ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾವಿ ಮಹಿಳೆಯಾಗಿ ಯಾರೂ ಬೆಳೆದಿಲ್ಲ

ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ರಾಜಕೀಯ ಛಾಪು ಮೂಡಿಸದ ಮಹಿಳೆಯರು
Last Updated 10 ಮೇ 2018, 9:20 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸ್ವಾತಂತ್ರ್ಯ ಪೂರ್ವದ್ಲಲೇ ಇಡೀ ರಾಜ್ಯಕ್ಕೆ ಪ್ರಥಮ ಬಾರಿಗೆ 1936ರಲ್ಲೇ ಸಮಾಜ ಸೇವಕಿಯಾಗಿದ್ದ ಭೀಮಕ್ಕ ಅವರು ಮಹಿಳೆಯರಲ್ಲಿ ಪ್ರಗತಿಪರ ಆಲೋಚನೆ, ಆರ್ಥಿಕ ಸ್ವಾವಲಂಭನೆ ಹಾಗೂ ಮಹಿಳಾ ಆರೋಗ್ಯದ ವಿಚಾರಗಳನ್ನು ಬೆಳೆಸಲು ನಗರದಲ್ಲಿ ಮಹಿಳಾ ಸಮಾಜವನ್ನು ಸ್ಥಾಪಿಸ್ದಿದರು. ಇಡೀ ರಾಜ್ಯಕ್ಕೆ ಪ್ರಥಮ ಬಾರಿಗೆ ಸ್ವಾತಂತ್ರ್ಯ ಪೂರ್ವದಲ್ಲೇ ಯಶಸ್ವಿಯಾಗಿ ಮಹಿಳಾ ಕಾನ್ಪರೆನ್ಸ್ ನಡೆಸಿದ್ದ ಕೀರ್ತಿಯು ಮಹಿಳಾ ಸಮಾಜದ ಭೀಮಕ್ಕ ಅವರಿಗೆ ಸಲ್ಲುತ್ತದೆ ಎನ್ನುತ್ತಾರೆ ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್‌.ಪ್ರಭಾ.

ಇವತ್ತು ರಾಷ್ಟ್ರಪತಿಯೊಬ್ಬರನ್ನು ಆಹ್ವಾನಿದಷ್ಟೇ ಕಷ್ಟದ ಕೆಲಸವಾಗಿದ್ದ ಸಂದರ್ಭದಲ್ಲಿಯೇ 1943ರಲ್ಲಿ ಭೀಮಕ್ಕ ಅವರು ಸಾಹಸ ಮಾಡಿ ಊರಿನ ಅನೇಕ ಗಣ್ಯರಿಂದ ಹಣ ಸಂಗ್ರಹಿಸಿ ನಗರದ ಹಳೇ ಬಸ್ ನಿಲ್ದಾಣದ ಸಮೀಪ ಕಟ್ಟಲಾಗ್ದಿದ ಮಹಿಳಾ ಸಮಾಜದ ನೂತನ ಕಟ್ಟಡವನ್ನು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಪತ್ನಿ ಡೌವೇಜರ್ ಮಹಾರಾಣಿ ಪ್ರತಾಪಕುಮಾರಿ ಅವರಿಂದ ಉದ್ಘಾಟನೆ ಮಾಡಿಸ್ದಿದರು.

ಮಹಿಳೆಯರ ಸಮಗ್ರ ಏಳಿಗೆಗಾಗಿ ಇಷ್ಟೆಲ್ಲಾ ದೂರದೃಷ್ಟಿಯಿಂದ ಸ್ವಾತಂತ್ರ್ಯ ಪೂರ್ವದಲ್ಲೇ ಮಹಿಳಾ ಸಮಾಜ ಸ್ಥಾಪನೆಯಾಗಿದ್ದರೂ ಈ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಮಾತ್ರ ರಾಜಕೀಯವಾಗಿ ಎಂದೂ ಮಹಿಳೆಯರು ಬೆಳೆಯಲೂ ಇಲ್ಲ; ಮಹಿಳೆಯರಿಗೆ ಪ್ರಾತಿನಿಧ್ಯ ದೊರೆತಿಲ್ಲ. ಇತ್ತೀಚಿನ ತಿದ್ದುಪಡಿಗಳಿಂದಾಗಿ ದೊರೆತ ರಾಜಕೀಯ ಮೀಸಲಾತಿಯಿಂದಾಗಿ ಮಾತ್ರ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸಭೆಗಳಲ್ಲಿ ಮಹಿಳೆಯರು ಆಯ್ಕೆಯಾಗಿ ಬರುತಿದ್ದಾರೆಯೇ ವಿನಾ ಮೀಸಲಾತಿ ಹೊರತಾಗಿ ಇಲ್ಲಿಯವರೆಗೂ ಮಹಿಳೆಯರು ಯಾವುದೇ ಸಂಸ್ಥೆಗಳಿಗೆ ಆಯ್ಕೆಯಾಗಿಲ್ಲ.

1995ರಲ್ಲಿ ತಾಲ್ಲೂಕು ಪಂಚಾಯಿತಿ ಅಸ್ತಿತ್ವಕ್ಕೆ ಬಂದ ಮೇಲೆ ಯಶೋಧಮ್ಮ, ಪದ್ಮಾವತಮ್ಮ, ಮುನಿರತ್ನಮ್ಮ, ದೇವರಾಜಮ್ಮ, ಮಂಗಳಮ್ಮ. ನಗರ ಸಭೆ ಮಟ್ಟಿಗೆ ಶಾಂತಮ್ಮ, ಕಾಂತಮ್ಮಕೃಷ್ಣಮೂರ್ತಿ, ಶಂಷುನ್ನಿಸಾ ಅಧ್ಯಕ್ಷರಾಗಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಭಾಗ್ಯಮ್ಮ ಮುನಿಕೃಷ್ಣಪ್ಪ, ಉಪಾಧ್ಯಕ್ಷರಾಗಿ ಕಮಲಮ್ಮ ಲಕ್ಷ್ಮೀನಾರಾಯಣ್‌, ರಜನಿ ರಾಜಣ್ಣ. ಇವರ ಪೈಕಿ ಒಂದೆರಡು ಜನ ಮಹಿಳೆಯರು ಮಾತ್ರ ತಮ್ಮ ಅಧಿಕಾರ ಅವಧಿ ಮುಕ್ತಾಯವಾದ ಮೇಲೂ ರಾಜಕೀಯವಾಗಿ ಒಂದಿಷ್ಟು ಪ್ರಭಾವ ಉಳಿಸಿ ಕೊಂಡಿರುವುದನ್ನು ಹೊರತುಪಡಿಸಿದರೆ ಉಳಿದಂತೆ ರಾಜಕೀಯ ಮೀಸಲಾತಿಯಿಂದಾಗಿ ಅಧಿಕಾರಕ್ಕೆ ಬಂದು ಹೋಗಿದ್ದಾರೆ.

ಸಿಕ್ಕ ಒಂದಿಷ್ಟು ಅವಕಾಶವನ್ನು ಬಳಸಿಕೊಂಡಾದರೂ ಇಡೀ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಮತದಾರರ ನೆನಪಿನಲ್ಲಿ ಇವತ್ತಿಗೂ ಉಳಿಯುವಂತ ಪ್ರಭಾವಿ ನಾಯಕಿಯರಾಗಿ ಬೆಳೆದಿಲ್ಲ ಎನ್ನುತ್ತಾರೆ ರಾಜ್ಯ ರೈತ ಶಕ್ತಿ ರಾಜ್ಯ ಘಟಕದ ಅಧ್ಯಕ್ಷ ಹೊನ್ನಾಘಟ್ಟ ಮಹೇಶ್‌.

ಭೀಮಕ್ಕ ಅವರಂತಹವರು ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಗತಿಪರ ಆಲೋಚನೆಗಳು ಬೆಳೆಯಲೆಂದು ಪ್ರಯತ್ನಪಟ್ಟಿದ್ದರು. ನಂತರದ ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲಿ ಸ್ತ್ರೀ ಶಕ್ತಿ ಗುಂಪುಗಳು ಆರಂಭವಾಗಿವೆ. ಈ ಗುಂಪುಗಳ ಮಹಿಳೆಯರು ಹತ್ತಾರು ವಿಚಾರ ಸಂಕಿರಣಗಳಲ್ಲಿ ಭಾಗವಹಿಸುತ್ತಲೇ ಇರುತ್ತಾರೆ. ಇಷ್ಟಾಗಿದ್ದರೂ ಸಹ ಇಲ್ಲಿಯವರೆಗೂ ವಿಧಾನ ಸಭಾ ಕ್ಷೇತ್ರಕ್ಕೆ ರಾಷ್ಟ್ರೀಯ ಪಕ್ಷಗಳಿಂದ ಮಹಿಳೆಯರು ಸ್ಪರ್ಧಿಸಿರುವುದಿರಲಿ, ಆಕಾಂಕ್ಷಿಗಳ ಪಟ್ಟಿಯಲ್ಲೂ ಒಬ್ಬ ಮಹಿಳಾ ಅಭ್ಯರ್ಥಿ ಹೆಸರು ಯಾವುದೇ ಪಕ್ಷದಿಂದಲು ಇಲ್ಲಿಯವರೆಗೂ ಕೇಳಿಬಂದಿಲ್ಲ.

ಆದರೆ ಎಂದೂ ವೇದಿಕೆಗಳ ಮೇಲೆ ಅವಕಾಶವೇ ಇಲ್ಲದ ವಿವಿಧ ರಾಜಕೀಯ ಪಕ್ಷಗಳ ಮಹಿಳಾ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಚುನಾವಣಾ ಸಂದರ್ಭದಲ್ಲಿ ಮಾತ್ರ ಮಹಿಳೆಯರ ಮತಗಳನ್ನು ಪಡೆಯುವ ಸಲುವಾಗಿ ಎಲ್ಲ ರಾಜಕೀಯ ಪಕ್ಷಗಳ ಸಭೆಗಳ ವೇದಿಕೆಗಳಲ್ಲೂ ಮುಂದಿನ ಸಾಲಿನ ಪೀಠದಲ್ಲಿ ಕಡ್ಡಾಯವಾಗಿ ಸ್ಥಾನ ಕಲ್ಪಿಸುತ್ತಾರೆ. ಸ್ವಾಗತದಿಂದ ಆರಂಭಿಸಿ ವೇದಿಕೆಯಲ್ಲಿನ ಭಾಷಣ ಮುಕ್ತಾಯವಾಗುವಷ್ಟರಲ್ಲಿ ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳ ಹೆಸರುಗಳನ್ನು ಕನಿಷ್ಠವೆಂದರೆ ಮೂರ್ನಾಲ್ಕು ಬಾರಿಯಾದರೂ ನೆನಪು ಮಾಡಿಕೊಳ್ಳುತ್ತಾರೆ ಎಂದು ಸ್ಥಳೀಯ ಮುಖಂಡರೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT