ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾ ಮಾತನಾಡಿದಾಗ...

Last Updated 10 ಮೇ 2018, 19:30 IST
ಅಕ್ಷರ ಗಾತ್ರ

‘ನಟನೆ ಅಂದರೆ ನಾವು ನಟಿಸುವ ಪಾತ್ರಕ್ಕೆ ಜೀವ ತುಂಬಬೇಕು, ಆ ಮೂಲಕ ಪರಕಾಯ ಪ್ರವೇಶಿಸಬೇಕು. ನಾವು ಮಾಡಿದ ಪಾತ್ರವನ್ನು ಜನ ನೋಡಿದಾಗ ಇದು ತನ್ನದೇ ಪಾತ್ರ ಎಂದು ಅವರಿಗೆ ಅನ್ನಿಸುವಷ್ಟರ ಮಟ್ಟಿಗೆ ಜನರ ಮನಸ್ಸಿಗೆ ಹತ್ತಿರವಾಗಬೇಕು. ಕೊಟ್ಟ ಸಂಭಾಷಣೆಯನ್ನು ಸುಮ್ಮನೆ ಹೇಳುವುದು ನಟನೆಯಲ್ಲ, ಆ ಪಾತ್ರದ ಭಾವನೆಗಳನ್ನು ನಮ್ಮಲ್ಲಿ ಮೂಡಿಸಿಕೊಂಡು ನಟಿಸುವುದೇ ನಿಜವಾದ ನಟನೆ’ ಎನ್ನುವ ಈ ಬೆಡಗಿ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯ ವಚನಾ.

ಇವರ ನಿಜ ಜೀವನದ ಹೆಸರು ಅಮೃತಾ ರಾಮಮೂರ್ತಿ. ಕುಂದಾಪುರ ಮೂಲದ ಇವರು ಬೆಂಗಳೂರಿನಲ್ಲೇ ಬೆಳೆದವರು. ಪತ್ರಿಕೋದ್ಯಮದಲ್ಲಿ ಡಿಗ್ರಿ ಪಡೆದ ಇವರಿಗೆ ಬಾಲ್ಯದಿಂದಲೂ ನಟನೆಯ ಬಗ್ಗೆ ಒಲವಿತ್ತು. ಆಗ ತುಂಟ ಹುಡುಗಿಯಾಗಿದ್ದ ಇವರು ಟಿ.ವಿ.ಯಲ್ಲಿ ಕಂಡಿದ್ದನ್ನು ಕನ್ನಡಿ ಮುಂದೆ ನಿಂತು ನಟಿಸುತ್ತಿದ್ದರು. ನಟನೆಯ ಮೊದಲ ಹೆಜ್ಜೆ ಎಂಬಂತೆ ಶಾಲಾ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಮನೆಯಲ್ಲಿ ನಟನೆಗೆ ಒಪ್ಪಿಗೆ ನೀಡುವುದಿಲ್ಲ ಎಂಬ ಕಾರಣಕ್ಕೆ ಆ ಕನಸನ್ನು ತಮ್ಮಲ್ಲಿಯೇ ಬಚ್ಚಿಟ್ಟುಕೊಂಡಿದ್ದರು.

ಖಾಸಗಿ ವಾಹಿನಿಯಲ್ಲಿ ಸಿನಿಮಾ ಹಾಗೂ ಕಿರುತೆರೆಗೆ ಸಂಬಂಧಿಸಿದ ಕಾರ್ಯಕ್ರಮವೊಂದರ ನಿರೂಪಣೆ ಮಾಡುತ್ತಿದ್ದ ಇವರು ಆಕಸ್ಮಿಕವಾಗಿ ನಟನೆಗೆ ಕಾಲಿಟ್ಟರು. ಮನರಂಜನಾ ವಾಹಿನಿಯಲ್ಲಿ ಕೆಲಸ ಮಾಡಬೇಕು ಎಂಬ ಆಲೋಚನೆಯಲ್ಲಿದ್ದ ಅವರಿಗೆ ತೆರೆ ಮೇಲೆ ಬರುವ ಯಾವುದೇ ಯೋಚನೆ ಆಗ ಇರಲಿಲ್ಲ. ಆದರೆ ಆಕಸ್ಮಿಕವಾಗಿ ಸಿಕ್ಕ ಅವಕಾಶ ಬಿಡಲಾಗದೇ ನಟನೆಯಲ್ಲಿ ತೊಡಗಿಕೊಂಡು, ಆ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡರು.

ನಟಿಸಿದ ಮೊದಲ ಧಾರಾವಾಹಿ ‘ಸರಸ್ವತಿ’. ‘ಈ ಧಾರಾವಾಹಿಯಿಂದ ನಾನು ಕಲಿತಿದ್ದು ಬಹಳ’ ಎನ್ನುವ ಈ ಗುಂಗುರು ಕೂದಲಿನ ಸುಂದರಿ, ‘ಸರಸ್ವತಿ ಧಾರಾವಾಹಿ ನನಗೆ ಪಾಠಶಾಲೆಯಂತಿತ್ತು’ ಎನ್ನುತ್ತಾರೆ. ನಂತರದ ‘ಮೇಘ ಮಯೂರಿ’ ಧಾರಾವಾಹಿ ಇವರ ನಟನಾ ಬದುಕಿಗೊಂದು ತಿರುವು ನೀಡಿತ್ತು. ಆ ಧಾರಾವಾಹಿಯಲ್ಲಿನ ಮಯೂರಿ ಪಾತ್ರ ಅಮೃತಾ ಅವರ ವೈಯಕ್ತಿಕ ಜೀವನಕ್ಕೆ ಬಹಳ ಹತ್ತಿರವಾಗಿತ್ತು. ಅದರಲ್ಲಿನ ಇವರ ಅಭಿನಯವನ್ನು ಜನ ಬಹಳ ಇಷ್ಟಪಟ್ಟಿದ್ದರು. ‘ಇಂದಿಗೂ ಕೆಲವರು ನನ್ನನ್ನು ಮಯೂರಿ ಎಂದೇ ಗುರುತಿಸುತ್ತಾರೆ’ ಎಂದು ಖುಷಿಯಿಂದ ಹೇಳುವ ಇವರ ಮೂರನೇ ಧಾರಾವಾಹಿ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ’. ಅದಾದ ನಂತರ ತೆಲುಗಿನಲ್ಲೂ ಎರಡು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ.

ಸದ್ಯ ನಟಿಸುತ್ತಿರುವ ‘ವಚನಾ’ ಪಾತ್ರದ ಬಗ್ಗೆ ಖುಷಿಯಿಂದ ಮಾತನಾಡುವ ಇವರು ‘ಈ ಪಾತ್ರ ನಿಜಕ್ಕೂ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ. ಇಂದಿನ ಸಮಾಜದಲ್ಲಿ ಶೇ 96ರಷ್ಟು ಮಂದಿ ವಚನಾಳಂತಹ ವ್ಯಕ್ತಿತ್ವವನ್ನೇ ಹೊಂದಿರುತ್ತಾರೆ. ಧನ್ಯಾಳಂತಹ ವ್ಯಕ್ತಿತ್ವ ಹೊಂದಿರುವವರು ತುಂಬಾ ಕಡಿಮೆ. ವಚನಾ ಎನ್ನುವುದು ವಾಸ್ತವ, ಧನ್ಯಾ ಎನ್ನುವುದು ಕಲ್ಪನೆ. ನಿಜ ಜೀವನದಲ್ಲಿ ಧನ್ಯಾಳಂತೆ ಇರುವುದು ತುಂಬಾ ಕಷ್ಟ’ ಎಂದು ಅನುಭವಿಯಂತೆ ಉಸುರುತ್ತಾರೆ.

ಬೆಳ್ಳಿಪರದೆಯ ಮೇಲೂ ಛಾಪು ಮೂಡಿಸಿರುವ ಇವರು ‘H/43 ಪಲ್ಲವಿ ಟಾಕೀಸ್‌’, ‘ಸೈಕೋ ಶಂಕರ್’, ‘ತುರ್ತು ನಿರ್ಗಮನ’ ಚಿತ್ರಗಳಲ್ಲಿ ನಟಿಸಿದ್ದಾರೆ, ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾರೆ. ಚಾಲೆಂಜಿಂಗ್ ಪಾತ್ರಗಳಿಗೆ ಬಣ್ಣ ಹಚ್ಚಲು ಇಷ್ಟಪಡುವ ಇವರು, ಸ್ಕಿಜೋಫ್ರೇನಿಯಾದಂತಹ ಮನೋರೋಗವಿರುವ ವ್ಯಕ್ತಿಯ ಪಾತ್ರದಲ್ಲಿ ತಮ್ಮನ್ನು ನೋಡುವುದು ಇಷ್ಟ ಎನ್ನುತ್ತಾರೆ.

‘ಇತ್ತೀಚೆಗೆ ಕಾಸ್ಟಿಂಗ್‌ ಕೌಚ್‌ನ ಸುದ್ದಿ ಎಲ್ಲೆಡೆ ಹರಡುತ್ತಿದೆ. ಈ ಬಗ್ಗೆ ನೀವೇನು ಹೇಳುತ್ತೀರಿ’ ಎಂದು ಪ್ರಶ್ನಿಸಿದರೆ, ‘ನನ್ನ ಐದು ವರ್ಷಗಳ ನಟನೆಯ ಬದುಕಿನಲ್ಲಿ ಎಂದಿಗೂ ಇಂತಹ ಅನುಭವ ಎದುರಾಗಿರಲಿಲ್ಲ. ಈ ವಿಷಯದ ಬಗ್ಗೆ ಕಿರುತೆರೆಯಲ್ಲಿ ಕೇಳಿರುವುದು ತುಂಬಾ ಕಡಿಮೆ. ಇಲ್ಲಿ ಮಹಿಳೆಯರಿಗೆ ತುಂಬಾ ಸುರಕ್ಷತೆ ಇದೆ. ಧಾರಾವಾಹಿ ಮೇಲೆ ಒಲವಿಟ್ಟುಕೊಂಡವರೇ ಈ ಕ್ಷೇತ್ರದಲ್ಲಿ ಅನೇಕರಿದ್ದಾರೆ, ಅವರಿಗೆ ಧಾರಾವಾಹಿ ಚೆನ್ನಾಗಿ ಮೂಡಿಬರುವುದಷ್ಟೇ ಮುಖ್ಯವಾಗಿರುತ್ತದೆ. ಧಾರಾವಾಹಿಗಳಲ್ಲಿ ನಟಿಸುವವರು ಚಿತ್ರೀಕರಣದಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಬೇಕಾಗುತ್ತದೆ. ಅವರಿಗೆ ತಮ್ಮದೇ ಆದ ಸಮಯ ಸಿಗುವುದಿಲ್ಲ ಎಂಬುದೊಂದನ್ನು ಹೊರತುಪಡಿಸಿದರೆ ಬೇರೆ ಯಾವುದೇ ತೊಂದರೆ ಇಲ್ಲ’ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಕಡಲ ತಡಿಯ ಕುವರಿ.

ಧಾರಾವಾಹಿ ಜನರ ಮನಸ್ಸಿಗೆ ಬೇಗನೇ ಹತ್ತಿರವಾಗುತ್ತದೆ. ಅನೇಕರು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದಿಲ್ಲ, ಮನೆಯಲ್ಲೇ ಮನರಂಜನೆ ಸಿಗಬೇಕು ಎನ್ನುವವರು ಜಾಸ್ತಿ. ಹಾಗಾಗಿ ಧಾರಾವಾಹಿ ನಟ–ನಟಿಯರನ್ನು ಜನ ತಮ್ಮ ಮನೆಯ ಸದಸ್ಯರಂತೆ ಪ್ರೀತಿಸುತ್ತಾರೆ. ಆದರೆ ಸಿನಿಮಾ ಹಾಗಲ್ಲ. ಅಲ್ಲಿ ಜನರ ಮನಸ್ಸಿಗೆ ಹತ್ತಿರವಾಗುವ ಪಾತ್ರ ಸಿಗುವುದು ಅಪರೂಪ, ಅಲ್ಲಿ ಅದೃಷ್ಟ ತುಂಬಾ ಮುಖ್ಯವಾಗುತ್ತದೆ. ಸಿನಿಮಾ ಮತ್ತು ಧಾರಾವಾಹಿಗಳನ್ನು ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಈ ಎರಡೂ ಸಂಪೂರ್ಣ ಭಿನ್ನ ಎಂದು ಹಿರಿತೆರೆ ಹಾಗೂ ಕಿರುತೆರೆಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT