ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮೋಘ್’ ಚಿತ್ರಕ್ಕೆ ಶಿವಣ್ಣ ಕ್ಲಾಪ್‌

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ಶಿವರಾಜ್‍ ಕುಮಾರ್ ಅಭಿಮಾನಿಗಳ ಸಂಘದ ಮಲ್ಲೇಶ ಬ. ಪೂಜಾರಿ ಮತ್ತು ಶೇಖರ ನಾ. ಕಾಲೇರಿ ಅವರ ವೃತ್ತಿ ತರಕಾರಿ ಬೆಳೆಯುವುದು. ಚಿಕ್ಕಂದಿನಿಂದಲೂ ಶಿವರಾಜ್‍ ಕುಮಾರ್ ಸಿನಿಮಾಗಳನ್ನು ನೋಡುತ್ತ ಬೆಳೆದಿರುವ ಈ ಇಬ್ಬರು, ಶಿವಣ್ಣ ಕಟ್ಟಾ ಅಭಿಮಾನಿಗಳೂ ಹೌದು. ಈಗ ಇವರಿಬ್ಬರು ಚಿತ್ರ ನಿರ್ಮಾಪಕರಾಗಿದ್ದಾರೆ.

ಇವರು ನಿರ್ಮಿಸುತ್ತಿರುವ ಚಿತ್ರಕ್ಕೆ ‘ಅಮೋಘ್’ ಎಂದು ಹೆಸರಿಡಲಾಗಿದೆ. ಬೆಂಗಳೂರಿನ ರಾಚೇನಹಳ್ಳಿಯ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಚಿತ್ರದ ಮುಹೂರ್ತ ಸಮಾರಂಭಕ್ಕೆ ಶಿವರಾಜ್‍ ಕುಮಾರ್ ಬಂದಿದ್ದರು. ಚಿತ್ರದ ಮೊದಲ ದೃಶ್ಯಕ್ಕೆ ಅವರೇ ಕ್ಲಾಪ್ ಮಾಡಿ, ತಂಡಕ್ಕೆ ಶುಭ ಹಾರೈಸಿದರು.

ಈ ಚಿತ್ರಕ್ಕೆ ಕತೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶಕರಾಗುತ್ತಿರುವವರು ಚಂದೂರ ಮಾರುತಿ. ಇವರು ಏಳು ವರ್ಷಗಳ ಕಾಲ ಬಿ.ಸುರೇಶ್ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ ಚಿತ್ರದ ಕಥೆಯಲ್ಲಿ, ಕರ್ತವ್ಯದಲ್ಲಿರುವ ಒಬ್ಬ ತಹಶೀಲ್ದಾರನ ಮಗ ಡಿಗ್ರಿ ವ್ಯಾಸಂಗ ಮಾಡುತ್ತಿರುತ್ತಾನೆ, ಒಂದು ದಿನ ಆತ ಅಪ್ಪನ ದುಡ್ಡು ಕದ್ದು ಓಡಿಹೋಗುತ್ತಾನೆ. ಆತ ಹೀಗೆ ಮಾಡುವುದು ಯಾವ ಕಾರಣಕ್ಕೆ, ಯಾವ ಉದ್ದೇಶಕ್ಕೆ ಎಂಬುದನ್ನು ಸಿನಿಮಾ ವೀಕ್ಷಿಸಿ ತಿಳಿಯಬೇಕಂತೆ.

ಅಪ್ಪನ ದುಡ್ಡು ಕದ್ದು ಓಡಿಹೋಗುವ ಮಗನ ಕಥೆಗೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ, ಒಳ್ಳೆಯದೊಂದು ಚಿತ್ರ ಮಾಡುವ ಯೋಜನೆ ಚಿತ್ರತಂಡದ್ದು. ಮಗನ ಪಾತ್ರದಲ್ಲಿ ಅರುಣ್ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರಿನ ಚೈತ್ರಾ ಈ ಚಿತ್ರದ ನಾಯಕಿ. ಖಳನಾಯಕನಾಗಿ ಪ್ರಶಾಂತ್ ಜಿ.ಕೆ ಇರಲಿದ್ದಾರೆ. ಇವರೊಂದಿಗೆ ಮೈಕೋ ಮಂಜು, ಭವಾನಿ ಪ್ರಕಾಶ್, ಹರೀಶ್‍ ನೀನಾಸಂ, ಮಾಲತಿಶ್ರೀ ಮೈಸೂರು ತಾರಬಳಗದಲ್ಲಿದ್ದಾರೆ.

ಕಾರವಾರ, ಮೈಸೂರು, ಮಂಗಳೂರು, ಮಡಿಕೇರಿ, ಬೆಳಗಾವಿ ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡ ಸಿದ್ಧತೆ ಮಾಡಿಕೊಂಡಿದೆ. ಮಂಗಳೂರಿನ ಲಾಯ್ ವೆಲಂಟೈನ್ ಸಂಗೀತ ಇರುವ ಐದು ಹಾಡುಗಳಿಗೆ ನಾಗೇಂದ್ರಪ್ರಸಾದ್ ಮತ್ತು ಸತೀಶ್‍ ಮಾಚೇನಹಳ್ಳಿ ಗೀತರಚನೆ ಮಾಡುತ್ತಿದ್ದಾರೆ. ಛಾಯಾಗ್ರಹಣ ಕೃಷ್ಣ ಮಂಡ್ಯ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT