ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣ ಕಣದಲ್ಲಿ ಬಿಬಿಎಂಪಿ ಕಸ ಗೌಣ

ಹಸಿರು ನ್ಯಾಯಪೀಠದ ಅಂಗಳ ತಲುಪಿದ ಕಸ ವಿಲೇವಾರಿ ಸಮಸ್ಯೆ
Last Updated 10 ಮೇ 2018, 9:45 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕ್ಷೇತ್ರದಲ್ಲಿ ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿ ಈಗ ಕೊನೆ ಹಂತ ತಲುಪಿದ್ದರೆ, ತಾಲ್ಲೂಕಿನ ಗುಂಡ್ಲಹಳ್ಳಿ, ಚಿಗರೆನಹಳ್ಳಿ, ಮೂಡ್ಲಕಾಳೇನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ಜನರು ಬಿಬಿಎಂಪಿ ಕಸದ ರಾಶಿಯಿಂದ ಬರುವ ದುರ್ನಾತದಿಂದ ಹೈರಾಣಾಗಿದ್ದಾರೆ. ಸಾಸಲು ಹೋಬಳಿಯ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಬಿಬಿಎಂಪಿ ಕಸದ ತೊಟ್ಟಿಯಾಗಿವೆ. ಇಷ್ಟಾದರೂ ಕಸದ ವಿಷಯ ಚುನಾವಣಾ ಕಣದಲ್ಲಿ ಚರ್ಚೆಯಾಗುತ್ತಲೇ ಇಲ್ಲ ಎನ್ನುವುದು ಈ ಭಾಗದ ಜನರ ಅಳಲು.

2007ರಲ್ಲಿ ದೊಡ್ಡಬೆಳವಂಗಲ ಹೋಬಳಿಯ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡ್ಲಹಳ್ಳಿ ಸಮೀಪ ಸುಮಾರು 150 ಎಕರೆ ಪ್ರದೇಶದಲ್ಲಿ ಟೆರಾಫರ್ಮಾನಲ್ಲಿ ಬಿಬಿಎಂಪಿ ಕಸ ತಂದು ರಾಶಿ ಹಾಕಲು ಪ್ರಾರಂಭಿ ಮಾಡಿತು. ಆರಂಭದಲ್ಲಿ ಎರೆಹುಳು ಗೊಬ್ಬರ ತಯಾರಿಸಿ ಕಡಿಮೆ ದರದಲ್ಲಿ ರೈತರ ಕೃಷಿ ಭೂಮಿಗೆ ನೀಡಲಾಗುತ್ತದೆ ಎನ್ನಲಾಗುತ್ತಿತ್ತು. ಆದರೆ, ನಂತರದ ದಿನಗಳಲ್ಲಿ ಕಸದ ಹಾವಳಿ ಮಿತಿ ಮೀರಿ ಈ ಭಾಗದ ಹತ್ತಾರು ಗ್ರಾಮಗಳ ಜನರ ನಿರಂತರ ಹೋರಾಟದ ಫಲವಾಗಿ 2015ರಲ್ಲಿ ಬಾಗಿಲು ಮುಚ್ಚಿತು.

ಇದರಿಂದ ನಿಟ್ಟುಸಿರು ಬಿಡುವಷ್ಟರಲ್ಲಿಯೇ ಟೆರಾಫರ್ಮಾ ಸಮೀಪದಲ್ಲೇ ಹೊಸದಾಗಿ ಮತ್ತೊಂದು ಬೃಹತ್‌ ಮಟ್ಟದ ಬಿಬಿಎಂಪಿ ಕಸ ವಿಲೇವಾರಿ ಘಟಕ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಗರೆನಹಳ್ಳಿ ಗ್ರಾಮದ ಸಮೀಪ ಸುಮಾರು 100 ಎಕರೆ ಪ್ರದೇಶದಲ್ಲಿ ಕಸವಿಲೇವಾರಿ ಘಟಕದ ಸ್ಥಾಪನೆಯಾಗಿದೆ.

ಆದರೆ, ಕಸವನ್ನು ಗೊಬ್ಬರ ಮಾಡುವ ಪ್ರಕ್ರಿಯೆ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಕಸವಿಲೇವಾರಿ ಘಟಕದಲ್ಲಿ ಕಸದ ರಾಶಿ ಹೆಚ್ಚಾಗಿದ್ದರಿಂದ 2017 ಏಪ್ರಿಲ್‌ನಲ್ಲಿ ಕಸದ ರಾಶಿಗೆ ಆಕಸ್ಮಿಕ ಬೆಂಕಿ ಬಿದ್ದು, ಇಡೀ ಪ್ರದೇಶ ಹೊಗೆಯಿಂದ ಆವೃತ್ತವಾಗಿತ್ತು. ಇದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ವತಿಯಿಂದ ಎಂಪಿಎಸ್‌ಜಿ ಕಂಪನಿ ವಿರುದ್ಧ ದೊಡ್ಡಬೆಳವಂಗಲ ಪೊಲೀಸ್‌ ಠಾಣೆಯಲ್ಲಿ ದೂರು  ದಾಖಲಾಗಿದೆ.

ಹಸಿರು ನ್ಯಾಯಮಂಡಳಿ ತಲುಪಿದ ದೂರು:  ಚಿಗರೆನಹಳ್ಳಿ ಗ್ರಾಮದ ಸರ್ವೇ ನಂಬರ್‌ 1,2,3,7 ಮತ್ತು 11ರಲ್ಲಿ ಸ್ಥಾಪನೆಯಾಗಿರುವ ಎಂಎಸ್‌ಜಿಪಿ ಬಿಬಿಎಂಪಿ ಕಸ ವಿಲೇವಾರಿ ಘಟಕದ ನಡೆಯುತ್ತಿರುವುದೇ ಅಕ್ರಮವಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಯಾವುದೇ ಪರವಾನಗಿ ಪಡೆದಿಲ್ಲ ಎನ್ನುತ್ತಾರೆ ಕಾಮನಅಗ್ರಹಾರ ಗ್ರಾಮದ ಗೋವಿಂದರಾಜ್‌.

ಕಸ ವಿಲೇವಾರಿ ಘಟಕ ಸ್ಥಾಪನೆಗೆ ಸ್ಥಳೀಯ ನಿವಾಸಿಗಳ ಆಕ್ಷೇಪವಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿರುವ ಸ್ಥಳ ಮಹಜರ್‌ನಲ್ಲೂ ಅಧಿಕೃತವಾಗಿ ತಿಳಿಸಲಾಗಿದೆ. ಅಲ್ಲದೆ, ಜಿಲ್ಲಾಧಿಕಾರಿಯಿಂದ ಮೊದಲುಗೊಂಡು ಯಾರೂ ಇಲ್ಲಿ ಕಸ ವಿಲೇವಾರಿಗೆ ಅನುಮತಿ ನೀಡಿಲ್ಲ ಎಂದು ಆರ್‌ಟಿಐ ಅಡಿಯಲ್ಲಿ ಮಾಹಿತಿ ಲಭ್ಯವಾಗಿದೆ.

‘ಸರ್ಕಾರದ ಎಲ್ಲ ನಿಯಮ ಉಲ್ಲಂಘಿಸಿ ಕಸ ವಿಲೇವಾರಿ ಘಟಕದ ಸ್ಥಾಪನೆ ಮಾಡಿರುವ ಕುರಿತು ಚನ್ನೈನ ಹಸಿರು ನ್ಯಾಯಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ವಿಚಾರಣೆ ಮುಕ್ತಾಯದ ಹಂತಕ್ಕೆ ಬಂದಿದ್ದು ಸದ್ಯದಲ್ಲೇ ನಮ್ಮ ಪರವಾಗಿ ತೀರ್ಪು ಬರಲಿದೆ’ ಎಂದು ಗೋವಿಂದರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
**
‘ನಮ್ಮೂರು ಹಿರೋಶಿಮ–ನಾಗಸಾಕಿ’
ಗುಂಡ್ಲಹಳ್ಳಿ ಸಮೀಪ 2007ರಿಂದ ಬಿಬಿಎಂಪಿ ಕಸ ವಿಲೇವಾರಿ ಘಟಕ ಸ್ಥಾಪನೆಯಾದ ನಂತರ ನಮ್ಮ ಬದುಕು ನರಕಯಾತನೆಯಾಗಲು ಆರಂಭವಾಯಿತು ಎನ್ನುವ ಗುಂಡ್ಲಹಳ್ಳಿ ಗ್ರಾಮದ ನಿವಾಸಿ ರಾಮನಾಥಗೌಡ, ಸತತ ಹೋರಾಟದ ಫಲವಾಗಿ 2015ರಲ್ಲಿ ಟೆರಾಫರ್ಮಾ ಕಸವಿಲೇವಾರಿ ಘಟಕದ ಸ್ಥಗಿತವಾಯಿತು.

ಈ ಸಂದರ್ಭದಲ್ಲಿ ಇಲ್ಲಿ ರಾಶಿ ಹಾಕಲಾಗಿರುವ ಕಸವನ್ನು ಒಂದರೆಡು ವರ್ಷಗಳಲ್ಲಿ ಇಲ್ಲಿಂದ ವಿಲೇವಾರಿ ಮಾಡುವ ಭರಸವೆ ನೀಡಲಾಗಿತ್ತು. ಆದರೆ, ಇಲ್ಲಿ ರಾಶಿ ಹಾಕಲಾಗಿರುವ ಕಸ ಬೆಟ್ಟದಂತೆ ಇದೆ. ಇನ್ನು 50 ವರ್ಷಗಳು ಕಳೆದರೂ ಸಹ ಇಲ್ಲಿನ ಪರಿಸರ ಸರಿಪಡಿಸಲು ಸಾಧ್ಯವಿಲ್ಲದಾಗಿದೆ. ಗುಂಡ್ಲಹಳ್ಳಿ ಪರಿಸರದ ಸ್ಥಿತಿ ಜಪಾನಿನ ಹಿರೋಶಿಮ–ನಾಗಸಾಕಿಯಲ್ಲಿಯಲ್ಲಿ ಅಣು ಬಾಂಬ್‌ ಬಿದ್ದು ಹತ್ತಾರು ವರ್ಷಗಳು ಕಳೆದಿದ್ದರೂ ಸರಿಪಡಿಸಲಾಗದಂತಹ ಸ್ಥಿತಿ ಇಲ್ಲಿಯೂ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತ‍‍ಪಡಿಸುತ್ತಾರೆ.
**
ನಮ್ಮದು ಪರಿಸರ ಉಳಿಸುವ ಕಾಳಜಿ
‘ನಾವು ಈ ನೆಲವನ್ನು ನಂಬಿ ಜೀವನ ನಡೆಸುತ್ತಿರುವ ಜನ. ಬೇಸಾಯ ಬಿಟ್ಟರೆ ನಮಗೆ ಬೇರೆ ಉದ್ಯೋಗ ತಿಳಿದಿಲ್ಲ. ಅದರಲ್ಲೂ ನಮ್ಮೂರಿನ ಸುತ್ತಮುತ್ತ ಫಲವತ್ತಾದ ಭೂಮಿ, ನೀರು ಇದೆ. ಆದರೆ, ಅಕ್ರಮವಾಗಿ ಬಿಬಿಎಂಪಿ ಕಸ ವಿಲೇವಾರಿ ಘಟಕಗಳು ಸ್ಥಾಪನೆಯಾದ ನಂತರ ಇಲ್ಲಿನ ಪರಿಸರ ಸಂಪೂರ್ಣವಾಗಿ ಹಾಳಾಗಿದೆ ಎನ್ನುತ್ತಾರೆ ಮರಿಹೆಗ್ಗಯ್ಯನಪಾಳ್ಯ ಗ್ರಾಮದ ನಿವಾಸಿ ವೀರಭದ್ರಯ್ಯ.

ಇದನ್ನು ಉಳಿಸಿಕೊಳ್ಳಲು ನಾವು ಕಾನೂನು ಬದ್ಧ ಹೋರಾಟ ನಡೆಸುತ್ತಿದ್ದೇವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT