ್ರಜ್ಞರಾದ ಎಂ.ಸಿ. ಸೆಟಲ್ವಾಡ್ ಅವರು, ‘ನ್ಯಾಯಮೂರ್ತಿಯ ನಡೆಯ ಬಗೆಗಿನ ಚರ್ಚೆಗಳಿಗೆ ಆರಂಭಿಕ ಹಂತದಲ್ಲಿ ಅವಕಾಶ ಮಾಡಿಕೊಡಬಾರದು’ ಎಂದು ಹೇಳಿದ್ದರು.

ಈ ಎಲ್ಲ ತಜ್ಞರ ಮಾತುಗಳನ್ನು ಆಲಿಸಿದ ಜಂಟಿ ಸಮಿತಿಯು ಸ್ಪೀಕರ್ ಅಥವಾ ಸಭಾಪತಿ ವಾಗ್ದಂಡನೆ ಮನವಿಯನ್ನು ‘ಒಪ್ಪಿಕೊಳ್ಳಬಹುದು ಅಥವಾ ತಿರಸ್ಕರಿಸಬಹುದು’ ಎಂಬ ತೀರ್ಮಾನಕ್ಕೆ ಬಂತು. ಜಂಟಿ ಸಮಿತಿ ನೀಡಿದ ಈ ಅಭಿಪ್ರಾಯವನ್ನು ನ್ಯಾಯಮೂರ್ತಿಗಳ (ವಿಚಾರಣಾ) ಕಾಯ್ದೆಯ ಸೆಕ್ಷನ್‌ 3ರಲ್ಲಿ ಸೇರಿಸಲಾಯಿತು. ಅದು ಇಂದಿಗೂ ಜಾರಿಯಲ್ಲಿ ಇದೆ. ವಾಸ್ತವ ಹೀಗಿರುವಾಗ, ಮನವಿಯನ್ನು ಒಪ್ಪಿಕೊಳ್ಳುವ ಹಂತದಲ್ಲಿ ಸಭಾಪತಿ ತಮ್ಮ ವಿವೇಚನೆ ಬಳಸುವುದನ್ನು ಅನುಭವಿ ವಕೀಲರು ಮತ್ತು ಸಂಸದರು ಪ್ರಶ್ನಿಸುತ್ತಿರುವುದು ಆಶ್ಚರ್ಯ ಮೂಡಿಸುತ್ತದೆ.

(ಲೇಖಕ ಪ್ರಸಾರ ಭಾರತಿ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT